ಹಕ್ಕಿ ಜ್ವರ ನಿಯಂತ್ರಿಸಲು ಸನ್ನದ್ದ- ಜಿಲ್ಲಾಧಿಕಾರಿ

0
196

 
ಉಡುಪಿ ಪ್ರತಿನಿಧಿ ವರದಿ
ಜಿಲ್ಲೆಯಲ್ಲಿ ಹಕ್ಕಿಜ್ವರ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆ, ವೈದ್ಯಕೀಯ ಕಾಲೇಜು ಮತ್ತು ಪಶು ಸಂಗೋಪನೆ ಇಲಾಖೆ ತಜ್ಞರ ತ್ವರಿತ ಪ್ರತಿಕ್ರಿಯಾ ತಂಡವನ್ನು ರಚಿಸಲಾಗಿದ್ದು ಯಾವುದೇ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತವಾದ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲು ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಸೂಚಿಸಿದ್ದಾರೆ.
 
ಹಕ್ಕಿಜ್ವರ ನಿಯಂತ್ರಣ ಕುರಿತಂತೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಪ್ರತಿ ತಿಂಗಳು ಪಶು ಸಂಗೋಪನೆ ಇಲಾಖೆಯಿಂದ ಕೋಳಿಗಳಲ್ಲಿ ಹಕ್ಕಿಜ್ವರದ ಬಗ್ಗೆ ರಕ್ತ ಪರೀಕ್ಷಿಸಿ ನಿಗಾ ಇಡಲಾಗುತ್ತದೆ. ಇದುವರೆಗೂ ಯಾವುದೇ ಪ್ರಕರಣಗಳು ಕಂಡು ಬಂದಿರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೋಳಿ ಸಾಕಣಿಕಾ ಕೇಂದ್ರದ ಪರಿಶೀಲನೆಯನ್ನು ಮಾಡಿ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಲು ಹಾಗೂ ಕೋಳಿ ಸಾಕಣಿಕಾ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುವವರಿಗೆ ವೈಯಕ್ತಿಕ ರಕ್ಷಣಾ ವಿಧಾನಗಳ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡುವುದರ ಜೊತೆಗೆ ಜ್ವರ ಸಮೀಕ್ಷೆಯನ್ನು ನಡೆಸುವುದು ಮತ್ತು ಯಾವುದೇ ಸಂಶಯಾಸ್ಪದ ಹಕ್ಕಿಗಳ ಮರಣ ಕಂಡುಬಂದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ವೈದ್ಯಾಧಿಕಾರಿ ಮತ್ತು ಪಶು ಸಂಗೋಪನಾ ಇಲಾಖೆಯ ವೈದ್ಯರುಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
 
 
ಯಾವುದೇ ಸಂಶಯಾಸ್ಪದ ಪ್ರಕರಣಗಳು ವರದಿಯಾದಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡುವ ಸಲುವಾಗಿ ಪ್ರತ್ಯೇಕ ಹಾಸಿಗೆಗಳನ್ನು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಕೆ.ಎಂ.ಸಿ ಮಣಿಪಾಲ ಇಲ್ಲಿ ಕಾದಿರಿಸಲಾಗಿದ್ದು, ಹಕ್ಕಿ ಜ್ವರ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸೂಕ್ತ ಪ್ರಮಾಣದಲ್ಲಿ ಔಷಧಗಳನ್ನು ದಾಸ್ತಾನು ಇಡಲು ಹಾಗೂ ಸುರಕ್ಷತಾ ಕ್ರಮವನ್ನು ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ ಹಾಗೂ ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here