ಸೌಂದರ್ಯೋಪಾಸನೆ

0
498

 
ಭೂಮಿಕಾ ಅಂಕಣ: ಅನುಪಮಾ ರಾಘವೇಂದ್ರ
ಸೌಂದರ್ಯ ಹೊರಗೆಲ್ಲೋ ಇಲ್ಲ ನೋಡುವ ಕಣ್ಣುಗಳಲ್ಲಿದೆ. ಬಾಹ್ಯ ಕಣ್ಣುಗಳಿಗೆ ಕಾಣುವುದು ಮಾತ್ರ ಸೌಂದರ್ಯವಲ್ಲ. ಅಂತರಂಗದ ಕಣ್ಣುಗಳಿಗೆ ಕಾಣಿಸುವುದೇ ನಿಜವಾದ ಸೌಂದರ್ಯ. ಸೌಂದರ್ಯವು ವ್ಯಕ್ತಿಯ ಪೂರ್ಣತೆಯಲ್ಲಿ ಇದೆಯೇ ಹೊರತು ಅಂಗಗಳಲ್ಲಿ ಅಲ್ಲ. ಸೌಂದರ್ಯವನ್ನು ಸವಿಯಬಹುದು : ಅನುಭವಿಸಬಹುದು. ಅದು ದಿವ್ಯಶಕ್ತಿಯ ಕಾಂತಿಯ ಕಿರಣ. ಸತ್ಯವೇ ಸೌಂದರ್ಯ . ಸೌಂದರ್ಯ ಸೃಷ್ಟಿಯ ಕಲೆ. ಅದನ್ನು ಸಿದ್ಧಿಸುವುದೂ ಒಂದು ಕಲೆ. ಸಹೃದಯಿ ಮಾತ್ರ ಸೌಂದರ್ಯವನ್ನು ಆಸ್ವಾದಿಸಬಲ್ಲ : ಆನಂದಿಸಬಲ್ಲ.
 
 
 
ಯಾವುದು ಹಿತವಾದ ಸಾಮಾಜಿಕ ಪರಿಣಾಮಗಳಿಗೆ ನಮ್ಮನ್ನು ಒಯ್ಯುವುದೋ , ಯಾವುದು ನಿರ್ದಿಷ್ಟವಾದ ಭಾವವನ್ನು ಉದ್ದೀಪನಗೊಳಿಸುವುದೋ , ಯಾವುದು ತನ್ನ ಕಾಂತಿ , ತೇಜಸ್ಸುಗಳಿಂದ ನಮ್ಮ ಅಂತರಂಗದಲ್ಲಿ ಒಂದು ರೀತಿಯ ಆದರವನ್ನು ಉಂಟುಮಾಡಿ , ಮನಸ್ಸನ್ನು ದ್ರವೀಕರಿಸಿ ತನ್ಮೂಲಕ ಆನಂದವನ್ನು ಉಂಟು ಮಾಡುತ್ತದೋ ಅದು ಸುಂದರ . ಆ ಆನಂದವೇ ಸೌಂದರ್ಯ. ‘ ಸುಂದ್ ‘ ಎಂದರೆ ಪ್ರಕಾಶಿಸುವುದು ಎಂದರ್ಥ. ‘ ಸೂ ‘ ಎಂಬ ಪ್ರತ್ಯಯಕ್ಕೆ ‘ ದೃ’ ಧಾತು ‘ ದರ ‘ ಆಗಿ ಸೇರಿ ಸುಂದರ ಆಗಿರಬೇಕು. ‘ ಸೂ ‘ ಎಂದರೆ ಚೆನ್ನಾದ , ಶುಭ್ರವಾದ , ಐಶ್ವರ್ಯ ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ‘ ದರ ‘ ಎಂದರೆ ಆದರ , ಹೃತ್ಪೂರ್ವಕ ಎಂದರ್ಥ. ಇನ್ನೊಂದು ವಿವರಣೆಯಲ್ಲಿ ‘ ಸೂ + ಉನ್ದ್ + ಅರ ‘ . ಇಲ್ಲಿ ಉಂದೀ ಎಂದರೆ ಕರಗಿಸತಕ್ಕದ್ದು ಎಂದರ್ಥ. ಯಾವುದು ನಮ್ಮ ಮನಸ್ಸನ್ನು ಕರಗಿಸುತ್ತದೋ ಅದು ಸುಂದರ .
 
|| ಸುಂದರಂ ರುಚಿರಂ ಚಾರು
ಸುಷವಾಮನ ಸಾಧುಃ ಶೋಭನಂ
ಕಾತಂ ಮನೋಹರಂ ರುಚ್ಯಂ
ಮನೋಜ್ಞ ಮಂಜು ಮಂಜುಳಾ ||
ಅಮರಕೋಶದಲ್ಲಿ ಸುಂದರ ಶಬ್ದಕ್ಕೆ ಈ ಎಲ್ಲಾ ಪರ್ಯಾಯ ಪದಗಳನ್ನು ಸೂಚಿಸಲಾಗಿದೆ.
ಲೋಕದ ಶಕ್ತಿಯ ಬಗೆಗೆ ವಿಸ್ಮಯಗೊಂಡು ನೋಡುವ ಪರಿಯೇ ‘ ಸೌಂದರ್ಯಾನುಭವ ‘ . ಸೌಂದರ್ಯ ಯಾವುದೇ ವಸ್ತುವಿನಲ್ಲಿದ್ದರೂ ಅದನ್ನು ಆಸ್ವಾದಿಸುವ ಅಥವಾ ಅನುಭವಿಸುವ ಕ್ರಿಯೆ ‘ ಸೌಂದರ್ಯೋಪಾಸನೆ ‘. ಸೌಂದರ್ಯ ಪ್ರಜ್ಞೆ ಅನುಭವಗಳಿಂದ ಮೂಡುತ್ತದೆ. ಆ ಪ್ರಜ್ಞೆಯುಳ್ಳ ವ್ಯಕ್ತಿ ಈ ಉಪಾಸನೆಯಿಂದ ಹೆಚ್ಚಿನ ಆಹ್ಲಾದವನ್ನು ಪಡೆಯಬಲ್ಲ. ಸೌಂದರ್ಯಾನುಭವ ಕೇವಲ ಆಹ್ಲಾದಕರವಾಗಿರುವುದು ಎಂದರ್ಥವಲ್ಲ. ಲೋಕದ ಸುಖ ದುಃಖ , ಪ್ರಿಯ ಅಪ್ರಿಯಗಳಲ್ಲೂ ಅನುಭವವನ್ನು ಪಡೆಯಲಾಗುವುದು. ಒಲವು , ಪ್ರೀತಿಯೇ ಸೌಂದರ್ಯಾನುಭವದ ಸೂತ್ರ. ಪ್ರೀತಿಸುವ ಕಣ್ಣಿದ್ದರೆ ಜಗತ್ತೆಲ್ಲವೂ ಸುಂದರ.
ತನ್ಮಯತೆ , ರಸಭಾವಗಳ ಪ್ರಾಧಾನ್ಯತೆಯನ್ನು ಹೊಂದಿರುವ ಕಲೆಗಳ ಸೌಂದರ್ಯ ಹಾಗೂ ಸೌಂದರ್ಯೋಪಾಸನೆ ಜನಜೀವನದ ಒಂದು ಅವಿಭಾಜ್ಯ ಅಂಗ. ಕಲಾವಿದ ವಸ್ತುವನ್ನೂ , ವಸ್ತುವಿನ ರೂಪವನ್ನೂ ಮನಸ್ಸಿನಲ್ಲಿ ಕಲ್ಪಿಸಿಕೊಂಡು ಕಲೆಯನ್ನು ಸೃಷ್ಟಿಸುತ್ತಾನೆ. ಕಲಾವಿದನ ಸೌಂದರ್ಯಾನುಭವವೇ ಸೃಷ್ಟಿಗೆ ಕಾರಣ.
 
ಸೌಂದರ್ಯಾನುಭವವನ್ನು ನಾಲ್ಕು ರೀತಿಗಳಲ್ಲಿ ಗುರುತಿಸಬಹುದು.
ಇಂದ್ರಿಯ ಸೌಂದರ್ಯ : ಪಂಚೇಂದ್ರಿಯಗಳ ಮೂಲಕ ದೊರೆಯುವ ಇಂದ್ರಿಯ ಸುಖಾನುಭವವೇ ಇಂದ್ರಿಯ ಸೌಂದರ್ಯ. ಸೌಂದರ್ಯ ಏನೆಂದು ಅರಿಯದ ಜನಕ್ಕೆ ತನ್ನ ಇಂದ್ರಿಯ ಸುಖಗಳಿಂದ ಅನುಭವಿಸಿದ ಸೌಂದರ್ಯಾನುಭೂತಿಯಿಂದ ಕಲಾಕೃತಿಯನ್ನು ರೂಪಿಸಿ ತೋರಿಸುತ್ತಾನೆ.
ಕಲ್ಪನಾ ಸೌಂದರ್ಯ : ಕಲಾವಿದ ತಾನು ಅನುಭವಿಸಿದ ಸೌಂದರ್ಯಾನುಭವಕ್ಕೆ ತನ್ನ ಕಲ್ಪನೆಯ ನೆರವಿನಿಂದ ಹೊಸ ಹೊಸ ರೂಪವನ್ನು ಕೊಟ್ಟು ಕಲಾಕೃತಿಯನ್ನು ನಿರ್ಮಿಸುತ್ತಾನೆ. ಈ ಪರಿಯನ್ನು ಕಲ್ಪನಾ ಸೌಂದರ್ಯ ಎಂದು ಕರೆಯಬಹುದು. ಕವಿ , ಕಲಾವಿದ ತನ್ನ ಕಲ್ಪನೆಯಿಂದ ಅಘಟಿತ ಘಟನೆಗಳನ್ನು ಅನುಭವದೊಂದಿಗೆ ಮಾರ್ಪಡಿಸಿ ನೂತನ ಬ್ರಹ್ಮನಾಗುತ್ತಾನೆ.
 
ತಾತ್ವಿಕ ಅಥವಾ ಚಿತ್ತ ಸೌಂದರ್ಯ : ಕವಿ , ಕಲಾವಿದ ಪಕ್ವವಾದಂತೆ ಆತನ ಅನುಭವವು ವಿಕಾಸ ಹೊಂದಿ ಸೃಜನಶೀಲತೆ ಬೆಳೆದು ಬೇರೊಂದು ರೀತಿಯ ಅನುಭವವನ್ನು ಮನಗಾಣುತ್ತಾನೆ. ಕಲ್ಪನೆಯ ಹಾದಿಯಲ್ಲಿ ಲೋಕದ ನೋವು , ವೇದನೆಗಳು , ತಾಕಲಾಟಗಳು ಕಲಾವಿದನನ್ನು ವಾಸ್ತವಿಕ ಪ್ರಪಂಚಕ್ಕೆ ಎಳೆದು ತರುವಾಗ ಈ ಎಲ್ಲಾ ದ್ವಂದ್ವಗಳ ಹಿಂದಿರುವ ಏಕಸೂತ್ರದ ಅನ್ವೇಷಣೆಗೆ ಹೊರಟ ಕಲಾವಿದ ನಿರ್ಮಿಸುವ ಕಲಾಕೃತಿ ಚಿತ್ತ ಸೌಂದರ್ಯದೊಂದಿಗೆ ಮಿಳಿತಗೊಳ್ಳುತ್ತದೆ. ಅದು ಕೇವಲ ತತ್ವವಲ್ಲ : ತತ್ವದೃಷ್ಟಿಯಿಂದ ಕೂಡಿದ್ದು.
 
ಆತ್ಮ ಸೌಂದರ್ಯ : ಕಲಾವಿದ ಅನುಭಾವಿಯಾಗಿ ಪರಮಾತ್ಮನ ಒಂದು ನೋಟವನ್ನು , ಸ್ಪರ್ಶವನ್ನು ಪಡೆಯಲು ಕಾತರನಾದಾಗ ಸೌಂದರ್ಯಾನುಭವ ಆತ್ಮಾನುಭವವಾಗಿ ಆತ್ಮ ಸೌಂದರ್ಯ ಪ್ರಕಟಗೊಳ್ಳುತ್ತದೆ. ಈ ಕಲಾಕೃತಿಯು ಲೌಕಿಕವಾದ ಕೃತಿಯಾಗದೆ ಅಮರಕೃತಿಯಾಗುವುದು. ಕಲಾವಿದ ತಾನು ಪಡೆದ ಸತ್ಯಾನುಭವವನ್ನು ಸೃಷ್ಟಿಸುವುದರಿಂದ ಪರಮಸತ್ಯ ಕೃತಿ ಪ್ರಕಟಗೊಳ್ಳುತ್ತದೆ .
ಸೌಂದರ್ಯವು ಇಂದ್ರಿಯ ಸೌಂದರ್ಯೋಪಾಸನೆಯಲ್ಲಿ ವಸ್ತುನಿಷ್ಠ ಎನಿಸಿದರೆ , ಕಲ್ಪನಾ ಸೌಂದರ್ಯದಲ್ಲಿ ಮನೋನಿಷ್ಠ ಎನಿಸುತ್ತದೆ. ಚಿತ್ತ ಸೌಂದರ್ಯದಲ್ಲಿ ಸತ್ಯನಿಷ್ಠವಾಗಿ ಕಂಡು ಬಂದು ಆತ್ಮ ಸೌಂದರ್ಯದಲ್ಲಿ ಪರಾತ್ಪರದ ಆವಿರ್ಭಾವವಾಗಿ ಅತೀತವಾದ ಅಂತರಾತ್ಮ ಆಗಿರುತ್ತದೆ. ಸೌಂದರ್ಯವು ಸೃಜನಶೀಲತೆಗೆ ಅನುಸಾರವಾಗಿ ಪ್ರಕಟಗೊಂಡು ಪ್ರಕಾಶಿಸುವುದು. ಅದೇ ರೀತಿ ಮನೋಧರ್ಮಕ್ಕೆ ಅನುಗುಣವಾಗಿ ಅನುಭವಕ್ಕೆ ಬರುವುದು.
ಅನುಪಮಾ ರಾಘವೇಂದ್ರ
[email protected]

LEAVE A REPLY

Please enter your comment!
Please enter your name here