ಸ್ವರ ಮಂಟಮೆ

0
487

ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ಆಕಾಶವಾಣಿ ಕೇಂದ್ರವು ತುಳು ವಿಭಾಗದ ಕಾರ್ಯಕ್ರಮಗಳಿಗೆ ಹೊಸ ಸ್ವರೂಪ ನೀಡಿ ಪ್ರಸಾರ ಮಾಡಲು ಉದ್ದೇಶಿಸಲಾಗಿದ್ದು ಡಿ.3ರಿಂದ ಪ್ರತೀ ತಿಂಗಳ ಮೊದಲ ಶನಿವಾರ 10.30ರಿಂದ 11.30ರವರೆಗೆ ಪ್ರಾಯೋಜಕತ್ವದಲ್ಲಿ ತುಳು ಭಾಷೆಯಲ್ಲಿ ಪ್ರಕಟಗೊಳ್ಳುವ ಪುಸ್ತಕ ಹಾಗೂ ಧ್ವನಿಸುರುಳಿ ಬಿಡುಗಡೆಗೆ ‘ಸ್ವರ ಮಂಟಮೆ’ ಎಂಬ ವಿನೂತನ ವೇದಿಕೆ ಕಲ್ಪಿಸಿದೆ.
 
 
 
 
ತುಳು ಭಾಷೆ, ಸಂಸ್ಕ್ರತಿಯ ಉತ್ತೇಜನಕ್ಕಾಗಿ ಓದುಗರ ಸಂಖ್ಯೆಯ ಹೆಚ್ಚಳಕ್ಕಾಗಿ ಮತ್ತು ತುಳು ಭಾಷೆಯ ಅಂತಸ್ಸತ್ವದ ಕೃತಿಗಳ ಸಮಗ್ರ ಪರಿಚಯಕ್ಕಾಗಿ ‘ಸ್ವರ ಮಂಟಮೆ’ ಯಲ್ಲಿ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದಲ್ಲಿ ಪುಸ್ತಕ ಅಥವಾ ಧ್ವನಿ ಸುರುಳಿಯ ಲೇಖಕರು, ಪ್ರಕಾಶಕರು ಕೃತಿ ಉದ್ಘಾಟಕರು, ಕೃತಿ ಕುರಿತು ಮಾತನಾಡುವವರು, ಉಪಸ್ಥಿತರಿದ್ದು ಕೇಳುಗರ ಜೊತೆ ನೇರ ಸಂವಾದಕ್ಕಾಗಿ ಫೋನ್ ಇನ್ ವ್ಯವಸ್ಥೆ ಕಲ್ಪಿಸಲಾಗುವುದು. ಬಾನುಲಿಯ ಈ ವೇದಿಕೆ ‘ಸ್ವರ ಮಂಟಮೆ’ ಯು ದುಂದುವೆಚ್ಚ ತಡೆದು ಹಾರ ತುರಾಯಿಗಳಿಲ್ಲದೆ ಸರಳವಾಗಿ ನಡೆಸುವುದು ಮತ್ತು ಹೆಚ್ಚು ಜನರನ್ನು ತಲುಪುವ ಆಕಾಶವಾಣಿ ಮಾದ್ಯಮದ ಮೂಲಕ ಜನಮನಕ್ಕೆ ಮುಟ್ಟಿಸುವ ಪ್ರಯತ್ನವಾಗಿದೆ.
 
 
ಡಿ.3ರಂದು ಬೆಳಿಗ್ಗೆ 10.30ರಿಂದ 11.30ರವರೆಗೆ ತುಳು ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಅವರ ಕಲ್ಲಕಲೆಂಬಿ ತುಳು ಚುಟುಕುಗಳ ಸಂಕಲನದ ಬಿಡುಗಡೆ ಕಾರ್ಯಕ್ರಮವಿದೆ. ಸಾಹಿತಿ ಡಾ.ವಾಮನ ನಂದಾವರ ಕೃತಿ ಬಿಡುಗಡೆಗೊಳಿಸಲಿದ್ದು ಮಂಗಳೂರು ವಿ.ವಿ.ಯ ಬ್ರಹ್ಮ ಶ್ರೀ ನಾರಾಯಣಗುರು ಅದ್ಯಯನ ಪೀಠದ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ವಿಮರ್ಶೆ ಮಾಡಲಿದ್ದಾರೆ. ಕೃತಿ ರಚನೆಕಾರ ಮಹೇಂದ್ರನಾಥ ಸಾಲೆತ್ತೂರು ಹಾಜರಿದ್ದು ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ. ಕೇಳುಗರು ಸಂಪರ್ಕಿಸಲು 2211999(ಎಸ್ ಟಿ ಡಿ 0824) ಹಾಗೂ ಮೊಬೈಲ್ ಸಂಖ್ಯೆ 8277328000 ದೂರವಾಣಿಯನ್ನು ಸಂಪರ್ಕಿಸಬಹುದು. ಸ್ವರ ಮಂಟಮೆ ಯಲ್ಲಿ ಕೃತಿ ಸಿಡಿ ಬಿಡುಗಡೆಗಾಗಿ ನೀವು 9448127672 ದೂರವಾಣಿಗೆ ಸಂಪರ್ಕಿಸಿ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು.
 
 
ತುಳು ವಿಭಾಗದಲ್ಲಿ ಗಾಂಪಣ್ಣನ ತಿರ್ಗಾಟೊ ಹಾಸ್ಯಭರಿತ ಕೌಟುಂಬಿಕ ಚರ್ಚೆ ಮತ್ತು ಪ್ರತೀ ತಿಂಗಳು ತುಳುಭಾಷೆ, ಸಂಸ್ಕೃತಿ ಕ್ಷೇತ್ರದಲ್ಲಿನ ಸಾಧಕರು, ಸಿನಿಮಾ, ರಂಗಭೂಮಿ ಕ್ಷೇತ್ರದ ಮಹನೀಯರು, ವಿದ್ವಾಂಸರು ಭಾಗವಹಿಸುವ ಚಾವಡಿ ಮದಿಪು ಎಂಬ ವಿನೂತನ ಚರ್ಚೆ, ಸಂವಾದ ನೇರಫೋನ್ ಇನ್ ಕಾರ್ಯಕ್ರಮ ಮೂಡಿಬರಲಿದೆ.
 
 
ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಈ ವಿಭಾಗದ ನಿರ್ವಹಣೆ ಮಾಡಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ್ ಪೆರ್ಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here