MRPL-ಕಾನ-ಸುರತ್ಕಲ್ ರಸ್ತೆ ದುರಸ್ತಿ: ಮಾತು ತಪ್ಪಿದ ಮೇಯರ್

0
194

ವರದಿ: ಮುನೀರ್ ಕಾಟಿಪಳ್ಳ
MRPLಜನತೆಯನ್ನು ನಂಬಿಸಿರುವ ಮಂಗಳೂರು ಪಾಲಿಕೆ ಮೇಯರ್ ಹರಿನಾಥ್, ಸ್ಥಳೀಯ ಶಾಸಕ ಮೊದಿನ್ ಬಾವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಸ್ತೆ ದುರಸ್ತಿಗಾಗಿ ಹೋರಾಟ ನಡೆಸುತ್ತಿರುವ ನಾಗರಿಕ ಹೋರಾಟ ಸಮಿತಿ, ಕಾನ, ಸುರತ್ಕಲ್ ಆಗ್ರಹಿಸುತ್ತದೆ. ರಾಜೀನಾಮೆಗೆ ಒತ್ತಾಯಿಸಿ ನವೆಂಬರ್ 30ರಂದು ಸುರತ್ಕಲ್ ನಲ್ಲಿರುವ ಪಾಲಿಕೆ ಉಪಕಚೇರಿ ಮತ್ತು ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು
ಹೋರಾಟ ಸಮಿತಿಯ ಸಲಹೆಗಾರರು, ಡಿವೈಎಫ್ಐ ರಾಜ್ಯಾಧ್ಯಕ್ಷರು ಮುನೀರ್ ಕಾಟಿಪಳ್ಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
 
 
MRPL-ಸುರತ್ಕಲ್ ರಸ್ತೆ ಬೃಹತ್ ಉದ್ದಿಮೆಗಳು ಘನ ವಾಹನಗಳ ಅವ್ಯಾಹತ ಓಡಾಟದಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. MRPL-BASF-HPCL ಕಂಪೆನಿಗಳು ಈ ರಸ್ತೆಯನ್ನು ನಿಯಮಬಾಹಿರವಾಗಿ ಬಳಸುತ್ತಿರುವುದರಿಂದ ರಸ್ತೆ ಹೀನಾಯ ಸ್ಥಿತಿಗೆ ತಲುಪಿದೆ. ಇದರಿಂದ ಈ ಭಾಗದ ಜನ ಬಳಕೆಗೆ ರಸ್ತೆಯಿಲ್ಲದ ಸ್ಥಿತಿ ತಲುಪಿದ್ದು, ಹೊಂಡಗುಂಡಿಗಳಿಂದಾಗಿ ಹಲವು ಅಪಘಾತಗಳು ನಡೆದು ಹತ್ತರಷ್ಟು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಸ್ಥಳೀಯ ನಾಗರಿಕರು ಹಲವು ಹಂತಗಳ ಹೋರಾಟ ನಡೆಸುತ್ತಿದ್ದರೂ, ನಗರಪಾಲಿಕೆ, ಜನ ಪ್ರತಿನಿಧಿಗಳು ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ ಎಂದಿದ್ದಾರೆ.
 
 
ಕಳೆದ ಮೂರು ತಿಂಗಳಿನಿಂದ ಹೋರಾಟ ತೀವ್ರಗೊಂಡ ಸಂದರ್ಭ ಎಚ್ಚೆತ್ತ ನಗರಪಾಲಿಕೆ ಮೇಯರ್ ಹರಿನಾಥ್, ಶಾಸಕ ಮೊದಿನ್ ಬಾವ, ಲೋಕ ಸಭಾಸದಸ್ಯ ನಳಿನ್ ಕುಮಾರ್ ಕಟೀಲ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ, ಅವರಿಂದ ರಸ್ತೆ ದುರಸ್ತಿಗೆ ಪಾಲು ಸಂಗ್ರಹಿಸಿ ಒಂದು ತಿಂಗಳ ಅವಧಿಯೊಳಗಡೆ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಘೋಷಿಸಿದ್ದರು. ಅದರಂತೆ ಅಲ್ಪಾವಧಿ ಟೆಂಡರ್ ಗೆ ಪಾಲಿಕೆ ಕೌನ್ಸಿಲ್ ನಿಂದ ಅನುಮೋದನೆಯನ್ನು ಪಡೆದಿದ್ದರು.
 
 
ಈ ಮಧ್ಯೆ ಶಾಸಕ ಮೊದಿನ್ ಬಾವ ಯಾವುದೇ ಟೆಂಡರ್ ಇಲ್ಲದೆ ಒಂದೂವರೆ ಕೋಟಿಯ ಕಾಮಗಾರಿಕೆ ಗುದ್ದಲಿ ಪೂಜೆ ನಡೆಸಿ ಜನತೆಯನ್ನು ದಿಕ್ಕು ತಪ್ಪಿಸುವ ಯತ್ನಕ್ಕೆ ಕೈಹಾಕಿದ್ದರು. ಇದೆಲ್ಲ ಪ್ರಹಸನಗಳ ಮಧ್ಯೆ ಸುರತ್ಕಲ್ನಿಂದ MRPL  ವರೆಗಿನ ಆರು ಕಿ.ಮೀ. ವ್ಯಾಪ್ತಿಯಲ್ಲಿ ಜನತೆ ರಸ್ತೆ ದುರಸ್ತಿಗಾಗಿ ಅಕ್ಟೋಬರ್ 26ರಂದು ಪೂರ್ಣ ಪ್ರಮಾಣದಲ್ಲಿ ಬಂದ್ ಆಚರಿಸಿ ಆಡಳಿತಕ್ಕೆ ಬಿಸಿ ಮುಟ್ಟಿಸಿದರು.
 
ಈಗ ಒಂದು ತಿಂಗಳೊಳಗೆ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ಘೋಷಣೆ ಸುಳ್ಳಾಗಿದ್ದು ಶಾಸಕ ಮೊದಿನ್ ಬಾವ, ಮೇಯರ್ ಹರಿನಾಥ್ ಬಣ್ಣ ಬಯಲಾಗಿದೆ. ಕಂಪೆನಿಗಳಿಂದ ರಸ್ತೆ ದುರಸ್ತಿಗೆ ಅನುದಾನ ಸಿಗದಿದ್ದಲ್ಲಿ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನೆಯ ನೇತೃತ್ವ ವಹಿಸುವೆ ಎಂದು ವೀರಾವೇಷದ ಮಾತುಗಳನ್ನಾಡಿದ ಹರಿನಾಥ್ ಈಗ ಸುರತ್ಕಲ್, ಕಾನ ಒಖಕಐ ರಸ್ತೆಯನ್ನು ಮರೆತುಬಿಟ್ಟಿದ್ದಾರೆ. ಗುದ್ದಲಿ ಪೂಜೆ ಪ್ರವೀಣ ಮೊದಿನ್ ಬಾವ ದೇಶ ವಿದೇಶ ಸುತ್ತುತ್ತಾ ಹಾಯಾಗಿದ್ದಾರೆ.
 
 
ಇದರಿಂದಾಗಿ ಈ ಭಾಗದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ರಸ್ತೆ ದುರಸ್ತಿ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು ನಾಗರಿಕ ಹೋರಾಟ ಸಮಿತಿ ಕಾನ ಸುರತ್ಕಲ್ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಮಾತು ತಪ್ಪಿಸಿ, ಸುಳ್ಳು ಭರವಸೆಯ ಮೂಲಕ ಜನರನ್ನು ವಂಚಿಸಿದ ಮೇಯರ್ ಹರಿನಾಥ್, ಶಾಸಕ ಮೊದಿನ್ ಬಾವ ರಾಜೀನಾಮೆ ನೀಡಬೇಕು, ರಸ್ತೆ ದುರಸ್ತಿ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ಸುರತ್ಕಲ್ ಪಾಲಿಕೆ ಉಪಕಚೇರಿ, ಶಾಸಕ ಮೊದಿನ್ ಬಾವರವರ ಕಚೇರಿಗೆ ನವೆಂಬರ್ 30ರಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ವತಿಯಿಂದ ನಡೆಸಲಾದ ಪತ್ರಿಕಾಗೋಷ್ಟಿಯಲ್ಲಿ ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.
 
 
ಬಿ.ಕೆ ಇಮ್ತಿಯಾಜ್ ಸಂಚಾಲಕರು, ನಾಗರಿಕ ಹೋರಾಟ ಸಮಿತಿ, ನವೀನ್ ಪೂಜಾರಿ (ಮಾಜಿ ಸೈನಿಕ) ಸಹಸಂಚಾಲಕರು, ಶ್ರೀನಾಥ್ ಕುಲಾಲ್ ಸಹಸಂಚಾಲಕರು, ಬೆನಡಿಕ್ಟ್ ಕ್ರಾಸ್ತ ಹೋರಾಟ ಸಮಿತಿಯ ಪ್ರಮುಖರು, ಮುಷ್ತಾಕ್ ಅಹ್ಮದ್ ಹೋರಾಟ ಸಮಿತಿಯ ಪ್ರಮುಖರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here