ಸಸಿ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ

0
204

ವರದಿ: ಲೇಖಾ
ಜಾಗತಿಕ ತಾಪಮಾನ, ಪ್ರಕೃತಿ ವಿಕೋಪ, ಪರಿಸರನಾಶದಿಂದ ಆಗುತ್ತಿರುವ ಅಪಾಯಗಳ ಬಗ್ಗೆ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಈ ಎಲ್ಲಾ ಅನಾಹುತಗಳ ತಡೆಗೆ ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಕಾಡುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಬಿ.ರಮಾನಾಥರೈ ಅಭಿಪ್ರಾಯಪಟ್ಟಿದ್ದಾರೆ.
 
 
 
ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಬೆಂಗಳೂರು ಉತ್ತರ ತಾಲ್ಲೂಕು, ಅಡಕಮಾರನಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲಾ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಗಿಡ ನೆಡುವ ಕೋಟಿವೃಕ್ಷ ಆಂದೋಲನವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
 
 
 
ಮಳೆ ಕೊರತೆ, ಬರಗಾಲ, ಕುಡಿಯುವ ನೀರಿನ ಸಮಸ್ಯೆ, ತಾಪಮಾನದಲ್ಲಿ ಹೆಚ್ಚಳ ಈ ಎಲ್ಲಾ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ 8 ಕೋಟಿಗೂ ಅಧಿಕ ಸಸಿ ನೆಡುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಸಿರು ಗ್ರಾಮ, ಹಸಿರು ಶಾಲೆ ಹಾಗೂ ಹಸಿರು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮ ಸಹಾಯವಾಗಲಿದೆ ಎಂದು ತಿಳಿಸಿದರು.
 
 
ವನ್ಯಜೀವಿಗಳ ರಕ್ಷಣೆ, ಕಾಡಿನ ಸಂರಕ್ಷಣೆ, ಜೀವಜಲದ ಉಗಮ ಸ್ಥಾನಗಳನ್ನು ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಕರ ಬದುಕನ್ನು ಸಾಗಿಸಲು ಸಾಧ್ಯವೆಂದರು. ಗಿಡಮರಗಳನ್ನು ಬೆಳೆಸುವ ಕಾಡು ಪ್ರಾಣಿಗಳನ್ನು ಸಂರಕ್ಷಿಸುವ ಜಾಗೃತಿಯನ್ನು ಶಾಲಾ ಮಕ್ಕಳಲ್ಲಿ ಮೂಡಿಸುವುದು ಅಗತ್ಯವಾಗಿದ್ದು, ಈ ವೃಕ್ಷ ಆಂದೋಲನದಲ್ಲಿ ಶಾಲಾ ಮಕ್ಕಳು ಸಾರ್ವಜನಿಕರನ್ನು ತೊಡಗಿಸಿಕೊಳ್ಳಲಾಗುವುದು ಎಂದರಲ್ಲದೆ, ರೈತರು ಒಂದು ಸಸಿಯನ್ನು ನೆಟ್ಟು, ಬೆಳೆಸಿ ಸಂರಕ್ಷಿಸಿದರೆ 45 ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
 
 
ಅರಣ್ಯ ಪ್ರದೇಶದ ರಕ್ಷಣೆ ದೃಷ್ಟಿಯಿಂದ ಅರಣ್ಯ ಕಾಯಿದೆಗೆ ತಿದ್ದುಪಡಿ ತಂದಿರುವ ಪರಿಣಾಮ, ಅರಣ್ಯ ಭೂಮಿ ಒತ್ತುವರಿ ತಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here