ಸಾವಯವ ಪದ್ಧತಿಗೆ ಮನಸ್ಸುಮಾಡಿ, ಜೀವನವನ್ನೇ ಹಸನು ಮಾಡಿ‌

0
259

 
ಚಿತ್ರದುರ್ಗ ಪ್ರತಿನಿಧಿ ವರದಿ
ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ದಶರಥಗಳು ಇಂದು ಚಿತ್ರದುರ್ಗ ಪುರವನ್ನು ಪ್ರವೇಶಿಸಿತು. ನಗರದ ಗಣ್ಯರು ಗೋರಥಗಳನ್ನು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಂತರ ವಾಸವೀ ಪ್ರೌಢಶಾಲೆಯ ಆವರಣದಲ್ಲಿ ಮಂಗಲಗೋಯಾತ್ರೆಯ ಅಂಗವಾಗಿ ಗೋಚಿಂತನೆಯ ಕಾರ್ಯಕ್ರಮ ನಡೆಯಿತು.
 
 
ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಕೂಡ್ಲಿಗಿ ಶೃಂಗೇರಿಪೀಠದ ಶ್ರೀ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಸಕಲ ಸತ್ಕರ್ಮಕ್ಕೆ ಪಂಚಗವ್ಯವನ್ನು ನೀಡಿ ಪ್ರಾರಂಭಿಸುತ್ತಾರಾದರೆ, ಗೋವಿನ ಮಹತ್ತ್ವ ಎಷ್ಟೆಂದು ಅರಿತುಕೊಳ್ಳಬೇಕಿದೆ. ಕೃತಕ ಔಷಧ‌, ಗೊಬ್ಬರಗಳಿಂದ ಅನೇಕ ಹೆಸರೇ ತಿಳಿಯದಂತಹ ರೋಗಗಳು ಮನುಷ್ಯನನ್ನು ಪೀಡಿಸುತ್ತಿದೆ. ಇಂದಿನ ಶಕ್ತಿಯಿಲ್ಲದ ಆಹಾರಗಳನ್ನು ಸೇವಿಸಿ ಅಸ್ವಸ್ಥರಾಗದೇ ಸಾವಯವ ಪದ್ಧತಿಗೆ ಮನಸ್ಸು ಮಾಡಿ ಗೋರಕ್ಷಣೆ ಮಾಡಬೇಕಿದೆ ಎಂದರು.
 
 
ಗೋಹತ್ಯೆಗೆ ಮಂಗಲ ಹಾಡಲಿದೆ ಮಂಗಲಗೋಯಾತ್ರೆ
ಮಂಗಲಗೋಯಾತ್ರೆಯ ಸಂಯೋಜಕರಾದ ಮಧು ಗೋಮತಿಯವರು ಮಾತನಾಡಿ, ಭಾರತೀಯ ಗೋವಂಶವನ್ನು ಉಳಿಸುವಲ್ಲಿ ಕ್ರಾಂತಿಕಾರಕ ಹೆಜ್ಜೆಯಾದ ಮಂಗಲಗೋಯಾತ್ರೆ, ಗೋಹತ್ಯೆಗೆ ಮಂಗಲ ಹಾಡುವ ನಿಟ್ಟಿನಲ್ಲಿ ಹುಟ್ಟಿಕೊಂಡಿದೆ. ಅದಲ್ಲದೇ ಗೋಮೂತ್ರ ಡೈರಿ, ಗೋಕಲಾ, ಗವ್ಯ ಯೂನಿಟ್ ಗಳನ್ನು ಒಳಗೊಂಡು ಗೋಪರಿವಾರವನ್ನು ರಚನೆ ಮಾಡುತ್ತಲೇ ಗೋಸಂರಕ್ಷಣೆಗೆ ಅಡಿಯಿಡಲಿದೆ. ಹಾಲನ್ನು ಹೊರತುಪಡಿಸಿ ಆರ್ಥಿಕತೆಯ ಲಾಭ ಪಡೆಯುವ ಆಲೋಚನೆ ಮಾಡಿದಲ್ಲಿ ಗೋವಿನ ಜೀವಿತಕ್ಕೆ ಮೌಲ್ಯ ಒದಗುತ್ತದೆ. ಆಗ ಮಾತ್ರ ಗೋಸಂತತಿ ಉಳಿಯಲಿದೆ ಎಂದರು.
 
mata_chitrdurga
ಪಿಜ್ಜಾಗಳಿಗಿಂತ ಗೋ ಉತ್ಪನ್ನಗಳಿಗೆ ಬೆಲೆ ನೀಡಿ
ಗೋಸೇವಕರಾದ ಶ್ರೀಯುತ ರಾಘವೇಂದ್ರರವರು ಮಾತನಾಡಿ, ತೊಂಬತ್ತು ಕೋಟಿ ಜನಗಳು ಪ್ರತಿದಿನ ಮಾತ್ರೆಗಳನ್ನೇ ಆಹಾರದಂತೆ ತಿನ್ನುತ್ತಿದ್ದಾರೆ. ಭಾರತ ಮುಂದುವರೆಯುತ್ತಿದೆ ಎಂಬ ಭ್ರಮೆಯಲ್ಲಿ ಇಂದು‌ ಬದುಕುತ್ತಿದ್ದೇವೆ. ನಿಜವಾಗಿ ಗೋ ಸಂರಕ್ಷಣೆಯಾಗಿ, ನಮ್ಮ ಪಾರಂಪರಿಕ ಕೃಷಿಗೆ ಮರಳಿದಲ್ಲಿ ಮಾತ್ರ ಗೋ ಸಂತತಿ ಉಳಿದು, ಭಾರತಿಈಯತೆ ಬೆಳಗಲು ಸಾಧ್ಯವಿದೆ. ದೇಸಿ ಗೋವಿನಲ್ಲಿರುವ ಲಾಭದಾಯಕ ಅಂಶಗಳನ್ನು ಗಮನಿಸದೇ ಪ್ಯಾಕೆಟ್ ಹಾಲು, ಜರ್ಸಿ ಹಸುವಿನ ಹಾಲಿನ ಲೋಭಕ್ಕೆ ಬಲಿಯಾಗುತ್ತಿರುವ ಇಂದಿನ ಜನತೆ ಎಚ್ಚೆತ್ತುಕೊಂಡು ಉಳಿದಿರುವ ಮೂವತ್ತ್ಮೂರು ಗೋತಳಿಗಳನ್ನಾದರೂ ಉಳಿಸಬೇಕಿದೆ. ರಾಸಾಯನಿಕ ಗೊಬ್ಬರಗಳಿಗೆ ಸಿಗುತ್ತಿರುವ ಸಬ್ಸಿಡಿ ಗಳಿಂದ ಕಂಪೆನಿಗಳ ಉದ್ಧಾರವಾಗುತ್ತಿದೆಯೇ ಹೊರತು, ರೈತರು ದಿವಾಳಿಯಾಗುತ್ತಿದ್ದಾರೆ. ದೇಸಿ ಹಸುವನ್ನು ಸಾಕಿದಲ್ಲಿ ಆರೋಗ್ಯವನ್ನು ಪಡೆಯುವುದಲ್ಲದೇ, ಮನೆ, ಊರು, ದೇಶ ಸುರಕ್ಷಿತವಾಗಲು ಸಾಧ್ಯವಿದೆ. ಪಿಜ್ಜಾಗೆ ಟಿಪ್ಸ್ ಕೊಡುವ ಇಂದಿನ ಜನ ಗೋವಿನ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ರೈತನಿಗಾಗಿ ನೀಡುವಲ್ಲಿ ಯೋಚನೆ ಮಾಡುತ್ತಾರೆ. ಈ ಮನಸ್ಥಿತಿ ಬದಲಾಗಿ ದೇಸೀಹಸುವಿನ ಉತ್ಪನ್ನಗಳಿಗೆ “ಬೆಲೆ”ನೀಡಬೇಕಿದೆ. ಮನೆಮುಂದೆ ತುಳಸಿ, ಮನೆ ಹಿಂದೆ ಗೋವು ಇದ್ದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
 
 
ಮರೆಯಾಗುತ್ತಿರುವ ಗೋಮಾಳಗಳು
ಟಿ.ಎಸ್. ಮಂಜುನಾಥ್ ರವರು ಮಾತನಾಡಿ, ಗೋಮಾಳಗಳು ಊರಿನಿಂದ ಮರೆಯಾಗಿ ಆ ಜಾಗದಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆಯೆತ್ತಿ ಗೋಸಂತತಿ ವಿನಾಶದತ್ತ ಸಾಗಿದೆ. ಗೋವಿನ ಉತ್ಪನ್ನಗಳನ್ನು ಉಪಯೋಗಿಸುವ ಕಡೆ ಆಲೋಚಿಸಿದಲ್ಲಿ ಗೋರಕ್ಷಣೆಯನ್ನು ಮಾಡಿದಂತೆಯೇ ಆಗುತ್ತದೆ. ಈ ದಿಸೆಯಲ್ಲಿ ಹೊರಟ ಮಂಗಲಗೋಯಾತ್ರೆಯ ಕಾರ್ಯ ಶ್ಲಾಘನೀಯ ಎಂದರು.
 
 
ವಾಸವಿ ಪ್ರೌಢಶಾಲೆಯ ಮುಖ್ಯಸ್ಥರಾದ ಪಿ.ಎಲ್. ಸುರೇಶ್ ರವರು ಮಾತನಾಡಿ, ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯತ್ತಿರುವ ಮಂಗಲಗೋಯಾತ್ರೆ ಕಾರ್ಯಕ್ಕೆ ಇಡೀ ಸಮಾಜವೂ ಸೇರಿಕೊಂಡು ಯಶಸ್ವಿಗೊಳಿಸಬೇಕಿದೆ. ಆಮ್ಲಜನಕವನ್ನು ನೀಡುವ ಏಕೈಕ ಪ್ರಾಣಿಯಾದ ಗೋರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯಪಟ್ಟರು.
 
 
ಈ ಸಂದರ್ಭದಲ್ಲಿ ನಗರದ ಸುಬ್ರಮಣ್ಯ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀರಮೇಶ್, ಮಂಗಲಗೋಯಾತ್ರೆಯ ತಾಲೂಕು ಆಯೋಜಕರಾದ ದೀಪಕ್, ಶೇಷಗಿರಿರಾವ್ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು. ನಂತರ ಸ್ಥಳೀಯರೊಡನೆ ಗೋರಕ್ಷಣೆ ಕುರಿತಾದ ಸಂವಾದ ನಡೆಯಿತು.

LEAVE A REPLY

Please enter your comment!
Please enter your name here