ಸಸ್ಯೋತ್ಪಾದನೆಗೆ ರೂಟ್ ಟ್ರೈನರ್ ಟ್ರೇಗಳು..

0
824

ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಬೀಜ ಬಿತ್ತನೆ ಮಾಡಿ ಸಸಿ ಮಾಡುವ, ಕಸಿ ವಿಧಾನಗಳಲ್ಲಿ ಸಸ್ಯೋತ್ಪಾದನೆ ಮಾಡುವ ಸಾಂಪ್ರದಾಯಿಕ ಕ್ರಮಗಳು ಈಗ ಹಳೆಯದಾಗಿದೆ. ಸಸ್ಯೋತ್ಪಾದನೆಗೆ ರೂಟ್ ಟ್ರೈನರ್ ಟ್ರೇ ಗಳು ಬಂದು ಬೇಕಾದಲ್ಲಿ ಬೇಕಾದಷ್ಟು ಸಸ್ಯೋತ್ಪಾದನೆ ಮಾಡಬಹುದಾಗಿದೆ. ಸ್ವ ಉದ್ಯೋಗಕ್ಕೂ ಇದು ಲಾಭದಾಯಕವಾಗಿದೆ. ಈ ತಂತ್ರಜ್ಞಾನದ ಫಲದಿಂದ ದೂರದ ಊರಿನಲ್ಲಿ ಉತ್ಪಾದನೆಯಾದ ಸಸ್ಯಗಳನ್ನೂ ಮಿತವ್ಯಯದಲ್ಲಿ ಸಾಗಣೆ ಮಾಡಬಹುದು. ಒಂದು ರಟ್ಟಿನ ಪೆಟ್ಟಿಗೆಯಲ್ಲಿ ಹಾರ್ಡನಿಂಗ್ ಆದ 250 ಅಂಗಾಂಶ ಕಸಿಯ ಬಾಳೆ ಸಸ್ಯಗಳನ್ನು, ಸಾವಿರಕ್ಕೂ ಹೆಚ್ಚು ಟೊಮೇಟೋ ಸಸ್ಯಗಳನ್ನು ಬಸ್ಸಿನಲ್ಲಿ ಒಯ್ಯಬಹುದು. ತರಕಾರಿಗಾಗಿ ಪ್ರಾರಂಭವಾದ ಈ ವಿಧಾನ ಈಗ, ಅಂಗಾಂಶ ಕಸಿಯ ಸಸ್ಯ ಬೆಳೆಸಲು, ರಬ್ಬರ್, ಅಡಿಕೆ, ಅರಣ್ಯ ಸಸ್ಯಗಳು, ಭತ್ತದ ಯಾಂತ್ರಿಕ ನಾಟಿಗೆ ಬೇಕಾಗುವ ನೇಜಿ ಎಲ್ಲದಕ್ಕೂ ಪ್ರಯೋಜನಕಾರಿಯಾಗಿದೆ. ಉತ್ತಮ ಗುಣಮಟ್ಟದ ಸಸ್ಯಗಳ ಲಭ್ಯತೆ, ಸಾಗಾಣಿಕೆಯ ಅನುಕೂಲ, ಬಿತ್ತನೆ ಬೀಜಗಳ ಗರಿಷ್ಟ ಮೊಳಕೆ, ಬೇಸಾಯಾದಲ್ಲಿ ಸಮಯದ ಉಳಿತಾಯ ಎಲ್ಲವೂ ಈ ರೂಟ್ ಟ್ರೈನರ್ ಟ್ರೇಗಳಿಂದ ಆಗಿದೆ.
 
 
ಬೀಜೋತ್ಪಾದನಾ ಕ್ಷೇತ್ರಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ಬಂದ ತರುವಾಯ ಹೈಬ್ರೀಡ್ ಬೀಜೋತ್ಪಾದನೆ ಚುರುಕುಗೊಂಡಿತು. ಜೊತೆಗೆ ಜೈವಿಕ ತಂತ್ರಜ್ಞಾನದಲ್ಲಿ ಅಂಗಾಂಶ ಕಸಿಯ ಸಸ್ಯೋತ್ಪಾದನೆಯೂ ಹೆಚ್ಚಾಯಿತು. ಉನ್ನತ ತಂತ್ರಜ್ಞಾನದಲ್ಲಿ ತಯಾರಾಗುವ ಅಧಿಕ ಬೆಲೆಯ ಬೀಜಗಳನ್ನು , ಸಸ್ಯಗಳನ್ನು ನಮ್ಮ ಸಾಂಪ್ರದಾಯಿಕ ವಿಧಾನದಲ್ಲಿ ಹೊಲದಲ್ಲೇ ನೇರವಾಗಿ ಬಿತ್ತನೆ ಮಾಡಿದರೆ ನಷ್ಟ. ಒಂದೊಂದು ಬೀಜಕ್ಕ್ಕೆ, ಸಸ್ಯಕ್ಕೆ 25 ಪೈಸೆಯಿಂದ 50 ರೂ. ತನಕ ಬೆಲೆ ಇರುವ ಕಾರಣ ಅದನ್ನು ಅಷ್ಟೇ ಜಾಗರೂಕತೆಯಲ್ಲಿ ಬಿತ್ತನೆ ಮಾಡಬೇಕು. ಬೆಳೆಯ ಇಳುವರಿಯ ಅರ್ಧ ಪಾತ್ರ ಬೀಜದ್ದೇ ಆಗಿರುತ್ತದೆ. ಬೀಜದ ಮೊಳಕೆ ಮತ್ತು ಅದರ ಉಳಿವು ಜಾಗರೂಕತೆಯ ನಾಟಿಯ ಮೇಲೆಯೇ ನಿಂತಿದೆ. ಒಂದೊಂದು ಬೀಜಕ್ಕೂ ನಿಗಾ ತೆಗೆದುಕೊಂಡು ಮೊಳಕೆ ಬರಿಸಬೇಕು. ಇದಕ್ಕಾಗಿ ಬಂದ ತಾಂತ್ರಿಕತೆಯೇ ಪ್ಲಾಸ್ಟಿಕ್ ಟ್ರೇಗಳಲ್ಲಿ ಬೀಜ ಬಿತ್ತನೆ ಮಾಡಿ ಸಸಿ ತಯಾರಿಸುವಿಕೆ.
 
 
ಈ ತಾಂತಿಕತೆಯು 1990 ರ ಸುಮಾರಿಗೆ ನಮ್ಮ ದೇಶಕ್ಕೆ ಪರಿಚಯಿಸಲ್ಪಟ್ಟಿತು. ಇದರಿಂದಾಗಿ ರೈತರಿಗೆ ಸ್ವತಃ ಸಸಿ ತಯಾರಿಸಿಕೊಳ್ಳಲು, ಸಸಿ ಪೂರೈಕೆ ಮಾಡುವ ನರ್ಸರಿಗಳಿಗೆ ಎಲ್ಲರಿಗೂ ಭಾರೀ ಅನುಕೂಲವಾಯಿತು. ಇದರಲ್ಲಿ ಬಿತ್ತಿ ಮೊಳಕೆ ಬರಿಸುವಾಗ ಎಲ್ಲಾ ಬೀಜಗಳೂ ಮೊಳಕೆ ಒಡೆಯುತ್ತವೆಯಾದುದರಿಂದ ಹೆಚ್ಚು ಹಣಕೊಟ್ಟು ಖರೀದಿಸಿದ ಬೀಜಗಳು ನಷ್ಟವಾಗುವುದಿಲ್ಲ. ಸಸ್ಯೋತ್ಪಾದಕರಿಗೂ ಇದು ಬಹಳ ಅನುಕೂಲವಾಗಿದೆ. ಇಂದು ಟೋಮಾಟೋ, ಮೆಣಸು, ಪಪಾಯ, ಬದನೆ, ಹೀರೆ, ಮೆಣಸು ಹೀಗೆ ಹೆಚ್ಚಿನೆಲ್ಲಾ ಸಂಕರ ತಳಿಗಳ ಬೀಜಗಳು ಪ್ಲಾಸ್ಟಿಕ್ ಟ್ರೇ ಗಳಲ್ಲೆ ಮೊಳಕೆ ಬರಿಸಲ್ಪಟ್ಟು ನಾಟಿಯಾಗುತ್ತಿವೆ. ಅತೀ ದೊಡ್ಡ ತರಕಾರಿ ಬೆಳೆಯೆನಿಸಿದ ಟೋಮಾಟೋ ಬೆಳೆಗಂತೂ ಈ ತಂತ್ರಜ್ಞಾನ ಬಹಳ ಪ್ರಯೋಜನವಾಗಿದೆ. ಬರೇ ಸಂಕರ ತಳಿಗಳಿಗೇ ಆಗಬೇಕೆಂದೇನೂ ಇಲ್ಲ ಎಲ್ಲ ನಮೂನೆಯ ತಳಿಗೂ ಇದನ್ನು ಉಪಯೋಗಿಸಿದರೆ ಸುಮಾರಾಗಿ 90% ಕ್ಕೂ ಹೆಚ್ಚು ಬೀಜ ಮೊಳೆಯುತ್ತದೆ. ಸಸ್ಯಗಳು ಎಳವೆಯಿಂದಲೇ ಏಕ ಪ್ರಕಾರ ಬೆಳೆಯುತ್ತದೆ. ಸಸಿಗಳಿಗೆ ಬರುವ ಮಣ್ಣ್ಣು ಮತ್ತು ವಾತಾವರಣ ಸಂಭಂಧಿತ ರೋಗ ಕಡಿಮೆ. ಇದರಿಂದಾಗಿ ಇಂದು ಈ ತಂತ್ರಜ್ಞಾನ ಅಸಂಖ್ಯಾತ ನಿರುದ್ಯೋಗಿಗಳಿಗೆ ಲಾಭದ ಉದ್ಯೋಗದ ದಾರಿ ತೋರಿಸಿಕೊಟ್ಟಿದೆ.
 
ಅನುಕೂಲವೆಂದರೆ ಈ ಟ್ರೇ ಗಳಲ್ಲಿ ಕನಿಷ್ಟ ಐದು ಬಾರಿ ಸಯೋತ್ಪಾದನೆ ಮಾಡಬಹುದು. ಪ್ರತೀ ಬಾರಿ ಸಸಿಮಾಡಿ ಮತ್ತೆ ಬಳಸುವಾಗ ಶಿಲೀಂದ್ರ ನಾಶಕದಿಂದ ಅದ್ದಬೇಕು. ಸಸಿಗಳಿಗೆ ಕಾಂಪೋಸ್ಟು ಮಾಡಿ ನಿರ್ಜವೀಕರಿಸಿದ (Sterilize) ಕೋಕೋಪಿಟ್ ಮತ್ತು ಅದಕ್ಕೆ ಪ್ರತೀ ಕ್ವಿಂಟಾಲಿಗೆ 10 ಕಿಲೋ ಬೇವಿನ ಹಿಂಡಿ ಹಾಕಬೇಕು. ಕೋಕೋಪಿಟ್ ಬದಲಿಗೆ ಎರೆಹುಳು ಗೊಬ್ಬರವೂ ಆಗುತ್ತದೆ. ಆದರೆ ಕೋಕೋಪಿಟ್ ನಷ್ಟು ಉತ್ತಮವಲ್ಲ. ಕೋಕೋಪಿಟ್ಗೆ ನೀರನ್ನು ಹಿಡಿದಿಟ್ಟುಕೊಳುವ ಗುಣ ಉತ್ತಮವಾಗಿ ಇದೆ.
 
 
ಎಲ್ಲಾ ತರಹದ ಸಸ್ಯೋತ್ಪಾದನೆಗೂ ಈಗ ಪ್ಲಾಸ್ಟಿಕ್ ಟ್ರೇ ಗಳು ಬಳಕೆಯಾಗುತ್ತಿವೆ. ಆಯಾಯಾ ಬಳಕೆಗೆ ಅನುಗುಣವಾಗಿ ವಿವಿಧ ನಮೂನೆಯ ಪಾತ್ರೆಗಳು ಲಭ್ಯವಿದೆ. ಇದರಲ್ಲಿ ಬೆಳೆಸಲಾದ ಸಸ್ಯಗಳು ಹೆಚ್ಚು ಆರೋಗ್ಯವಾಗಿ ಬೆಳೆಯುತ್ತವೆ. ಮಾಧ್ಯಮದ ಪ್ರಮಾಣವೂ ಅತೀ ಕಡಿಮೆ ಸಾಕಾಗುತ್ತದೆ. ಸಸ್ಯದ ಬೇರು ಬೆಳವಣಿಗೆ ಉತ್ತಮವಾಗಿರುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ಎದುರಾಗುವ ಸಮಸ್ಯೆಗಳೆಲ್ಲಾ ಇಲ್ಲದಾಗುತ್ತದೆ. ಸಸಿಯನ್ನು ಕಿತ್ತು ಹೊಲದಲ್ಲಿ ನಾಟಿ ಮಾಡುವಾಗ ಗಿಡದ ಬೇರುಗಳಿಗೆ ತೊಂದರೆಯಾಗುವುದಿಲ್ಲ. ಗಿಡ ಒಣಗುವುದಿಲ್ಲ. ಗಿಡಗಳು ಮೊಳಕೆ ಹಂತದಲ್ಲೇ ಆರೋಗ್ಯವಾಗಿ ಬೆಳೆಯಲು ಬೇಕಾದ ಸೂಕ್ತ ಅಂತರ ದೊರೆಯುತ್ತದೆ. ಇದರಿಂದ ಗಿಡಗಳು ಶಕ್ತಿಯುತವಾಗಿರುತ್ತವೆ. ಏಕ ಪ್ರಕಾರವಾಗಿ ಬೆಳೆದು ನಿಗದಿತ ಸಮಯಕ್ಕೆ ಮುಂಚೆಯೇ ಇಳುವರಿ ಕೊಡುತ್ತದೆ. ರೈತರಿಗೆ ಬೇಗ ಬೆಳೆ ತೆಗೆಯಲು ಸಹಾಯಕವಾಗುತ್ತದೆ.
ಟ್ರೇ ಗಳನ್ನು ನಮ್ಮ ಮನೆಯಲ್ಲೇ ಇಟ್ಟುಕೊಂಡು ನಿತ್ಯ ನಿಗಾ ಕೊಡಲು ಅನುಕೂಲವಿದೆ. ಸ್ಥಳಾವಕಾಶ ಕಡಿಮೆ ಸಾಕಾಗುತ್ತದೆ.
100 ಕಿಲೋ ಕೋಕೋ ಪೀಟ್ 100 ಸಾಮಾನ್ಯ ಟ್ರೇ ಗಳಿಗೆ ತುಂಬಲು ಸಾಕಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 200 ಟ್ರೇ ಗಳಲ್ಲಿ ಸುಮಾರು 20000 ಬೀಜಗಳನ್ನು ಬಿತ್ತಬಹುದು. ಬೀಜ ಬಿತ್ತಿ ಮೂರು ನಾಕು ದಿನಗಳ ತನಕ 10 ಟ್ರೇ ಗಳನ್ನು ಒಂದರ ಮೇಲೊಂದರಂತೆ ಇಟ್ಟು ಪ್ಲಾಸ್ಟಿಕ್ ಮುಚ್ಚಬೇಕು. ಆಗ ಅದರೊಳಗೆ ಬಿಸಿ ವಾತಾವರಣ ಮತ್ತು ತೇವಾಂಶ ಆಗಿಯಾಗುವಿಕೆ ಇರುವುದಿಲ್ಲ. ನಂತರ ಎಲ್ಲಾ ಟ್ರೇ ಗಳನ್ನೂ ನೆರಳು ಬಲೆ ಇಲ್ಲವೇ ಪಾಲೀ ಹೌಸ್ ಗೆ ಸ್ಥಳಾಂತರಿಸಬೇಕು. ಅಲ್ಲಿ ಏರು ಮಡಿ ಮಾಡಿ ಅದರಲ್ಲಿ ಟ್ರೇಗಳನ್ನು ಇದಬೇಕು. ಇಲ್ಲಿ ಕಳೆ ಕೀಳುವಿಕೆ ಮತ್ತು ಇನ್ನಿತರ ಕೆಲಸಗಳು ಅತೀ ಕಡಿಮೆ. ಮುಖ್ಯ ಹೊಲಕ್ಕೆ ನಾಟಿಗಾಗಿ ಸಾಗಿಸುವುದೂ ಬರೇ ಸುಲಭ. ಹೊಲ ಸಿದ್ದತೆ ಮಾಡಿ ಸಸ್ಯೋತ್ಪಾದನೆ ಮಾಡುವಲ್ಲಿಂದ ಸಸಿ ತಂದು ಕೂಡಲೇ ನಾಟಿ ಮಾಡಬಹುದು. ದೊಡ್ಡ ,ಸಣ್ಣ ಪ್ರಮಾಣದ ತರಕಾರಿ ಬೆಳೆಗಾರರಿಗೂ ಸೂಕ್ತ.
ಈ ತಾಂತ್ರಿಕತೆಯಲ್ಲಿ ಇನ್ನೂ ಮುಂದುವರಿದ ಬೆಳವಣಿಗೆ ಸಸಿಗಳನ್ನು ನೆಡುವ ಮಾಧ್ಯಮವನ್ನು ಜಿಯೋಟೆಕ್ಸ್ ಬಟ್ಟೆಯಲ್ಲಿ ತುಂಬಿ ಟ್ರೇ ಒಳಗೆ ಇಡುವುದು. ಸಸಿ ತೆಗೆಯುವಾಗ ಸ್ವಲ್ಪವೂ ಮಾದ್ಯಮ ಹಾಳಾಗುವುದಿಲ್ಲ. ದೂರಕ್ಕೆ ಸಾಗಾಣಿಕೆ ಮಾಡುವಾಗ ಗಿಡ ಒಣಗುವುದಿಲ್ಲ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here