20 ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

0
319

ವರದಿ: ಶೇಖರ್ ಅಜೆಕಾರು
ಅವಕಾಶಗಳೇ ಭಾಗ್ಯದ ಬಾಗಿಲು, ನಾನು ಕೂಡಾ ಸಿಕ್ಕಿದ ಅವಕಾಶ ಬಳಸಿಕೊಂಡು ರಾಷ್ಟ್ರಪತಿಗಳ ವರೆಗೆ ಹೋಗಲು ಹಿರಿಯ ಆಶೀರ್ವಾದ ಪ್ರೇರಣೆಯೇ ಕಾರಣ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಪಂಚಮಿ ಮಾರೂರು ಹೇಳಿದರು.
 
 
ಅವರು ಕಾರ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಮಿತ್ರ ಮಂಡಳಿ ಕೋಟ ಅರ್ಪಿಸಿದ ಐದು ಜಿಲ್ಲಾ ವ್ಯಾಪ್ತಿಯ 20 ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳಾನಧ್ಯಕ್ಷೆ ಅನುಜ್ಞಾ ಭಟ್ ಅವರನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
 
 
 
ಮಿತ್ರ ಮಂಡಳಿ, ಕೋಟ, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸ್ನೆಸ್ ಮ್ಯಾನೇಜ್ಮೆಂಟ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಕಾರ್ಯಕ್ರಮವನ್ನು ಸಂಯುಕ್ತವಾಗಿ ಆಯೋಜಿಸಿದ್ದವು.
 
 
 
ಸೃಜನಶೀಲ ಸಾಹಿತ್ಯದಿಂದ ಸೌಂದರ್ಯಪ್ರಜ್ಞೆ, ಪರಿಸರ ಕಾಳಜಿ ಮೂಡಲು ಸಾಧ್ಯ ವ್ಯಕ್ತಿ ಅಂತರಂಗ ಪ್ರಕಾಶಗೊಳ್ಳಲು ಸಾಹಿತ್ಯ ಅತ್ಯಾವಶ್ಯಕ ಎಂದು ಸಮ್ಮೇಳನಾಧ್ಯಕ್ಷೆ ಅನುಜ್ಞಾ ಭಟ್ ಕಟೀಲು ಅಭಿಪ್ರಾಯ ಪಟ್ಟರು.
 
 
 
ಬಾಲ ಸಾಹಿತಿಗಳಿಗೆ ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ನೀಡಬೇಕು, ಪ್ರತಿ ಶಾಲೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳಿಗೆ ನಿತ್ಯ ನಿರಂತರ ಪ್ರೋತ್ಸಾಹ ಸಿಗಬೇಕು, ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಯೋಜನೆ ರೂಪಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
 
 
 
ಅದ್ಬುತ ಪ್ರತಿಭೆಗಳು ಇಲ್ಲಿ ತಮ್ಮ ಮಾತಿನ ಮೂಲಕ, ಜ್ಞಾನ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಇಷ್ಟು ಸಣ್ಣ ಪ್ರಾಯದಲ್ಲಿ ಅವರು ಮಾಡುತ್ತಿರುವ ಸಾಧನೆ ನೋಡಿ ಮನತುಂಬಿ ಬಂತು. ಇಂತಹ ಸಮ್ಮೇಳನಗಳು ನಿಜಾರ್ಥದಲ್ಲಿ ನಾಳಿನ ಭವಿಷ್ಯ ರೂಪಿಸುವ ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯ ಬೇಕು ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆಯ ಮೊಹಮ್ಮದಾಲಿ ಅಬ್ಬಾಸ್ ಹಾರೈಸಿದರು.
 
ಮಕ್ಕಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಅದು ಹಿರಿಯರ ಕರ್ತವ್ಯ. ಶೇಖರ ಅಜೆಕಾರು ಅಂತಹ ಕಾರ್ಯಕ್ರಮ ಸಂಘಟಿಸುವುದರಲ್ಲಿ ನಿಸ್ಸೀಮರು ಎಂದು ಹಿರಿಯ ಉದ್ಯಮಿ ಸಮಾಜ ಸೇವಕ ವಿಶ್ವನಾಥ ಶೆಣೈ ಉಡುಪಿ ಹೇಳಿದರು.
 
 
 
ಬೆಳ್ಳಿ ಹಬ್ಬದ ಬೆಳಕಲ್ಲಿ ಸಂಭ್ರಮಿಸುತ್ತಿರುವ ನಮ್ಮೀ ಕಾಲೇಜಿನಲ್ಲಿ ಐದು ಜಿಲ್ಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಮಾಗಮದ ಈ ಸಮ್ಮೇಳನ ನಮಗೆ ವಿಶೇಷ ಸಂತೋಷ, ಹೊಸ ಅನುಭವ ನೀಡಿದೆ ಎಂದು ಅತಿಥಿಗಳಾಗಿದ್ದ ಕಾರ್ಕಳ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಶ್ರೀವರ್ಮ ಅಜ್ರಿ ಸಂತೋಷ ವ್ಯಕ್ತ ಪಡಿಸಿದರು.
 
 
 
ಛಾಯಾಚಿತ್ರ ಪ್ರದರ್ಶನವನ್ನು ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಶರತ್ ಕಾನಂಗಿ ಅವರು ನಿತೇಶ್ ಪಿ ಬೈಂದೂರು ಅವರ ಏಕ ವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
 
ಸೂಕ್ತ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಮತ್ತು ಯುವಜನತೆ ದೇಶದ ಆಸ್ತಿ ಆಗಬಲ್ಲರು ಎಂದು ರೋಟರ್ಯಾಕ್ಟ್ ಜಿಲ್ಲಾ ಸಭಾಪತಿ ಶೈಲೇಂದ್ರ ರಾವ್ ಅಭಿಪ್ರಾಯ ಪಟ್ಟರು.
 
ಸಾಹಿತಿ ಮಸುಮ ಅವರು ಸ್ವಾಗತಿಸಿದರು. ಪ್ರಧಾನ ಸಂಚಾಲಕ ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮ್ಮೇಳನ ಸಂಚಾಲಕಿ ಸುಪ್ರಿಯಾ ಚೆನ್ನಿಬೆಟ್ಟು ಉಪಸ್ಥಿತರಿದ್ದರು. ರಮೇಶ ಮತ್ತು ಸುಚಿತಾ ನಿರೂಪಿಸಿದರು.
 
ಪ್ರತಿಭಾನ್ವಿತ ಬಾಲಕಿ ಮಂಗಳೂರಿನ ರೆಮೋನಾ ಇವೆಟ್ ಪಿರೇರಾ ಪ್ರಾರ್ಥನಾ ನೃತ್ಯ ಮತ್ತು ಕಾಸರಗೋಡಿನ ತೇಜಸ್ವಿನಿ ಕೆ. ಜಾದುಗಾರ್ತಿ ಪೈವಳಿಕೆ ಅವರ ಜಾದು ನೃತ್ಯ ಗಮನಸೆಳೆಯಿತು. ಅತಿಥೇಯ ಕಾಲೇಜಿನ ವಿದ್ಯಾರ್ಥಿವೃಂದ ನಾಡ ಗೀತೆ ಮತ್ತು ರೈತ ಗೀತೆಗಳನ್ನು ಪ್ರಸ್ತುತ ಪಡಿಸಿದರು.

LEAVE A REPLY

Please enter your comment!
Please enter your name here