ಹೊಸ ಮೆರುಗಿನೊಂದಿಗೆ ಮಂಗಳೂರು ಪ್ರೀಮಿಯರ್ ಲೀಗ್

0
274

 
ಮಂಗಳೂರು ಪ್ರತಿನಿಧಿ ವರದಿ
ಕಳೆದ ವರ್ಷ ಮಂಗಳೂರಿನಲ್ಲಿ ಜರಗಿದ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಈ ಪ್ರದೇಶದ ಕ್ರಿಕೆಟ್ ಅಂಗಣಗಳಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದು, ಆ ಯಶಸ್ಸಿನ ಹುರುಪಿನಲ್ಲಿ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಈ ಬಾರಿಯೂ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಮಂಗಳೂರು ಅಕೇಶನಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಡಿಸೆಂಬರ್ ತಿಂಗಳ ದಿನಾಂಕ 17ರಿಂದ 31ರವರೆಗೆ 15 ದಿನಗಳ ಕಾಲ ನವಮಂಗಳೂರು ಬಂದರು ಪಣಂಬೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಸಲಿದೆ.
 
 
 
ಉನ್ನತ ಕ್ರಿಕೆಟಿನಲ್ಲಿ ಮಿಂಚಲಿರುವ ಎಂಪಿಲ್ ಆಟಗಾರರು:
ಮಂಗಳೂರು ವಲಯದ ಕ್ರಿಕೆಟ್ ಪ್ರತಿಭೆಗಳಿಗೆ ಉನ್ನತ ಮಟ್ಟದ ಕ್ರಿಕೆಟಿನತ್ತ ಹೆಜ್ಜೆ ಇಡುವಲ್ಲಿ ಎಂಪಿಎಲ್ ಒಂದು ವೇದಿಕೆಯಾಗಿದೆ ಎನ್ನಬಹುದು. ಕಳೆದ ಬಾರಿ ಎಂಪಿಎಲ್ ನಲ್ಲಿ ಆಟವನ್ನಾಡಿದ ಮಂಗಳೂರು ವಲಯದ 24 ಮಂದಿ ಆಟಗಾರರ ಹೆಸರುಗಳು ಈ ಭಾರಿಯ ಕೆ.ಪಿ.ಎಲ್ ನ ಹರಾಜು ಪಟ್ಟಿಯನ್ನು ಸೇರಿದ್ದು, ಅವರು ಮುಂದಿನ ಮೆಟ್ಟಿಲನ್ನೇರುವ ಅವಕಾಶದತ್ತ ಕಾಯುತ್ತಿರುವರು.
 
ನವೀನ ಸೌಲಭ್ಯಗಳು
ಈ ಬಾರಿಯ ಪಂದ್ಯಕೂಟದಲ್ಲಿ ಹಲವಾರುಉನ್ನತ ಮಟ್ಟದ ಸೌಲಭ್ಯಗಳನ್ನು ಸೇರ್ಪಡೆಗೊಳಿಸಿ ಪಂದ್ಯಕೂಟವನ್ನು ಉನ್ನತೀಕರಣಗೊಳಿಸುವ ಯೋಜನೆ ಸಂಘಟರದ್ದಾಗಿರುತ್ತದೆ.ಈ ಪಂದ್ಯಕೂಟವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅನುಮೋದನೆ ಮತ್ತು ಸಲಹೆ- ಸೂಚನೆ ನಿಯಮಗಳನ್ನನುಸರಿಸಿ ಜರಗಲಿದ್ದು, ಉಡುಪಿ, ದಕ್ಷಿಣಕನ್ನಡ ಮತ್ತುಕೊಡಗು ಜಿಲ್ಲೆಗಳನ್ನೊಳಗೊಂಡಿರುವ ಮಂಗಳೂರು ವಲಯದ ವ್ಯಾಪ್ತಿಗೆ ಸೀಮಿತವಾಗಿರುತ್ತದೆ. ಈ ಬಾರಿ ಕರಾವಳಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಉನ್ನತ ಮಟ್ಟದಕ್ರಿಕೆಟಿಗೆ ಸೂಕ್ತವೆನಿಸುವ ಅಸ್ಟ್ರೋಟರ್ಫ್ ಪಿಚ್ಚನ್ನು ಸಿದ್ಧ ಪಡಿಸಲುಯೋಜಿಸಲಾಗಿದೆಯಲ್ಲದೆ, ಮೈದಾನದ 30 ಯಾರ್ಡ್ ಪ್ರದೇಶಕ್ಕೆ ಹಸಿರು ಹುಲ್ಲನ್ನು ಹೊದಿಸಲು ಯೋಜಿಸಲಾಗಿದೆ. ಎಂ.ಪಿ.ಎಲ್ ನ ಪಂದ್ಯಗಳು ಸ್ಥಳಿಯ ಟಿ.ವಿ. ಚಾನಲ್ ಮೂಲಕ ನೇರಪ್ರಸಾರಗೊಳ್ಳಲಿದ್ದು, ಕೊನೆಯ ಮೂರು ದಿನಗಳ ಪಂದ್ಯಗಳನ್ನು ದೂರದರ್ಶನಕ್ರೀಡಾ ವಾಹಿನಿಯ ಮೂಲಕ ಭಿತ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.ರಾತ್ರಿ – ಹಗಲು ಪಂದ್ಯಗಳು ಜರಗಲಿದ್ದು, ಕಳೆದ ಬಾರಿಗಿಂತಎತ್ತರದಲ್ಲಿ ನಿರ್ಮಿಸಲಾಗುವ ಬೆಳಕಿನ ಟವರ್ಗಳ ಮೂಲಕ ಬಿಳಿ ವರ್ಣದ ಬೆಳಕು ಮೈದಾನದಲ್ಲಿ ಪಸರಿಸಲಿದೆ. ಶ್ರೇಷ್ಠ ಮಟ್ಟದ ಕೆಮೆರಾಗಳ ಮೂಲಕ ಆಟವನ್ನು ದಾಖಲಿಸಿ ಪ್ರಸಾರ ಮಾಡಲಾಗುವುದ್ದಿದ್ದು ಉನ್ನತ ಗುಣಮಟ್ಟದ ನೇರ ಪ್ರಸಾರವನ್ನು ನಿರೀಕ್ಷಿಸಲಾಗಿದೆ.
 
 
ಮಕ್ಕಳ ಮನೋರಂಜನಾ ಪಾರ್ಕ್:
ಕ್ರಿಕೆಟ್ ಪ್ರೇಮಿಗಳೊಂದಿಗೆ ಮೈದಾನಕ್ಕೆ ಬರುವ ಎಳೆಯ ಮಕ್ಕಳಿಗಾಗಿ ಮೈದಾನದ ಪಕ್ಕದಲ್ಲಿ ಮನೋರಂಜನಾ ಪಾರ್ಕ ನ್ನು ನಿರ್ಮಿಸಲು ಯೋಜಿಸಲಾಗಿದೆಯಲ್ಲದೆ, ಗುಣಮಟ್ಟದ ಆಹಾರ ಮಳಿಗೆಗಳು, ಅತಿಗಣ್ಯರಿಗಾಗಿ ವಾತಾನುಕೂಲ ವ್ಯವಸ್ಥೆ ಮುಂತಾದವುಗಳನ್ನು ಕಲ್ಪಿಸುವ ಮೂಲಕ ಪಂದ್ಯಕೂಟದ ಮಟ್ಟವನ್ನು ಉನ್ನತೀಕರಿಸಲಾಗುವುದು.
 
 
12 ತಂಡಗಳ ನಡುವಣ ಹೋರಾಟ:
ಮಂಗಳೂರು ವಲಯದ ವಿವಿಧ ಪ್ರದೇಶಗಳ ಹನ್ನೆರಡು ತಂಡಗಳಿಗೆ ಪಂದ್ಯಕೂಟದಲ್ಲಿ ಭಾಗವಹಿಸುವ ಅವಕಾಶವಿದ್ದು, 20-20 ಓವರುಗಳ ಲೀಗ್ ಕಮ್ ನಾಕೌಟ್ ಆಧಾರದಲ್ಲಿ ಒಟ್ಟು 34 ಪಂದ್ಯಗಳು ಜರಗಲಿವೆ. ಈ ಭಾರಿ ಕಾರ್ಕಳ, ಕುಂದಾಪುರ, ಬೈಕಂಪಾಡಿ ಮುಂತಾದ ಪ್ರದೇಶಗಳ ಹೊಸ ತಂಡಗಳು ಕಣಕ್ಕಿಳಿಯಲಿವೆ.
 
 
ಐ ಪಿ ಎಲ್ಆಟಗಾರರಿಂದ ಮೆರುಗು:
ಕಳೆದ ಬಾರಿಯ ಐಪಿಲ್ ಕೂಟದಲ್ಲಿ ಕಿಂಗ್ಸ್ಇಲೆವೆನ್ ಪಂಜಾಬನ್ನು ಪ್ರತಿನಿಧಿಸಿದ ಕೆ.ಸಿ.ಕಾರ್ಯಪ್ಪ, ಗುಜರಾತ್ ಲಯನ್ಸ್ ನ್ನು ಪ್ರತಿನಿಧಿಸಿದ ಶಿವಿಲ್ ಕೌಶಿಕ್ ಮತ್ತುಮುಂಬಯಿ ಇಂಡಿಯನ್ ತಂಡಗಳನ್ನು ಪ್ರತಿನಿಧಿಸಿದ ಕಿಶೋರ್ ಕಾಮತ್ ಮುಂತಾದ ರಾಷ್ಟ್ರೀಯ ಮಟ್ಟದಆಟಗಾರರು ಈ ಬಾರಿಯ ಎಂ.ಪಿ.ಎಲ್ ನಲ್ಲಿ ಭಾಗವಹಿಸಲಿದ್ದು ಎಂ.ಪಿ.ಎಲ್ ನತ್ತ ಗರಿಮೆಯನ್ನು ಹೆಚ್ಚಿಸಿಕೊಳ್ಳಲಿದೆ.
 
 
ಆಟಗಾರರ ಆಯ್ಕೆ, ವಿಂಗಡಣೆ, ಹರಾಜು:
ಕರ್ನಾಟಕ ರಾಜ್ಯದಕೆ.ಪಿ.ಎಲ್.,ಐಪಿಎಲ್, ರಾಷ್ಟ್ರೀಯ ಪಂದ್ಯಕೂಟಗಳಲ್ಲಿ ಭಾಗವಹಿಸಿರುವ ಶ್ರೇಷ್ಠ 24 ಆಟಗಾರರು ಈ ಭಾರಿಎಂ.ಪಿ.ಎಲ್ ನಲ್ಲಿ ಭಾಗವಹಿಸಲಿದ್ದು, ಹರಾಜಿನ ಮೂಲಕ ಇಬ್ಬಿಬ್ಬರು ಒಂದೊಂದು ತಂಡವನ್ನು ಸೇರಲಿದ್ದು, ತಂಡಗಳ ನಡುವಣ ಹೋರಾಟಕ್ಕೆ ಹೊಸ ಕೆಚ್ಚನ್ನು ಒದಗಿಸಲಿದೆ. 24 ಮಂದಿ ಅನಿವಾಸಿ ಭಾರತೀಯ ಆಟಗಾರರು 12 ತಂಡಗಳಲ್ಲಿ ಸೇರ್ಪಡೆಗೊಳ್ಳಲಿದ್ದು, ಗಲ್ಫ್ ರಾಷ್ಟ್ರಗಳ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಹಲವಾರು ಆಟಗಾರರು ತಮ್ಮ ತಾಯ್ನೆಲದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯುವಂತಾಗಿದೆ. ಮಂಗಳೂರು ವಲಯದ 48 ಮಂದಿಆಟಗಾರರನ್ನು ಎ ಗುಂಪಿನಲ್ಲಿ 24 ಮಂದಿಯನ್ನು ಬಿ ಗುಂಪಿನಲ್ಲಿ ಮತ್ತು ಉಳಿದವರನ್ನು ಸಿ ಗುಂಪಿನಲ್ಲಿ ವಿಂಗಡಿಸಿ ಹರಾಜು ನಡೆಸಲಾಗುವುದು.ಭಾಗವಹಿಸಲು ಇಚ್ಛಿಸುವ ಅನಿವಾಸಿ ಭಾರತೀಯ ಮತ್ತು ಮಂಗಳೂರು ವಲಯದ (ಮಂಗಳೂರು ವಲಯದಲ್ಲಿ ಜನಿಸಿರುವ, ಮಂಗಳೂರು ವಲಯದ ವಿದ್ಯಾ ಸಂಸ್ಥೆಗಳಲ್ಲಿ ಓದುತ್ತಿರುವ) ಆಟಗಾರರು ಆಗಸ್ಟ್ 31 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಣಿ ನಮೂನೆಯು www.krcaindia.com, www.facebook.com/mplofficialನಲ್ಲಿ ಮತ್ತು ಮಂಗಳೂರು ಹಂಪನಕಟ್ಟೆಯಲ್ಲಿರುವ ಕೆ.ಆರ್.ಸಿ.ಎ ಕಛೇರಿಯಲ್ಲಿ ಲಭ್ಯವಿದೆ.ನೋಂದಣಿ ಶುಲ್ಕವಿರುವುದಿಲ್ಲ. ಹರಾಜು ಪ್ರಕ್ರಿಯೆಯು ಸೆಪ್ಟಂಬರ್ ತಿಂಗಳಲ್ಲಿ ಜರಗಲಿದೆ ಎಂದು ಮಂಗಳೂರು ವಲಯದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಸಿರಾಜುದ್ಧೀನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
 
 
ಪತ್ರಿಕಾ ಗೋಷ್ಠಿಯಲ್ಲಿ ಮನೋಹರ್ ಅಮೀನ್, ಸಂಚಾಲಕರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಮಂಗಳೂರು ವಲಯ, ರತನ್ ಕುಮಾರ್, ಚೇರ್ಮೇನ್, ಕರ್ನಾಟಕರಾಜ್ಯ ಕ್ರಿಕೆಟ್ ಸಂಸ್ಥೆ, ಮಂಗಳೂರು ವಲಯ, ಇಮ್ತಿಯಾಝ್, ಸಂಚಾಲಕರು, ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿ, ಮಂಗಳೂರು, ಬಾಲಕೃಷ್ಣ ಪರ್ಕಳ, ಪ್ರಧಾನ ಕಾರ್ಯಯೋಜಕರು, ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿ, ಮಂಗಳೂರು ಹಾಜರಿದ್ದವರು

LEAVE A REPLY

Please enter your comment!
Please enter your name here