ಹದಿಹರೆಯ

0
631

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಹದಿಹರೆಯವನ್ನು ಬದುಕಿ ವಸಂತಕಾಲ ಎಂದು ಅನೇಕ ಕವಿಗಳು ಬಣ್ಣಿಸಿದ್ದಾರೆ. ಆದರೆ ಹದಿಹರೆಯವು ಅನೇಕ ಸಮಸ್ಯೆ ಮತ್ತು ಒತ್ತಡದ ಕಾಲವೂ ಆಗಿರುತ್ತದೆ. ಯಾಕೆಂದರೆ ಹದಿಹರೆಯವು ಅನೇಕ ರೀತಿಯ ಹೊಸದನ್ನು ಉಂಟುಮಾಡುತ್ತದೆ. ಈ ರೀತಿಯ ಹೊಸ ಬೆಳವಣಿಗೆಗಳು ಹೊಸ ಸಂಗತಿಗಳನ್ನು ಹುಟ್ಟು ಹಾಕುತ್ತವೆ. ಅದರಿಂದ ಹೊಸ ಸಮಸ್ಯೆಗಳು ಉದ್ಭವಿಸುತ್ತದೆ. ಆ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಹದಿಹರೆಯವು ವಸಂತ ಕಾಲವಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಗಳ ಮೂಟೆಯಾಗುತ್ತದೆ. ಬನ್ನಿ, ಹದಿಹರೆಯದ ಬಗ್ಗೆ ತಿಳಿಯೋಣ:
 
ಬೆಳವಣಿಗೆ
ಹದಿಹರೆಯದ ಪೂರ್ಣ ಬೆಳವಣಿಗೆ ಆದಾಗ ಬಹುಮಟ್ಟಿಗೆ ಮಾನವ ದೇಹದ ಬೆಳವಣಿಗೆಯ ಬಹುತೇಕ ಅದರ ಪೂರ್ಣತೆಯನ್ನು ಪಡೆಯುತ್ತದೆ. ಹೆಣ್ಣುಮಕ್ಕಳು ಸುಮಾರು 17-17ನೆಯ ವಯಸ್ಸಿನಲ್ಲಿ ದೇಹದ ಗರಿಷ್ಠ ಎತ್ತರವನ್ನು ಪಡೆಯುತ್ತಾರೆ. ಗಂಡು ಮಕ್ಕಳು ಸುಮಾರು 18-19 ನೆಯ ವಯಸ್ಸಿನಲ್ಲಿ ದೇಹದ ಗರಿಷ್ಠ ಎತ್ತರವನ್ನು ತಲುಪುತ್ತಾರೆ. ದೇಹದ ತೂಕವು ಆಹಾರದ ಗುಣಮಟ್ಟವನ್ನು ಅವಲಂಬಿಸಿ ವೃದ್ಧಿಯಾಗುತ್ತದೆ. 17ನೆಯ ವಯಸ್ಸಿನ ವೇಳೆಗೆ ಹೆಣ್ಣುಮಕ್ಕಳ ಎಲುಬುಗಳ ಗಾತ್ರ ಮತ್ತು ಗಟ್ಟಿತನದಲ್ಲಿ ಪುರ್ಣಗೊಳ್ಳುತ್ತದೆ. ಮಾಂಸ ಖಂಡಗಳ ಗಟ್ಟಿತನವು ಹೆಣ್ಣು ಮಕ್ಕಳಲ್ಲಿ 12-15ನೆಯ ವಯಸ್ಸಿನಲ್ಲಿ ನಡೆಯುತ್ತದೆ. ಗಂಡುಮಕ್ಕಳಲ್ಲಿ ಇದು 15-16ನೆಯ ವಯಸ್ಸಿನಲ್ಲಿ ನಡೆಯುತ್ತದೆ.
ದೈಹಿಕ ಲಕ್ಷಣಗಳು
ಹದಿಹರೆಯದಲ್ಲಿ ದೇಹದ ಲಕ್ಷಣಗಳು ಬದಲಾಗುತ್ತದೆ. ಹಣೆಯ ಎತ್ತರವಾಗುತ್ತದೆ ಮತ್ತು ವಿಶಾಲವಾಗುತ್ತದೆ. ಮೂಗು ಉದ್ದವಾಗುತ್ತದೆ ಮತ್ತು ಅಗಲವಾಗುತ್ತದೆ. ಬಾಯಿ ಮತ್ತು ದವಡೆಗಳು ಪ್ರಮಾಣಾತ್ಮಕವಾಗಿ ದೊಡ್ಡದಾಗುತ್ತದೆ. ಗಂಡು ಮಕ್ಕಳ ಮುಖವು ಕೋನ ರೂಪವನ್ನು ಹೆಣ್ಣು ಮಕ್ಕಳ ಮುಖವು ಅಂಡಾಕಾರವನ್ನೂ ಹೋಲುವ ರಚನೆಗಳಾಗಿ ಬದಲಾಗುತ್ತದೆ. ದೇಹದಲ್ಲಿ ವಯಸ್ಕರ ಲಕ್ಷಣಗಳು ಕಾಣಿಸುತ್ತವೆ. ಈ ಎಲ್ಲ ಬೆಳವಣಿಗೆಗಳಲ್ಲಿ ಲೈಂಗಿಕ ಬೆಳವಣಿಗೆಯು ಮಹತ್ವದ್ದಾಗಿದೆ.
ಹೆಣ್ಣು ಮಕ್ಕಳಲ್ಲಿ ಲೈಂಗಿಕ ಬೆಳವಣಿಗೆ
ಹೆಣ್ಣು ಮಕ್ಕಳ ಜನನೇಂದ್ರಿಯದ ಭಾಗಗಳು ಬಹುತೇಕ ದೇಹದ ಒಳಗೆ ಸೇರಿಕೊಂಡಿದ್ದು ಅವು ಇರುವ ಹೊಟ್ಟೆಯ ಭಾಗವು ವಿಸ್ತಾರವಾಗುತ್ತದೆ. ಹದಿನಾರು ವರ್ಷ ವಯಸ್ಸಿನ ವೇಳೆಗೆ ಗರ್ಭಕೋಶದ ತೂಕವು ಗಣನೀಯವಾಗಿ ಹೆಚ್ಚಾಗುತ್ತದೆ. ಯೋನಿಯ ತ್ವರಿತ ಬೆಳವಣಿಗೆ ಹೊಂದುತ್ತದೆ. ಅಂಡಾಣುವು ಉತ್ಪಾದನೆಯಾಗುತ್ತದೆ. ಅಂಡಾಣುವು ವೀರ್ಯದಿಂದ ಫಲಿತಗೊಳ್ಳದಿರುವುದರಿಂದ 28 ದಿನಗಳಿಗೊಮ್ಮೆ ಋತುಸ್ರಾವವು ನಡೆದು ಅಂಡಾಣುವು ಹೊರಹೋಗುತ್ತದೆ.
ಈ ವಯಸ್ಸಿನಲ್ಲಿ ಹೆಣ್ಣುಮಕ್ಕಳಲ್ಲಿ ಮೂರು ಹಂತಗಳಲ್ಲಿ ಸ್ತನಗಳ ಬೆಳವಣಿಗೆ ಉಂಟಾಗುತ್ತದೆ. ಅದು ಪುರ್ಣಗೊಳ್ಳುವಾಗ ದುಂಡನೆಯ ರೂಪವನ್ನು ತಾಳುತ್ತದೆ. ಜನನೇಂದ್ರಿಯದ ಸುತ್ತಮುತ್ತ ಮತ್ತು ಕಂಕುಳಿನ ಭಾಗದಲ್ಲಿ ರೋಮಗಳು ಬೆಳೆಯುತ್ತದೆ. ಮಧುರವಾದ ಹೆಣ್ಣು ಧ್ವನಿ ಮೂಡಿ ಬರುತ್ತದೆ.
ಗಂಡುಮಕ್ಕಳಲ್ಲಿ ಲೈಂಗಿಕ ಬೆಳವಣಿಗೆ
ಗಂಡು ಮಕ್ಕಳಲ್ಲಿ ಜನನೇಣದ್ರಿಯದ ಗಾತ್ರವು ದೊಡ್ಡದಾಗುತ್ತದೆ. 14-15ನೆಯ ವಯಸ್ಸಿನಲ್ಲಿ ಜನನನೇಂದ್ರಿಯವು ಪಕ್ವ ಸ್ಥಿತಿಯ ಹತ್ತನೆಯ ಒಂದು ಭಾಗದಷ್ಟು ದಪ್ಪವಾಗಿರುತ್ತದೆ. 16-17ನೆಯ ವಯಸ್ಸಿನಲ್ಲಿ ವೇಗ ಗತಿಯಲ್ಲಿ ಬೆಳೆದು 20-21ನೆಯ ವಯಸ್ಸಿನಲ್ಲಿ ಜನನೇಂದ್ರಿಯವು ಪಕ್ವ ಸ್ಥಿತಿಯನ್ನು ತಲುಪುತ್ತದೆ. ವೃಷಣಗಳ ಶೀಘ್ರ ಬೆಳವಣಿಗೆಯು ಪ್ರಾರಂಭವಾದ ತಕ್ಷಣ ಶಿಶ್ನದ ಬೆಳವಣಿಗೆಯು ಪ್ರಾರಂಭವಾಗಿ ಅದರ ಸುತ್ತಳತೆಯ ಪಕ್ವ ಸ್ಥಿತಿಗಿಂತ ಮೊದಲೇ ಉದ್ದವು ಪಕ್ವ ಸ್ಥಿತಿಯನ್ನು ತಲುಪುತ್ತದೆ. 15 ವರ್ಷ ವಯಸ್ಸಿನಲ್ಲಿ ಜನನೇಂದ್ರಿಯ ಭಾಗದಲ್ಲಿ ರೋಮಗಳು ಚೆನ್ನಾಗಿ ಬೆಳೆದಿರುತ್ತದೆ. ನಂತರ ಕಂಕುಳ ರೋಮಗಳು ಮತ್ತು ಗಡ್ಡಮೀಸೆಗಳು ಬೆಳಯುತ್ತದೆ. ಧ್ವನಿಯಲ್ಲಿ ವ್ಯತ್ಯಾಸವು ಪ್ರಾರಂಭವಾಗಿ 20-21ನೆಯ ವಯಸ್ಸಿನಲ್ಲಿ ಪೂರ್ಣ ಗಂಡು ಧ್ವನಿಯು ಮೂಡಿ ಬರುತ್ತದೆ. ಹದಿಹರೆಯದ ದೈಹಿಕ ಬೆಳವಣಿಗೆಯಲ್ಲಿ ಲೈಂಗಿಕ ಬೆಳವಣಿಗೆಯೇ ಬಹಳ ಮಹತ್ವದ್ದು. ಅದು ಗಂಡು ಮತ್ತು ಹೆಣ್ಣಿನ ಸಾಮಾಜಿಕ ಪಾತ್ರವನ್ನು ನಿರೂಪಿಸುವ ಅಂಶವಾಗಿರುತ್ತದೆ. ಅನೇಕ ರೀತಿಯ ಸಾಮಾಜಿಕ ನಿಯಮಗಳನ್ನು ಲೈಂಗಿಕ ಬೆಳವಣಿಗೆಯ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳೇನು ಎಂಬುದನ್ನು ತಿಳಿಯೋಣ.
ತರುಣಿಯರ ಸಂಕಷ್ಟಗಳು
ಲೈಂಗಿಕ ಬೆಳವಣಿಗೆಯು ಭಿನ್ನ ಲಿಂಗಿಯ ಆಕರ್ಷಣೆಯನ್ನು ಹುಟ್ಟು ಹಾಕುತ್ತದೆ. ಆ ಸ್ಥಿತಿಯಲ್ಲಿ ಸಾಮಾಜಿಕ ನಿಯಮಗಳ ಪಟ್ಟುಪಾಡಿನೊಳಗೆ ನಿಯಂತ್ರಣವನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿರುತ್ತದೆ. ತರುಣಿಯರಿಗೆ ಕಟ್ಟುಪಾಡುಗಳು ಜಾಸ್ತಿ ಇರುವುದಿರಂದ ಅವರಿಗೆ ಸ್ವಾತಂತ್ರ್ಯ ಹರಣದ ಅನುಭವವಾಗುತ್ತದೆ. ಋತಿಸ್ರಾವವು ನೋವು ಮತ್ತು ಭಯವನ್ನು ಉಂಟುಮಾಡುತ್ತದೆ. ಅದರಿಂದ ದೈಹಿಕ ಮತ್ತು ಸಾಮಾಜಿಕ ಬಾಧೆಗಳಿಗೆ ಒಳಗಾಗುತ್ತಾರೆ.
ತರುಣರ ಸಂಕಷ್ಟಗಳು
ಸಮಾಜದಲ್ಲಿ ಗಂಡು ಮಕ್ಕಳ ಲೈಂಗಿಕ ಶಕ್ತಿಯ ಬಗ್ಗೆ ಅತಿಯಾದ ವೈಭವೀಕರಣವಿರುವುದರಿಂದ ಅಂತಹ ವಿಚಾರಗಳಿಗೆ ಒಳಗಾಗಿ ಮಕ್ಕಳು ತೊಂದರೆ ಪಡುತ್ತಾರೆ. ಉದಾಹರಣೆಗೆ ಹದಿಹರೆಯದಲ್ಲಿ ಯಾವುದಾದರೊಂದು ರೂಪದಲ್ಲಿ ವೀರ್ಯಸ್ರಾವ ಆಗುವುದು ಸ್ವಾಭಾವಿಕ. ಆದರೆ ಅದರಿಂದ ವೀರ್ಯನಾಶವಾಗಿ ಲೈಂಗಿಕ ಶಕ್ತಿಯೇ ಹೊರಟು ಹೋಯಿತೆಂದು ಮಕ್ಕಳು ಭಯಗ್ರಸ್ಥರಾಗುತ್ತಾರೆ. ಶಿಶ್ನದ ಗಾತ್ರ ಕಿರಿದಾಗಿದೆಯೆಂದು ಯೋಚಿಸಿ ಭಯಪಡುತ್ತಾರೆ.
 
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here