ಸ್ನೇಹವೇ ನಿನಗೊಂದು ಸಲಾಂ..

0
707

 
ಸ್ನೇಹ, ಹೌದು ಪ್ರಪಂಚದ ಎಲ್ಲಾ ಜನರು ಬಾಳುತ್ತಿರುವುದು ಇದೇ ಸ್ನೇಹ ಎಂಬ ಬಂಧನದಿಂದ . ಹಾಗೂ ತಮ್ಮ ಜೀವನ ಮುಂದುವರಿಯಬೇಕಾದಲ್ಲಿ ಸ್ನೇಹ, ಗೆಳೆತನವು ಬಹುಮುಖ್ಯವಾಗಿತ್ತದೆ ಯಾಕೆಂದರೆ ಯಾರೂ ಕೂಡಾ ಒಂಟಿ ಜೀವನ ನಡೆಸಲಾರ. ಆದ್ದರಿಂದ ಇಡಿ ಮನುಕುಲವನ್ನು ಸ್ನೇಹ ಎಂಬ ಸಂಕೋಲೆಯು ಬಂಧಿಸುತ್ತದೆ.
 
 
 
ಎಷ್ಟೋ ಜನ ಸ್ನೇಹಿತರು ಅವರ ಹೆಸರುಗಳು ಅಜರಾಮರವಾಗಿ ಉಳಿದಿದೆ.ಅನೇಕ ಸ್ನೇಹಿ ದ್ವಯರು ಚಿತ್ರರಂಗದಲ್ಲಾಗಲಿ, ಸಾಹಿತ್ಯ ಕ್ಷೇತ್ರ,ಕ್ರೀಡಾ ಕ್ಷೇತ್ರ ಗಳಲ್ಲಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಿತ್ರತ್ವದಲ್ಲಿ ಒಂದಾಗಿ ದುಡಿದು ಸಾಧನೆ ಮಾಡಿದ್ದಾರೆ. ಸ್ನೇಹ ಇಬ್ಬರಿಗೆ ಸಂಬಂಧಿಸಿದ ವಿಷಯವಾಗಿರದೆ ಇಡೀ ಮಾನವ ಕುಲವನ್ನು ಸ್ನೇಹವೆಂಬ ಅಸ್ತ್ರದಿಂದ ಬಂಧಿಸುವ ವಿಷಯವಾಗಿದೆ. ಹಾಗೂ ಇದೇ ಒಂದು ಮಾನದಂಡದಿಂದ ಜನ ಸ್ನೇಹಮಯ ಜೀವನವನ್ನು ನಡೆಸುತತ್ತಿದ್ದಾರೆ. ಈ ಸ್ನೇಹದ, ಗೆಳೆತನದ ಪ್ರಾಮುಖ್ಯತೆ ಪಡೆದುಕೊಳ್ಳುವುದೇ ಕಾಲೇಜು ಜೀವನದಿಂದ ಯಾಕೆಂದರೆ, ಶಾಲಾ ದಿನಗಳಲ್ಲಿ ಇದು ಕೇವಲ ಶಾಲೆಯ ನಾಲ್ಕು ಕೋಣೆಯ ಮಧ್ಯೆ, ಹೆಚ್ಚೆಂದರೆ ಆಟದ ಮೈದಾನದ ವರೆಗೆ ಮಾತ್ರ. ಆದರೆ ಕಾಲೇಜು ಜೀವನದಲ್ಲಿ ಯುವಕ ಯುವತಿಯರಲ್ಲಾಗುವ ಫ್ರೆಂಡ್ಸ್ ಶಿಪ್ ನೈಜ ಅರ್ಥ ಕಟ್ಟಿಕೊಡುತ್ತದೆ.
 
 
 
 
ಮೊದಲಿಗೆ ಶಾಲಾ ದಿನಗಳನ್ನು ದಾಟಿ ಮೊದಲ ಬಾರಿಗೆ ಪಿ.ಯು.ಸಿ ವಿದ್ಯಾಭ್ಯಾಸ ಪಡೆಯಲು ಕಾಲೇಜೆಂಬ ಬಹುಮಹಡಿಯ ಕಟ್ಟಡ ಪ್ರವೇಶ ಮಾಡಿದ್ದು, ನೋಡಲು ಎಲ್ಲವೂ ಹೊಸದು, ಸರಕಾರಿ ಶಾಲೆಯಲ್ಲಿ ಇದ್ದ ನಮಗೆ ಬರೀ ಒಂದು ಕಟ್ಟಡದಲ್ಲಿದ್ದು, ಹೆಡ್ ಮಾಸ್ತರರ ಬೈಗುಳ, ಹೆದರಿಕೆಯಿಂದ ಒಮ್ಮೆ ತಪ್ಪಿಸಿ ಯಾವಾಗ ಕಾಲೇಜು ಸೇರಿಕೊಳ್ಳುತ್ತೇನೋ ಎಂಬಂತೆ 10ನೇ ಕ್ಲಾಸು ಮುಗಿಸಿ ಕಾಲೇಜು ಜೀವನಕ್ಕೆ ಹೋಗುತ್ತಾರೆ. ಮೊದಲ ದಿನದಂದು ಹೆದರಿ ಹೆದರಿ ತನ್ನ ಹಿಂದಿನ ದಿನಗಳನ್ನು ನೆನೆದು, ಕಾಲೇಜು ಹೇಗಿರುತ್ತದೋ ಎಂದು ಕಾರಿಡಾರ್ ನಲ್ಲಿ ತನ್ನಂತೆಯೇ ತುಂಬಿ ತುಳುಕಿಕೊಂಡ ಬಣ್ಣ ಬಣ್ಣದ ಬಟ್ಟೆ ಯನ್ನು ಧರಿಸಿ ಮೊದಲ ಬಾರಿ ಕಾಲೇಜು ಪ್ರವೇಶ ಮಾಡಲು ಬಂದು ನೋಟೀಸು ಬೋರ್ಡನ್ನು ನೋಡಿ ನನ್ನ ಕ್ಲಾಸು ಎಲ್ಲಿ ಎಂದು ಹುಡುಕಿ ಯಾರದ್ದೂ ಪರಿಚಯವಿಲ್ಲದೆ ಸ್ಟ್ರೇಂಜರ್ ತರಹ ಮೆಲ್ಲ ತುಸು ನಾಚಿಕೆಯ ದನಿಯಲ್ಲಿ ನನ್ನ ಕ್ಲಾಸು ಯಾವುದು ಎಂದು ಅಟೆಂಡರ್ ಹತ್ರ ಕೇಳಿ ,ಕ್ಲಾಸಲ್ಲಿ ಬಂದು ಕುಳಿತು, ಯಾವುದೋ ಏಲಿಯನ್ ನಂತೆ ಕುಳಿತು ಪ್ರತೀ ಜನರ ಮುಖ ನೋಡುತ್ತಿದ್ದಂತೇ ಮತ್ತೆ ಹಿಂದಿನ ಸ್ನೇಹಿತರ ನೆನಪು!!, ಇವರಲ್ಲಿ ಮಾತನಾಡಲು ಸಂಕೋಚ ಒಂದೆಡೆಯಾದರೆ ಭಯ ಇನ್ನೊಂದೆಡೆ. ಅಂತೂ ಇಂತೂ ಕೂತುಕೊಂಡು ಇರುವಾಗ ಉಪನ್ಯಾಸಕರ ಪ್ರವೇಶ.ಇನ್ನು ಇವರು ಹೇಗೋ ನೋಡಿದಾಗ ಇಂಗ್ಲೀಷಲ್ಲೇ ನಾಲ್ಕು ಮಾತನಾಡಿದ ಆ ಉಪನ್ಯಾಸಕನನ್ನು ಕಂಡು ದಂಗಾಗಿ ,ಇಲ್ಲಿವರೆಗೆ ಇಂಗ್ಲಿಷ್ ನ ಎ.ಬಿ.ಸಿ.ಡಿ ಗೊತ್ತಿಲ್ಲದ ನಮಗೆ ಇನ್ನು ಭಾರೀ ಕಷ್ಟ ಇದೆ ಎಂದು ಯಾವಾಗ ಬೆಲ್ ಹೊಡಿಯುತ್ತೋ, ಯಾವಾಗ ಮನೇಗ್ ಹೋಗಿ ಸೇರ್ತೀನೋ ಅನ್ನೋ ಅನ್ನೋ ತವಕ.
 
 
 
ಮಾರನೇ ದಿನ ಪುನಃ ಅದೇ ಜಾಗ, ಇಂದು ಸ್ವಲ್ಪ ವಾತಾವರಣ ಚೇಂಜು. ಒಂದು ಸ್ವಲ್ಪ ಮಾತು ಪ್ರಾರಂಭ ಆದರೂ ಮೆಲ್ಲನೇ. ದಿನ ಕಳೆದಂತೆ ನಿಧಾನವಾಗಿ ಪರಿಚಯವಾಗಿ, ಪರಿಚಯ ಮಾತಿಗೆ ತಿರುಗಿ ನಂತರ ಆ ಮಾತೇ ಸ್ನೇಹಕ್ಕೆ ತಿರುಗಿಕೊಂಡು ಕಾಲೇಜು ಜೀವನದಲ್ಲಿ ಪ್ರೆಂಡ್ಸ್ ಅನ್ನೋ ಗ್ಯಾಂಗ್ ಸ್ಥಾಪನೆಯಾಗುತ್ತೆ.ಈವಾಗ ಹೇಗೂ ಹಿಂದಿನ ಭಯ ಇಲ್ಲ. ಎಲ್ಲರೊಂದಿಗೂ ಮಾತಾಡಿ ಆಯ್ತು , ಇವಾಗ ಆ ಗ್ರೂಪ್ ಗೆ ನಾವೇ ಬಾಸ್. ಒಂದಿಷ್ಟು ಸ್ನೇಹಿತರ ಗುಂಪು ಕಟ್ಟಿಕೊಂಡು ಹರಟೆ ಹೊಡೆಯಲು ಸ್ಟಾರ್ಟ್. ಮೊಬೈಲ್ ನಂಬರು ಎಕ್ಚೇಂಜು ಆಯ್ತು. ಕಾಲೇಜೆಂದರೆ ಪ್ರೀತಿ, ಯಾವಾಗ ಬೆಳಗಾಗಿಲ್ಲ ಎನ್ನುವ ಕಾತುರ. ನಿಧಾನವಾಗಿ ಗುಂಪಿಗೆ 2 ,3 ಹುಡುಗಿಯರ ಸೇರ್ಪಡೆ. ಪಠ್ಯದ ಆಸಕ್ತಿಯಲ್ಲಿ ಒಂದೆಡೆಯಾದರೆ, ಗೆಳೆಯರೊಂದಿಗೆ ಮಾತಾಡಬೇಕು , ಹುಡ್ಗೀರ ಟಿಫನ್ ಬಾಕ್ಸ್ ತೆಗೆದು ತಿಂಡಿ ತಿನ್ಬೇಕು ಅನ್ನೋದೆ ಯೋಚನೆ.
 
 
 
ಒಂದು ಕಡೆ ಪಠ್ಯದ ಬಗ್ಗೆ ಯೋಚನೆ ,ಇನ್ನೊಂದೆಡೆ ಯಾವಾಗ ಗೆಳೆಯರೊಂದಿಗೆ ಮಾತನಾಡುತ್ತೇವೋ ಅನ್ನೋ ತವಕ. ಮೊಬೈಲ್ ಅದರಲ್ಲಿ ವಾಟ್ಸಾಪ್ ಮೆಸೇಜ್ ಗಳು ಇದ್ದೇ ಇದೆ ಬಿಡಿ,ಅದು ಬರೀ ಮನೆಗೆ ಬಂದ ನಂತರ ಗ್ರೂಪ್ ಚಾಟ್ಗಾಗಿ. ಆದರೂ ಮರುದಿನ ಬೆಳಿಗ್ಗೆ ಕಾಲೇಜನ್ನು ತಲುಪಿ ಸ್ನೇಹಿತರೊಂದಿಗೆ ಮಾತಾಡುವುದಿದ್ಯಲ್ಲಾ ಅದ್ರ ಮಜಾನೇ ಬೇರೆ.ಕ್ಲಾಸ್ ಬಿಟ್ಟ ನಂತರ ಕ್ಯಾಫಿಟೇರಿಯಾ ನಲ್ಲಿ ಪಪ್ಸ್ ಜ್ಯೂಸ್ ಕುಡಿಯುತ್ತಾ, ಸ್ನೇಹಿತರ ಬರ್ತಡೇ ಆಚರಣೆ ಮಾಡುತ್ತಾ ಮಾತು, ಖುಷಿ. ಹೀಗೆ ವೈಟರ್ ಕಳಿಸುವವರೆಗೂ ಆ ಟೇಬಲ್ ಅನ್ನು ಗುತ್ತಿಗೆ ಪಡೆದುಕೊಂಡವರಂತೆ ಯಾವತ್ತೂ ಅದೇ ಜಾಗದಲ್ಲಿ ಮಾತು ಮುಗಿಸಿ ಮನೆಯತ್ತ ಅವರ ಬೈಕ್ ನಲ್ಲಿ ಸವಾರಿ. ಅಲ್ಲಿಗೇ ಉಪನ್ಯಾಸಕರು ಬಂದ್ರೆ ಮಾತ್ರ ತುಸು ಮಾತಿಗೆ ಬ್ರೇಕು. ಹೋಗುತ್ತಲೇ ಮತ್ತೆ ಶುರು. ಒಂಥರಾ ನಗು, ಸಂತೋಷ, ಸ್ವಲ್ಪ ಜೋಕು.ಆ ಪಡ್ಡೆ ಸ್ನೇಹಿತರ ಗ್ಯಾಂಗಲ್ಲಿ ಒಂದು 6-7 ಮಂದಿ. ಒಂದಿಷ್ಟು ಹುಡ್ಗೀರು. ಇದೇ ಜಗತ್ತು , ಕ್ಲಾಸಿಗೆ ಬಂಕ್ ಹೊಡೆದು ಫಿಲ್ಮ್ , ಒಮ್ಮೊಮ್ಮೆ ಪಿಕ್ನಿಕ್ ಒಂದೊಂದು ಅಪರೂಪಕ್ಕೆ ಪಾರ್ಟಿ.
 
 
 
ಇದು ರೂಟೀನ್ ನ ಹಾಗೇ. ಆದರೆ ಎಕ್ಸಾಮ್ ಬಂದಾಗಂತೂ ಈ ಗ್ರೂಪ್ ಸೈಲೆಂಟು, ಫುಲ್ ಸೀರಿಯಸ್ಸು ಓದಲ್ಲಿ. ಕ್ಲಾಸಿಗೆ ಬಂಕ್ ಹಾಕಿ ಅಲೆಯುವ ಈ ಗುಂಪು ನೋಟ್ ಬುಕ್ಕು, ಕ್ಸೆರಾಕ್ಸ್ ಕಾಪಿ ಮೆಟೀರಿಯಲ್ ಮಾಡಿಕೊಳ್ಳುವುದರಲ್ಲಿ ಬ್ಯುಸಿ. ಕೊಡುತ್ತಿದ್ದ ಅಸೈಂನ್ ಮೆಂಟ್ ಅನ್ನು ಗೆಳತಿಯರೊಂದಿಗೆ ಬರೆಸಿ ಸಬ್ಮಿಶನ್ನು. ಅವರು ಬರೆದ ನೋಟ್ ಬುಕ್ ಜೆರಾಕ್ಸ್ ಮಾಡುದ್ರಲ್ಲಿ ಹುಡುಗರು ಬ್ಯುಸಿ. ಯಾವತ್ತೂ ಫಿಜ್ಜಾ ,ಬರ್ಗರ್ ,ಐಸ್ ಕ್ರೀಮ್ ಗೆ ಸುರಿಯುತ್ತಿದ್ದ ಹಣ ಇವಾಗ ಜೆರಾಕ್ಸು ಅಂಗಡಿಗೆ. ನಂತರ ಗ್ರೂಪ್ ಡಿಸ್ಕಶನ್ನು ಅಂತ ಒಬ್ಬನ ಮನೆಯಲ್ಲಿ ಎಕ್ಸಾಮ್ ಮುಗಿಯೋವರೆಗೂ ಟೆಂಟು. ಯಾವಾಗ ಎಕ್ಸಾಮ್ ಆಯ್ತು ನೋಡಿ ಆವಾಗ ಶುರು ಆಗುತ್ತೆ ಮತ್ತದೇ ಹಳೇ ಖಯಾಲಿ!!. ಇಲ್ಲಿ ಸ್ನೇಹ ಇದೆ, ಪ್ರೀತಿ ಇದೆ,ಜೋಕ್ಸ್ ಗಳಿದೆ, ಅದಕ್ಕಿಂತ ಹೆಚ್ಚಾಗಿ ಕೇರ್ ಇದೆ , ಚುಡಾಯಿಸಿ ಖುಷಿ ಪಡುವುದಿದೆ. ಆದರೆ ಇಲ್ಲಿ ಯಾರೂ ಚುಡಾಯಿಸಿದಕ್ಕೆ ಕೇಸು ಕೊಡೋಲ್ಲ !! ಜಗಳವಾಗಲ್ಲ, ಬದಲಾಗಿ ಸ್ನೇಹ ಸಂಬಂಧ ಗಟ್ಟಿಗೊಳಿಸುತ್ತದೆ. ಪರಸ್ಪರ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದೇ ಸ್ನೇಹ . ಬಿಂದಾಸ್ ಹುಡುಗ್ರು ಅಷ್ಟೇ ಕ್ಲೋಸ್ ಆಗಿರುವ ಬಿಂದಾಸ್ ಹುಡ್ಗೀರ ಆ ಗುಂಪಿನ ಕಾರುಬಾರು ಯಾವತ್ತೂ ಎಲ್ಲೇ ಹೋದರೂ ಇರುತ್ತೆ. ಸ್ವಲ್ಪ ಇದರಲ್ಲಿ ಹುಡ್ಗೀರಿದ್ರೆ ಹುಡುಗರಿಗೇನೇ ಅಡ್ವಾಂಟೇಜು ಜಾಸ್ತಿ.
 
 
 
ಕ್ಲಾಸಿಗಾದ್ರೂ ಇವ್ರು ಹೋಗ್ತಾರಾದ್ರಿಂದ ಇವರು ಬರೆಯುವ ನೋಟ್ಸ್ ಗಳು , ಸ್ಟಡಿ ಮೆಟೀರಿಯಲ್ಸೇ ಈ ಬಾಯ್ಸ್ ಗೆ ಅಕ್ಷರಭಾಗ್ಯ ಯೋಜನೆ ,ಶೈಕ್ಷಣಿಕ ವಿಷಯಕ್ಕೆ ಬಂದಾಗ ಇವರೆಲ್ಲ ಗೆಳತಿಯರನ್ನೇ ಅವಲಂಬಿತರಾಗಿರ್ತಾರೆ. ಬೇರೆ ವಿಷಯದಲ್ಲಿ ಎತ್ತಿದ ಕೈ. ಎಕ್ಸಾಮ್ ಪಾಸ್ ಆದ್ರೆ ಸಾಕು ,ಮತ್ತದೇ ಬೈಕ್ ನಲ್ಲಿ ಜಾಲಿ ರೈಡ್, ಕ್ಲಾಸಿದ್ದಾಗ ಇವರ ಸುತ್ತಾಟ.ಕ್ಲಾಸಿಗೆ 5 ನಿಮಿಷ ಲೇಟಾಗಿ ಬಂದ್ರೇನೇ ಇವ್ರಿಗೆ ಮರ್ಯಾದೆ. ಉಪನ್ಯಾಸಕರು ಹಿಂದಕ್ಕೆ ತಿರುಗಿದಾಗ ಬರೆಯುತ್ತಾ ಗಾಂಧಿ ಗಳಂತಿರುವ ಹುಡ್ಗೀರು, ಅತ್ತ ಗುಸು ಗುಸು ಮಾತಾಡುತ್ತಾ ಪೇಪರ್ ರಾಕೆಟ್ ಹಾರಿ ಬಿಡೋ ಹುಡುಗರು. ಇದೇ ಫನ್ನಿ ಪಾಸ್ ಟೈಮ್. ಇದು Infact ರಕ್ತಸಂಬಂಧಕ್ಕಿಂತಲೂ ಒಂದು ಕೈ ಮೇಲೆ. ಆದರೆ ಯಾರು ಸರಿಯಾಗಿ ಒಬ್ಬರನ್ನು ಅರ್ಥ ಮಾಡಿಕೊಂಡು ಅನ್ಯೋನ್ಯವಾಗಿರುವುದಿಲ್ಲವೋ ಅಂಥವರು ಇದಕ್ಕೆ ನಾಲಾಯಕ್. ಕೇವಲ ಬ್ಯುಸಿನೆಸ್ ಫ್ರೆಂಡ್ಸ್ ಶಿಪ್ ಇವರದ್ದು, ಇಂಥವರಿಗೆ ಅದು ಕಾಂಟ್ರಾಕ್ಟ್ ಡೀಲ್.ಇದು ಸ್ನೇಹ ಅಲ್ಲ ಬದಲಾಗಿ ಇದು ವ್ಯವಹಾರ.
 
 
 
ಸ್ನೇಹಸಂಬಂಧವನ್ನು ಹಣದ ಮಾನದಂಡವನ್ನಿಟ್ಟುಕೊಂಡು ಅಳತೆ ಮಾಡಿದಾಗ ಇಂಥಹುದು ಬರುವುದು.ಯಾವಾಗ ಇದು ಆಗುತ್ತದೋ ಅಂದರೆ ಸ್ನೇಹದ ಮಧ್ಯೆ ಹಣದ ತಗಾದೆ ಬರುತ್ತದೋ ಅದು ಬಹಳ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡುತ್ತದೆ ಎನ್ನುವುದು ನಿಜಾನೇ.ಯಾವಾಗ ಜೇಬು ಖಾಲಿಯೋ ಅಂದಿಗೆ ಫ್ರೆಂಡ್ಸ್ ಶಿಪ್ ಕಟ್. ಕೆಲವೊಮ್ಮೆ ಈ ಹುಡುಗರು ಪ್ರೇಮದ ಮೋಹಕ್ಕೊಳಗಾಗಿ ಯಾವಳೋ ಹೇಳಿದಳು ಎಂಬ ರೀಸನ್ ಗೆ ತಮ್ಮ ಸ್ನೇಹಿತರ ಮೇಲೆ ಅನಾವಶ್ಯಕ ಡೌಟ್ ಪಟ್ಟು ಮಾಡಬಾರದ ತಪ್ಪನ್ನು ಸ್ನೇಹಿತನ ಮೇಲೆ ಹೊರಿಸಿ ಅವನ ಮುಖಕ್ಕೆ ಮಸಿ ಬಳಿದು ಹೊರಹೋಗುವವರಿದ್ದಾರೆ.ಇಂಥವರನ್ನು ಸ್ನೇಹ ಎಂಬ ಪದಕ್ಕೆ ತಾಳೆ ಮಾಡುವುದೇ ಪಾಪ ಎಂದೆನಿಸುತ್ತದೆ. ಹೀಗಾಗಿ ಆ ಗುಂಪಿನಲ್ಲಿ ಬಿರುಕು. ಕಾರಣರಾದವರು ಹೊರಟು ಹೋಗಾಯ್ತು. ಇದು ವಾಸ್ತವ ಇಂದಿನ ಕಾಲದಲ್ಲಿ .ಆದರೆ ಯಾವುದನ್ನೂ ಗಮನಿಸದೆ ಯಾವ ಭೇದಭಾವಗಳಿಗೆ ಕಿವಿಕೊಡದೆ ಅದೇ ಟೇಬಲ್ನಲ್ಲಿ ಬೈಟು ಕಾಫಿ, ಸಮೋಸ ಚಪ್ಪರಿಸುತ್ತಾ ಅದೇ ಕ್ಯಾಫಿಟೇರಿಯಾ ದಲ್ಲಿ ಮಜಾ ಮಾಡುತ್ತಾ ಆ ದಿನವನ್ನ ಕಳೆಯುತ್ತಾರಲ್ಲಾ ಅದೇ ಸುಂದರ.ಇದೇ ನಿಜವಾದ ಕ್ಯಾಂಪಸ್ ಫ್ರೆಂಡ್ಸ್ ಶಿಪ್.ಹೇಗೋ ಅಂತಿಮ ವರ್ಷಕ್ಕೆ ಬಂದಾಯ್ತು , ಇನ್ನೇನು ? ಇನ್ನು ಎಲ್ಲರ ಮನೆಗೆ ಹೋಗಿ ಟೆಂಟು ಕಟ್ಟುವುದು ಸ್ಟಾರ್ಟು.
 
 
 
ಪ್ರತಿಯೊಬ್ಬರ ಮನೆಗೆ ಹೋಗಿ ಅಲ್ಲೇ ಮುಕ್ಕಾಂ ಹೂಡುವುದು. ಇದು ಅವರುಗಳನ್ನು ಮಾತ್ರವಲ್ಲದೇ ಆ ಗ್ರೂಪಿನ ಎಲ್ಲಾ ಕುಟುಂಬದ ಜನರಲ್ಲೂ ಸ್ನೇಹದ ಬಾಂಧವ್ಯವನ್ನೂ ಉಂಟು ಮಾಡುತ್ತೆ. ಕೊನೆಗೆ ಅಂತೂ ವಿದಾಯದ ಸಮಯ ಬಂದೇ ಬಿಟ್ಟಿತು. ಒಂದು ಕಡೆ ನಾವು ಬೇರೆಯಾಗುತ್ತೇವೆ ಎಂಬ ಬೇಸರ ಒಂದೆಡೆಯಾದರೆ ,ಇನ್ನು ಹೊಸ ಜೀವನವನ್ನ ಹುಡುಕಲು ಹೋಗುವ ಕಾಲದಲ್ಲಿ ಗೆಳೆಯ ಗುಡ್ ಲಕ್ ಫೊರ್ ಯುವರ್ ಫ್ಯೂಚರ್ ಅಂದ ಆ ಕ್ಷಣದ ಸಂತೋಷ ಮತ್ತೆ ಕಣ್ಣುಗಳಲ್ಲಿ ನೀರಹನಿ ತಂದುಬಿಡುತ್ತವೆ. ಇವರು ಬಿಟ್ಟು ಹೋಗುವುದು ಕೇವಲ ದೇಹ ,ನೆನಪುಗಳು ಮಾತ್ರ, ಆದರೆ ಮತ್ತೆ ಹಿಂದಿನ ದಿನಗಳನ್ನು ಅಂದು ಅಪ್ಪ ಕೊಟ್ಟ ಮೊಬೈಲ್ ನಲ್ಲಿ ಸೆರೆಹಿಡಿದ ಚಿತ್ರ, ವೀಡಿಯೋ ನೋಡಿ ಮತ್ತೆ ನಾನು ಅದೇ ಕ್ಯಾಫಿಟೇರಿಯಾದಲ್ಲಿ, ಅದೇ ಟೇಬಲ್ ನಲ್ಲಿ ಇದ್ದೇನೇನೋ ಎಂಬ ಭಾವನೆ..ಎಷ್ಟು ಖುಷಿ ಅಲ್ವಾ ?? ಥ್ಯಾಂಕ್ಸ್ ಟು ಫ್ರೆಂಡ್ಸ್ , ನಮ್ಮನ್ನು ಇಂದಿಗೂ ಕೂಡಾ ಅದೇ ತರಹ ಸದಾ ಸಂಪರ್ಕದಲ್ಲಿರುವ ಹಾಗೆ ಮಾಡಿದ ವಾಟ್ಸಾಪ್ಗು ಕೂಡಾ ಒಂದು ದೊಡ್ಡ ಸಲಾಮ್..
ಹರೀಶ್ ರಾವ್, ಮೂಡಬಿದಿರೆ
ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ
ವಿವೇಕಾನಂದ ಕಾನೂನು ಕಾಲೇಜು, ಪುತ್ತೂರು.

LEAVE A REPLY

Please enter your comment!
Please enter your name here