ಸಿಎನ್ ಸಿ ಪ್ರತಿಭಟನೆ

0
145

ಮಡಿಕೇರಿ ಪ್ರತಿನಿಧಿ ವರದಿ
ಕೊಡವ ಭಾಷೆಯನ್ನು 8 ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದು ಎಂದು ಪರಿಗಣಿಸಬೇಕೆಂದು ಒತ್ತಾಯಿಸಿ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು.
 
 
ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರ ಹಾಗೂ ವಿಶ್ವ ಸಂಸ್ಥೆಯ ಗಮನ ಸೆಳೆಯುವ ಪ್ರಯತ್ನವನ್ನು ಸಿಎನ್ ಸಿ ಮಾಡಿತು.
 
 
ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರ್ಪಡೆಗೊಳಿಸಬೇಕು ಮತ್ತು ವಿಶ್ವ ಸಂಸ್ಥೆಯ ಭಾಷೆಗಳಲ್ಲೊಂದು ಎಂದು ಪರಿಗಣಿಸಬೇಕೆಂದು ಒತ್ತಾಯಿಸಿದರು. ಕೊಡವ ಭಾಷೆ ಮತ್ತು ಆಕ್ಸ್ಫರ್ಡ್ ಡಿಕ್ಷ್ನರಿ ಎರಡೂ ಸಮೃದ್ಧಗೊಳ್ಳಲು ಸರ್ಕಾರ ಮುತುವರ್ಜಿ ವಹಿಸಬೇಕು, ಕೊಡವರ ಭಾಷೆ ಉಳಿಯಬೆಕು ಮತ್ತವರ ಭೂಮಿಯೂ ಉಳಿಯಬೇಕಾದರೆ ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು.
 
 
ಕೊಡವ ತಕ್ಕನ್ನು ಆಡಳಿತ ಭಾಷೆಯಾಗಿ ಸಂವಿಧಾನದ 350 ಬಿ ವಿಧಿಯಡಿ ಪರಿಗಣಿಸಬೇಕು, ಕೊಡವ ತಕ್ಕನ್ನು ಸಂವಿಧಾನದ 347ನೇ ವಿಧಿಯ ಪ್ರಕಾರ ಪಠ್ಯ ಕ್ರಮದಲ್ಲಿ ಸೇರಿಸಬೇಕು, ಕೊಂಕಣಿ ಮತ್ತು ಫ್ರೆಂಚ್ ಭಾಷೆಯ ಮಾದರಿಯಲ್ಲಿ ರಾಜ್ಯದ ಎರಡನೇ ಭಾಷೆಯಾಗಿ ಕೊಡವ ತಕ್ಕನ್ನು ಪರಿಗಣಿಸಬೇಕು, ಕೊಡವರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಿ ಸಂವಿಧಾನದ 29 ಮತ್ತು 30 ರನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ಕಲ್ಪಿಸಬೇಕು.
 
 
ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೇ ಅದೇ ಜನಪದೀಯ ಹೆಸರಿನಿಂದಲೇ ದಾಖಲಿಸಬೇಕು, ಕೊಡವ ಅಲ್ಪಸಂಖ್ಯಾತ ಹಬ್ಬಗಳಾದ ಪುತ್ತರಿ ಕೈಲ್ಪೊವ್ದ್, ಎಡಮ್ಯಾರ್, ಕಕ್ಕಡ ಪದ್ನಟ್, ಕಾರಣಂಗೊಡ್ಪೊ ಮತ್ತು ಕಾವೇರಿ ಚಂಗ್ರಾಂದಿ ಇತ್ಯಾದಿ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು, ಕೊಡಗರು ಎಂದು ಕಾಗುಣಿತ ದೋಷದಿಂದ ವಿರೂಪಗೊಂಡಿರುವ ಕೊಡವ ಸಮುದಾಯ ಸೂಚಕ ಹೆಸರನ್ನು ಕೊಡವ ಎಂದು ಗಜೆಟ್ ನೋಟಿಫಿಕೇಷನ್ ಹೊರಡಿಸಬೇಕು, ಕೊಡವ ತಕ್ಕ್ನ ವಾರ್ತೆಯನ್ನು ದೂರದರ್ಶನ (ಡಿ.ಡಿ ಮತ್ತು ಆಕಾಶವಾಣಿಯಲ್ಲಿ ಇತರೆ ಪ್ರಮುಖ ಭಾಷೆಗಳಂತೆ ನಿರಂತರ ಭಿತ್ತರಿಸಬೇಕು, ಕೊಡವ ತಕ್ಕ್ನ ವಿಶೇಷ ಅಧ್ಯಾಯವನ್ನು ಪ್ರಸಾರ ವಾರ್ತೆಯಲ್ಲಿ ಪ್ರಾರಂಭಿಸಬೇಕು, ಶತ್ರು ರಾಷ್ಟ್ರವಾದ ಪಾಕಿಸ್ತಾನದ ಬಲೂಚಿ ಭಾಷೆಯನ್ನು ಇತ್ತೀಚೆಗೆ ದೂರದರ್ಶನ ಮತ್ತು ಪ್ರಸಾರ ಭಾರತಿಯಲ್ಲಿ ನಿರಂತರ ಪ್ರಸಾರ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಎನ್.ಯು.ನಾಚಪ್ಪ ಬಿಬಿಸಿಯಲ್ಲಿ ಪಸ್ತೂನ್, ಖುರ್ದಿ ಭಾಷೆಗಳ ವಿಶೇಷ ಅಧ್ಯಾಯ ಪ್ರಾರಂಭಿಸಿದಂತೆ ಕೊಡವ ಭಾಷೆಯ ಅಧ್ಯಾಯ ಪ್ರಾರಂಭಿಸಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮೂಕೊಂಡ ದಿಲೀಪ್, ಕೂಪದಿರ ಸಾಬು ಮತ್ತಿತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here