ಹೈಕೋರ್ಟ್ ಮೊರೆ ಹೋಗಲು ಅನರ್ಹರ ನಿರ್ಧಾರ

0
143

ಮಡಿಕೇರಿ ಪ್ರತಿನಿಧಿ ವರದಿ
ನಗರಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಅನರ್ಹಗೊಂಡಿರುವ ಸದಸ್ಯರಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ತಿಳಿಸಿದ್ದಾರೆ.
 
 
 
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಪಕ್ಷದ ಬೆಳವಣಿಗೆಗಾಗಿ ದುಡಿದ ನನ್ನನ್ನು ಇಂದು ಪಕ್ಷದಿಂದ ಅಮಾನತುಗೊಳಿಸಿರುವುದು ವಿಷಾದಕರವೆಂದು ಅವರು ಹೇಳಿದ್ದಾರೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಯ ಮೂಲಕ ನಗರಸಭಾ ಅಧ್ಯಕ್ಷರಾದ ಸದಸ್ಯರೊಬ್ಬರ ಕುತಂತ್ರದಿಂದ ನಮಗೆ ರಾಜಕೀಯ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು ಮುಂದಿನ ದಿನಗಳಲ್ಲಿ ಇದೇ ಸದಸ್ಯನಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
 
 
ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ಈ ಸದಸ್ಯನ ದೌರ್ಜನ್ಯ ಹಾಗೂ ದಬ್ಬಾಳಿಕೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ, ಮಾನ ಮತ್ತು ಗೌರವ ಸಿಗದೆ ನಾವುಗಳು ಬೇಸತ್ತಿದ್ದೇವೆ. ನಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲೇಬೇಕೆಂದು ಕೆಲವರು ಕುತಂತ್ರ ನಡೆಸಿದ್ದಾರೆ ಎಂದು ಆರೋಪಿಸಿರುವ ಶ್ರೀಮತಿ ಬಂಗೇರ ಮುಂದಿನ ರಾಜಕೀಯ ನಡೆಯ ಬಗ್ಗೆ ಸಧ್ಯದಲ್ಲಿಯೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
 
 
ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಅಗೌರವದಿಂದ ಕಾಣುವ ಮೂಲಕ ಪಕ್ಷವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ಯುತ್ತಿರುವವರನ್ನು ಮೊದಲು ಜಿಲ್ಲಾಧ್ಯಕ್ಷರು ಅಮಾನತುಗೊಳಿಸಲಿ ಎಂದು ಒತ್ತಾಯಿಸಿರುವ ಅವರು ಜಿಲ್ಲಾಧಿಕಾರಿಗಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ನಾವುಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಕಾರಣ ನಮಗೆ ನ್ಯಾಯಾಲಯದ ಮೂಲಕ ನ್ಯಾಯ ಸಿಗುವುದು ಖಚಿತವೆಂದು ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here