ಹೇಳಿಕೆ

0
319

ಮಂಗಳೂರು ಪ್ರತಿನಿಧಿ ವರದಿ
ಜ.23ರಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಕದ್ರಿ ಉತ್ತರ ವಾರ್ಡ್ ನ ಕಾರ್ಪೊರೇಟರ್ ಹಾಗೂ ಪಾಲಿಕೆ ವಿಪಕ್ಷ ನಾಯಕಿಯಾಗಿರುವ ರೂಪ.ಡಿ.ಬಂಗೇರ ನೀಡುವ ಹೇಳಿಕೆ.
 
 
ಸ್ವಾಮಿ ವಿವೇಕಾನಂದರ 154ನೇ ಜನ್ಮಜಯಂತಿಯಂದು ಕದ್ರಿ ಸರ್ಕೂಯಟ್ ಹೌಸ್ ನಿಂದ ಪ್ರಾರಂಭವಾಗಿ ಕದ್ರಿ ಉದ್ಯಾನವನದ ಎದುರಿನಿಂದ ನಂತೂರು ಸರ್ಕಲ್ ಗೆ ಸೇರುವ ವಿವೇಕಾನಂದ ರಸ್ತೆಗೆ ಹೊಸ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಸ್ಮಾರ್ಟ್ ಸಿಟಿಯತ್ತ ಹೆಜ್ಜೆ ಹಾಕುತ್ತಿರುವ ಮಂಗಳೂರಿನ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಮಣ್ಣಿನ ರಾಶಿಯಿದ್ದ ಜಾಗವನ್ನು ಅಂದಗೊಳಿಸಿ, ಆಕರ್ಷಕ ಮಾದರಿಯ ನಾಮಫಲಕವನ್ನು ಕದ್ರಿ ಶ್ರೀಯೋಗೀಶ್ವರ (ಜೋಗಿ) ಮಠದ ಮಠಾಧೀಶರಿಂದ ಅನಾವರಣಗೊಳಿಸಲಾಗಿತ್ತು. ಈ ನಾಮಫಲಕದಲ್ಲಿ ಕದ್ರಿ ಯೋಗೀಶ್ವರ (ಜೋಗಿ)ಮಠ ಮತು ಕದ್ರಿ ಉದ್ಯಾನವನದ ಹೆಸರುಗಳನ್ನು ಬರೆಯಲಾಗಿತ್ತು. ಊರಿನ ಗಣ್ಯರ, ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರ ಸಮ್ಮುಖದಲ್ಲಿ ಅನಾವರಣಗೊಂಡ ಈ ನಾಮಫಲಕ ಮಧ್ಯಾಹ್ನದ ವೇಳೆಗೆ ಕಣ್ಮರೆಯಾಗಿತ್ತು. ಮಾನ್ಯ ಮೇಯರ್ರವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಸ್ಥಳೀಯ ಜನಪ್ರತಿನಿಧಿ ಅದರಲ್ಲೂ ಮಹಿಳಾ ಜನಪ್ರತಿನಿಧಿಯನ್ನು ಅವಮಾನಿಸುವ ರೀತಿಯಲ್ಲಿ ಸೌಜನ್ಯಕ್ಕೂ ಒಂದು ವಿಷಯವನ್ನು ಹೇಳದೆ ತಮ್ಮ ಹುದ್ದೆ ಗೌರವವನ್ನು ಮರೆತು ಏಕಾ ಏಕಿಯಾಗಿ ಈ ನಾಮಫಲಕವನ್ನು ತೆರವುಗೊಳಿಸಿದ್ದರು.
 
 
 
ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಅಶಾಂತಿ, ಗದ್ದಲ ಉಂಟಾಗಬಾರದೆಂಬ ದೃಷ್ಠಿಯಿಂದ ಈ ಬಗ್ಗೆ ನಾವು ಯಾವುದೇ ಪ್ರತಿಭಟನೆ ಹೋರಾಟಕ್ಕೆ ಇಳಿಯದೆ ಶಾಂತವಾಗಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದೆವು. ಈ ರಸ್ತೆಗೆ ಚುನಾವಣಾ ಆಯೋಗದ ನಕ್ಷೆಯಲ್ಲಿ ವಿವೇಕಾನಂದ ರಸ್ತೆಯೆಂದೇ ಹೆಸರಿರುತ್ತದೆ. ಆದರೆ ಮೇಯರ್ ಹರಿನಾಥ್ರವರು ಚುನಾವಣಾ ಆಯೋಗದ ದಾಖಲೆಗೂ ಗೌರವ ಕೊಡಲಿಲ್ಲ. ಈ ಗೊಂದಲದ ಬಳಿಕ ನನ್ನ ವಾರ್ಡಿನ ಅನೇಕ ಹಿರಿಯರೂ ನನಗೆ ಈ ರಸ್ತೆಗೆ ಈ ಹಿಂದೆ ವಿವೇಕಾನಂದ ರಸ್ತೆ ನಾಮಕರಣವಾಗಿದ್ದ ಬಗ್ಗೆ ತಮ್ಮ ನೆನಪಿನಂಗಳದ ಮಾಹಿತಿಗಳನ್ನು ನೀಡಿದ್ದರು. ಈ ಸಂದರ್ಭದಲ್ಲಿ ಮೇಯರ್ರವರು ಸುದ್ದಿಗೋಷ್ಠಿ ನಡೆಸಿ, ಈ ರಸ್ತೆಗೆ ಬಹಳ ಹಿಂದಿನಿಂದಲೂ ಜೋಗಿ ಮಠ ರಸ್ತೆಯೆಂದೇ ಹೆಸರಿದ್ದು, ವಿವೇಕಾನಂದ ರಸ್ತೆಯೆಂಬ ನಾಮಫಲಕ ಅಳವಡಿಸಿರುವುದು ಸರಿಯಲ್ಲ. ಈ ಬಗ್ಗೆ ಪಾಲಿಕೆ ಸಭೆಯಲ್ಲಿ ನಿರ್ಣಯವಾಗಿಲ್ಲ ಎಂದು ವಾದಿಸಿ ದಾಖಲೆ ಇದ್ದಲ್ಲಿ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದರು. ತುಂಬೆ ವೆಂಟೆಡ್ ಡ್ಯಾಂ ಕಾಮಗಾರಿಯ ವಿಷಯದಲ್ಲಿ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ ಮೇಯರ್ರವರು, ತಮಗೆ ಮಾಹಿತಿಯ ಕೊರತೆಯಿದೆ ಎಂಬುದನ್ನು ಪುನಃ ಪುಷ್ಠೀಕರಿಸಲು ಹೊರಟಿರುವಂತಿದೆ ಅವರ ಈ ನಡೆ. ಇಷ್ಟಕ್ಕೆ ನಿಲ್ಲದೆ ತಾವು ಪ್ರತಿನಿಧಿಸುತ್ತಿರುವ ಜೋಗಿ ಸಮುದಾಯದಲ್ಲಿ ಅಪಪ್ರಚಾರ ನಡೆಸಿ ನಾಮಫಲಕ ಅನಾವರಣ ತಮ್ಮ ಸಮುದಾಯದ ವಿರುದ್ಧದ ಕಾರ್ಯವೆಂಬಂತೆ ಬಿಂಬಿಸಿದರು. ಆದರೆ ಜೋಗಿ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದವರನ್ನು ಅವರ ನಂಬಿಕೆ ಭಾವನೆಗಳನ್ನು ಗೌರವಿಸುವ ಉದಾರ ಮಾನಸಿಕತೆ ನಮ್ಮ ಪಕ್ಷಕ್ಕಿದೆ. ಸ್ಥಳೀಯ ಜನಪ್ರತಿನಿಧಿಯಾಗಿ ನಾಮಫಲಕದಲ್ಲಿ ಬೇರೆ ಹೆಸರುಗಳನ್ನು ಹಾಕಲು ಅಧಿಕಾರ ಇಲ್ಲದಿದ್ದರೂ ಕೂಡ ಸ್ಥಳೀಯರ ಮನಸ್ಥಿತಿಯನ್ನು ಅರಿತು ಭಾವನೆಗಳಿಗೆ ಗೌರವ ನೀಡಿ ಜೋಗಿ ಮಠ, ಸಮುದಾಯದವರನ್ನು ಗೌರವಿಸುವ ದೃಷ್ಠಿಯಿಂದಲೂ ನಾಮಫಲಕದಲ್ಲಿ ಕದ್ರಿ ಪಾರ್ಕ್ ಮತ್ತು ಮಠದ ಹೆಸರನ್ನು ಕೈ ಬಿಡದೆ ನಾಮಫಲಕ ಅನಾವರಣವನ್ನು ಜೋಗಿ ಅರಸರಿಂದ ಮಾಡಿಸಿದ್ದೆವು. ಆದರೆ ಸ್ವ ಹಿತಾಸಕ್ತಿ ಮತ್ತು ರಾಜಕೀಯ ಸ್ವಾರ್ಥದ ಪೊರೆಯಿಂದಾಗಿ ಮಾನ್ಯ ಮೇಯರ್ರವರಿಗೆ ಇದ್ಯಾವುದೂ ಕಣ್ಣಿಗೆ ಕಾಣದೆ ಹೊಸ ನಾಮಫಲಕ ಅನಾವರಣ ಪ್ರತಿಪಕ್ಷ ನಾಯಕಿಯಿಂದ ಆಗಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿತು. ಹಾಗೂ ಇದನ್ನೂ ವಿವಾದವಾಗಿ ಪರಿವರ್ತಿಸಿದರು. 40 ವರ್ಷಗಳ ಅನುಭವ ನನಗೆ ಇದೆ ಎಂದು ಸಾರಿ ಸಾರಿ ಹೇಳುವ ಹರಿನಾಥ್ರವರಿಗೆ 54 ವರ್ಷದ ಹಿಂದೆ ಹಿರಿಯರಾದ ಬ್ಲೇಸಿಯಸ್ ಎಂ.ಡಿಸೋಜ, ಎಂ.ಎಸ್. ಶಾಸ್ತ್ರಿ, ಒಕ್ಟೋವಿಯಾ ಅಲ್ಬುಕರ್ಕ್, ಸಿ.ಜಿ.ಕಾಮತ್ರವರು, ಹೀಗೆ 30 ಮಂದಿ ಹಿರಿಯ ಗಣ್ಯ ಕೌನ್ಸಿಲರುಗಳು ಸೇರಿ ಅಂಗೀಕರಿಸಿದ ರಸ್ತೆಯ ಹೆಸರಿನ ಬಗ್ಗೆ ಅರಿವಿರಲಿಲ್ಲವೇ? ನಾಮಫಲಕ ಹಾಕುವ ಮೊದಲು ಕೌನ್ಸಿಲ್ ಅಂಗೀಕಾರ ಆಗಬೇಕು. ಸದಸ್ಯರಿಗೆ ಗೊತ್ತಿಲ್ವೇ? ಎಂದು ಪ್ರಶ್ನಿಸಿದ ಮುಖ್ಯ ಸಚೇತಕರು ಆದ ಶಶಿಧರ್ ಹೆಗ್ಡೆಯವರಲ್ಲಿ ನನ್ನದೊಂದು ಪ್ರಶ್ನೆ. ಇತ್ತೀಚೆಗೆ ಅವರದ್ದೇ ವಾರ್ಡಿನ ಕೊಟ್ಟಾರದಲ್ಲಿ ಕೌನ್ಸಿಲಿನ ಯಾವುದೇ ಅಂಗೀಕಾರವಿಲ್ಲದೆ ಅನಧಿಕೃತವಾಗಿ ರಸ್ತೆಗೆ ಹೆಸರಿಡುವಾಗ ಅವರಿಗೆ ಪರಿಜ್ಞಾನ ಇರಲಿಲ್ಲವೇ?
 
 
 
ಮಾಹಿತಿಯ ಕೊರತೆಯಿರುವ ಮಾನ್ಯ ಮೇಯರ್ರವರಿಗೆ ಈ ಮೂಲಕ ನಾನು ಈ ಬಾರಿಯು ಈ ಕೆಳಗಿನ ಮಾಹಿತಿಯನ್ನು ನೀಡಲು ಬಯಸುತ್ತೇನೆ. 1963ರಲ್ಲಿ ಜೂನ್ 11ರಂದು (ಮೇ 7, 1963, ಲೀಗಲ್ ಕಮಿಟಿ ನಿರ್ಣಯದ ಮೇಲೆ) ಮಂಗಳೂರು ನಗರ ಸಭೆ (ಮುನಿಸಿಪಲ್ ಕೌನ್ಸಿಲ್) ಅಸ್ತಿತ್ವದಲ್ಲಿದ್ದಾಗ ತೆಗೆದುಕೊಂಡ ನಿರ್ಣಯ ಸಂಖ್ಯೆ 708/ಅ) ರಂತೆ ಮಂಗಳೂರು -ಕಾರ್ಕಳ (ನಂತೂರು ಜಂಕ್ಷನ್) ರಸ್ತೆಯಿಂದ ಅತಿಥಿಗೃಹ (ಸರ್ಕೂಟ್ ಹೌಸ್)ವರೆಗಿನ ಪದವು ರಸ್ತೆಗೆ ವಿವೇಕಾನಂದ ರಸ್ತೆ ಎಂದೂ, ನಿರ್ಣಯ ಸಂಖ್ಯೆ 708(ಬಿ)ರಂತೆ ನಗರ ಸಭೆಯಿಂದ ಅಭಿವೃದ್ಧಿ ಪಡಿಸುವ ಉದ್ಯಾನವನ (ಈಗಿನ ಕದ್ರಿ ಉದ್ಯಾನವನ)ಕ್ಕೆ ವಿವೇಕಾನಂದ ಉದ್ಯಾನವನ ಎಂದೂ, ನಿರ್ಣಯ ಸಂಖ್ಯೆ 708 (2)ರಂತೆ ಕೆಥೊಲಿಕ್ ಕ್ಲಬ್ ಎದುರಿನಿಂದ ಟಾಗೋರ್ ಪಾರ್ಕ್ ಜ್ಯೋತಿ ಟಾಕೀಸಿನವರೆಗಿನ ರಸ್ತೆಗೆ ರಬೀಂದ್ರನಾಥ ಟಾಗೋರ್ ರಸ್ತೆ ಎಂದೂ ನಾಮಾಕರಣ ಮಾಡುವಂತೆ ನಿರ್ಣಯಿಸಲಾಗಿದೆ. ಹಾಗೂ ಈ ಬಗ್ಗೆ ಕಾಯಮಾನುಷ್ಠಾನಕ್ಕೆ ಸೂಚನೆ ನೀಡಲಾಗಿದೆ.
 
 
ಆದರೆ ವಿಪರ್ಯಾಸವೆಂಬಂತೆ ನಮ್ಮ ಆಧ್ಯಾತ್ಮಿಕ ಲೋಕಕ್ಕೆ ಭಾರತೀಯ ಸಂಸ್ಕೃತಿಗೆ ಸಾಹಿತ್ಯಕ್ಕೆ ದೇಶಕ್ಕೆ ಅಪಾರ ಕೊಡುಗೆ ನೀಡಿದ ಸ್ವಾಮಿ ವಿವೇಕಾನಂದ 100ನೇ ಜನ್ಮ ದಿನಾಚರಣೆ ಆ ಸಂದರ್ಭದಲ್ಲಿ (1963)ರಲ್ಲಿ ಅವರನ್ನು ಸ್ಮರಿಸಲು ನಮ್ಮ ಹಿರಿಯರು ರಸ್ತೆ, ಪಾರ್ಕ್ ಗಳಿಗೆ ನಾಮಕರಣ ಮಾಡಿದ ಹೆಸರುಗಳನ್ನು ನಾವು ಮರೆತುಬಿಟ್ಟು, ಕೆಲವೊಂದು ಹಿತಾಸಕ್ತಿಗಳಿಗೆ ಬಲಿಬಿದ್ದು ನಮಗೆ ಬೇಕಾದ ಹೆಸರುಗಳನ್ನು ರಸ್ತೆ-ಪಾರ್ಕ್ ಗಳಿಗೆ ಇಡುತ್ತಿದ್ದೇವೆ. ಹಾಗೂ ಸಮಸ್ಯೆ ಬಂದಾಗ ಸಮುದಾಯವನ್ನು ಎತ್ತಿ ಕಟ್ಟುತ್ತೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅದ್ದರಿಂದ ಹರಿನಾಥರವರು ಮಂಗಳೂರಿನ ಜನತೆಗೆ ಮಾಡಿದ ದ್ರೋಹಕ್ಕೆ ತಕ್ಷಣ ರಾಜೀನಾಮೆ ನೀಡಬೇಕು.
 
 
ಇದೀಗ ಮಾನ್ಯ ಮೇಯರ್ರವರು ದಾಖಲೆಗಳನ್ನು ಹುಡುಕಬೇಕಾಗಿಲ್ಲ, ನಾವೇ ಹುಡುಕಿಕೊಟ್ಟಿದ್ದೇವೆ. ಇನ್ನಾದರೂ ತಾವು ತೆರವುಗೊಳಿಸಿದ ನಾಮಫಲಕವನ್ನು ಪುನ: ಅದೇ ಸ್ಥಳದಲ್ಲಿ ಅಳವಡಿಸಲು ಆದೇಶಿಸುತ್ತಿರೋ ಅಥವಾ ಮಂಗಳೂರು ಮಹಾನಗರಪಾಲಿಕೆ ಅಂದರೆ ಆಗಿನ ಮುನಿಸಿಪಲ್ ಕೌನ್ಸಿಲ್ ತೆಗೆದುಕೊಂಡ ನಿರ್ಣಯಕ್ಕೆ ವಿರುದ್ಧವಾಗಿ ನಡೆದು ಕೊಟ್ಟ ಮಾತಿಗೆ ತಪ್ಪಿ ಪಾಲಿಕೆ ಮತ್ತು ಮೇಯರ್ ಸ್ಥಾನಕ್ಕೆ ಅಗೌರವ ಸೂಚಿಸುತ್ತಿರೋ ಎಂಬುದನ್ನು ಸ್ಪಷ್ಟ ಪಡಿಸಬೇಕಾಗಿದೆ. ಅನಂತರ ಈ ಬಗ್ಗೆ ನಮ್ಮ ಮುಂದಿನ ನಡೆಯನ್ನು ನಾವು ನಿರ್ಧರಿಸುತ್ತೇವೆ. ಇಷ್ಟು ಮಾತ್ರವಲ್ಲದೆ ಮಾನ್ಯ ಮೇಯರ್ರವರು ಹಿಂದಿನ ಕಡತಗಳನ್ನು ಪರಿಶೀಲಿಸಿ, ನಮ್ಮ ಸ್ಥಳೀಯಾಡಳಿತದಲ್ಲಿ ಅಧಿಕೃತವಾಗಿ ಅನುಮೋದನೆಗೊಂಡ ಹೆಸರುಗಳನ್ನು ಆಯಾಯರಸ್ತೆ, ಪಾರ್ಕ್ ಬಡಾವಣೆಗಳಿಗೆ ನಾಮಫಲಕಗಳನ್ನು ಅಳವಡಿಸಬೇಕೆಂದೂ ಎಲ್ಲಾ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಬೇಕೆಂದೂ ಒತ್ತಾಯಿಸುತ್ತೇವೆ ಎಂದು ರೂಪಾ ಡಿ’ಬಂಗೇರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here