ಹಿಂಗಾರು ಹಂಗಾಮಿನಲ್ಲೂ ರಾಜ್ಯದ 160 ತಾಲ್ಲೂಕುಗಳಲ್ಲಿ ಮಳೆ ಕೊರತೆ -ಕೃಷ್ಣಭೈರೇಗೌಡ

0
601

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದ 160 ತಾಲ್ಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಸಾಮಾನ್ಯ ವರ್ಷದಲ್ಲಿ ಸರಾಸರಿ 33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಜ್ಯದಲ್ಲಿ ಭಿತ್ತನೆ ಕಾರ್ಯ ನಡೆಯುತ್ತಿತ್ತು. ಆದರೆ ಈ ಬಾರಿ 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.
 
 
 
ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 51 ನೇ ಪುಣ್ಯ ತಿಥಿ ಅಂಗವಾಗಿ ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹಿಂಗಾರು ಬೆಳೆ ನಷ್ಠ ಕುರಿತಂತೆ ಜಂಟಿ ಸರ್ವೆ ಕಾರ್ಯ ನಡೆಸಿ ಜನವರಿ 20ರ ಒಳಗಾಗಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
 
 
 
ಮುಂಗಾರು ಹಂಗಾಮಿನಲ್ಲಿ ರಾಜ್ಯದ 139 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಮುಂಗಾರು ಹಂಗಾಮಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ 4702 ಕೋಟಿ ರೂ. ಪರಿಹಾರದ ಹಣ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ 1782 ಕೋಟಿ ರೂ. ಹಣ ನೀಡುವುದಾಗಿ ಹೇಳಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
 
 
 
ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಣೆ ಮಾಡಿರುವ ಪರಿಹಾರದ ಹಣ ತುಂಬಾ ಕಡಿಮೆಯಾಗಿದ್ದು, ಕಳೆದ ಸಾರಿ ಮಹಾರಾಷ್ಟ್ರ ಸರ್ಕಾರಕ್ಕೆ ಹಣ ನೀಡಿದಂತೆ ರಾಜ್ಯಕ್ಕೂ ಕನಿಷ್ಠ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು, ಬರಪರಿಹಾರದ ಹಣ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ಅವರಿಗೆ ನಮ್ಮ ಮುಖ್ಯಮಂತ್ರಿ ಅವರು ಈಗಾಗಲೇ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
 
 
 
ರಾಜ್ಯ ಸರ್ಕಾರ ಬರ ನಿರ್ವಹಣೆ ಮತ್ತು ಮೇಲುಸ್ತುವಾರಿಗಾಗಿ ನಾಲ್ಕು ಸಚಿವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿದ್ದು ಈಗಾಗಲೇ ಸಮಿತಿಗಳು ರಾಜ್ಯ ಪ್ರವಾಸ ಮಾಡಿ ಬರ ಅಧ್ಯಯನ ನಡೆಸಿವೆ, ರಾಜ್ಯದಲ್ಲಿ 46 ವರ್ಷಗಳ ನಂತರ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
 
 
 
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಸುಭಾಷ್ ಕುಂಠಿಯಾ, ಆಡಳಿತ ಮತ್ತು ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here