ದೃಷ್ಠಿ ಅಂಕಣ: ಸೌಮ್ಯ ಕುಗ್ವೆ
ಭಾಗ-1
ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್, ನ್ಯಾಯಾಧೀಶ ದೀಪಕ್ ವರ್ಮ ಮತ್ತು ಬಿ.ಎಸ್.ಚೌಹಾಣ್ ಅವರನ್ನು ಒಳಗೊಂಡ ಅಪೆಕ್ಸ್ ನ್ಯಾಯಾಲಯ ಮೇ 22, 2013ರಲ್ಲಿ ಲಿವ್ ಇನ್ ರಿಲೇಷನ್ ಶಿಪ್ ಹಾಗೂ ಮದುವೆಯ ಮೊದಲೇ ಇರುವ ಲೈಂಗಿಕ ಸಂಬಂಧದ ಕುರಿತು ಒಂದು ಮಹತ್ವದ ತೀರ್ಪು ನೀಡಿತು. ತಮಿಳುನಾಡಿನ ಹೆಸರಾಂತ ನಟಿ ಖುಷ್ಬೂ ಅವರ ಮದುವೆಯ ಮೊದಲೇ ಹೊಂದುವ ಲೈಂಗಿಕ ವಿಚಾರದ ಪರವಾದ ಹೇಳಿಕೆಗೆ ಆಕೆಯ ವಿರುದ್ಧವಾಗಿ ತಮಿಳುನಾಡಿನ ಅನೇಕ ಜನರು , ಸಂಘಗಳು 20 ಎಫ್ .ಐ.ಆರ್ ಗಳನ್ನು ದಾಖಲಿಸಿತು. ದಕ್ಷಿಣ ಭಾರತದ ಜನಪ್ರಿಯ ತಾರೆಯ ವಿವಾದಾತ್ಮಕ ಹೇಳಿಕೆಗೆ ಇಡೀ ತಮಿಳುನಾಡು ತಿರುಗಿಬಿದ್ದು ಆಕೆ ಕಾನೂನು ರಕ್ಷೆಯನ್ನು ಪಡೆಯುವಂತಾಯಿತು. ಇದಕ್ಕೆ ಕಾರಣ ಮದುವೆಗೂ ಮೊದಲು ಯಾವುದೇ ಯುವಕ, ಯುವತಿ ಲೈಂಗಿಕ ಸಂಬಂಧ ಹೊಂದಿದರೆ ಅದು ತಪ್ಪಲ್ಲ. ಯುವತಿಯರು ಲೈಂಗಿಕವಾಗಿ ಹರಡುವ ಕಾಯಿಲೆಗಳ ಬಗ್ಗೆ ಮುನ್ನಚ್ಚರಿಕೆ ಹೊಂದಿದ್ದರಾಯಿತು ಎಂಬುದಾಗಿ. ಈ ವಿಚಾರವಾಗಿ ಕಾನೂನಿನ ಮೊರೆ ಹೋದವರಿಗೆ ನ್ಯಾಯಾಲಯ ಇದನ್ನು `ರೈಟ್ ಟು ಲೈಫ್’ (ಜೀವಿಸುವ ಹಕ್ಕು) ಎಂದು ಕರೆದು ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದ್ದು ಲಿವ್ ಇನ್ ಸಂಬಂಧ ಸಹ ಪ್ರತೀ ಜೀವಿಯ ಹಕ್ಕಾಗಿದ್ದು ಇದು ಯಾವುದೇ ಕಾನೂನು – ಸಮಾಜ ಬಾಹಿರವಲ್ಲ, ಅಪರಾಧವಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿತು.
`ಲಿವ್ ಇನ್ ‘ಸಂಗಾತಿ ವಿವಾಹವಾದ ಎಂಭತ್ತರ ಮುದುಕ! – ಆಶ್ಚರ್ಯಕರವಾದುದಾದರೂ ಸತ್ಯ. 80ವರುಷದ ಪಬೂರ ಖೇರ್ ಹಾಗೂ 70ವರ್ಷದ ರೂಪಾಲಿ ರಾಜಾಸ್ಥಾನದ ಉದಯಪುರ ಸಮೀಪದ ಆದಿವಾಸಿ ಜನಾಂಗದವರು ವಾಸವಾಗಿರುವ ಮಂಡವಾ ಎಂಬ ಗ್ರಾಮದವರು. ಇಲ್ಲಿನ ಆದಿವಾಸಿ ಸಮಾಜದಲ್ಲಿ ಮದುವೆಗೂ ಮೊದಲು ಯುವಕ ಯುವತಿಯರು ಒಟ್ಟಿಗೇ ವಾಸಿಸುವ ಅವಕಾಶವಿದ್ದು 50ವರುಷದ ಹಿಂದೆ ಪಬೂರ ಖೇರ್ ಮತ್ತು ರೂಪಾಲಿ ಪರಸ್ಪರ ಪ್ರೀತಿಸಿ ಜೊತೆಯಲ್ಲಿಯೇ ವಾಸಿಸಲು ಶುರುಮಾಡಿದರು. ಕಳೆದ 50ವರುಷಗಳಲ್ಲಿ ಪತಿ ಪತ್ನಿಯರಂತೆ ಜೀವನ ನಡೆಸುತ್ತಿದ್ದರೂ ಮದುವೆಯಾಗಿರಲಿಲ್ಲ. ಇದ್ದಕ್ಕಿದ್ದಂತೆ ಅವರಿಗೆ ಈ ಇಳಿ ವಯಸ್ಸಿನಲ್ಲಿ ವಿವಾಹವಾಗುವ ಬಯಕೆ ಮೂಡಿ ತಮ್ಮ ಮಕ್ಕಳು ,ಮೊಮ್ಮಕ್ಕಳು ಹಾಗೂ ಗ್ರಾಮಸ್ಥರ ಎದುರಿನಲ್ಲಿ ವಿವಾಹವಾಗಿದ್ದಾರೆ.
“ ಸ್ಲಂ ಡಾಗ್ ಮಿಲೇನಿಯರ್ ” ಪ್ರಪಂಚಾದ್ಯಂತ ಹೆಸರು ಮಾಡಿದ ಸಿನೆಮಾ . ಇದರ ಪ್ರಮುಖ ತಾರೆಗಳಾದ ಫ್ರೀಡಾ ಪಿಂಟೋ ಹಾಗೂ ದೇವ್ ಪಾಟೀಲರ ಲಿವಿನ್ ಅಫೇರ್ ಬಹಳವೇ ಸುದ್ದಿ ಮಾಡಿದ ಸಂಬಂಧ.
ಹೀಗೆ ಹುಡುಕುತ್ತಾ ಹೋದರೆ ನಮ್ಮ ಸುತ್ತ ಮುತ್ತ ಹಲವು ಲಿವ್ ಇನ್ ಸಂಬಂಧಗಳ ಉದಾಹರಣೆಗಳು ಕಾಣಬಹುದು. ಹಾಗಾದರೆ ಲಿವ್ ಇನ್ ಎಂದರೇನು? ಇದು ಸಮಾಜ ಬಾಹಿರವೇ? ಅಲ್ಲವೇ? ಇತ್ತೀಚೆಗೆ ವ್ಯಾಪಕವಾಗಿ ಕೇಳಿಬರುತ್ತಿರುವ ಸಮಾಜ ವ್ಯವಸ್ಥೆಯ ಬದಲಾವಣೆಯ ಒಂದು ಅಂಶ ಲಿವ್ ಇನ್ ಆಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ಸಂಬಂಧಕ್ಕೆ ಸಮಾಜ ‘ಮದುವೆ’ಯೆಂಬ ಬಂಧ ಬೆಸೆದಿದೆ. ನಾಗರೀಕತೆ ಬೆಳೆದಾಗಿನಿಂದಲೂ ಮದುವೆಯಾದ ಹೆಣ್ಣು ಗಂಡಿಗೆ ಸಮಾಜ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದೆಯೇ ಹೊರತು ಸಮಾಜದ ನಿರ್ಬಂಧ ಮೀರಿ ಬೆಳೆಸಿದ ಸಂಬಂಧಗಳಿಗಲ್ಲ. ಕೆಲವು ಆದಿವಾಸಿ ಜನಾಂಗಗಳು ಮಾತ್ರ ಅವುಗಳದೇ ಆದ , ಪದ್ಧತಿಯಲ್ಲಿ ವ್ಯತಿರಿಕ್ತವಾದ ಆಚರಣೆಯನ್ನು ಅಳವಡಿಸಿಕೊಂಡಿವೆ. ಉದಾಹರಣೆಗೆ ರಾಜಾಸ್ಥಾನದ `ಮಂಡೂವಾ’ ಗ್ರಾಮದವರು.
ಒಂದು ಕಾಲದಲ್ಲಿ ಮದುವೆಯಾಗುವ ಗಂಡು ಹೆಣ್ಣು ಪರಸ್ಪರ ನೋಡುವ ಪದ್ಧತಿಯಿರಲಿಲ್ಲ. ಮನೆಯ ಹಿರಿಯರು ನೋಡಿ ಒಪ್ಪಿ ಮಾಡಿದ ಮದುವೆ ಇರುತ್ತಿತ್ತು. ಕೆಲವು ವರ್ಷಗಳ ನಂತರ ಹುಡುಗ ಹುಡುಗಿ ಮುಖನೋಡಿ ಮಾತನಾಡಿ ಪರಸ್ಪರ ಒಪ್ಪಿಗೆ ಹೇಳುವ ಕ್ರಮ ಬಂದಿತು. ಮನೆಯವರ ಒಪ್ಪಿಗೆಯೊಂದಿಗೆ ಪ್ರೀತಿಸಿ ವಿವಾಹವಾಗುವ ಪದ್ಧತಿ ಬಂದಿತು. ಮತ್ತೆ ಕೆಲವರು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದವರನ್ನು ಮದುವೆಯಾಗಿ ಜತೆಯಾಗಿ ಜೀವನ ಶುರುಮಾಡಿದರು. ನಿಧಾನವಾಗಿ ಸಮಾಜ ಈ ಎಲ್ಲಾ ರೀತಿಯನ್ನೂ ಒಪ್ಪಿಕೊಂಡಿತು. `ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ ಎಂದು ಗಂಡು ಹೆಣ್ಣಿನ ಕೈ ಹಿಡಿದು ನಡೆಸುವ ಸಹಬಾಳ್ವೆಗೆ ವಿವಾಹದ ಮುದ್ರೆಯನ್ನೊತ್ತಿ ಸಮಾಜ ಮದುವೆಯನ್ನು ಪರುಸ್ಕರಿಸಿತು.
ಮದುವೆಯೆಂಬುದು ಪಾವಿತ್ರ್ಯತೆಯ ಸಂಕೇತವಾದರೂ ಸಹ ಪ್ರೀತಿ-ಪ್ರೇಮ-ನಂಬಿಕೆ ಅದರ ತಳಹದಿ. ನವನಾಗರೀಕತೆಯಲ್ಲಿ ಈ ಅಂಶಗಳನ್ನು ಆಧರಿಸಿ ` ಮದುವೆ ‘ ಯ ಅವಶ್ಯಕತೆ ಇಲ್ಲದೆಯೇ ಗಂಡು ಮತ್ತು ಹೆಣ್ಣು ಒಟ್ಟಿಗೇ ವಾಸಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಯಾವುದೇ ಕಾನೂನಾತ್ಮಕ ಸಾಮಾಜಿಕ ಕಟ್ಟುಪಾಡುಗಳಿಲ್ಲದೆ, ಮದುವೆಯ ಬಂಧವಿಲ್ಲದೆ ಒಂದೇ ಸೂರಿನಡಿ ಒಂದು ಗಂಡು ಹಾಗೂ ಒಂದು ಹೆಣ್ಣು ಸಹಚರ್ಯದ ಬದುಕು ಸಾಧಿಸುವ ಜೀವನ ಶೈಲಿಯನ್ನು ಲಿವ್ ಇನ್ ಸಂಬಂಧ ಎಂದು ಕರೆದು ಸಾಮಾಜಿಕ ಬದಲಾವಣೆಗೆ ದಾರಿಮಾಡಿಕೊಟ್ಟಿತು.
ಹಾಗಾದರೆ ಈ ಸಂಬಂಧಗಳಲ್ಲಿ ಅನುಕೂಲತೆಗಳು ಹೆಚ್ಚೋ ಅನಾನುಕೂಲತೆಗಳು ಹೆಚ್ಚೋ , ಭಾರತೀಯ ಸಮಾಜ ಭಾರತೀಯ ಕಾನೂನು ಇದನ್ನು ಯಾವರೀತಿ ವ್ಯವಸ್ಥೆಯ ಭಾಗವನ್ನಾಗಿ ಪುರಸ್ಕರಿಸಿದೆ? … ಮುಂದುವರಿದ ಭಾಗದಲ್ಲಿ ನಿರೀಕ್ಷಿಸಿ.
ಸೌಮ್ಯ ಕುಗ್ವೆ
[email protected]