24ರಂದು ಬೆಳ್ತಂಗಡಿ ತಾಲೂಕು 17ನೆಯ ಕನ್ನಡ ಸಾಹಿತ್ಯ ಸಮ್ಮೇಳನ

0
406

ಬೆಳ್ತಂಗಡಿ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಮಾ.24ದಂದು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪರಿಂಜೆಯ ಪಡ್ಯಾರಬೆಟ್ಟ ಸಂತೃಪ್ತಿ ಸಭಾಭವನದಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಜಿ.ರಾಮನಾಥ್ ಭಟ್ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ 12ಮಂದಿ ಸಾಧಕರಿಗೆ ಸನ್ಮಾನ ಹಾಗೂ ಇಬ್ಬರು ಉದಯೋನ್ಮುಖ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಕಾರ್ಯಕ್ರಮಗಳ ವಿವರ:

ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್ ಅವರು ಬೆಳಗ್ಗೆ 9.15ಕ್ಕೆ ರಾಷ್ಟ್ರಧ್ವಜಾರೋಹಣ ಗೈಯುವರು. ದ.ಕ. ಜಿಲ್ಲೆ ಕ.ಸಾ.ಪ. ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಪರಿಷತ್ತು ಧ್ವಜ ಹಾಗೂ ಕ.ಸಾ.ಪ.ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ ಸಮ್ಮೇಳನ ಧ್ವಜಾರೋಹಣ ಗೈಯುವರು. ಉದ್ಘಾಟನಾ ಸಮಾರಂಭ 9.30ಕ್ಕೆ ಸರಿಯಾಗಿ ಪ್ರಾರಂಭಗೊಂಡು 11.30ರೊಳಗೆ ಮುಕ್ತಾಯಗೊಳ್ಳಲಿದೆ.

Advertisement

ಸಮ್ಮೇಳನಾಧ್ಯಕ್ಷ ಜಿ ರಾಮನಾಥ ಭಟ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಹಾಗೂ ಸಮ್ಮೇಳನ ಸಂಯೋಜನಾ ಸಮಿತಿಯ ಎ.ಜೀವಂಧರ ಕುಮಾರ ಪಡ್ಯೋಡಿಗುತ್ತು ಉಪಸ್ಥಿತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ `ಚಾರುಮುಡಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ ಹಾಗೂ ಹೊಸಂಗಡಿ ತಾಲೂಕು ಪಂಚಾಯತ್ ಸದಸ್ಯ ಓಬಯ್ಯ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಸಮ್ಮೇಳನ ಸಂಯೋಜನಾ ಸಮಿತಿಯ ಕಾರ್ಯಾಧ್ಯಕ್ಷ ಪಿ.ಧರಣೀಂದ್ರ ಕುಮಾರ್ ಸ್ವಾಗತಿಸಲಿದ್ದು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಕಾರ್ಯಕ್ರಮದ ಆಶಯ ನುಡಿ ನುಡಿಯಲಿದ್ದಾರೆ. ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಿ.ಯಶೋವರ್ಮ ಪ್ರಾಸ್ತವಿಕ ಮಾತುಗಳನ್ನಾಡುವರು.

ಉಪನ್ಯಾಸಗಳು: ಗಂಟೆ 11.30ರಿಂದ 11.50ರವರೆಗೆ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಎಚ್.ಎಸ್ ವೆಂಕಟೇಶ ಮೂರ್ತಿ ಅವರ ಕವಿಕಾವ್ಯ ಪರಿಚಯವನ್ನು ಸಾಹಿತಿ ಅರವಿಂದ ಚೊಕ್ಕಾಡಿ ನಡೆಸಿಕೊಡಲಿದ್ದಾರೆ. ಗಂಟೆ 11.55ರಿಂದ 12.00 ವರೆಗೆ ಎರ್ಮೋಡಿ ಗುಣಪಾಲ ಜೈನ್ ಸಂಸ್ಮರಣೆಯನ್ನು ಬಾಲ್ಯ ಶಂಕರ ಭಟ್ಟ ಮಾಡುವರು. ಗಂಟೆ 12.05ರಿಂದ 12.25 ವರೆಗೆ ಬೆಳ್ತಂಗಡಿ ವಿಶ್ರಾಂತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ ದೈವಾರಾಧನೆ:ನಂಬಿಕೆ ನಡವಳಿಕೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಗಂಟೆ 12.30ರಿಂದ 1.00ವರೆಗೆ ಖ್ಯಾತ ಜಲತಜ್ಞ ಶ್ರೀಪಡ್ರೆ ಜಲ ಸಂಸ್ಕøತಿ-ಜನಜೀವನದ ಉಪನ್ಯಾಸ ನೀಡಲಿದ್ದಾರೆ. ಅವರೊಂದಿಗೆ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಂಟೆ 1ರಿಂದ 1.30ರವರೆಗೆ ಉಜಿರೆ ಶ್ರೀ ಧ.ಮಂ. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕುವೆಂಪುರವರ “ನಾಗಿ” ಕಥನ ಕವನ ರೂಪಕ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 1.55ರಿಂದ 2.15ರವರೆಗೆ ನಾವೂರು ಆರೋಗ್ಯ ಕ್ಲಿನಿಕ್ ಡಾ.ಪ್ರದೀಪ ಆಟಿಕುಕ್ಕೆ ಅವರು ಕಗ್ಗ-ಜೀವನ ಮೌಲ್ಯದ ಬಗ್ಗೆ ಉಪನ್ಯಾಸ ನೀಡಲಿದ್ದು, ಗಂಟೆ 2.20ರಿಂದ 2.25ರವರೆಗೆ ಡಾ.ಶ್ರೀಧರ ಕಂಬಳಿ ಪರಿಂಜೆ ಗುತ್ತು ಸಂಸ್ಮರಣೆಯನ್ನು ಪತ್ರಕರ್ತ ಹರೀಶ್ ಕೆ. ಆದೂರು ಮಾಡುವರು.


ಗಂಟೆ2.30ರಿಂದ 2.50ರವರೆಗೆ ಡಾ.ಯೋಗಿಶ್ ಕೈರೋಡಿ ಅವರು ಶಿಕ್ಷಣದಲ್ಲಿ ಸಾಹಿತ್ಯ ಅಭಿರುಚಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಗಂಟೆ 2.50ರಿಂದ 3.10ರವರೆಗೆ ವೇಣೂರು ಸರಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಳೆಗನ್ನಡ ಕಾವ್ಯ ವಿಶೇಷತೆ ಬಗ್ಗೆ ಗಾಯನ ಪ್ರಸ್ತುತಪಡಿಸಲಿದ್ದಾರೆ.

ಸನ್ಮಾನ ಮತ್ತು ಸಮಾರೋಪ ಸಮಾರಂಭ
ದ.ಕ.ಜಿಲ್ಲೆ ಕ.ಸಾ.ಪ. ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅವರು ಸನ್ಮಾನಿತರನ್ನು ಗೌರವಿಸಲಿದ್ದಾರೆ.


ಕಾಂತಾವರ ಕನ್ನಡ ಸಂಘ ಅಧ್ಯಕ್ಷ ಡಾ.ನಾ.ಮೊಗಸಾಲೆ ಸಮಾರೋಪ ಭಾಷಣ ಮಾಡಲಿದ್ದು, ಜಿ.ರಾಮನಾಥ ಭಟ್ ಸಮ್ಮೇಳನಾಧ್ಯಕ್ಷರ ನುಡಿ ನುಡಿಯುವರು. ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಹಾಗೂ ಪರಿಂಜೆ ಗುತ್ತು ಪಿ.ಜಯರಾಮ ಕಂಬಳಿ ಸ್ವಾಗತಿಸಲಿದ್ದಾರೆ.

ಸನ್ಮಾನಿತರು : ಪತ್ರಿಕೋದ್ಯಮ- ದೇವಿಪ್ರಸಾದ್,ಜೈಕನ್ನಡಮ್ಮ, ವೈದ್ಯಕೀಯ- ಬೆದ್ರಡ್ಕ ಡಾ.ರಾಮಕೃಷ್ಣ ಭಟ್, ಸಮಾಜಸೇವೆ-ಬಿ.ರಾಮಚಂದ್ರ ಶೆಟ್ಟಿ, ಶಿಕ್ಷಣ-ಬಜಿರೆ ಮುಖ್ಯ ಶಿಕ್ಷಕಿ ಎಂ.ಕಮಲಾಜಿ ಎಸ್ ಜೈನ್, ಯಕ್ಷಗಾನ-ನಿಡ್ಲೆ ಗೋವಿಂದ ಭಟ್, ಸಾಮಾಜಿಕ ಜಾಗೃತಿ-ತೋಟತ್ತಾಡಿ ಡಿ.ಎ.ರಹಿಮಾನ್, ಕಂಬಳ-ಅಳದಂಗಡಿ ರವಿ, ಜಾನಪದ-ಮರೋಡಿ ದೇವು, ಉದ್ಯಮ-ಪೆರಿಂಜೆ ಮದಕುಡೆ ಕೊರಗಪ್ಪ ಶೆಟ್ಟಿ, ಹೈನುಗಾರಿಕೆ-ಪೆರಿಂಜೆ ಜೆರೋಮಿ ಎಸ್.ಮೊರಾಸ್, ಕೃಷಿ-ಬಳಂಜ ಅನಿಲ್, ಸೇವೆ-ಉಜಿರೆ ಬದುಕು ಕಟ್ಟೋಣ ಬನ್ನಿ ಸಂಘಟನೆ, ಪ್ರತಿಭಾ ಪುರಸ್ಕಾರ-ಪೆರಿಂಜೆ ಪ್ರವೀಣ್ ಜೈನ್ ಹಾಗೂ ಗುಂಡೂರಿ ದಿವ್ಯ ಅಂಚನ್.

ಯುವ ಜನತೆ ಪಾಲ್ಗೊಳ್ಳಿ
ವಿದ್ಯಾರ್ಥಿಗಳಲ್ಲಿ ಯುವ ಸಮೂಹದಲ್ಲಿ ಸಾಹಿತ್ಯದ ಆಸಕ್ತಿ ಮೂಡುವಂತಾಗಬೇಕೆಂಬ ಹಿನ್ನಲೆಯಲ್ಲಿ ಯುವ ಮನಸ್ಸುಗಳನ್ನು, ವಿದ್ಯಾರ್ಥಿಗಳನ್ನು ವಿಶೇಷವಾಗಿ ಆಮಂತ್ರಿಸಲು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಯುವ ಸಮೂಹ ಕನ್ನಡ ನಾಡು ನುಡಿಯ ಸಂಸ್ಕøತಿಯ ಸೇವೆಯಲ್ಲಿ ತೊಡಗುವಂತಾಗಬೇಕೆಂಬುದೇ ಇದರ ಹಿಂದಿರುವ ಉದ್ದೇಶ. ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರಬೇಕೆಂದು ತಾಲೂಕಿನ ಪ್ರಜ್ಞಾವಂತ ಶಿಕ್ಷಕರಲ್ಲಿ, ಪೋಷಕರಲ್ಲಿ ಸಮ್ಮೇಳನದ ಸಮಿತಿ ವಿಶೇಷವಾಗಿ ವಿನಂತಿಸುತ್ತಿದೆ.

LEAVE A REPLY

Please enter your comment!
Please enter your name here