ಸಾಧುಗಳಿಗೆ ಅಹಂಭಾವ ಸಲ್ಲದು !!!

0
3807

ನಿತ್ಯ ಅಂಕಣ-೭೬ : ತಾರಾನಾಥ್‌ ಮೇಸ್ತ, ಶಿರೂರು.
ನಿತ್ಯಾನಂದರು ಗಣೇಶಪುರಿಯ ದರ್ಶನ ಮಂದಿರದಲ್ಲಿ ವಿಶ್ರಮಿಸುತ್ತಿದ್ದರು. ಆವಾಗ ಅವರಿದ್ದಲಿಗೆ ಉತ್ತರ ಭಾರತ ಮೂಲದ ಮೂವರು ನಾಥಪಂಥ ಸಂಪ್ರದಾಯದ ಸಾಧುಗಳು ಪ್ರವೇಶ ಪಡೆಯುತ್ತಾರೆ. ಅವರು ಗುರುದೇವರ ಮಹಿಮೆಯ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದವರು. ಸಾಧುಗಳು ಬರುವಾಗ ಬಹಳಷ್ಟು ಭಕ್ತರು ದರ್ಶನ ಮಂದಿರದಲ್ಲಿ ಮೌನತೆಯಿಂದ ಗುರುದೇವರ ಆರಾಧಿಸುತ್ತಿದ್ದರು. ನಾಥಪಂಥದ ಸಾಧುಗಳ ವೇಷ ಭೂಷಣಗಳು ಒಂದು ರೀತಿಯಲ್ಲಿ ಆಕರ್ಷಣೀಯ. ಒಮ್ಮೆಗೆ ಒಳಪ್ರವೇಶಸಿದ ಸಾಧುಗಳ ಕಂಡು ಎಲ್ಲಾ ಭಕ್ತರು ಅವರಡೆಗೆ ಅಚ್ಚರಿಯಿಂದ ನೋಡಲಾರಂಭಿಸಿದರು.

ಅವರಲ್ಲಿ ಒರ್ವ ಸಾಧುವಿನ ಕೈಯಲ್ಲಿ ಉದ್ದದ ತ್ರಿಶೂಲ ಇತ್ತು. ಅದು ಝಳಪಳಿಸುತಿತ್ತು. ಗುರುದೇವರು ತಮ್ಮದೆ ಲೋಕದಲ್ಲಿ ವಿಹರಿಸುತ್ತಿದ್ದರು. ಸಾಧುಗಳು ಬಂದಿರುವುದು ಅವರಿಗೆ ತಿಳಿದಿರುವುದಿಲ್ಲ. ಬಂದಿರುವ ಸಾಧುಗಳು ತಮಗೆ ನಿತ್ಯಾನಂದರು ಅಗೌರವದಿಂದ ಕಾಣುತಿದ್ದಾರೆ ಎಂದು ಭಾವಿಸಿದರು. ಗರುದೇವರ ಸ್ವಭಾವವು ಸರಿಕಾಣದ ರೀತಿಯಲ್ಲಿ ಅರ್ಥೈಸಿಕೊಂಡರು. ನಾಥಪಂಥದ ಸಂತರು ಆಗಮಿಸುವಾಗ, ಆಶ್ರಮ ಭಕ್ತರೊಂದಿಗೆ ವಾದ್ಯವೃಂದದ ಮೂಲಕ ಕರೆದೊಯ್ದು ಹಾರ್ದಿಕವಾಗಿ ಸ್ವಾಗಿತಿಸುತ್ತಾರೆ, ಎಂಬ ನಿರೀಕ್ಷೆ ಅವರಾದಗಿತ್ತು. ಆದರೆ ಅವರ ನಿರೀಕ್ಷಿಸಿದ ನಿರೀಕ್ಷೆ ಯಾವುದು ಅಲ್ಲಿ ನಡೆಯುವುದಿಲ್ಲ. ಹಾಗಾಗಿ ಮೂವರು ಸಾಧುಗಳು ಬೇಸರಿಸಿಕೊಂಡಿರುತ್ತಾರೆ.

ತಮ್ಮ ತಪೋ ಸಾಧನೆ, ಸಿದ್ಧಿಸಿಕೊಂಡಿರುವ ಶಕ್ತಿ ಏನೆಂದು ತೋರಿಸಲು, ತ್ರಿಶೂಲಧಾರಿ ಸಾಧು ತನ್ನಲ್ಲಿದ್ದ ತ್ರಿಶೂಲವನ್ನು ಮೇಲಕ್ಕೆ ಎಸೆದ. ಎಸೆದಿರುವ ತ್ರಿಶೂಲವು ಯಾವೊಂದು ಆಧಾರ ಇಲ್ಲದೆ, ವಾತಾವರಣದ ಮಧ್ಯದಲ್ಲಿ ನಿಂತಿತು. ಮೂವರು ಸಾಧುಗಳು ದರ್ಶನ ಮಂದಿರದಲ್ಲಿ ತಮ್ಮ ಪವಾಡ ಶಕ್ತಿಯನ್ನು ಪ್ರದರ್ಶಿಸಿದರು. ಸೇರಿದ ಭಕ್ತರು ಅವರ ಕಸರತ್ತು ಕಂಡು ಅಚ್ಚರಿಗೆ ಒಳಗಾದರು. ಸಾಧುಗಳು ತಮ್ಮ ಸಾಧನೆಯ ಕುರಿತು ಅಲ್ಲಿದ್ದ ಭಕ್ತರಲ್ಲಿ ಹೇಳಿಕೊಂಡು, ಜಂಭದ ಪ್ರದರ್ಶನವನ್ನು ತೋರಿಸಿದರು. ಅಲ್ಲಿದ್ದ ಭಕ್ತರು ಅವರದು ಯಕ್ಷಿಣಿ ಎಂದು ತಿಳಿದು ಕ್ಷಣ ಹೊತ್ತು ಆನಂದ ಅನುಭವಿಸಿದರು. ನಡೆಯುತ್ತಿರುವ ವಿದ್ಯಾಮಾನಗಳನ್ನು ಒಳಗಣ್ಣಿನಲ್ಲಿ ಕಾಣುತಿದ್ಧ ನಿತ್ಯಾನಂದರು ಕೂತಲ್ಲೆ ತಮ್ಮ ಕಾಲುಗಳನ್ನು ನಿಧಾನಗತಿಯಲ್ಲಿ ಅಲುಗಾಡಿಸಿದರು. ಗುರುದೇವರ ಸಣ್ಣ ಕಾಲಿನ ಅಲುಗಾಟಕ್ಕೆ ಗಾಳಿಯಲ್ಲಿ ನಿಂತುಕೊಂಡಿದ್ದ ತ್ರಿಶೂಲ ಒಮ್ಮೆಗೆ ನೆಲಕ್ಕೆ ಉರುಳಿತು.

ಇದನ್ನು ನೋಡಿದ ಮೂವರು ಸಾಧುಗಳ ಮುಖದಲ್ಲಿ ಆಶ್ಚರ್ಯ ಅನುಭವಿಸಿರುವ ಭಾವನೆ ಆವರಿಸಿಕೊಂಡಿತು. ಗುರುದೇವರ ಮಹಿಮೆ ಏನೆಂದು ಅವರಿಗೆ ಅರ್ಥವಾಯಿತು. ಅವರು ಬಹಳ ಕಷ್ಟಪಟ್ಟು ಸಾಧಿಸಿ ಸಿದ್ಧಿಸಿಕೊಂಡ ಸಿದ್ಧಿಗಳು ಅವರಿಂದ ದೂರವಾದವು. ಕೂಡಲೇ ತಮ್ಮ ತಪ್ಪನ್ನು ಅರಿತುಕೊಂಡು ಗುರುದೇವರ ಚರಣಗಳಿಗೆ ಅಡ್ಡಬಿದ್ದು ಶರಣಾಗತಿ ಪ್ರದರ್ಶಿಸಿದರು. ಆವಾಗಲೇ ಮೂವರಲ್ಲಿ ನೆಲೆಕಂಡಿದ್ದ ಜಂಭವು ಹೊರನಡೆಯಿತು. ನಂತರ ಅವರು, ಗುರುದೇವರಲ್ಲಿ ಮೂರು ದಿನಗಳ ಕಾಲ ಮಂದಿರದಲ್ಲಿ ಮೊಕ್ಕಾಂ ಇರಲು ಅನುಮತಿಯನ್ನು ಯಾಚಿಸಿದರು. ಗುರುದೇವರು ಅನುಮತಿ ದಯಾಪಾಲಿಸಿದರು. ಮೂರು ದಿನಗಳಲ್ಲಿ ಜಂಭ ತೊರೆದು ನೈಜಾರ್ಥದ ಸಾಧುಗಳಾಗಿ ಹೊರ ನಡೆದರು. ಸ್ವಾಗತವನ್ನು ನಿರೀಕ್ಷಿಸಿದ ಮೂವರು ನಾಥಪಂತದ ಸಂತರು ಸ್ವಾಗತ ಪಡೆಯಲು ಅರ್ಹರಲ್ಲ ಎನ್ನುವುದು ಈ ಪ್ರಕರಣದಲ್ಲಿ ಅಂತಿಮವಾಗಿ ತಿಳಿಯಬಹುದು. ಸಾಧುಗಳಿಗೆ ಅಹಂಭಾವ ಸಲ್ಲದು ಎಂಬವುದು ಈ ಘಟನೆಯ ನೀತಿಸಾರ.

LEAVE A REPLY

Please enter your comment!
Please enter your name here