ಹಿರಿಯ ಸಚಿವ ಹೆಚ್ ಎಸ್ ಮಹದೇವಪ್ರಸಾದ್ ಇನ್ನಿಲ್ಲ

0
285

ಬ್ರೇಕಿಂಗ್ ನ್ಯೂಸ್
ಹಿರಿಯ ಸಹಕಾರ ಸಚಿವ ಹೆಚ್ ಎಸ್ ಮಹದೇವಪ್ರಸಾದ್(58) ವಿಧಿವಶರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮುಗ್ತಿಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್ ನಲ್ಲಿ ಸಚಿವರು ಕೊನೆಯುಸಿರೆಳೆದಿದ್ದಾರೆ.
 
 
ಸಹಕಾರ ಸಚಿವ ಎಚ್. ಎಸ್ ಮಹದೇವ ಪ್ರಸಾದ್, ಕೊಪ್ಪದಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಬೆಳ್ಳಿ ಹಬ್ಬದಲ್ಲಿ ಪಾಲ್ಗೊಳ್ಳಲು ನಿನ್ನೆ ತಡರಾತ್ರಿ ಆಗಮಿಸಿ ಚಿಕ್ಕಮಗಳೂರು ಸೆರಾಯಿ ರೆಸಾರ್ಟ್​’ನಲ್ಲಿ ತಂಗಿದ್ದರು. ಆದರೆ ಇಂದು ಬೆಳಿಗ್ಗೆ 8:30 ಆದರೂ ಅವರು ತಮ್ಮ ಕೋಣೆಯ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಸಿಬ್ಬಂದಿಗಳು ಬಲವಂತದಿಂದ ಬಾಗಿಲು ತೆರೆದಾಗ ಸಚಿವರು ಹೃದಯಾಘಾತಕ್ಕೊಳಗಾಗಿ ನಿಧನರಾಗಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಅಲ್ಲಿನ ಆಶ್ರಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
 
 
ಈ ಹಿಂದೆ ಸಚಿವರಿಗೆ ಓಪನ್ ಹಾರ್ಟ್ ಸರ್ಜರಿಯಾಗಿತ್ತು. ಇವರು ತಮ್ಮ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮಹದೇವಪ್ರಸಾದ್ ಅವರು ಸಿಎಂಗೆ ಆಪ್ತರೂ ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾಗಿದ್ದರು.
 
 
ನಾಳೆ ಹುಟ್ಟೂರಲ್ಲೇ ಅಂತ್ಯಕ್ರಿಯೆ
ಎಚ್. ಎಸ್ ಮಹದೇವ ಪ್ರಸಾದ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ಸಚಿವರ ಹುಟ್ಟೂರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಎಚ್. ಎಸ್ ಮಹದೇವ ಪ್ರಸಾದ್ ಅವರ ಪುತ್ರ ಗಣೇಶ್ ಪ್ರಸಾದ್ ತಿಳಿಸಿದ್ದಾರೆ.
 
 
ಸಚಿವರು ನಡೆದು ಬಂದ ಹಾದಿ
ಎಚ್. ಎಸ್ ಮಹದೇವ ಪ್ರಸಾದ್ ಅವರ ಪೂರ್ಣ ಹೆಸರು ಹಾಲಹಳ್ಳಿ ಶ್ರೀಕಾಂತ ಶೆಟ್ಟಿ ಮಹದೇವ ಪ್ರಸಾದ್. ಇವರು ಆಗಸ್ಟ್ 5, 1958ರಲ್ಲಿ ಗುಂಡ್ಲುಪೇಟೆಯಲ್ಲಿ ಜನಿಸಿದ್ದರು.5 ಬಾರಿ ಗುಂಡ್ಲುಪೇಟೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.ಈ ಹಿಂದೆ ಇವರು ಜನತಾದಳದಲ್ಲಿದ್ದರು.ಈ ಹಿಂದೆ ಆಹಾರ ಮತ್ತು ನಾಗರಿಕ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
 
 
1994 ಜನತಾದಳದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1999 ಜೆಡಿಯುನಿಂದ ಗುಂಡ್ಲುಪೇಟೆಯಲ್ಲಿ 2ನೇ ಬಾರಿಗೆ ಶಾಸಕರಾಗಿದ್ದರು. 2004ರಲ್ಲಿ ಜೆಡಿಎಸ್ ನಿಂದ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕಾಂಗ್ರೆಸ್ ನಿಂದ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಕಾಂಗ್ರೆಸ್ ನಿಂದ 5ನೇ ಬಾರಿ ಗುಂಡ್ಲುಪೇಟೆಯಲ್ಲಿ ಶಾಸಕರಾಗಿ ಗೆಲುವು ಸಾಧಿಸಿದ್ದರು. 3 ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಧರ್ಮಸಿಂಗ್ ಸಿಎಂ ಆಗಿದ್ದಾಗ ಇವರು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿಯೂ ಅನುಭವ ಹೊಂದಿದ್ದರು. ಹೆಚ್ ಡಿಕೆ ಸಿಎಂ ಆಗಿದ್ದಾಗ ಆಹಾರ ಮತ್ತು ನಾಗರಿಕ ಸಚಿವರಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಹಕಾರ ಹಾಗೂ ಸಕ್ಕರೆ ಖಾತೆ ನಿರ್ವಹಣೆ ಮಾಡಿದ್ದಾರೆ.
 
 
 
ಸಂತಾಪ:
ಎಚ್. ಎಸ್ ಮಹದೇವ ಪ್ರಸಾದ್ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ-ಗೃಹ ಸಚಿವ ಡಾ.ಜಿ ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿ ಹಲವಾರು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
 
 
ಮೂರು ದಿನ ಶೋಕಾಚರಣೆ
ಇಂದು ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸಿದ್ದು ಹಾಗೂ  ಮೂರು ದಿನಗಳ ಕಾಲ ಶೋಕಾಚರಣೆಗೆ ತೀರ್ಮಾನಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here