ಸ್ವಾತಂತ್ರ್ಯೋತ್ಸವಕ್ಕೆ ಸಕಲ ಸಿದ್ಧತೆ

0
414

ಬೆಂಗಳೂರು ಪ್ರತಿನಿಧಿ ವರದಿ
70ನೇ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪರೇಡ್ ತಾಲೀಮು ನಡೆಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಡಿಸಿ ವಿ ಶಂಕರ್ ಸೇರಿದಂತೆ ಅನೇಕ ಅಧಿಕಾರಿಗಳು ತಾಲೀಮಿನ ವೇಳೆ ಉಪಸ್ಥಿತರಿದ್ದರು. ಪಥಸಂಚಲನ ತಾಲೀಮಿನಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು, ವಿವಿಧ ಪೊಲೀಸ್ ತುಕಡಿಗಳು, ಎನ್ ಸಿಸಿ ಕೆಡೆಟ್ ಗಳು, ಬಿಎಸ್ಎಫ್ ಯೋಧರು, ಶ್ವಾನದಳ ಸೇರಿ ಹಲವರು ಭಾಗಿಯಾಗಿದ್ದಾರೆ.
 
 
ಮೈದಾನದ ಸುತ್ತಮುತ್ತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 12ಡಿಸಿಪಿ, 22ಎಸಿಪಿಗಳು, 55 ಪೊಲೀಸ್ ಇನ್ಸ್ ಪೆಕ್ಟರ್ಸ್, 105 ಪಿಎಸ್ ಐ, 79 ಎಎಸ್ ಐ, 168 ಮುಖ್ಯಪೇದೆಗಳು, 416 ಪೇದೆ, 70 ಮಹಿಳಾ ಪೇದೆ, 151 ಮಫ್ತಿ ಪೊಲೀಸರು, 106 ಗುಪ್ತದಳ ಸಿಬ್ಬಂದಿ, 800 ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
 
 
ದಿನದ 24 ಗಂಟೆಯೂ ಪೊಲೀಸ್ ಸಿಬ್ಬಂದಿಗಳು ಬಿಗಿ ಪಹರೆ ಕಾಯಲಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಗರುಡಾ ಕಮಾಂಡೋ ಪಡೆ ಭದ್ರತೆ ನೋಡಿಕೊಳ್ಳಲಿದೆ. ಕಳೆದ 15 ದಿನಗಳಿಂದಲೂ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆ.15ರಂದು 40ಕೆಎಸ್ ಆರ್ ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಇದರೊಂದಿಗೆ 8 ಕ್ಷಿಪ್ರ ಕಾರ್ಯಾಚರಣೆ ಪಡೆಗಳ ನಿಯೋಜನೆ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ ಸಿಸಿಟಿವಿ ಕಣ್ಗಾವಲು ಮಾಡಲಾಗಿದೆ. ಪೊಲೀಸರು 40ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಿದ್ದಾರೆ.
 
 
ಮುನ್ನೆಚ್ಚರಿಕೆಯಿಂದ ಡ್ರೋನ್, ಬಲೂನು ಹಾರಾಟವನ್ನು ನಿಷೇಧಿಸಲಾಗಿದೆ. ದೂರ ನಿಯಂತ್ರತ ವಿಮಾನಗಳ ಹಾರಾಟವನ್ನು ಕೂಡ ನಿಷೇಧಿಸಲಾಗಿದೆ. ಮೈದಾನದ ತಪಾಸಣೆಗೆ 2 ಬಾಂಬ್ ನಿಷ್ಕ್ರೀಯ ದಳ ಸಿಬ್ಬಂದಿ, 6 ಎಎಸ್ ಸಿ ಚೆಕ್, 5 ಅಂಡರ್ ವೆಹಿಕಲ್ ಸರ್ಚಿಂಗ್ ತಂಡ, ಸ್ಕೈ ಸೆಂಟ್ರಿಗಳು, 2 ಎಕ್ಸ್ ಪ್ಲೋಸಿವ್ ವೇಪರ್ ಡಿಟೆಕ್ಟರ್ಸ್ ಸೇರಿದಂತೆ ಇನ್ನೂ ಹಲವು ರೀತಿಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
 
 
ಮೈದಾನದ ಒಳಗೆ ಹಲವು ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಸಿಗರೇಟ್, ಬೆಂಕಿಪಟ್ಟಣ, ಪಟಾಕಿ, ಸ್ಫೋಟಕ, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಚಾಕು, ಕ್ಯಾಮರಾ, ವಿಡಿಯೋ, ಬೇರೆ ರೀತಿಯ ಬಾವುಟಗಳು, ಕಪ್ಪು ಬಣ್ಣದ ಕರವಸ್ತ್ರಗಳು, ತಿಂಡಿತಿನಿಸು, ನೀರಿನ ಬಾಟಲ್ ಗಳು, ಮದ್ಯದ ಬಾಟಲ್, ಬಣ್ಣದ ದ್ರಾವಣ, ಬ್ಯಾಕ್ ಪ್ಯಾಕ್ ಚೀಲ, ಹೆಲ್ಮೆಟ್ ನಿಷೇಧಿಸಲಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

LEAVE A REPLY

Please enter your comment!
Please enter your name here