ಸ್ತನಪಾನದ ಮಹತ್ವವ ಮನಗಾಣಿರಿ

0
538

 
ಅರಿತುಕೋ ಬದುಕ ವೈಖರಿ ಅಂಕಣ: ಎಂ ಎಸ್ ಸಂಚನಾ
ಈ ಭೂಮಿಗೆ ಬಂದ ಆ ಅಮೃತ ಘಳಿಗೆಯಲ್ಲಿ ಎದೆಹಾಲೆಂಬ ಅಮೃತವನ್ನು ನಾವುಗಳು ಸವಿದಿದ್ದರೆ ನಿಜಕ್ಕೂ ನಾವು ಅದೃಷ್ಟವಂತರಲ್ಲದೆ ಮತ್ತೇನು. ಎಳವೆಯಲ್ಲಿ ನಾವು ಕುಡಿಯುವ ತಾಯ ಎದೆಹಾಲಿಗೆ ಸರಿಸಮನಾದ ಮತ್ತೊಂದು ಪೌಷ್ಠಿಕ ಆಹಾರ ಜೀವಮಾನವಿಡಿ ನಮಗೆ ದೊರೆಯಲು ಸಾಧ್ಯವೇ ಇಲ್ಲ. ನೀವು ವೈಜ್ಞಾನಿಕವಾಗಿಯಾದರೂ ನೋಡಿ ಭಾವನಾತ್ಮಕವಾಗಿಯಾದರೂ ನೋಡಿ, ಹೇಗೆ ನೋಡಿದರೂ ಎದೆಹಾಲು ಶ್ರೇಷ್ಠವೆಂಬ ಮಾತನ್ನು ಅಲ್ಲಗಳೆಯಲಾಗದು.
 
 
Grantly Dick-Read ಎಂಬ ಯು.ಕೆಯ ಒಬ್ಬ ಹೆಸರಾಂತ ಪ್ರಸವವಿದ್ಯಾ ಪಾರಂಗತ ಹೇಳುತ್ತಾರೆ, ಒಂದು ಪುಟ್ಟ ಮಗು ತನ್ನ ತಾಯಿಯಿಂದ ಹೆಚ್ಚೇನನ್ನು ನಿರೀಕ್ಷಿಸಬಹುದು ಕೇವಲ ಅವಳ ಅಪ್ಪುಗೆಯಲ್ಲಿ ದೊರೆಯುವ ಬೆಚ್ಚಗಿನ ಸುಖವನ್ನು, ಅದಕ್ಕೆ ಹಸಿವಾದಾಗ ಆಹಾರವನ್ನು ಮತ್ತು ಆಕೆಯ ಸಾಮಿಪ್ಯ ನೀಡುವ ಭದ್ರತೆಯ ಭಾವವನ್ನು ತಾನೆ? ಅಂತೆಯೆ ಮಗುವಿನ ಈ ಎಲ್ಲಾ ಬೇಡಿಕೆಗಳನ್ನು ಸಮರ್ಥವಾಗಿ ಈಡೇರಿಸಲು ಒಬ್ಬ ತಾಯಿಗಿರುವ ಸುಲಭ ಸಾಧನವೆಂದರೆ ಅದು ಸ್ತನಪಾನ ಎಂದು, ಈ ಮಾತು ನೂರಕ್ಕೆ ನೂರರಷ್ಟು ಸತ್ಯ.
 
 
ಸ್ತನಪಾನವೆಂದರೆ ಒಂದು ಆಯ್ಕೆ ಅಲ್ಲ ಅಥವಾ ಒಂದು ಪರೀಕ್ಷೆ ಅಲ್ಲ, ಅದೊಂದು ತಮ್ಮ ಆದ್ಯ ಕರ್ತವ್ಯವೆಂದು ನೆರವೇರಿಸುವ ಅಮ್ಮಂದಿರಿಗೆ ನಮೀಸಲೇ ಬೇಕು. ಒಬ್ಬ ತಾಯಿ ತನ್ನ ಮಗುವಿಗೆ ಸರಾಗವಾಗಿ ಹಾಲುಣಿಸುವಂತೆ ಸಹಾಯ ಮಾಡುವುದು ಆಕೆಯಲ್ಲಿರುವ ಶೇಕಡ ತೊಂಬತ್ತು ಭಾಗದಷ್ಟು ಧೃಡ ಸಂಕಲ್ಪ ಮತ್ತು ಶೇಕಡ ಹತ್ತು ಭಾಗದಷ್ಟು ಹಾಲನ್ನುತ್ಪತ್ತಿ ಮಾಡುವ ಸಾಮರ್ಥ್ಯ.
 
 
 
ಈಗಾಗಲೇ ತಮ್ಮ ಮಗುವಿಗೆ ಸ್ತನಪಾನ ಮಾಡಿರುವ ತಾಯಂದಿರನ್ನು ವಿಚಾರಿಸಿದರೆ ತಿಳಿಯುವುದು ಅವರ ಆ ಅನುಭವ ಹೇಗಿತ್ತೇಂದು, ಸೋಜಿಗವೆಂಬಂತೆ ಸಾಮಾನ್ಯವಾಗಿ ಬಹುಪಾಲು ತಾಯಂದಿರು ಹೇಳುವುದು ಸ್ತನಪಾನ ಶುರುವಾದ ಮೊದಲ ಮೂರುವಾರಗಳು ಸ್ವಲ್ಪ ಕಷ್ಟದಾಯಕವಾಗಿರುತ್ತದೆ ಎಂದು, ನಂತರದ ಆರು ವಾರಗಳಲ್ಲಿ ಸ್ತನಪಾನವೊಂದು ಸರಳ ಕಾರ್ಯವೆಂದು ಮತ್ತು ಸ್ತನಪಾನ ಮಾಡಿ ಮೂರು ತಿಂಗಳ ಅನುಭವವಾದ ಮೇಲೆ ತಮ್ಮಂತೆ ಮಗುವಿಗೆ ಸ್ತನಪಾನ ಮಾಡಲು ಸಾದ್ಯವಾಗದ ತಾಯಂದಿರನ್ನು ನೋಡಿ ಬೇಸರವಾಗುತ್ತದೆ ಎಂದು.
 
 
 
ಮಗುವೊಂದು ತನ್ನ ತಾಯಿಂದ ಮೊಟ್ಟಮೊದಲಿಗೆ ಪಡೆಯುವ ಒಂದತ್ಯ ಮೂಲ್ಯ ಉಡುಗೊರೆ ಎಂದರೆ ಅದು ಎದೆಹಾಲು. ಆ ಒಂದು ಉಡುಗೊರೆಯೇ ಮುಂದೆ ಆ ಮಗುವಿನ ಆರೋಗ್ಯವು ಆರಾಮಾಗಿರುವಂತೆ ನೋಡಿಕೊಳ್ಳುವುದು ಎಂಬ ಸತ್ಯವನ್ನು ಇಂದಿನ ವೈಜ್ಞಾನಿಕ ಸಂಶೋಧನೆಗಳಂತೂ ಸಾರಿ ಸಾರಿ ಹೇಳುತ್ತಿವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ನಮೂದಿಸುವುದಾದರೆ ಎದೆಹಾಲುಂಡ ಮಕ್ಕಳು ಇಂದು ಜಗದೆಲ್ಲೆಡೆ ಜೋರಾಗಿರುವ ಸ್ಥೂಲಕಾಯ, ಅಧಿಕ ರಕ್ತದೊತ್ತಡ,ಮಧುಮೇಹ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೆ ಮುಂದೆ ಬಲಿಯಾಗುವ ಪ್ರಮಾಣ ತಕ್ಕ ಮಟ್ಟಿಗೆ ಕಡಿಮೆ, ಅವರ ಜ್ಞಾಪಕ ಶಕ್ತಿ ಮತ್ತು ಐಕ್ಯೂ ಪ್ರಮಾಣ ಸಹ ಉತ್ತಮವಾಗಿರುತ್ತದೆ. ಜನಿಸಿದ ಆರು ತಿಂಗಳವರೆಗೂ ಕೇವಲ ತಾಯಿಯ ಎದೆಹಾಲೇ ಮಗುವಿಗೆ ಒಂದು ಸಂಪೂರ್ಣ ಆಹಾರ, ಒಂದರ್ಥದಲ್ಲಿ ಎದೆಹಾಲನ್ನು ಅತ್ಯಂತ ಆರೋಗ್ಯದಾಯಕ ಫಾಸ್ಟ್ ಫುಡ್ ಎನ್ನಬಹುದು. ಕಲಬೆರಕೆಗೆ, ಮಾರಕ ಸೂಕ್ಷ್ಮಾಣುಗಳ ಸಂತತಿಗೆ ಎದೆಹಾಲಿನಲ್ಲಿ ಜಾಗವಿಲ್ಲ. ಸಣ್ಣಕೂಸಿನ ಸುಕೋಮಲ ದೇಹಲ ಯಾವ ಅಂಗಗಳಗೂ ಕಷ್ಟನೀಡುವ ಕೆಟ್ಟ ವಸ್ತುಗಳು ಎದೆಹಾಲಲಿಲ್ಲ. ಎಳೆವೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹೊಟ್ಟೆನೋವು, ವಾಂತಿ, ಬೇಧಿ, ಅಲರ್ಜಿ ಮುತಾಂದ ಸಮಸ್ಯೆಗಳನ್ನೆಲ್ಲಾ ಎದುರಿಸುವಷ್ಟು ಎನರ್ಜಿ ಎದೆಹಾಲಗಿದೆ.
 
 
ಸ್ತನಪಾನ ಮಾಡುವುದರಿಂದ ಕೇವಲ ಮಗುವಿಗೆ ಮಾತ್ರವಲ್ಲ ತಾಯಿಗೂ ಕೂಡ ಅನೇಕ ಲಾಭಗಳಿವೆ ಎಂದು ಸಂಶೋಧನೆಗಳೇ ಧೃಡಪಡಿಸಿವೆ. ಸ್ತನಪಾನ ಮಾಡುವ ಸಂದರ್ಭದಲ್ಲಿ ತಾಯಿಗೆ ಒಂದು ರೀತಿಯ ನೆಮ್ಮದಿಯ, ತೃಪ್ತಿಯ ಭಾವ ದೊರೆಯುತ್ತದೆ. ಅದಕ್ಕೆ ಕಾರಣ ಆಗ ಉತ್ಪತ್ತಿಯಾಗುವ ಅವಶ್ಯಕ ಹಾರ್ಮೋನ್ ಗಳು. ಸ್ತನ ಕ್ಯಾನ್ಸರ್ ನಂತ ಭಯಾನಕ ಖಾಯಿಲೆಗೆ ಬೇಲಿ ಹಾಕಬಲ್ಲದು ಸ್ತನಪಾನ ಮತ್ತು ಹೆಚ್ಚಿನ ಸಮಯದವರೆಗೆ ಗರ್ಭ ನಿರೋದಕದಂತೆ ಕೆಲಸ ಮಾಡಬಲ್ಲದು ಸ್ತನಪಾನ. ಸಣ್ಣ ಪುಟ್ಟ ಖಾಯಿಲೆಗಳಿಂದ, ಅಪೌಷ್ಠಿಕತೆಯಿಂದ ಬಳಲುವ ತಾಯಿಸಹ ಪೌಷ್ಠಿಕವಾದ ಎದೆಹಾಲನ್ನು ಉತ್ಪಾದಿಸಲು ಸಮರ್ಥಳು.
 
 
ಆಗಸ್ಟ್ ಒಂದರಿಂದ -ಆಗಸ್ಟ್ ಏಳರವರೆಗೆ ಅಂದರೆ ಒಂದು ವಾರ ವಿಶ್ವದೆಲ್ಲೆಡೆ ಸ್ತನಪಾನದ ವಾರವನ್ನಾಗಿ ಆಚರಿಸಲಾಗುತ್ತಿದೆ. ಅದರ ಮುಖ್ಯ ಉದ್ದೇಶವಿಷ್ಟೇ ಸ್ತನಪಾನದ ಮಹತ್ವವನ್ನು ಜಗದೆಲ್ಲೆಡೆ ಹರಡುವುದು. ಬಹು ಬೇಜಾರಿನ ಸಂಗತಿಯೇನೆಂದರೆ ಈಗಿನ ತಂದೆ-ತಾಯಂದಿರು ಇತ್ತಿಚಿನ ಒಂದು ಮೂವತ್ತು ವರ್ಷದ ಹಿಂದೆ ಹುಟ್ಟಿದ ಆವಿಶ್ಕಾರಗಳಿಂದ ತಯಾರಿಸಲ್ಪಡುವ ಬೇಬಿ ಫುಡ್ ಅನ್ನು ನಂಬುತ್ತಿದ್ದಾರೆಯೇ ವಿನಃ ಮೂರು ಮಿಲಿಯನ್ ವರ್ಷಗಳಷ್ಟು ಹಿಂದೆಯೇ ಅಂದರೆ ಸೃಷ್ಠಿ ಆರಂಭವಾದಗಿನಿಂದ ಶ್ರೇಷ್ಠಎಂದು ಅರಿತಿದ್ದ ಎದೆಹಾಲನ್ನು ನಂಬುತ್ತಿಲ್ಲ,ಅಂತವರಿಗೆಲ್ಲ ಕರೆನೀಡುವುದಿಷ್ಟೆ ಪ್ರತಿ ತಂದೆ-ತಾಯಿಗೂ ಸ್ತನಪಾನ ಮಾಡುವುದೊಂದು ಸರಿಯಾದ ಆಯ್ಕೆ ಅಲ್ಲ ಎಂದೆನಿಸಬಹುದು ,ಆದರೆ ಪ್ರತಿ ಮಗುವಿಗೆ ಸ್ತನಪಾನವೇ ಒಂದು ಆತ್ಯುತ್ತಮ ಆಯ್ಕೆಯಾಗಿರುತ್ತದೆ ಎಂಬ ಸತ್ಯವನ್ನು ತಿಳಿಯಿರಿ, ಜೊತೆಗೆ ಇನ್ನಾದರೂ ಸ್ತನಪಾನವ ಬೆಂಬಲಿಸಿ, ಪ್ರೋತ್ಸಾಹಿಸಿ.
 
 
ಎಂ ಎಸ್ ಸಂಚನಾ
[email protected]

LEAVE A REPLY

Please enter your comment!
Please enter your name here