“ಹೋ..! ಗಂಗೆಯು ದರ್ಶನಕ್ಕಾಗಿ ಬಂದಿರುವಳು. ಹೋಗಿ ಅವಳಿಗೆ ಪೂಜೆ ಸಲ್ಲಿಸು “

0
10032

ನಿತ್ಯ ಅಂಕಣ-೧೦೫ : ತಾರಾನಾಥ್‌ ಮೇಸ್ತ, ಶಿರೂರು.
ಕಾಂಞಂಗಾಡ್ ನಿತ್ಯಾನಂದ ಆಶ್ರಮದ ಸನಿಹದಲ್ಲಿರುವ ‘ಗುರುವನ’ ಇದರ ಅಭಿವೃದ್ಧಿಯ ಅಗತ್ಯತೆಗೆ ಬೇಕಾಗಿ ನಿತ್ಯಾನಂದರು ಡಿಸೆಂಬರ್ 25, 1960 ರಲ್ಲಿ 17 ಏಕ್ರೆ ಜಮೀನನ್ನು ಖರೀದಿಸುತ್ತಾರೆ. ಸ್ವಾಮಿಗಳು ಗಣೇಶಪುರಿಯಲ್ಲಿ ಇದ್ದು ಖರೀದಿ ಪ್ರಕ್ರಿಯೆ ನಡೆಸುತ್ತಾರೆ. ನಿಲೇಶ್ವರದ ರಾಜೇಸಾಹೇಬ್ ರಾಮವರ್ಮರು ಈ ಸ್ಥಳದ ಮಾರಾಟ ಮಾಡಿದವರು. ಈ ವಿಚಾರ ನೋಡಿದಾಗ ಬಾಬಾರಿಗೆ ‘ದೂರದ ಚಿಂತನೆ’ ಇತ್ತು ಎನ್ನುವುದನ್ನು ಸ್ವಷ್ಟಗೊಳ್ಳುತ್ತದೆ. ಇದಾದ ಬಳಿಕ 1961 ನೇ ವರ್ಷ ಪ್ರಾರಂಭಗೊಂಡಿತು. ಭಗವಾನ್ ನಿತ್ಯಾನಂದರ ಆರೋಗ್ಯ ಸ್ಥಿತಿ ಆಗಿಂದಾಗ ಕೆಡುತಿತ್ತು. ಆದರೂ ಭಕ್ತರಿಗೆ ದರ್ಶನ ನೀಡುವುದು ಆಶೀರ್ವದಿಸುವುದು , ಭಕ್ತರ ಯೋಗಕ್ಷೇಮ ವಿಚಾರಣೆ, ಆಶ್ರಮದ ನಿತ್ಯದ ಚಟುವಟಿಕೆಗಳತ್ತ ಗಮನ ಹರಿಸುವುದು, ಸೂಚನೆ ನೀಡುವ ಕಾರ್ಯಗಳು ನಿತ್ಯಾನಂದರು ಯಥಾಪ್ರಕಾರ ಮಾಡಿಕೊಂಡಿದ್ದರು. ಬಾಬಾರಿಗೆ ಕಣ್ಣಿನ ಸಮಸ್ಯೆ ಎದುರಾಗಿತ್ತು. ಕೆಲವು ಹಲ್ಲುಗಳು ಉದುರಿಹೋಗಿದ್ದವು. ಕಿವಿ ನೋವು ಕಾಡುತಿತ್ತು. ಕೆಲವೊಮ್ಮೆ ಅನಾರೋಗ್ಯ ಪೀಡಿತರಾಗಿದ್ದವರಂತೆ ಕೆಲವೊಮ್ಮೆ ಚೇತರಿಕೆ ಕಂಡು ಲವಲವಿಕೆ ಇದ್ದವರಂತೆ ನಿತ್ಯಾನಂದರು ಕಂಡುಬಂದು ಭಕ್ತರಲ್ಲಿ ಆನಂದ ಮೂಡಿಸುತ್ತಿದ್ದರು.
ಮುಂಬೈಯ ಖ್ಯಾತ ನೇತ್ರತಜ್ಞ ಡಾ. ನಿಕಲಸನ್ ಪರಿವಾರವು ಗುರುದೇವರ ಭಕ್ತರಾಗಿದ್ದರು. ಅವರು ಗುರುದೇವರ ಕಣ್ಣನ್ನು ಪರೀಕ್ಷೆಗೆ ಒಳಪಡಿಸಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿದ್ದರು. ಆಶ್ರಮ ಭಕ್ತರು ನಿತ್ಯಾನಂದರನ್ನು ಬೆಂಗಳೂರಿನಲ್ಲಿ ಇರುವ ಲಕ್ಷ್ಮಣ ಶಾ ಖೋಡೆ ಬಳಿಗೆ ಚಿಕಿತ್ಸೆಗೆ ಕರೆದೊಯ್ಯಲು ನಿರ್ಧರಿಸುತ್ತಾರೆ. ಅದಕ್ಕೆಂದು ವಿಮಾನದ ಟಿಕೇಟು ವ್ಯವಸ್ಥೆ ಮಾಡಿಟ್ಟಿದ್ದರು. ಆದರೆ ಪ್ರಯಾಣದ ದಿನ ನಿತ್ಯಾನಂದರು ಬೆಂಗಳೂರಿಗೆ ತೆರಳಲು ನಿರಾಕರಿಸುತ್ತಾರೆ. ಕೆಲವು ದಿನಗಳ ಬಳಿಕ ಓರ್ವ ಭಕ್ತ ಗುರುದೇವರಲ್ಲಿ ಯಾಕೆ ಹೋಗಿಲ್ಲವೆಂದು ವಿಧೇಯನಾಗಿ ಪ್ರಶ್ನಿಸುತ್ತಾನೆ. ಆಗ ಗುರುದೇವರು “ಋಷಿಮಂಡಲದ ನಿರ್ಣಯದಂತೆ, ನನಗೆ ಆಸನವನ್ನು ಬಿಟ್ಟು ಹೋಗಲು ಆಗಲಿಲ್ಲ” ಎಂದು ಒಗಟಾಗಿ ಭಕ್ತನಿಗೆ ಉತ್ತರ ನೀಡುತ್ತಾರೆ. 1961ನೇ ಜುಲೈ ತಿಂಗಳಲ್ಲಿ ಗುರುದೇವರ ಆರೋಗ್ಯವು ಹದಗೆಡಲು ಆರಂಭಿಸಿತು. ಸರಿಯಾಗಿ ಆಹಾರ ಸೇವನೆ ಮಾಡುತ್ತಿರಲಿಲ್ಲ. ನಿತ್ರಾಣದಿಂದ ನಡೆಯಲಾಗದ ಪರಿಸ್ಥಿತಿ ಎದುರಾಯಿತು. ದೇಹವು ಕ್ಷೀಣವಾದಂತೆ ಕಾಣುತಿತ್ತು. ಭಕ್ತರ ಆಗ್ರಹಕ್ಕೆ ಮಣಿದು ಬಾಬಾರು ಆಹಾರ- ಔಷಧ ಸೇವನೆ ಮಾಡುತ್ತಿದ್ದರು.
ಗುರುದೇವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ವಿಷಯ ಲಕ್ಷ್ಮಣಾ ಶಾ ಖೋಡೆ ಅವರಿಗೆ ತಿಳಿದು ಬರುತ್ತದೆ. ತಡಮಾಡದೆ ಅವರು, ತಮ್ಮ ಪರಿವಾರದೊಂದಿಗೆ ಬೆಂಗಳೂರಿನಿಂದ ಗಣೇಶಪುರಿಗೆ ಬರುತ್ತಾರೆ. ಬಂದವರು ತಾವೇ ಕಟ್ಟಿರುವ “ಬೆಂಗಳೂರು ವಾಲಾ” ಕಟ್ಟಡವನ್ನು ಗುರುದೇವರ ವಿಶ್ರಾಂತಿಗೆ ಸಕಲ ವ್ಯವಸ್ಥೆ ಮಾಡಿಸುತ್ತಾರೆ. ಗುರುದೇವರನ್ನು ಸ್ಥಳಾಂತರಗೊಳ್ಳಲು ಖೋಡೆ ಅವರು ಒಪ್ಪಿಸುತ್ತಾರೆ. ಆವಾಗ ಗುರುದೇವರು “ಇಷ್ಟೆಲ್ಲ ವಿಜೃಂಭಣೆ ಏಕೆ..? ಇನ್ನಿರುವ 15 ದಿನಗಳ ವಿಶ್ರಾಂತಿಗಾಗಿ ಅಲ್ಲವೇ..?” ಎಂದರು. ಕೈಲಾಶ ಆಶ್ರಮದಲ್ಲಿದ್ದ ನಿತ್ಯಾನಂದರನ್ನು ಜುಲೈ-15, 1961 ರಂದು ಭಕ್ತರು ಸೇರಿಕೊಂಡು ಕಾಷ್ಟ ಕುರ್ಚಿಯಲ್ಲಿ ಕುಳ್ಳರಿಸಿ ‘ಬೆಂಗಳೂರು ವಾಲಾ’ ಕಟ್ಟಡಕ್ಕೆ ಸ್ಥಳಾಂತರ ಮಾಡಿಸುತ್ತಾರೆ. ಜುಲೈ-27 ರಂದು ನಡೆಯುವ ಗುರುಪೂರ್ಣಿಮೆ ದಿನ ದರ್ಶನ ಪಡೆಯಲು ಬಂದಿರುವ ಲಕ್ಷಾಂತರ ಭಕ್ತರಿಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ತನಕ ಗುರುದೇವರು ದರ್ಶನ ನೀಡಿ ಹರಸುತ್ತಾರೆ. ಗುರುಪೂರ್ಣಿಮೆಯ ದಿನ ಗುರುದೇವರಿಗೆ ದರ್ಶನ ನೀಡಲು ದೇಹ ಸ್ಪಂದಿಸುವುದು ಕಷ್ಟ ಎಂಬಭಾವನೆ ಭಕ್ತರಿಗೆ ಇತ್ತು. ಆದರೆ ಎಲ್ಲವೂ ಶುಭಕರವಾಗಿ ನಡೆಯುತ್ತದೆ.
ಹೀಗಿರುವಾಗ ಒಂದು ದಿನ ಬಹಳವಾಗಿ ಧಾರಕಾರವಾಗಿ ಮಳೆ ಸುರಿಯುತ್ತದೆ. ನದಿ ಉಕ್ಕಿ ಹರಿದು ಪ್ರವಾಹವು ಉಂಟಾಗುತ್ತದೆ. ನೀರು ಹರಿದು ಬೆಂಗಳೂರು ವಾಲಾ ಕಟ್ಟಡದ ತನಕ ಬರುತ್ತದೆ. ವಿಷಯ ತಿಳಿದ ನಿತ್ಯಾನಂದರು ಲಕ್ಷ್ಮಣಾ ಶಾ ಖೋಡೆ ಅವರ ಪತ್ನಿಯಲ್ಲಿ “ಹೋ..! ಗಂಗೆಯು ದರ್ಶನಕ್ಕಾಗಿ ಬಂದಿರುವಳು. ಹೋಗಿ ಅವಳಿಗೆ ಪೂಜೆ ಸಲ್ಲಿಸು, ಕುಂಕುಮ, ಹೂವು, ತೆಂಗಿನಕಾಯಿ ಸಮರ್ಪಿಸು, ಅವಳು ಹಿಂತಿರುಗುತ್ತಾಳೆ” ಎಂದು ಹೇಳುತ್ತಾರೆ. ಗುರುದೇವರ ಸಲಹೆಯಂತೆ ಶ್ರೀಮತಿ ಖೋಡೆ ಅವರು ಗಂಗಾ ಮಾತೆಗೆ ಪೂಜೆ ಸಲ್ಲಿಸುತ್ತಾರೆ. ನಂತರ ನದಿಯು ಹರಿಯುವ ಮಟ್ಟವು ಕಡಿಮೆಗೊಳ್ಳುತ್ತದೆ. ಇದು ಅವಧೂತ ನಿತ್ಯಾನಂದರ ಪಾದ ತೊಳೆಯಲು ನದಿಗೆ ದೊರಕಿದ ಕೊನೆಯ ಅವಕಾಶವಾಗಿತ್ತು.
1961 ಜುಲೈ-27 ರಂದು ಗಣೇಶಪುರಿಯಲ್ಲಿ ನಡೆದ ಗುರುಪೂರ್ಣಿಮೆ ಧಾರ್ಮಿಕ ಕಾರ್ಯಕ್ರಮದ ಫೋಟಗಳನ್ನು ಛಾಯಗ್ರಾಹಕ ಎಂ.ಡಿ.ಸುವರ್ಣರು ತೆಗೆದಿದ್ದರು. ಫೋಟಗಳನ್ನು ಅಂತಿಮವಾಗಿ ಸಿದ್ಧಗೊಳಿಸಿ ನಿತ್ಯಾನಂದರಿಗೆ ತೋರಿಸಲೆಂದು, ಅವರು ವಿಶ್ರಾಂತಿ ಪಡೆಯುತ್ತಿರುವ ಬೆಂಗಳೂರು ವಾಲಾ ಧರ್ಮಛತ್ರದಡೆಗೆ ಬರುತ್ತಾರೆ. ಆಗ ಸುವರ್ಣರಿಗೆ ಅಲ್ಲಿದ್ದವರು, ‘ಬಾಬಾರಿಗೆ ಕಣ್ಣು ಕಾಣುದಿಲ್ಲ..!’ ಎಂದು ಹೇಳಿದ ಮಾತು ಕೇಳಿಬರುತ್ತದೆ. ಆವಾಗ ಸುವರ್ಣರು ಬಹಳವಾಗಿ ಬೇಸರಗೊಳ್ಳುತ್ತಾರೆ. ಇದುವರೆಗೆ ನಾನು ತೆಗೆದ ಫೋಟಗಳನ್ನು ಬಾಬಾರು ನೋಡಿದ್ದಾರೆ. ಇದು ಪ್ರಥಮ..! ಬಾಬಾರು ಫೋಟ ಕಾಣದಿರುವುದು..! ಸುವರ್ಣರು ಮನದೊಳಗೆ ದುಃಖಿತರಾಗುತ್ತಾರೆ. ಸುವರ್ಣರು ಬಾಬಾರು ವಿಶ್ರಮಿಸುವ ಮಂಚದಿಂದ ಇಪ್ಪತ್ತು ಅಡಿ ದೂರದ ಹೊರ ವರಾಂಡದ ಕಿಟಕಿಗೆ ತಲೆ ಇಟ್ಟುಕೊಂಡು, ತಾನು ತಂದಿರುವ ಫೋಟಗಳನ್ನು ಎದೆಗೆ ತಾಗಿಸಿಕೊಂಡು ಬಾಬಾರನ್ನು ನೋಡುತ್ತಿದ್ದರು. ಸುವರ್ಣರ ಕಣ್ಣಿಂದ ಅವರಿಗರಿಯದೇ ನೀರು ಸುರಿಯುತಿತ್ತು. ಬಾಬಾರಿಗೂ ತನ್ನ ಪರಮಭಕ್ತನ ಮನದಾಳದ ವೇದನೆಯು ಏನೆಂದು ಅರ್ಥವಾಯಿತು. ದೇಹ ಸ್ಪಂದಿಸದಿದ್ದರೂ ಮಲಗಿದಲ್ಲಿಂದಲೇ ಸುವರ್ಣರನ್ನು ಕೈ ಎತ್ತಿ ಸನ್ನೆಯಿಂದಲೇ ಹತ್ತಿರ ಕರೆಯುತ್ತಾರೆ. ಆವಾಗ ನಿತ್ಯಾನಂದರ ಆ ಕರೆ ಸುವರ್ಣರನ್ನು ಆನಂದಗೊಳಿಸುತ್ತದೆ. ಸುವರ್ಣರು ಬಾಬಾರ ಬಳಿಗೆ ಓಡೋಡಿ ಹೋಗಿ ವಿಧೇಯರಾಗಿ ನಿಲ್ಲುತ್ತಾರೆ. ಬಾಬಾರು ಮಂಚದಿಂದ ಎದ್ದು ಕುಳಿತು “ಯಾರು ಹೇಳಿದರು ಬಾಬಾರಿಗೆ ಕಾಣುದಿಲ್ಲವೆಂದು…?” ಎಂದು ಹೇಳಿ, ಸುವರ್ಣರು ತಂದಿರುವ ಎಲ್ಲಾ ಫೋಟಗಳನ್ನು ನೋಡುತ್ತಾರೆ. ಅದರಲ್ಲಿದ್ದ ಒಂದು ಫೋಟ ತೆಗೆದು ಬಾಬುಭಾಯಿ ಲೋಖಂಡ್ ವಾಲಾ ಅವರಿಗೆ ನೀಡಿ, ಹಾಗೆಯೆ ಮಂಚದಲ್ಲಿ ಮಲಗುತ್ತಾರೆ. ಛಾಯಗ್ರಾಹಕ ಎಂ.ಡಿ ಸುವರ್ಣರು ಚಿರಸ್ಮರಣಿಯರಾಗಿ ಉಳಿದುಕೊಂಡಿದ್ದಾರೆ. ನಾವು ಕಾಣುವ, ಪೂಜಿಸುವ ಬಾಬಾರ ಕಪ್ಪು ಬಿಳಿಪು ಚಿತ್ರಗಳನ್ನು ಸೆರೆ ಹಿಡಿದವರು ಅವರು.

LEAVE A REPLY

Please enter your comment!
Please enter your name here