ವಾರ್ತೆ

ಸ್ವಾಭಿಮಾನಿ ಹೋರಾಟ ಸಮಿತಿ ಭೇಟಿ

ಉಡುಪಿ ಪ್ರತಿನಿಧಿ ವರದಿ
ತಾಲೂಕಿನ ಕುಂದಾಪುರ ವಿಧಾನ ಸಭಾ ವ್ಯಾಪ್ತಿಗೊಳಪಟ್ಟ ಶಿರಿಯಾರ ಗ್ರಾಮ ಪಂಚಾಯತಿನ ಅಧ್ಯಕ್ಷರಾಗಿರುವ ದಲಿತ ಮಹಿಳೆ ಶ್ರೀಮತಿ ಜ್ಯೋತಿ ಅವರು ದಲಿತ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ, ಅವರನ್ನು ಹೀಯಾಳಿಸುತ್ತಾ, ಪಂಚಾಯತಿನ ಆಡಳಿತ ನಡೆಸಲು ಅಸಹಕಾರ ನೀಡುತ್ತಿರುವ ಮತ್ತು ಗ್ರಾಮ ಪಂಚಾಯತಿನ ಸಭೆಗಳಿಗೆ ಹಾಜರಾಗದೇ, ಕೋರಂ ಇಲ್ಲದಂತೆ ಮಾಡುವುದರ ಮೂಲಕ ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ದಲಿತ ಮಹಿಳೆಯ ಮೇಲೆ ದೌರ್ಜನ್ಯ ನಡೆಸುತ್ತಿರುವ ಪ್ರಕರಣದ ಹಿನ್ನಲೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನಿಯೋಗವು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಜ್ಯೋತಿಯವರ ಮನೆಗೆ ಭೇಟಿ ನೀಡಿ ಇಡೀ ಪ್ರಕರಣದ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಪಡೆದುಕೊಂಡಿತು.
 
 
 
ನಿಯೋಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಎ.ಸುಂದರ ಮಾಸ್ತರ್, ಶ್ಯಾಮರಾಜ ಬಿರ್ತಿ, ಕೆ.ಫಣಿರಾಜ್, ಸುಂದರ ಕಪ್ಪೆಟ್ಟು, ಎಸ್.ಎಸ್.ಪ್ರಸಾದ್, ಪರಮೇಶ್ವರ ಉಪ್ಪೂರು, ಡಿ.ಎಸ್.ಬೆಂಗ್ರೆ, ವಿಠಲ ತೊಟ್ಟಂ, ವರದರಾಜ್ ಬಿರ್ತಿ, ಶ್ಯಾಮ್ ಸುಂದರ್ ತೆಕ್ಕಟ್ಟೆ, ವರದರಾಜ್ ಬಿರ್ತಿ, ಪ್ರಶಾಂತ್, ಪುರಂದರ, ಸಂಜೀವ ತೆಕ್ಕಟ್ಟೆ, ಅನಂತ ಮಚ್ಚಟ್ಟು, ಆನಂದ ಕಾರಂದೂರು ಮತ್ತಿತರರು ಉಪಸ್ಥಿತರಿದ್ದರು.
 
 
 
ದಲಿತ ಮಹಿಳೆ ಅಧ್ಯಕ್ಷೆಯಾಗಿರುವುದನ್ನು ಸಹಿಸದೇ, ಈ ರೀತಿಯಲ್ಲಿ ದೌರ್ಜನ್ಯ ನಡೆಸುತ್ತಿರುವ, ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಲು ಷಡ್ಯಂತ್ರ ರೂಪಿಸುತ್ತಿರುವುದರ ವಿರುದ್ಧ ಸ್ಥಳೀಯರನ್ನೂ ಒಳಗೊಂಡು ಎಲ್ಲಾ ಸಂಘಟನೆಗಳ ಸಹಕಾರದೊಂದಿಗೆ ಇದರ ವಿರುದ್ಧ ಹೋರಾಟ ಸಂಘಟಿಸಲು ಚಳುವಳಿ ರೂಪಿಸಲು ನಿರ್ಧರಿಸಲಾಯಿತು. ದಲಿತ ಸಮುದಾಯಕ್ಕೆ ಸೇರಿದ ಮಹಿಳಾ ಅಧ್ಯಕ್ಷರು ಕರೆಯುವ ಸಭೆಗಳಿಗೆ ನಿರಂತರ ಗೈರು ಹಾಜರಾಗುವ ಸದಸ್ಯರುಗಳ ಸದಸ್ಯತ್ವವನ್ನು ರದ್ದುಪಡಿಸುವುದು, ಅಂತಹ ಮನಸ್ಥಿತಿಯವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವುದು. ಜಿಲ್ಲಾ ಪಂಚಾಯತಿನ ಸಿಇಓ ಅವರನ್ನು ಭೇಟಿ ಮಾಡಿ ಇಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿ ಮಾತುಕತೆ ನಡೆಸಿ, ಪರಿಹಾರೋಪಾಯಕ್ಕೆ ಕ್ರಮ ಕೈಗೊಳ್ಳುವುದು. ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಈ ವಿದ್ಯಮಾನದಲ್ಲಿ ದಲಿತ ಮಹಿಳೆ ಎನ್ನುವುದೇ ಮುಖ್ಯ ಕಾರಣವೆಂದು ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತಿರುವುದರಿಂದ ಸಚಿವರು ಮಧ್ಯ ಪ್ರವೇಶಿಸಿ ಇಲ್ಲಿನ ದೌರ್ಜನ್ಯವನ್ನು ನಿಲ್ಲಿಸಲು ಒತ್ತಾಯಿಸುವುದು. ಈ ಗ್ರಾಮ ಪಂಚಾಯತಿನಲ್ಲಿ ನಡೆದ ಕಾಮಗಾರಿಗಳು, ಶೇ.25 ರ ನಿಧಿಯ ವಿನಿಯೋಗ ಮತ್ತಿತರ ಆಡಳಿತ ಸಂಬಂಧಿ ದಾಖಲೆಗಳನ್ನು ಮಾಹಿತಿ ಹಕ್ಕಿನಲ್ಲಿ ಪಡೆದು ದಲಿತ ವರ್ಗಕ್ಕೆ ಮಾಡುತ್ತಾ ಬಂದಿರುವ ವಂಚನೆ ಮತ್ತು ದೌರ್ಜನ್ಯಗಳನ್ನು ಬೆಳಕಿಗೆ ತಂದು ಆ ಬಗ್ಗೆ ಹೋರಾಟ ಸಂಘಟಿಸುವುದು. ಸ್ಥಳೀಯ ದಲಿತ ಮತ್ತು ಮಾನವ ಪರ ವ್ಯಕ್ತಿಗಳನ್ನು ಸಂಘಟಿಸಿ ಇಂತಹ ದೌರ್ಜನ್ಯಗಳ ವಿರುದ್ಧ ಅವರು ಧ್ವನಿ ಎತ್ತುವಂತೆ ಮಾಡುವುದು ಮತ್ತು ಮುಂದಿನ ಹೋರಾಟದಲ್ಲಿ ಜೊತೆಗೂಡುವಂತೆ ಮಾಡುವುದಾಗಿ ನಿರ್ಧರಿಸಲಾಯಿತು. ಈ ಭೇಟಿಯ ಸಂಯೋಜನೆಯನ್ನು ಯುವ ದಲಿತ ಮುಖಂಡ ಅನಂತ ಮಚ್ಚಟ್ಟು ಅವರು ಸಂಯೋಜಿಸಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here