ಸೈಕಲ್ ಸವಾರ ರೈಲ್ವೇ ಚಾಲಕನಾದರೇನು ಗತಿ..? -ಸಿಪಿಐ

0
527

ವರದಿ: ವಿ ಸೀತಾರಾಮ್ ಬೇರಿಂಜ
ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು ತನ್ನದೇ ಆದ ಬಹುಸಂಸ್ಕೃತಿ ಹಾಗೂ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಜನರಿಂದ ಜನರಿಗಾಗಿ ಜನರೇ ಆಳುವ ಪ್ರಜಾಪ್ರಭುತ್ವ ದೇಶವನ್ನು ಆಳುವ ನಾಯಕ ಸ್ವಛ್ಛವಾಗಿರಬೇಕು. ಆತ ಸ್ವಛ್ಛವಾಗಿರಬೇಕಾದರೆ ಆತನ ಮನಸ್ಸು ಕೈ ಹಾಗೂ ಕಿಸೆ ಗಟ್ಟಿ ಇರಬೇಕು. ಆದರೆ ಪ್ರಸ್ತುತ ಕೇಂದ್ರ ಸರಕಾರದ ನಾಯಕ ಮೋದಿಯವರು ರೂ. 1000 ಮತ್ತು 500 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡುವ ಮೂಲಕ ತನ್ನ ಅಸಾಮಾಥ್ರ್ಯವನ್ನು ತೋರಿಸಿದ್ದಾರೆ. ನೋಟು ರದ್ದು ಮಾಡಿದಕ್ಕೆ ನಾವು ವಿರೋಧವಿಲ್ಲ ಆದರೆ ಈ ನೋಟು ರದ್ದತಿಯು ಪೂರ್ವ ತಯಾರಿಯಿಲ್ಲದ ತರಾತುರಿಯ ಕ್ರಮವಾಗಿದ್ದು, ರದ್ದತಿಯ ನಂತರ ಉಂಟಾದ ಆರ್ಥಿಕ ಅಸಮತೋಲನ ಹಾಗೂ ಜನಸಾಮಾನ್ಯರಿಗುಂಟಾದ ಸಂಕಷ್ಟಕ್ಕೆ ನಾವು ವಿರೋಧವಾಗಿದ್ದೇವೆ. ಸೈಕಲ್ ಸವಾರನೊಬ್ಬ ರೈಲ್ವೇ ಚಾಲಕನಾದರೆ ಯಾವ ರೀತಿ ಅಸ್ತವ್ಯಸ್ಥವಾಗುತ್ತದೋ ಅದೇ ರೀತಿಯ ಪರಿಣಾಮವನ್ನು ಇವತ್ತು ಅಸಮರ್ಥ ಪ್ರಧಾನಿಯೊಬ್ಬರಿಂದ ಜನರು ಅನುಭವಿಸುವಂತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅಭಿಪ್ರಾಯಪಟ್ಟರು.
 
 
 
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ರಾಷ್ಟ್ರೀಯ ಕರೆಯಂತೆ ಇಂದು ಪಕ್ಷದ ದ.ಕ ಮತ್ತು ಉಡುಪಿ ಜಿಲ್ಲಾ ಮಂಡಳಿ ವತಿಯಿಂದ ದ.ಕ ಜಿಲ್ಲಾಧಿಕಾರಿ ಕಛೇರಿಯೆದುರು ನಡೆದ `ನೋಟು ರದ್ದತಿಯಿಂದ ಕಪ್ಪು ಹಣ ನಿಗ್ರಹವಾಯಿತೇ..?’ ಎಂಬ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
 
 
 
ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಹೆಚ್. ವಿ ರಾವ್ ಮಾತನಾಡಿ ಚಲಾವಣೆಯಲ್ಲಿರುವ ಒಟ್ಟು ಹಣದಲ್ಲಿ ಶೇ. 86ರಷ್ಟಿದ್ದ 500-1000 ರೂ. ಗಳನ್ನು ರದ್ದುಗೊಳಿಸಿ 2000 ರೂ. ಮೌಲ್ಯದ ನೋಟನ್ನು ಜಾರಿಗೆ ತಂದಿರುವುದು ದೇಶದ ಆರ್ಥಿಕತೆಗೆ ಪೆಟ್ಟು ನೀಡಿದೆಯೇ ಹೊರತು ಕಪ್ಪುಹಣದ ನಿಯಂತ್ರಣಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ. ಏಕೆಂದರೆ ದೇಶದ ಒಟ್ಟು ಕಪ್ಪುಹಣದಲ್ಲಿ ಶೇ. 8 ರಿಂದ 10 ರಷ್ಟು ಮಾತ್ರ ನಗದು ರೂಪದಲ್ಲಿದ್ದು ಉಳಿದ ಕಪ್ಪುಹಣ ಬೆಳ್ಳಿ-ಬಂಗಾರ, ವಜ್ರ-ವೈಢೂರ್ಯಗಳ ಮತ್ತು ಸ್ಥಿರಾಸ್ತಿ-ಬೇನಾಮಿ ಆಸ್ತಿಗಳ ರೂಪದಲ್ಲಿರುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅಲ್ಲದೆ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದೊಡನೆ ವಿದೇಶ ವಿಮಿಮಯ ನಿರ್ವಹಣಾ ಕಾಯಿದೆಗೆ ತಿದ್ದುಪಡಿ ತಂದು ಭಾರತದಿಂದ ವಿದೇಶಗಳಿಗೆ ಹಣ ವರ್ಗಾಯಿಸುವ ಪ್ರಕ್ರಿಯೆಯನ್ನು ಸುಲಭ ಮಾಡಿತು. ಇದರ ಪರಿಣಾಮ ಒಂದೇ ವರ್ಷದಲ್ಲಿ ಉದಾರೀಕೃತ ಸಂದಾಯ ಯೋಜನೆಯಡಿ ನಮ್ಮ ದೇಶದಿಂದ ಹರಿದುಹೋದ ಹಣ 1.325 ಬಿಲಿಯನ್ ಅಮೆರಿಕನ್ ಡಾಲರ್ಗಳಿಂದ ಏಕಾಏಕಿ 3.811ಕ್ಕೆ ಏರಿತು. ಭ್ರಷ್ಟರು ತಮ್ಮ ಕಪ್ಪುಹಣ ತೊಡಗಿಸಲು ಈ ಮಾರ್ಗ ಬಳಸಿದ್ದಾರೆ. ನೋಟ್ ರದ್ದತಿ ಅತ್ಯಂತ ಗೌಪ್ಯ ಕ್ರಿಯೆಯಾಗಿರಲಿಲ್ಲ. 2016 ರ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಬ್ಯಾಂಕ್ ಗಳ ಠೇವಣಿ 3,55,570 ಕೋಟಿ ರೂ. ಏರಿಕೆ ಕಂಡಿದ್ದು ಸಂಶಯಾಸ್ಪದವಾಗಿದೆ. ನೋಟ್ ರದ್ದತಿಯ ಬಗ್ಗೆ ಮುನ್ಸೂಚನೆ ದೊರೆತಿದ್ದರಿಂದ ನಗದು ರೂಪದಲ್ಲಿ ಕಪ್ಪುಹಣ ಹೊಂದಿರುವವರು ಅದನ್ನು ಸುರಕ್ಷಿತಗೊಳಿಸಿಕೊಂಡಿರುವ ಸಾಧ್ಯತೆ ಹೇರಳವಾಗಿದೆ ಎಂಬುದು ಪರಿಣಿತರ ಅಭಿಪ್ರಾಯ. ಅಲ್ಲದೆ ಬಿಜೆಪಿಯ ಪಶ್ಚಿಮ ಬಂಗಾಳದ ಖಾತೆಯಲ್ಲಿ ನವೆಂಬರ್ 1ರಿಂದ 8ರ ಒಳಗೆ 3ಕೋಟಿ ರೂ. ಠೇವಣಿಯಾಗಿದೆ. ಇವೆಲ್ಲವನ್ನೂ ಗಮನಿಸಿದರೆ ನೋಟ್ ರದ್ದತಿ ಕಪ್ಪುಹಣ ನಿಗ್ರಹ ಉದ್ದೇಶದಿಂದ ಮಾಡಿಲ್ಲವೆಂದೂ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
 
 
 
ತಾಲುಕು ಕಾರ್ಯದರ್ಶಿ ವಿ.ಎಸ್ ಬೇರಿಂಜ ಸ್ವಾಗತಿಸಿದರು. ಇಪ್ಟಾ ತಂಡದ ನಾಯಕ ಸುರೇಶ್ ಕುಮಾರ್ ಬಂಟ್ವಾಳ್ ಸಾಂದರ್ಭಿಕ ಹೋರಾಟ ಗೀತೆಯನ್ನು ಹಾಡಿದರು. ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ. ಶೇಕರ್ ವಂದಿಸಿದರು. ಚಳವಳಿಯ ನೇತೃತ್ವವನ್ನು ಪಕ್ಷದ ನಾಯಕರಾದ ಕೆ.ವಿ ಭಟ್, ಬಾಬು ಭಂಡಾರಿ, ಎಂ. ಕರುಣಾಕರ್, ಸುಲೋಚನ, ಚಿತ್ರಾಕ್ಷಿ, ಸರಸ್ವತಿ, ಕೆ. ಈಶ್ವರ್, ಶಿವಪ್ಪ ಕೋಟ್ಯಾನ್, ಎ.ಪಿ ರಾವ್, ಭಾರತಿ ಪ್ರಶಾಂತ್, ತಿಮ್ಮಪ್ಪ ಕೆ., ಆರ್. ಡಿ ಸೋನ್ಸ್ ಮುಂತಾದವರು ವಹಿಸಿದ್ದರು.

LEAVE A REPLY

Please enter your comment!
Please enter your name here