ಬೆಂಗಳೂರು ಪ್ರತಿನಿಧಿ ವರದಿ
ಮೆಟ್ರೋ ಸುರಂಗ ಮಾರ್ಗ ಚಾಲನೆಗೆ ಕೌಂಟ್ ಡೌನ್ ಶುರುವಾಗಿದೆ. ಇಂದು ನಮ್ಮ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆಯಾಗಲಿದೆ. ಇದರಿಂದ ಹಲವು ವರುಷಗಳ ಕಾಯುವಿಕೆಗೆ ಇಂದು ತೆರೆ ಬೀಳಲಿದೆ.
ಇಂದು ಸಂಜೆ ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ ಪೂರ್ವ-ಪಶ್ಚಿಮ ಕಾರಿಡಾರ್ನ ಒಟ್ಟು 18 ಕಿ.ಮೀ. ಉದ್ದದ ಮಾರ್ಗಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಲಿದ್ದಾರೆ. ನಾಳೆಯಿಂದಲೇ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಸುರಂಗ ನೋಡೋ ಭಾಗ್ಯ ಲಭ್ಯವಾಗಲಿದೆ.
ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗವೆಂಬ ಖ್ಯಾತಿಗಳಿಸಿರುವ ಪೂರ್ವ-ಪಶ್ಚಿಮ ಕಾರಿಡಾರ್ ನ ಸುರಂಗ ಮಾರ್ಗ ನೆಲಮಟ್ಟದಿಂದ 60 ಅಡಿ ಆಳದಲ್ಲಿದೆ. ಇದೇ ಮೊದಲ ಬಾರಿಗೆ ಅಷ್ಟು ಆಳದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿದ್ದು, ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣ 53 ಅಡಿಯಷ್ಟು ಆಳದಲ್ಲಿದೆ. ಅದೇ ರೀತಿ ಉತ್ತರ-ದಕ್ಷಿಣ ಕಾರಿಡಾರ್ನ ನಿಲ್ದಾಣ 80 ಅಡಿ ಆಳದಲ್ಲಿದೆ.
ರೈಲು ಹೋಗಲು ಮತ್ತು ಬರಲು ಜೋಡಿ ಸುರಂಗ ಮಾರ್ಗಗಳಿದ್ದು, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ 10 ನಿಮಿಷಕ್ಕೊಂದು ರೈಲು ಓಡಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಪೂರ್ವ-ಪಶ್ಚಿಮ ಕಾರಿಡಾರ್ನಲ್ಲಿ 15 ರೈಲುಗಳು ಸಂಚಾರ ನಡೆಸಲಿವೆ ಎಂದು ತಿಳಿದುಬಂದಿದೆ. 33 ನಿಮಿಷಗಳ ಒಟ್ಟು 18.10 ಕಿ.ಮೀ. ಉದ್ದದ ಪ್ರಯಾಣಕ್ಕೆ 40 ರು. ಟಿಕೆಟ್ ದರವನ್ನು ನಿಗದಿಪಡಿಸಲಾಗಿದ್ದು 34 ರು. ಮೌಲ್ಯದ ಸ್ಮಾರ್ಟ್ ಕಾರ್ಡ್ ಅನ್ನೂ ಕೂಡ ಬಿಡುಗಡೆ ಮಾಡಲಾಗಿದೆ.
ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಿದ್ದು, ಸುರಂಗದ ಸುತ್ತಳತೆ ಸುಮಾರು 6 ಮೀ.ನಷ್ಟಿದೆ. ನಿಲ್ದಾಣಗಳಲ್ಲಿ ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಮೆಟ್ರೋ ಸಂಚಾರ ಮಾಡಲಿದೆ. ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ ರೈಲು ಸಂಚರಿಸಲಿದೆ.