ಸಿಎಂ ಶೋಕ

0
182

ಬೆಂಗಳೂರು ಪ್ರತಿನಿಧಿ ವರದಿ
ಅಮ್ಮಾ ಎಂದೇ ಜನಪ್ರಿಯರಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಡಾ ಜೆ. ಜಯಲಲಿತಾ ಅವರ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
 
 
 
ನಮ್ಮ ಕರ್ನಾಟಕ ಮೂಲದ ಜಯಲಲಿತಾ ಅವರು ಶ್ರೀ ಶೈಲ ಮಹಾತ್ಮೆ, ಚಿನ್ನದಗೊಂಬೆ, ಅಮರಶಿಲ್ಪಿ ಜಕಣಾಚಾರಿ, ಬದುಕುವ ದಾರಿ, ಮಾವನ ಮಗಳು, ಮನೆ ಅಳಿಯ, ನನ್ನ ಕರ್ತವ್ಯ ಕನ್ನಡ ಭಾಷೆಯ ಚಲನಚಿತ್ರಗಳೂ ಒಳಗೊಂಡಂತೆ ತೆಲುಗು, ಮಲೆಯಾಳಂ, ಹಿಂದಿ ಹಾಗೂ ತಮಿಳು ಭಾಷೆಯ 140 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು. ಜನ ಮಾನಸದಲ್ಲಿ ವಿಶೇಷ ಸ್ಥಾನ ಗಳಿಸಿದರು. ನಂತರ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷವನ್ನು ಸೇರಿ ಪ್ರಚಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲ, ತಮಿಳುನಾಡಿನ ರಾಜಕೀಯ ರಂಗದಲ್ಲೂ ಅತೀ ಎತ್ತರದ ನಾಯಕಿಯಾಗಿ ಬೆಳೆದರು ಎಂಬುದು ಇದೀಗ ಇತಿಹಾಸ.
 
 
 
ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಡಾ ಜಯಲಲಿತಾ ಅವರು ತಮಿಳು ನಾಡಿನ ಅತೀ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎನಿಸಿದ್ದರು. ಈ ಅವಧಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಡಾ ಜಯಲಲಿತಾ ಅವರು ಅನುಷ್ಠಾನಕ್ಕೆ ತಂದ ತೊಟ್ಟಿಲಿಗೆ ಮಗು ಯೋಜನೆ ಎಲ್ಲರ ಮೆಚ್ಚುಗೆ ಗಳಿಸಿತು. ಮಹಿಳಾ ಪೊಲೀಸ್ ಠಾಣೆ, ಮಹಿಳಾ ಗ್ರಂಥಾಲಯ, ಸರ್ವ ಮಹಿಳಾ ಬ್ಯಾಂಕ್ ಇಂತಹ ಪರಿಕಲ್ಪನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದವರೂ ಡಾ ಜಯಲಲಿತಾ ಅವರೇ. ತಮಿಳುನಾಡು ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಅಧಿಕಾರದ ಗದ್ದುಗೆ ಏರಿರುವ ಡಾ ಜಯಲಲಿತಾ ಅವರು ಎರಡು ಬಾರಿ ಅಧಿಕಾರದಿಂದ ಹೊರಗುಳಿಯಬೇಕಾಗಿ ಬಂದರೂ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು. ಡಾ ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಒಟ್ಟಾರೆ ಆರು ಬಾರಿ ಅಧಿಕಾರ ಹಾಗೂ ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
 
 
 
ಆಡಳಿತದಲ್ಲಿ ಬಿಗಿ. ಪಕ್ಷದ ವ್ಯವಹಾರಗಳಲ್ಲಿ ಕಡು ಶಿಸ್ತು. ಅಮ್ಮಾ ಕ್ಯಾಂಟೀನ್, ಅಮ್ಮಾ ವಾಟರ್, ಅಮ್ಮ ಸ್ಕೂಟಿಯಂತಹ ತಮ್ಮ ಜನಪರ-ಜನಪ್ರಿಯ ಯೋಜನೆಗಳಿಂದ ಅಭಿಮಾನಿಗಳ ಮಹಾ ಸಾಗರವನ್ನೇ ಸೃಷ್ಠಿಸಿಕೊಂಡಿರುವ ಡಾ ಜಯಲಲಿತಾ ಅವರು ಇನ್ನಿಲ್ಲ ಎಂದು ನಂಬಲು ಸಾಧ್ಯವೇ ಇಲ್ಲ ಎಂಬ ವಾತಾವರಣವು ತಮಿಳುನಾಡಿನಾದ್ಯಂತ ಸೃಷ್ಠಿಯಾಗಿರುವುದು ಅವರ ಪ್ರಭಾವವನ್ನು ಬಣ್ಣಿಸುತ್ತದೆ. ಇಹಲೋಕ ತ್ಯಜಿಸಿ ಇಂದು ಇತಿಹಾಸ ಪುಟಗಳನ್ನು ಸೇರಿರುವ ಡಾ ಜಯಲಲಿತಾ ಅವರು ತಮಿಳುನಾಡಿನ ಚರಿತ್ರೆಯಲ್ಲಿ ಚಿರಕಾಲ ಉಳಿಯುತ್ತಾರೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
 
 
 
ಜಯಲಲಿತಾ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ತಮಿಳುನಾಡಿನ ಒಳಗೂ ಹಾಗೂ ಹೊರಗೂ ಲಕ್ಷಾಂತರ ಅಭಿಮಾನಿಗಳನ್ನು ತಮ್ಮ ಕುಟುಂಬದ ಸದಸ್ಯರನ್ನಾಗಿಸಿಕೊಂಡಿದ್ದ ಡಾ ಜಯಲಲಿತಾ ಅವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಈ ಬೃಹತ್ ಕುಟುಂಬಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here