ಹುತಾತ್ಮರಾದ ಐವರು ಯೋಧರು

0
217

 
ವರದಿ: ಲೇಖಾ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸಿಆರ್​ಪಿಎಫ್ ಯೋಧರು ಸಾಗುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
 
 
 
ಇದೇ ವೇಳೆ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿಯಲ್ಲಿ ಹಲವು ಸಿಆರ್​ಪಿಎಫ್ ಯೋಧರು ಗಾಯಗೊಂಡಿದ್ದಾರೆ.
 
 
 
ಪಾಂಪೊರೆ ನಗರದ ಬಳಿ ಸಿಆರ್​ಪಿಎಫ್ ಯೋಧರು ಸಾಗುತ್ತಿದ್ದ ಬಸ್ಸನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆದ ತಕ್ಷಣ ಸೇನೆ ಮತ್ತು ಸಿಆರ್​ಪಿಎಫ್ ಯೋಧರು ಪ್ರತಿದಾಳಿ ನಡೆಸಿದ್ದು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಇನ್ನೂ ಇಬ್ಬರು ಉಗ್ರರು ಅಡಗಿರುವ ಶಂಕೆ ಇದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಕಾರ್ಯಾಚರಣೆಯಲ್ಲಿ ಉಗ್ರರ ಹತ್ಯೆ
ಜಮ್ಮು-ಕಾಶ್ಮೀರದ ಗಡಿಯಲ್ಲಿ ಕೆಲ ದಿನಗಳಿಂದ ಉಗ್ರರ ಒಳ ನುಸುಳುವಿಕೆ ಹೆಚ್ಚಾಗಿದ್ದು, ಭಾರತೀಯ ಗಡಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಉಗ್ರರ ವಿರುದ್ಧ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲು ಸೈನಿಕರು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ.
 
 
 
ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಲಾಚಿಪೋರ ಅರಣ್ಯಪ್ರದೇಶದಲ್ಲಿ ಉಗ್ರರು ನುಸುಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಗಡಿ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗಿಳಿದರು. ಇಬ್ಬರು ಉಗ್ರರನ್ನು ಹತ್ಯೆಗಯ್ಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
 
 
 
ಉರಿ ಸೆಕ್ಟರ್ ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಶೋಧಕಾರ್ಯ ಮುಂದುವರಿಸಲಾಗಿದೆ. ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ತಿಳಿದುಬಂದಿದೆ.
 
 
 
ಶನಿವಾರ ಸಂಜೆ ಪಾಕಿಸ್ತಾನದ ಲಷ್ಕರ್ ಫಿದಾಯಿನ್ ಸಂಘಟನೆಗೆ ಸೇರಿದ ಉಗ್ರರು ಏಕಾಏಕಿ ಯೋಧರ ಮೇಲೆ ದಾಳಿ ನಡೆಸಿದ್ದರ ಪರಿಣಾಮ 8 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು. ಅಲ್ಲದೇ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

LEAVE A REPLY

Please enter your comment!
Please enter your name here