ಭಾಷಣ ಕಲೆಯ ದಕ್ಷತೆ

0
794

ಶಿಕ್ಷಣ ಚಿಂತನೆ ಅಂಕಣ: ಅರವಿಂದ ಚೊಕ್ಕಾಡಿ
ಮುಂದುವರಿದ ಭಾಗ…
ಭಾಷಣಕಾರನ ಕೌಶಲಗಳು
ಪರಿಣಾಮಕಾರಿಯಾದ ಭಾಷಣವನ್ನು ಮಾಡಬೇಕಾದರೆ ಭಾಷಣಕಾರನಿಗೆ ಕೆಲವು ಕೌಶಲ್ಯಗಳ ಅಗತ್ಯವಿದೆ. ವಿಷಯಗಳು ಚೆನ್ನಾಗಿದ್ದರೆ ಸಾಕಾಗುವುದಿಲ್ಲ. ವಿಷಯವನ್ನು ಕೇಳುಗರಿಗೆ ತಲುಪಿಸುವ ವಿಧಾನವೂ ಕೂಡ ಅಷ್ಟೇ ಚೆನ್ನಾಗಿರಬೇಕಾಗುತ್ತದೆ. ವಿಷಯವನ್ನು ತಲುಪಿಸುವ ವಿಧಾನವೂ ಚೆನ್ನಾಗಿಲ್ಲದಿದ್ದರೆ ಭಾಷಣವು ನೀರಸವಾಗುತ್ತದೆ. ಭಾಷಣವನ್ನು ರಸವತ್ತಾಗಿ ಮಾಡಲು ಬೇಕಾದ ಕೌಶಲಗಳು:
 
a. ಒಳ್ಳೆಯ ಮಾತುಗಾರಿಕೆ:
ಭಾಷಣ ಯಶಸ್ವಿಯಾಗಬೇಕಾದರೆ ನಮ್ಮ ಮಾತುಗಳು ಕೇಳುಗರ ಮೇಲೆ ಪರಿಣಾಮವನ್ನು ಉಂಡು ಮಾಡಬೇಕು. ಆದರೆ ಯಾವ ಮಾತುಗಳು ಪರಿಣಾಮಕಾರಿಯಾಗಿರುತ್ತವೆ ಎನ್ನುವುದು ಕೇವಲ ಭಾಷಣಕಾರನನ್ನು ಅವಲಂಬಿಸಿದ ವಿಷಯವಲ್ಲ ಅದು ಕೇಳುಗರ ಸಾಮರ್ಥ್ಯವನ್ನೂ ಅವಲಂಬಿಸಿರುತ್ತದೆ. ಭಾಷಣಕಾರನಿಗೆ ಕೇಳುಗರ ಸಾಮರ್ಥ್ಯವನ್ನೂ ಅರ್ಥ ಮಾಡಿಕೊಳ್ಳುವ ತಜ್ಞತೆ ಇರಬೇಕು ಮತ್ತು ಕೇಳುಗರ ಸಾಮರ್ಥ್ಯದ ಮಟ್ಟಕ್ಕೆ ಸಮಾನವಾಗಿ ಮಾತುಗಳನ್ನು ಆಡಬೇಕು.
 
 
b. ಕಥೆ, ದಂತಕಥೆ, ನಾಣ್ಣುಡಿಗಳ ಬಳಕೆ:
ಭಾಷಣದ ಮಾತುಗಾರಿಕೆಯನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕಥೆ, ದಂತಕಥೆ, ಸ್ವಾನುಭವ, ನಾಣ್ಣುಡಿಗಳ ಬಳಕೆಯು ಬೇಕಾಗುತ್ತದೆ. ಆದರೆ ಕಥೆ ಉಪಕಥೆಗಳೇ ವ್ಯಾಪಿಸಿಕೊಂಡು ಭಾಷಣದ ವಸ್ತುವೇನೆಂಬುದೆ ಗೊತ್ತಾಗದಂತಾಗಬಾರದು. ಬದಲಿಗೆ ಕಥೆ, ಉಪಕಥೆಗಳ ಬಳಕೆಯು ಭಾಷಣದ ವಿಷಯವನ್ನು ಪರಿಣಾಮಕಾರಿಯಾಗಿ, ಮಾರ್ಲಿಕವಾಗಿ ಮನವರಿಕೆ ಮಾಡಿಕೊಡಬೇಕು. ಆದರೆ ಅನಗತ್ಯವಾಗಿ ಕಥೆ, ಉಪಕಥೆ, ನಾಣ್ಣುಡು ಹೇಳಿಕೆಗಳನ್ನೆಲ್ಲ ಬಳಸಲು ಹೋಗಬಾರದು. ಭಾಷಣಕ್ಕೆ ಅತ್ಯಂತ ಅನಿವಾರ್ಯವಿದ್ದಾಗ ಮಾತ್ರ ಇವನ್ನು ಬಳಸಬೇಕು.
 
 
 
c. ಹಾಸ್ಯ:
ಹಾಸ್ಯವು ಭಾಷಣವನ್ನು ಆಕರ್ಷಕಗೊಳಿಸುತ್ತದೆ. ಭಾಷಣದ ಬಗ್ಗೆ ಏಕಾಗ್ರತೆಯನ್ನು ಉಂಟು ಮಾಡುತ್ತದೆ. ಆದರೆ ಬಳಸುವ ಹಾಸ್ಯವು ಕಳಪೆ ಮಟ್ಟದ್ದಾಗಬಾರದು. ಯಾರನ್ನೊ ಲೇವಡಿ ಮಾಡುವುದಾಗಬಾರದು. ಯಾರಿಗೂ ನೋವನ್ನುಂಟು ಮಾಡದೆ ಕೇಳುಗರಿಗೆ ಹಿತಾನುಭವವನ್ನು ನೀಡುವಂತಾದ್ದಾಗಬೇಕು. ಅಲ್ಲದೆ ಹಾಸ್ಯವ ಮೂಲಕವೂ ಕೂಡ ವಿಚಾರವನ್ನು ಪ್ರೇರೆಪಿಸಲು ಸಾಧ್ಯವಾಗುತ್ತದೆ. ವಿಚಾರವನ್ನು ಪ್ರೇರೆಪಿಸುವ ರೀತಿಯ ಹಾಸ್ಯವನ್ನು ಧಾರಾಳವಾಗಿ ಬಳಸಬಹುದು. ಭಾಷಣದಲ್ಲಿ ಹಾಸ್ಯವನ್ನು ಬಳಸುವುದರ ಉದ್ದೇಶವನ್ನು ಹೇಳುವುದಾದರೆ, ಮೊದಲನೆಯದಾಗಿ ಒಂದು ಒಂದ ಗಂಭೀರದ ವಿಚಾರವನ್ನು ಕೇಳುಗರಿಗೆ ಸುಲಭವಾಗಿ ಅರ್ಥ ಮಾಡಿಸುವುದಾಗಿ ಹಾಸ್ಯವನ್ನು ಬಳಸಬೇಕು. ಎರಡನೆಯದಾಗಿ ಗಂಭೀರವಾದ ವಿಚಾರವನ್ನು ವಿಸ್ತರಿಸಲು ಅನುಕೂಲ ಮಾಡಿಕೊಡುವುದಾಗಿ ಹಾಸ್ಯವನ್ನು ಬಳಸಬೇಕು. ಮೂರನೆಯದಾಗಿ ವಿಚಾರವನ್ನು ಕೇಳುವ ಕೇಳುಗರಿಗೆ ನಿರಾಳತೆಯನ್ನು ಒದಗಿಸುವುದಕ್ಕಾಗಿ ಹಾಸ್ಯವನ್ನು ಬಳಸಬೇಕು. ನವಿರಾದ ತಿಳಿ ಹಾಸ್ಯ ಮಾತ್ರ ಅಂತಹ ನಿರಾಳತೆಯನ್ನು ಒದಗಿಸಲು ಸಾಧ್ಯ.
 
 
 
d. ಧ‍್ವನಿ, ವಿನ್ಯಾಸ, ಉಚ್ಛಾರ:
ಭಾಷಣವನ್ನು ಆಕರ್ಷಕಗೊಳಿಸುವುದರಲ್ಲಿ ಭಾಷಣಕಾರನ ಧ್ವನಿಯೂ ಕೂಡ ಮುಖ್ಯವಾಗುತ್ತದೆ. ಧ್ವನಿಯು ಕೇಳುಗರಿಗೆ ಹಿತಾನುಭವವನ್ನು ಉಂಟು ಮಾಡುವಂತಿರಬೇಕು. ಧ್ವನಿಯಷ್ಟೇ ಮುಖ್ಯವಾದದ್ದು ಉಚ್ಛಾರ. ಬಹಳ ಸಂದರ್ಭಗಳಲ್ಲಿ ಭಾಷಣಕಾರರು ತಪ್ಪು ಉಚ್ಛಾರಗಳನ್ನು ಮಾಡಿ ಕೇಳುಗರಿಗೆ ತಪ್ಪು ತಿಳಿಬಳಿಕೆಗಳನ್ನು ಮೂಡಿಸಿಬಿಡುತ್ತಾರೆ. ಅವಾ ಕೇಳುಗರು ಆಕ್ಷೇಪಿಸಲಿಕ್ಕೆ ಮತ್ತು ಭಾಷಣಕಾರನನ್ನು ತಪ್ಪಾಗಿ ತಿಳಿದುಕೊಳ್ಳುವುದಕ್ಕೆ ಕಾರಣರಾಗಿಬಿಡುತ್ತಾರೆ. ಅಂತಹ ತಪ್ಪು ಉಚ್ಛಾರಗಳು ಆಗದಂತೆ ಎಚ್ಚರ ವಹಿಸಬೇಕು.
 
 
e. ಮಾತಿನ ಲಯ:
ಆಡುವ ಮಾತುಗಳು ಕೇಳುಗರಿಗೆ ವಿಚಾರವನ್ನಷ್ಟೇ ತಲುಪಿಸುವುದಿಲ್ಲ; ಭಾವನೆಯನ್ನೂ ತಲುಪಿಸುತ್ತದೆ. ಕೇಳುಗರನ್ನು ತಲುಪುವ ಭಾವನೆಗಳು ಅವರಲ್ಲಿ ಹಿತಾನುಭವವನ್ನು ಉಂಟು ಮಾಡುವಂತಿರಬೇಕು.
 
 
f. ಸಭೆಯನ್ನು ಅರ್ಥಮಾಡಿಕೊಳ್ಳಬೇಕು:
ಯಾವುದೇ ಒಂದು ಸಭೆಯಲ್ಲಿ ಎಲ್ಲರೂ ಒಂದೇ ಬೌದ್ಧಿಕ ಮಟ್ಟದವರಾಗಿರುವುದಿಲ್ಲ. ಆಗ ಸಭೆಯಲ್ಲಿರುವ ಬಹುತೇಕರನ್ನು ಗಮನದಲ್ಲಿಟ್ಟಿಕೊಂಡು ಮಾತುಗಾರಿಕೆಯನ್ನು ನಿರ್ಧರಿಸಬೇಕು.
 
 
g. ನಿರರ್ಗಳತೆ:
ಮಾತಿನಲ್ಲಿ ನಿರರ್ಗಳತೆ ಇರಬೇಕು. ನಿರರ್ಗಳತೆ ಎಂದರೆ ಕಂಠಪಾಠ ಮಾಡಿ ಒಪ್ಪಿಸುವುದಾಗಿರುವುದಿಲ್ಲ. ಕಂಠಪಾಠ ಮಾಡಿ ಒಪ್ಪಿಸುವುದರಲ್ಲಿ ಭಾವಾಭಿವ್ಯಕ್ತಿ ಯಾಂತ್ರಿಕವಾಗಿರುತ್ತದೆ. ಅದು ಕಂಠಪಾಠ ಮಾಡಿ ಒಪ್ಪಿಸಿದ್ದೆಂಬುದು ಕೇಳುಗರಿಗೆ ಗೊತ್ತಾಗುತ್ತದೆ. ವಿಚಾರ ಇದ್ದು ಮಾತನಾಡಿದಾಗ ಈ ಯಾಂತ್ರಿಕತೆ ಇರುವುದಿಲ್ಲ. ಆದ್ದರಿಂದ ವಿಚಾರವನ್ನು ಸರಿಯಾಗಿ ತಿಳಿದುಕೊಂಡು, ಮಾನಸಿಕವಾಗಿ ಅದನ್ನು ಕ್ರಮಬದ್ಧವಾಗಿ ಹೊಂದಿಸಿಕೊಂಡು ಮಾತನಾಡಬೇಕು. ಆಗ ನಿರರ್ಗಳತೆ ತಾನೇ ತಾನಾಗಿ ಬರುತ್ತದೆ.
 
 
h. ಆಂಗಿಕ ನಿರ್ವಹಣೆ:
ಭಾಷಣವನ್ನು ಪರಿಣಾಮಕಾರಿಯಾಗಿಸುವುದರಲ್ಲಿ ಆಂಗಿಕ ನಿರ್ವಹಣೆಯೂ ಮುಖ್ಯವಾಗಿದೆ. ಧ್ವನಿಗೆ ಒಂದು ಭಾವ ಇರುತ್ತದೆ. ಆಂಗಿಕ ಚಲನೆಯು ಧ್ವನಿಯ ಭಾವವನ್ನು ವಿಸ್ತರಿಸಲು ಸಹಾಯ ಮಾಡಬೇಕು. ಧ್ವನಿ ಮತ್ತು ಮುಖ ಭಾವ ಹಾಗೂ ಆಂಗಿಕ ಚಲನೆ ಪರಸ್ಪರ ಪೂರಕವಾಗಿ ಹೊಂದಿಕೊಳ್ಳಬೇಕು.
 
 
i. ಭಾಷೆಯ ಬಳಕೆ:
ಭಾಷಣಕಾರನಿಗೆ ಭಾಷೆಯನ್ನು ಬಳಸುವ ಕೌಶಲವಿರಬೇಕು. ಬರೆದು ಹೇಳುವಾಗ ಓದುಗರಿಗೆ ಪುನಃ ಪುನಃ ಓದಿಕೊಂಡು ಅರ್ಥಮಾಡಿಕೊಳ್ಳಲು ಅವಕಾಶವಿರುತ್ತದೆ. ಭಾಷಣದಲ್ಲಿ ಈ ಅವಕಾಶ ಇರುವುದಿಲ್ಲ. ಒಂದು ಸಲ ಹೇಳಿದ್ದು ಅರ್ಥವಾಗದಿದ್ದರೆ ಮತ್ತೊಮ್ಮೆ ಕೇಳಿ ಅರ್ಥ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಆದ್ದರಿಂದ ಒಂದು ಸಲ ಹೇಳುವಾಗಲೇ ಅರ್ಥವಾಗುವಂತಹ ಭಾಷಾ ಬಳಕೆಯನ್ನು ಮಾಡಬೇಕು. ಸರಳವಾಗಿ, ಸುಲಭವಾಗಿ ಅರ್ಥವಾಗುವಂತಹ ಪದಗಳನ್ನು ಬಳಸಬೇಕು.ವಿಚಾರ ಎಷ್ಟು ದೊಡ್ಡದೆ ಆಗಿದ್ದರೂ ಪದಗಳು ಮಾತ್ರ ಸರಳವಾಗಿರಬೇಕು.
 
 
 
j. ಸಮಯದ ಸಮರ್ಪಕ ಬಳಕೆ:
ಬಹಳಷ್ಟು ಭಾಷಣಕಾರರಿಗೆ ಭಾಷಣ ಮಾಡಲು ನಿಂತ ಮೇಲೆ ಸಮಯದ ಪರಿವೆ ಇರುವುದಿಲ್ಲ. ವಿಚಾರ ಆನೂ ಇಲ್ಲದಿದ್ದರೂ ಬಹಳ ಹೊತ್ತಿನ ವರೆಗೂ ಮಾತನಾಡುತ್ತಲೇ ಇರುತ್ತಾರೆ. ಇಂತಹ ಭಾಷಣಗಳು ಕೇಳುಗರಿಗೆ ಸಂಕಷ್ಟವನ್ನುಂಟುಮಾಡುತ್ತದೆ. ಯಾವ ಭಾಷಣವೂ ಕೂಡ “ಈ ಭಾಷಣ ಯಾವಾಗ ಮುಗುಯುತ್ತದಪ್ಪಾ” ಎಂದು ಕೇಳುಗರು ಅಂದುಕೊಳ್ಳುವ ತನಕ ಮುಂದುವರಿಯಬಾರದು. ಬದಲು ” ಈ ಭಾಷಣ ಇನ್ನೂ ಸ್ವಲ್ಪ ಹೊತ್ತು ಇದ್ದರೆ ಚೆನ್ನಾಗಿತ್ತು” ಎಂದು ಅನಿಸುವ ಹಂತದಲ್ಲಿ ಭಾಷಣವನ್ನು ನಿಲ್ಲಿಸಬೇಕು.

ಮುಂದುವರಿಯುತ್ತದೆ…

ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here