ಹೋಬಳಿಯಲ್ಲಿ ಕುಳಿತೇ ಬ್ರಹ್ಮಾಂಡ ವೀಕ್ಷಿಸುವರು!

0
376

ವಿಶೇಷ ವರದಿ: ಹರೀಶ್ ಕೆ.ಆದೂರು
“ಹ್ಯಾಲಿ ಧೂಮಕೇತುವಿನ ಒಂದು ಫೋಟೋ ವೇ ದೊಡ್ಡ ಬದಲಾವಣೆಗೆ ಪ್ರೇರಣೆಯಾಯಿತು. ಹವ್ಯಾಸೀ ಖಗೋಳಾಭ್ಯಾಸಿಗಳ ಸಂಘ ದೊಡ್ಡ ಮಟ್ಟದ ಸಾಧನೆಗೆ ಸಹಕಾರಿಯಾಯಿತು.ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ನ ವಿಜ್ಞಾನಿಗಳು ಈ ಹೋಬಳಿ ಪ್ರದೇಶಕ್ಕೆ ಬಂದು ಅವರ ಅನುಭವಗಳನ್ನು ಧಾರೆ ಎರೆಯುವಂತೆ ಮಾಡಿತು ಎಂಬುದು ಇಂದಿಗೆ ಇತಿಹಾಸ!”
 
mood_cam_story1
“1985-86ರ ಸಂದರ್ಭ. ಹೋಬಳಿ ಮಟ್ಟದ ಮೂಡಬಿದಿರೆಯಲ್ಲಿದ್ದು ಖಗೋಳದಲ್ಲಿ ನಡೆಯುತ್ತಿದ್ದ ಕೌತುಕಗಳನ್ನು ಪುಟ್ಟ ಕ್ಯಾಮರಾ ಮೂಲಕ ಸೆರೆಹಿಡಿಯುವ ದೊಡ್ಡ ಪ್ರಯತ್ನ. 30ದಿನಗಳ ಸತತ ಪ್ರಯತ್ನದ ಫಲವೇ `ಹ್ಯಾಲಿ’ ಧೂಮಕೇತುವಿನ ಕಪ್ಪು ಬಿಳುಪು ಚಿತ್ರದ ಯಶಸ್ವೀ ಸೆರೆ! ಅದೊಂದು ಅವಿಸ್ಮರಣೀಯ ಅನುಭವ. ಮಿ.ಲೋಬೋ, ಹಾಗೂ ಮುರಳೀಧರ್ ಅವರ ಸಹಕಾರದಲ್ಲಿ ತೆಗೆದ ಆ ಚಿತ್ರ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಗಿತ್ತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಪ್ರೊ.ಎಂ.ರಮೇಶ್ ಭಟ್. ಮೂಡಬಿದಿರೆ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ರಮೇಶ್ ಭಟ್ 31ವರುಷಗಳ ಹಿಂದೆ `ಹವ್ಯಾಸೀ ಖಗೋಳಾಭ್ಯಾಸಿಗಳ ಸಂಘ’ವನ್ನು ಕಟ್ಟಿ ಅಂದಿನಿಂದ ಇಂದಿನ ವರೆಗೆ ನಿರಂತರ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ. ಮೂಡಬಿದಿರೆಯಂತಹ ಸಣ್ಣ ಪಟ್ಟಣದಲ್ಲೇ ಕುಳಿತು ಬಾಹ್ಯಾಕಾಶದ ಅದ್ಭುತ ಅಧ್ಯಯನಕ್ಕೆ ವೇದಿಕೆ ಸೃಷ್ಠಿಸಿಕೊಟ್ಟಿದ್ದಾರೆ. ಹ್ಯಾಲಿ ಧೂಮಕೇತುವಿನ ಪುಟ್ಟ ಚಿತ್ರ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ನ ವೈಜ್ಞಾನಿಕ ಫೋಟೋ ಗ್ರಾಫರ್ ಡಾ.ಜಿ.ಎಸ್.ಟಿ ಬಾಬು ಅವರ ಪರಿಚಯವಾಗುವಂತೆ ಮಾಡಿತಲ್ಲದೆ ಅಲ್ಲಿ ಏರ್ಪಡಿಸಿದ ಕಾರ್ಯಾಗಾರದಲ್ಲಿ ಭಾಗವಹಿಸುವ ಸುವಣಾವಕಾಶವೂ ಲಭಿಸಿತು ಎಂದು `ಸಂಗಮಕ್ಕೆ’ ತಿಳಿಸಿದರು.
 
 
 
ಕಾಲೇಜಿಗೆ 1973ರಲ್ಲಿ ಖರೀದಿ ಮಾಡಿದ ಸೆಲೆಕ್ಟ್ರೋನ್ 6ಇಂಚ್ ಟೆಲಿಸ್ಕೋಪ್ ಉಪಯೋಗಿಸುವುದು ಹಾಗೂ ನಿರ್ವಹಣೆಗಾಗಿ ಅಂದಿನ ಪ್ರಾಂಶುಪಾಲ ಶ್ರೀನಿವಾಸ್ ಉಪಾಧ್ಯಾಯ ಅವರ ಸಲಹೆ ಸೂಚನೆಯಂತೆ ಸಂಘ ರಚಿಸಲಾಯಿತು. ಈಗಾಗಲೇ ಸಹಸ್ರಾರು ಸದಸ್ಯರು ಈ ಸಂಘದ ಮೂಲಕ ಆಕಾಶ ಕಾಯಗಳ ಅಧ್ಯಯನ ಕೈಗೊಂಡಿದ್ದಾರೆ. ಮೂಡಬಿದಿರೆಯ ನಾಗರೀಕರೂ ಸಂಘ ಏರ್ಪಡಿಸಿದ `ವಸ್ತು ಪ್ರದರ್ಶನ’, ಆಕಾಶಕಾಯ ವೀಕ್ಷಣೆ, ಖಗೋಳಾಭ್ಯಾಸ, ಖಗೋಳದ ಕೌತುಕಗಳು, ನಕ್ಷತ್ರ ವೀಕ್ಷಣೆ ಹೀಗೆ ಹಲವು ಘಟನಾವಳಿಗಣನು ಕಣ್ತುಂಬಿಕೊಂಡಿದ್ದಾರೆ. ಸಂಘದ ಯಶಸ್ಸಿನ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ 14ಇಂಚು ವ್ಯಾಸದ ಕಂಪ್ಯೂಟರೀಕೃತ ಕರ್ನಾಟಕದಲ್ಲೇ ದೊಡ್ಡದೆಂಬ ಖ್ಯಾತಿಯ ಕ್ಯಾಸಗ್ರೇನ್ ಮಾದರಿಯ `ಸೆಲೆಕ್ಟ್ರೋನ್’ ಟೆಲಿಸ್ಕೋಪ್ ನ್ನು 12.5ಲಕ್ಷರುಪಾಯಿ ವೆಚ್ಚದಲ್ಲಿ ಎರಡುವರ್ಷದ ಹಿಂದೆ ಖರೀದಿ. ಅದಕ್ಕಾಗಿಯೇ ವಿಶೇಷ ಕೊಠಡಿ ನಿರ್ಮಾಣ ಮಾಡಲಾಗಿದೆ. ಕೊಠಡಿಯ ಛಾವಣಿ ಚಲಿಸುವ ಮಾದರಿಯಲ್ಲಿದೆ.
 
 
 
40ಸಾವಿರಕ್ಕಿಂತಲೂ ಅಧಿಕ ಆಕಾಶಕಾಯಗಳು ಈ ಟೆಲಿಸ್ಕೋಪ್ನಲ್ಲಿ ಅತ್ಯಂತ ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. 35ಮಿಲಿಯನ್ ಲೈಟ್ ಈಯರ್ಸ್ ದೂರದ ಗ್ಯಾಲಕ್ಸಿಗಳ ವೀಕ್ಷಣೆಯನ್ನು ಕೂಡಾ ಇದರ ಮೂಲಕ ಮಾಡಲಾಗಿದೆ. ಡೀಪ್ ಸ್ಕೈ ಆಬ್ಜೆಕ್ಟ್ ಗಳ ವೀಕ್ಷಣೆಗೆ ಇದು ಸಹಕಾರಿಯಾಗಿದೆ.
 
 
 
ಸಂಶೋಧಕರಿಗೆ ವರದಾನ
ಈ ಟೆಲಿಸ್ಕೋಪ್ ಸಂಶೋಧಕರಿಗೆ ವರದಾನ. ಸೂಕ್ತ ಫಿಲ್ಟರ್ ಬಳಸಿದರೆ ಸೂರ್ಯನ ಮೇಲ್ಮೈ ವೀಕ್ಷಣೆಗೆ ಅವಕಾಶವಿದೆ. ದೂರದ ಗ್ಯಾಲಕ್ಸಿ, ನೆಬ್ಯುಲಾಗಳ ವೀಕ್ಷಣೆಗೆ ಇದು ಬಹುಉಪಕಾರಿ. ಟೆಲಿಸ್ಕೋಪ್ ಮೂಲಕ ಮಂಗಳ ಗ್ರಹ, ಚಂದ್ರ, ಶನಿಗ್ರಹಗಳ ವೀಕ್ಷಣೆ ಮಾಡಲಾಗಿದೆ. ಚಂದ್ರನ ಮೇಲ್ಮೈನಲ್ಲಿರುವ ಕುಳಿಗಳನ್ನು ಸಹ ತೋರಿಸಿದ್ದೇವೆ ಎಂದು ಪ್ರೊ.ರಮೇಶ್ ಭಟ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here