ಸಾಮಾಜಿಕ ಭದ್ರತೆ ಒದಗಿಸಲು ಸಿಐಟಿಯು ಒತ್ತಾಯ

0
439

 
ವರದಿ: ಸುನೀಲ್ ಕುಮಾರ್
ಕಾರ್ಮಿಕ ವರ್ಗದ ಅವಿಭಾಜ್ಯ ಅಂಗವಾಗಿರುವ ದುಡಿಯುವ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮನ್ನಾಳುವ ಸರಕಾರಗಳ ತಪ್ಪು ನೀತಿಗಳಿಂದಾಗಿ ಕಾರ್ಮಿಕ ವರ್ಗ ತತ್ತರಿಸುವಾಗ, ಅದರಲ್ಲೂ ಮಹಿಳಾ ಕಾರ್ಮಿಕರಂತೂ ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಮಹಿಳಾ ಕಾರ್ಮಿಕರ ಮೇಲಿನ ಶೋಷಣೆ ವ್ಯಾಪಕಗೊಳ್ಳುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದು ಗಗನ ಕುಸುಮವಾಗಿದೆ. ಮಾತ್ರವಲ್ಲದೆ ಪುರುಷ ಹಾಗೂ ಮಹಿಳಾ ಕಾರ್ಮಿಕರ ಮಧ್ಯೆ ತಾರತಮ್ಯವೆಸಗಲಾಗುತ್ತಿದೆ. ಕೂಲಿ ಕೆಲಸ ಮಾಡುವವರಿಂದ ಹಿಡಿದು ಸರಕಾರಿ, ಖಾಸಗೀ ಕಚೇರಿಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರು, ನೌಕರರ ಮಧ್ಯೆ ಲೈಂಗಿಕ ಶೋಷಣೆವೆಂಬುದು ಪೆಡಂಭೂತವಾಗಿ ಕಾಡುತ್ತಿದೆ. ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿಗೆ ರಕ್ಷಣೆಯೂ ಇಲ್ಲವಾಗಿದೆ. ಮಹಿಳಾ ಕಾರ್ಮಿಕರು ದುಡಿಯುವ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡದೆ ಗುಲಾಮರಂತೆ ದುಡಿಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ದುಡಿಯುವ ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ದುಡಿಯುವ ಮಹಿಳೆಯರು ಸಂಘಟಿತ ಶಕ್ತಿಯಾಗಿ ಮಹಿಳಾ ಶೋಷಣೆ, ಅಸಾಮಾನತೆ, ದೌರ್ಜನ್ಯಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕೆಂದು ಸಿಐಟಿಯು ರಾಜ್ಯ ಮುಖಂಡರೂ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕಿಯಾದ ಸುನಂದಾ ಎಚ್.ಎಸ್.ರವರು ಕರೆ ನೀಡಿದರು.
 
mnglor_cit
ಅವರು ತಾ. 31-07-2016ರಂದು ನಗರದ ಬೋಳಾರದಲ್ಲಿ ಸಿಐಟಿಯು ನೇತೃತ್ವದಲ್ಲಿ ಜರುಗಿದ ದುಡಿಯುವ ಮಹಿಳೆಯರ ದ.ಕ. ಜಿಲ್ಲಾ ಸಮಾವೇಶವನ್ನು ಉದ್ಘಾಟಿಸುತ್ತಾ, ಈ ಮಾತುಗಳನ್ನು ಹೇಳಿದರು.
 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ರವರು ಮಾತನಾಡುತ್ತಾ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಅತ್ಯಂತ ಕೀಳಾಗಿ ಕಾಣುವ ಮನೋಭಾವನೆ ವ್ಯಾಪಕಗೊಳ್ಳುತ್ತಿದೆ. ಇದರಿಂದಾಗಿ ದುಡಿಯುವಂತಹ ಸ್ಥಳಗಳಲ್ಲೂ ಮಹಿಳಾ ಕಾರ್ಮಿಕರ ಮೇಲೆ ಅನ್ಯಾಯ, ದೌರ್ಜನ್ಯ, ಲೈಂಗಿಕ ಶೋಷಣೆ ಮಿತಿಮೀರುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಅದ್ವಿತೀಯ ಸಾಧನೆ ಮಾಡುತ್ತಿದ್ದಾರೂ, ಅವರನ್ನು ಸಮಾಜದಲ್ಲಿ ಎರಡನೆಯ ದರ್ಜೆಯ ನಾಗರಿಕರಂತೆ ಕಾಣುತ್ತಿರುವುದು ಆಳುವ ವರ್ಗದ ಮನೋಭಾವವನ್ನು ಚಿತ್ರಿಸುತ್ತಿದೆ. ಜಾಗತೀಕರಣ, ಉದಾರೀಕರಣ ನೀತಿಗಳು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲೂ ಅದಕ್ಕೆ ಮೊದಲು ಬಲಿಯಾಗುತ್ತಿರುವುದು ಮಹಿಳೆಯರು. ಕೋಮುವಾದ ಜಾತಿವಾದ ಭಯೋತ್ಪಾದನೆಗಳ ಕರಿ ನೆರಳಲ್ಲಿ ನಲುಗುತ್ತಿರುವ ನಮ್ಮ ಸಮಾಜದಲ್ಲಿ ಅಲ್ಲಿಯೂ ಬಲಿಯಾಗುತ್ತಿರುವುದು ಮಹಿಳೆಯರು. ಈ ನಿಟ್ಟಿನಲ್ಲಿ ದುಡಿಯುವ ಮಹಿಳೆಯರ ಐಕ್ಯ ಚಳುವಳಿ ರೂಪುಗೊಂಡು, ಕಾರ್ಮಿಕರ ಐಕ್ಯತೆ-ಸೌಹಾರ್ದತೆಯನ್ನು ಉಳಿಸಿ ಬೆಳೆಸುವಲ್ಲಿ ದುಡಿಯುವ ಮಹಿಳೆಯರು ಮುಂಚೂಣಿಯಲ್ಲಿರಬೇಕೆಂದು ಹೇಳಿದರು.
 
ಸಮಾವೇಶದ ಸಮಾರೋಪ ಭಾಷಣ ಮಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ಮಹಿಳಾ ಕಾರ್ಮಿಕರು ನಡೆಸಿದ ಧೀರೋದತ್ತವಾದ ಹೋರಾಟಗಳನ್ನು ಮೆಲುಕು ಹಾಕುತ್ತಾ ದ.ಕ. ಜಿಲ್ಲೆಯಲ್ಲಿ ಮಹಿಳೆಯರೇ ಅತ್ಯಧಿಕ ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರು, ಕ್ಯಾಶ್ಯೂ ಗೋಡಂಬಿ ಕಾರ್ಮಿಕರು, ಅಂಗನವಾಡಿ, ಆಶಾ, ಬಿಸಿಯೂಟ ನೌಕರರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ಪೊಲೀಸರ ಲಾಠಿ ಬೂಟುಗಳಿಂದ ಪೆಟ್ಟು ತಿಂದು ಜೈಲು ಸೇರಿದ್ದಾರೆ. ದ.ಕ. ಜಿಲ್ಲೆಯ ಕಾರ್ಮಿಕ ಚಳುವಳಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಾಖಲೆ ಹೋರಾಟಗಳನ್ನು ದುಡಿಯುವ ಮಹಿಳೆಯರು ನಡೆಸಿದ್ದಾರೆ. ಇಂತಹ ಹೋರಾಟದ ಪರಂಪರೆ ಮುಂದುವರಿಯಬೇಕು. ಹೊಸ ವಿಭಾಗದಲ್ಲಿ ದುಡಿಯುವ ಹಾಗೂ ಅತೀ ಶೋಷಣೆಗೆ ಒಳಗಾಗುವ ದುಡಿಯುವ ಮಹಿಳೆಯರನ್ನು ಸಂಘಟನಾ ತೆಕ್ಕೆಗೆ ತರುವಲ್ಲಿ ಈ ಸಮಾವೇಶವು ನಾಂದಿಯಾಗಲಿ, ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೆಚ್ಚೆಚ್ಚು ಹೋರಾಟಗಳು ಬೆಳೆದು ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
 
ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕಿಯಾದ ಪದ್ಮಾವತಿ ಎಸ್. ಶೆಟ್ಟಿಯವರು 3 ವರ್ಷಗಳ ಅವಧಿಯ ಕರಡು ವರದಿಯನ್ನು ಮಂಡಿಸಿದರು. ಸಭೆಯ ಅಧ್ಯಕ್ಷತೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಬಿ. ಶೆಟ್ಟಿಯವರು ವಹಿಸಿದ್ದರು. ಸಮಾವೇಶಕ್ಕೆ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಹೇಮಲತಾರವರು ಶುಭಕೋರಿ ಮಾತನಾಡಿದರು. ಎಲ್ಐಸಿ ವಿಮಾ ಪ್ರತಿನಿಧಿಗಳ ಸಂಘಟನೆಯ ಜಿಲ್ಲಾ ನಾಯಕಿಯಾದ ಶೋಭಾ ಅಡ್ಯಂತಾಯರವರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಬೀಡಿ, ಕಟ್ಟಡ, ಬಿಸಿಯೂಟ, ಅಂಗನವಾಡಿ, ಆಶಾ, ರೈಲ್ವೇ, ಬಿಎಸ್ಎನ್ಎಲ್, ವಿಮಾ, ಬೀದಿಬದಿ, ಹಮಾಲಿ, ಬ್ಯಾಂಕ್ ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here