ಸಹ'ವಾಸ' ಸಂ'ಬಂಧ'

0
369

 
ದೃಷ್ಟಿ ಅಂಕಣ: ಸೌಮ್ಯ ಕುಗ್ವೆ
ಕಳೆದ ಸಂಚಿಕೆಯಿಂದ…
ಮದುವೆ ಎಂಬುದು ಪಾವಿತ್ರ್ಯತೆಯ ಸಂಕೇತವಾದರೂ ಸಹ ಪ್ರೀತಿ-ಪ್ರೇಮ ನಂಬಿಕೆಯೇ ಅವರ ತಳಹದಿ. ನವ ನಾಗರೀಕತೆಯಲ್ಲಿ ಈ ಅಂಶಗಳನ್ನು ಆಧರಿಸಿ ‘ಮದುವೆ’ಯ ಅವಶ್ಯಕತೆಯಿಲ್ಲದೆಯೇ ಗಂಡು ಮತ್ತು ಹೆಣ್ಣು ಒಟ್ಟಿಗೆ ವಾಸಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಯಾವುದೇ ಕಾನೂನಾತ್ಮಕ, ಸಾಮಾಜಿಕ ಕಟ್ಟುಪಾಡುಗಳಿಲ್ಲದೇ, ಮದುವೆಯ ಬಂಧವಿಲ್ಲದೇ, ಒಂದೇ ಸೂರಿನಡಿ, ಒಂದು ಗಂಡು ಹಾಗೂ ಒಂದು ಹೆಣ್ಣು ಸಾಹಚರ್ಯದ ಬದುಕು ಸಾಗಿಸುವ ಜೀವನ ಶೈಲಿಯನ್ನು ಲಿವ್-ಇನ್ ಸಂಬಂಧ ಎನ್ನಬಹುದು.
 
 
 
 
ಪಾಶ್ಚಾತ್ಯ ಸಮಾಜ ಈಗಾಗಲೇ ಲಿವ್ ಇನ್ ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದು, ಭಾರತದಲ್ಲಿ ಈ ಲಿವ್-ಇನ್ ಕೇವಲ ಮುಂದುವರೆದ ನಗರ ಪ್ರದೇಶಗಳಲ್ಲಿಗೆ ಮಾತ್ರ ಸೀಮಿತವಾಗಿದೆ. ಸಣ್ಣ-ಪುಟ್ಟ ಪ್ರದೇಶಗಳಲ್ಲಿ ಲಿವ್-ಇನ್ ಪದ ಹೆಚ್ಚು ಕೇಳಿಸದಿದ್ದರೂ ಮದುವೆಯಾಗದೆ ಒಟ್ಟಿಗೆ ವಾಸಿಸುವ ಹೆಣ್ಣು-ಗಂಡುಗಳಿಗೇನೂ ಕಡಿಮೆ ಇಲ್ಲ. ಸ್ಥಳೀಯ ಭಾಷೆಗಳಲ್ಲಿ ಇದು ಲಿವ್-ಇನ್ ಆಗದೆ ಹೆಣ್ಣನ್ನು ‘ಇಟ್ಟುಕೊಂಡವಳು’ ಹಾಗೂ ಗಂಡನ್ನು ‘ಇಟ್ಟುಕೊಂಡವನು’ ಎಂಬ ಹಣೆಪಟ್ಟಿ ತಾಗಿಸಿದೆ. ಈ ರೀತಿ ಇಟ್ಟುಕೊಂಡವನು ಅಥವಾ ‘ಇಟ್ಟುಕೊಂಡವಳು’ ಸಮಾಜದಲ್ಲಿ ಅತಿ ಹೆಚ್ಚು ಟೀಕೆ ಅವಮಾನಕ್ಕೆ ಗುರಿಯಾಗಿ ಸಮಾಜದ ಇತರ ಸದಸ್ಯರೊಂದಿಗೆ ಇವರ ಸಂಬಂಧ ಸೀಮಿತವಾಗಿರುತ್ತದೆ. ಯಾವಾಗಲೂ ಸಮಾಜದ ನಿರ್ಬಂಧ ಮೀರಿದ ವ್ಯಕ್ತಿಗಳನ್ನು ಭಾರತೀಯ ಸಮಾಜ ಕೀಳು ದೃಷ್ಟಿಯಿಂದ ನೋಡಿದೆ.
 
 
 
 
ಈ ಲಿನ್ -ಇನ್ ಸಂಬಂಧಗಳು ಆಧುನಿಕ ಎಂದೆನಿಸಿದರೂ ಸಹ ವಾಸಿಸುವ ವ್ಯಕ್ತಿಗಳು ಪರಸ್ಪರ ಪ್ರೀತಿ, ಪ್ರೇಮ ಮತ್ತು ನಂಬಿಕೆಯ ಆಧಾರದ ಮೇಲೆ ನಡೆಯುತ್ತದೆ. ‘ಮದುವೆ’ ಎಂಬ ಸಮಾಜದ, ಕಾನೂನಿನ ಮುದ್ರೆ ಮಾತ್ರ ಇಲ್ಲಿ ಇರುವುದಿಲ್ಲ. ಲಿವ್ -ಇನ್ ಸಂಬಂಧಗಳು ಇಂದು ಮುಂದುವರೆದ ನಗರಗಳಲ್ಲಿ ಸಾಮಾನ್ಯವಾಗಿದ್ದು, ಯುವಕ-ಯುವತಿಯ ಇದರಲ್ಲಿರುವ ಹೆಚ್ಚಿನ ಅನುಕೂಲತೆಯಿಂದಾಗಿ ಲಿವ್-ಇನ್ ಗೆ ಒಪ್ಪಿಗೆಯಿತ್ತಿದ್ದಾರೆ. ಮದುವೆಯ ಬಂಧನದಲ್ಲಿರುವಂತೇ ಇಲ್ಲಿ ಹೆಚ್ಚಿನ ಜವಾಬ್ದಾರಿಯಾಗಲಿ, ಕಮಿಟ್ ಮೆಂಟ್ ಆಗಲಿ, ಇಲ್ಲದಿರುವುದರಿಂದ ಈ ಸಂಬಂಧ ಉಳಿಸಿಕೊಳ್ಳುವುದು ಅಥವಾ ಬಿಡುವುದು ಅವರವರ ಹೊಂದಾಣಿಕೆಯ ಮಟ್ಟವನ್ನು ಆಧರಿಸಿದೆ.ಆದರೆ ಯೋಚಿಸದೇ ಪಡೆದ ಮಕ್ಕಳು ಲಿವ್-ಇನ್ ಸಂಬಂಧಗಳಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಾರೆ. ಹೆಚ್ಚಿನ ಪಾಲು ಯಾವಾಗಲೂ ತಾಯಿಯೇ ಮಗುವಿನ ಜವಾಬ್ದಾರಿ ಹೊರುತ್ತಾಳೆ. ಮದುವೆಯ ಬಂಧನದಲ್ಲಿ ಹುಟ್ಟಿದ ಮಕ್ಕಳಿಗೆ ಸಿಗುವ ಭದ್ರತೆಯಾಗಲೀ, ಆರ್ಥಿಕವಾದ ಸಹಾಯವಾಗಲೀ, ಅಪ್ಪ-ಅಮ್ಮನ ಅನುವಂಶಿಕ ಆಸ್ತಿಯಾಗಲೀ ಪಡೆಯಲು ಈ ಲಿವ್-ಇನ್ ಸಂಬಂಧದಲ್ಲಿ ಜನಿಸುವ ಮಕ್ಕಳು ಪಡೆಯಲು ಅಸಹಾಯಕರಾಗಿದ್ದಾರೆ.
 
ಲಿವ್-ಇನ್ ಸಂಬಂಧ ಯಾವಾಗಲೂ ಅಸ್ಥಿರವಾಗಿದ್ದು ಹೆಣ್ಣಿನ ಭದ್ರತೆಯ ದೃಷ್ಠಿಯಿಂದ ಅನಾನುಕೂಲವೂ ಹೌದು. ಸಣ್ಣ-ಪುಟ್ಟ ಜಗಳ, ಭಿನ್ನಾಭಿಪ್ರಾಯಗಳಿರಬಹುದು, ಬೇರೆ ವ್ಯಕ್ತಿಯ ಆಕರ್ಷಣೆಯಿರಬಹುದು. ಗಂಡಾಗಲೀ-ಹೆಣ್ಣಾಗಲೀ ಯಾವುದೇ ಮುಲಾಜಿಲ್ಲದೇ ನೇರವಾಗಿ ಸಂಬಂಧದಿಂದ ಹೊರನಡೆಯಬಹುದು. ಬಹಳಷ್ಟು ಸಂದರ್ಭದಲ್ಲಿ ಹೆಣ್ಣು ಆರ್ಥೀಕವಾಗಿ ಸಬಲಳಲ್ಲದಿದ್ದರೆ ಹೆಚ್ಚಿನ ತೊಂದರೆ ಅನುಭವಿಸುತ್ತಾಳೆ. ಸಹವಾಸಿಸುವ ವ್ಯಕ್ತಿಗಳು ಸಂಬಂಧದಿಂದ ಹೊರ ನಡೆದಾಗ ಭಾವನಾತ್ಮಕವಾಗಿ ಹೆಚ್ಚು ಅವಲಂಬಿತರಾಗಿರುವವರು ಅಘಾತಕ್ಕೊಳಗಾಗುತ್ತಾರೆ.
 
 
 
ಬ್ರಿಟಿಷರ ಕಾಲದಿಂದಲೂ ಲಿವ್-ಇನ್ ಪದ್ಧತಿಗೆ ಹಲವು ಪರ-ವಿರೋಧ ಚರ್ಚೆಗೊಳಗಾಗಿದ್ದು ಬೆಂಗಳೂರು, ಮುಂಬಯಿ, ದೆಹಲಿಗಳಂತಹ ದೊಡ್ಡ ವಿಷಯವಾಗದೆ ಮುಂದುವರಿದಿದೆ. ಹಳ್ಳಿಗಳಲ್ಲಿ ಚಿಕ್ಕ ಪಟ್ಟಣಗಳಲ್ಲಿ ಇದು ಅತಿಹೆಚ್ಚು ಪ್ರಾಮುಖ್ಯತೆಯನ್ನು ಸಮಾಜ ಬಾಹಿರ ಎಂದೂ ವ್ಯಾಖ್ಯೆಯನ್ನು ಪಡೆಯುತ್ತದೆ. ಮಹಿಳೆಯರ ಸುರಕ್ಷಣೆಗಾಗಿ ಭಾರತೀಯ ಕಾನೂನು ಲಿವ್-ಇನ್ ಸಂಬಂಧದ ಕುರಿತಾಗಿ ಕೆಲವು ತೀರ್ಪನ್ನು ಕೊಟ್ಟಿದೆ. ಕೆಲವು ಇನ್ನು ಪರಿಶೀಲನೆಯ ಹಂತದಲ್ಲಿದೆ.
 
 
 
ಲಿವ್-ಇನ್ ಸಂಬಂಧದಲ್ಲಿ ಕಾನೂನು ರೀತ್ಯಾ ವಿವಾಹದಲ್ಲಿರುವಂತೆ ಖಚಿತತೆ ಇಲ್ಲದಿರುವುದರಿಂದ ಆರ್ಥಿಕವಾಗಿ ದುರ್ಬಲಳಾದ ಮಹಿಳೆಗೆ ಯಾವುದೇ ಸುರಕ್ಷಿತತೆ ಇರಲಿಲ್ಲ. ಆದ ಕಾರಣ ಭಾರತೀಯ ಸರ್ಕಾರ ಕೆಲವು ವರ್ಷಗಳಿಂದೀಚೆ ಸಂಗಾತಿಗಳಲ್ಲಿ ಸ್ತ್ರೀ ಹಿತಾಸಕ್ತಿ ರಕ್ಷಣೆಕೆ ಕಾನೂನನ್ನು ರೂಪಿಸಿದೆ. ಮಹಿಳಾ ಸುರಕ್ಷತೆಗಾಗಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹಾಗು ದೇಶೀಯ ಹಿಂಸಾಚಾರದ ವಿರುದ್ಧದ ಕಾಯ್ದೆಯಡಿಯಲ್ಲಿ ಸ್ತ್ರೀಯ ಆರ್ಥಿಕ ಹಕ್ಕನ್ನು ಹೆಚ್ಚಿಸಿದೆ. ಮಹಾರಾಷ್ಟ್ರ ಸರ್ಕಾರ 2008ರಲ್ಲಿ ಲಿವ್-ಇನ್ ಸಂಬಂಧದಲ್ಲಿ ನಿಗದಿತವಾದಷ್ಟು ಸಮಯ ವಾಸಿಸಿರುವ ಸ್ತ್ರೀಗೆ “ಹೆಂಡತಿ”/ ಪತ್ನಿಯ ಸ್ಥಾನಮಾನ ನೀಡುವ ಕುರಿತಾಗಿರುವ ಮಂಡನೆ ಮುಂದಿಟ್ಟಿದೆ. ಆದರೆ ಈ ವಾದದಲ್ಲಿರುವಂತೆ ಸಹವಾಸ’ದಲ್ಲಿರುವ ಸ್ತ್ರೀ ಪತ್ನಿಯಾಗಿರದೆ `ಪತ್ನಿಯಂತೆ ಜೊತೆಯಲ್ಲಿರುವಳು’ ಎಂದೇ ಸಂಭೋದಿಸಿದೆ. ಹಾಗೆಯೇ ಸಹವಾಸದಲ್ಲಿರುವ ಸ್ತ್ರೀ ಅಥವಾ ಪುರುಷನ ಮೇಲೆ ಕೌಟುಂಬಿಕ ದೌರ್ಜಜ್ಯದ ವಿರುದ್ಧ ಲಿವ್ ಇನ್ ಸಂಬಂಧದಲ್ಲಿರುವವರೂ ಸಹ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದೆಂದು ಡೆಲ್ಲಿ ಹೈಕೋರ್ಟ್ ವರ್ಷ ಕಪೂರ್ ಹಾಗೂ ಯು ಐ ಮತ್ತು ಇತರ ಜನರ ಕೇಸಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
 
ಇನ್ನುಳಿದಂತೆ ಲಿವ್ ಇನ್ ಸಂಬಂಧದಲ್ಲಿ ಜನಿಸಿದ ಮಕ್ಕಳು ಸಾಮಾಜಿಕವಾಗಿ ಅತಂತ್ರವಾಗಿ ಉಳಿಯುತ್ತಾರೆ. ತಂದೆಯ ಹಾಗೂ ತಾಯಿಯ ಸಂಬಂಧಿಗಳಿಂದ ದೂರ ಉಳಿಯುವ ಈ ಮಕ್ಕಳಿಗೆ ಸಾಮಾಜಿಕವಾಗಿ, ಭದ್ರತೆಯ ,ಆರ್ಥಿಕ ದೃಷ್ಠಿಯಿಂದ ಮದುವೆ ಸಂಬಂಧದ ಮೂಲಕ ಹುಟ್ಟುವ ಮಕ್ಕಳಿಗಿರುವ ಅನುಕೂಲ ವಾತಾವರಣ ,ಅನುಕೂಲ ಅವಕಾಶ ಇರುವುದಿಲ್ಲ. ಲಿವ್ ಇನ್ ಮೂಲಕ , ಅನಧಿಕೃತ ಸಂಬಂಧದ ಮೂಲಕ ಜನಿಸಿದ ಮಕ್ಕಳಿಗೆ ಕಾನೂನಿನ ಮೂಲಕ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಭಾರತೀಯ ಸರ್ವೋಚ್ಛ ನ್ಯಾಯಾಲಯವು ಈ ಸಂಬಂಧ ಈ ಮಕ್ಕಳ ಮೂಲ ಹಕ್ಕನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತ ಮಾತ ಹಾಗೂ ಇತರರ ವಿರುದ್ಧ ಆರ್ ವಿಜಯ ರಂಗನಾಥನ್ ಅವರ ಕೇಸಿನಲ್ಲಿ ಲಿವ್ ಇನ್ ಸಂಬಂಧದಲ್ಲಿ ಜನಿಸಿರುವ ಮಕ್ಕಳಿಗೆ ಅನುವಂಶಿಕ ಆಸ್ತಿಯಲ್ಲಿ ಪಾಲು ನೀಡಬೇಕೆಂದು ತೀರ್ಪು ಪ್ರಕಟಿಸಿದೆ. ಆದರೆ ಭಾರತದಲ್ಲಿ ಇದರ ಬಗ್ಗೆ ವ್ಯಾಪಕ ಚರ್ಚೆ ಇನ್ನೂ ನಡೆಯುತ್ತಿದ್ದು, ಲಿವ್ ಇನ್ ಸಂಬಂಧವನ್ನು ಅಕ್ರಮ ಸಂಬಂಧ ಎಂದೇ ದೃಷ್ಟಿಸುತ್ತಿರುವ ಸಮಾಜದಲ್ಲಿ ಸ್ತ್ರೀ ಹಾಗೂ ಮಕ್ಕಳ ಹಿತರಕ್ಷಣೆಗೆ ಇನ್ನೂ ಹೆಚ್ಚಿನ ಕಾನೂನಿನ ಬೆಂಬಲದ ಅಗತ್ಯ ಇದೆ.
 
 
 
ದೈಹಿಕ ಆಕರ್ಷಣೆಯೇ ಮುಖ್ಯವಾದ ಲಿವ್ ಇನ್ ಸಂಬಂಧವಾದರೆ ಪ್ರೀತಿ ಹಾಗೂ ಹೊಂದಾಣಿಕೆಯ ಕೊರತೆಯಿಂದ ಈ ಸಂಬಂಧಗಳು ಮುರಿದುಬೀಳಬಹುದು. ಯಾವಾಗಲೂ ಭಾರತೀಯ ಸಮಾಜ ಸನಾತನ ಧರ್ಮ, ಸನಾತನ ಸಂಸ್ಕೃತಿಯ ದ್ಯೋತಕವಾಗಿದ್ದು, ಸನಾತನತೆ ಪಾಲಿಸಿ ಸಮಾಜದ ಶಿಸ್ತಿಗೆ ಒಳಪಡುವವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಹೆಣ್ಣಿನ ದೈಹಿಕ ದುರ್ಬಲತೆ, ಭದ್ರತೆಯ ದೃಷ್ಟಿಯಿಂದ ಲಿವ್ ಇನ್ ಸಂಬಂಧದ ಬಗ್ಗೆ ಯೋಚಿಸುವವರು ಮುಂದುವರೆಯುವ ಮೊದಲೇ ಹತ್ತು ಬಾರಿ ಇದರಲ್ಲಿರುವ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ವಿವೇಚಿಸುವುದೊಳಿತು.
 
 
 
ಕೊನೆಯದಾಗಿ ಯಾವುದೇ ವ್ಯಕ್ತಿಯಾಗಲೀ ಸಂಬಂಧಗಳನ್ನು ಎಷ್ಟು ಸ್ವಚ್ಛವಾಗಿ ಇಟ್ಟು ಕೊಂಡಿರುತ್ತಾರೋ ಬದುಕು ಅಷ್ಟು ಸಂತೋಷವಾಗಿರುತ್ತದೆ. ಸಂಬಂಧಗಳ ಅಸಹಜತೆ ಸಮಾಜದಲ್ಲಿ, ಕುಟುಂಬದಲ್ಲಿ ಅನೇಕ ಗೋಜಲಿಗೇ, ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕೆ ಲಿವ್ ಇನ್ ಸಂಬಂಧವೂ ಹೊರತಾಗಿಲ್ಲ.

LEAVE A REPLY

Please enter your comment!
Please enter your name here