2018ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ

0
526

 
ವರದಿ: ಲೇಖಾ
2018 ರ ಮಹಾಮಸ್ತಕಾಭಿಷೇಕವನ್ನು ಹಿಂದಿಗಿಂತಲೂ ಅತಿ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರದ ದೃಢ ಸಂಕಲ್ಪ: ಸಿಎಂ ಸಿದ್ದರಾಮಯ್ಯ
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭವು 2018 ರ ಫೆಬ್ರವರಿಯಲ್ಲಿ ನಡೆಯಲಿದೆ. ಈ ಸಮಾರಂಭವನ್ನು ಈ ಹಿಂದಿಗಿಂತಲೂ ಅತಿ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ದೃಢ ಸಂಕಲ್ಪ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
 
 
 
ಶ್ರವಣಬೆಳಗೊಳದ ವಿಂದ್ಯಗಿರಿ ಬೆಟ್ಟದ ಮೇಲಿರುವ ಅಹಿಂಸೆಯ ಪ್ರತಿಪಾದಕ ಗೊಮ್ಮಟೇಶ್ವರ ಭಗವಾನ್ ಬಾಹುಬಲಿಯ 58.8 ಅಡಿ ಮೂರ್ತಿಗೆ 2018 ರಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭ ಆಚರಣೆಯ ಉನ್ನತಾಧಿಕಾರ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿಗಿಂತಲೂ ಈ ಬಾರಿ ಎಲ್ಲಾ ರೀತಿಯಲ್ಲೂ ಬಹಳಷ್ಟು ಬದಲಾವಣೆ ಹಾಗೂ ಬೆಳವಣಿಗೆಗಳಾಗಿವೆ. ಭಕ್ತ ಸಮೂಹಕ್ಕೆ ಹಾಗೂ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ವಸತಿ ಹಾಗೂ ಶೌಚಾಲಯ ವ್ಯವಸ್ಥೆ, ನಿರಂತರ ವಾಹನ ಸೌಲಭ್ಯ, ಅತ್ಯುತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಹಾಗೂ ಸೂಕ್ತ ಭದ್ರತಾ ಸೌಲಭ್ಯಗಳನ್ನು ಒದಗಿಸಿ ಅಂತಾರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮವನ್ನು ಸ್ಮರಣಾರ್ಹ ಕಾರ್ಯಕ್ರಮವನ್ನಾಗಿ ರೂಪಿಸಬೇಕೆಂಬುದು ಸರ್ಕಾರದ ಆಶಯ ಎಂದರು.
 
 
 
ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಎ. ಮಂಜು ಮಾತನಾಡಿ, ಈ ಹಿಂದೆ 2006 ರಲ್ಲಿ ಆಚರಿಸಿದ ಮಹಾಮಸ್ತಕಾಭಿಷೇಕಕ್ಕೆ 116.66 ಕೋಟಿ ರೂ ವೆಚ್ಚಮಾಡಲಾಗಿತ್ತು. ಇದೀಗ 2018 ರ ಮಹಾಮಸ್ತಕಾಭಿಷೇಕಕ್ಕೆ 575 ಕೋಟಿ ರೂ ಮೊತ್ತದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಹತ್ತು-ದಿನಗಳ ಈ ಸಮಾರಂಭದಲ್ಲಿ 40 ಲಕ್ಷದಿಂದ 50 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ದೇಶ-ವಿದೇಶಗಳಿಂದಲೂ ಆಗಮಿಸುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ರಸ್ತೆಗಳ ಸುಧಾರಣೆ ಕಾಮಗಾರಿಗಳೂ ಎಲ್ಲವೂ ಈ ಅಂದಾಜು ಪಟ್ಟಿಯಲ್ಲಿ ಸೇರಿವೆ. ಕಳೆದ ಮಹಾಮಸ್ತಕಾಭಿಷೇಕದ ಸಂಧರ್ಭದಲ್ಲಿ 400 ಎಕರೆ ಪ್ರದೇಶದಲ್ಲಿ 12,000 ಮಂದಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ ಮಹಾಮಸ್ತಕಾಭಿಷೇಕಕ್ಕೆ 710 ಎಕರೆ ಪ್ರದೇಶದಲ್ಲಿ ಕನಿಷ್ಠ 25,000 ಜನರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here