ಸರಕಾರಿ ಮೆಡಿಕಲ್ ಕಾಲೇಜಿಗೆ 10 ಎಕರೆ ಭೂಮಿ

0
154

 
ಮ0ಗಳೂರು ಪ್ರತಿನಿಧಿ ವರದಿ
ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ ಮಂಗಳೂರು ಹೊರವಲಯದಲ್ಲಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಎಕರೆ ಭೂಮಿಯನ್ನು ಮಂಜೂರುಗೊಳಿಸುವಂತೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
 
 
 
ಮಂಗಳೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಪ್ರಕ್ರಿಯೆಗಳ ಪ್ರಗತಿ ವಿವರವನ್ನು ಸಚಿವರು ಸಭೆಯಲ್ಲಿ ಕೇಳಿದರು. ಇದಕ್ಕೆ ಉತ್ತರಿಸಿದ ವೆನ್ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿದೇವಿ, ಭಾರತೀಯ ವೈದ್ಯಕೀಯ ಪರಿಷತ್(ಎಂಸಿಐ) ನಿಯಮಾವಳಿ ಪ್ರಕಾರ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕನಿಷ್ಠ 20 ಎಕರೆ ಜಾಗ ಬೇಕಾಗಿದೆ. ಈಗಿನ ವೆನ್ಲಾಕ್ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನ ನಿಯಮಾವಳಿಯಂತೆ ಸೂಕ್ತವಾಗಿದ್ದು, ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಮತ್ತು ಹಾಸಿಗೆ ಸಾಮಥ್ರ್ಯವನ್ನು ಹೊಂದಿದೆ. ಆದರೆ ಮೆಡಿಕಲ್ ಕಾಲೇಜಿಗೆ ಆಡಳಿತ ಕಟ್ಟಡ, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಹೆಚ್ಚುವರಿ 10 ಎಕರೆ ಭೂಮಿ ಅಗತ್ಯವಿದೆ ಎಂದು ತಿಳಿಸಿದರು.
 
 
ಇದಕ್ಕೆ ಸ್ಪಂದಿಸಿದ ಸಚಿವರು, ಮಂಗಳೂರು ಹೊರವಲಯದಲ್ಲಿ 10 ಎಕರೆ ಭೂಮಿಯನ್ನು ಕೂಡಲೇ ಗುರುತಿಸಿ, ಸರಕಾರಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಸೂಚಿಸಿದರು.
ಸರಕಾರಿ ಕಾರ್ಯಕ್ರಮಗಳಿಗೆ ಪುರಭವನ ಉಚಿತ: ಮಂಗಳೂರು ಪುರಭವನದಲ್ಲಿ ನಡೆಯುವ ವಿವಿಧ ಇಲಾಖೆಗಳ ಸರಕಾರಿ ಕಾರ್ಯಕ್ರಮಗಳಿಗೆ ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಉಚಿತವಾಗಿ ನೀಡಲು ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಯಿತು.
 
 
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪುರಭವನದಲ್ಲಿ ಸರಕಾರಿ ಕಾರ್ಯಕ್ರಮಗಳಿಗೆ ಷರತ್ತು ವಿಧಿಸುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ನಡೆಸುವ ಸರಕಾರಿ ಕಾರ್ಯಕ್ರಮಗಳಿಗೆ ಹವಾನಿಯಂತ್ರಣ ವ್ಯವಸ್ಥೆಯೊಂದಿಗೆ ಉಚಿತವಾಗಿ ನೀಡುವುದು ಅಗತ್ಯವಾಗಿದೆ ಎಂದರು.
 
 
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ ನೀಗಿಸಲು ಎಂಬಿಬಿಎಸ್ ಪದವಿ ಪಡೆದ ವೈದ್ಯರು ಲಭ್ಯವಿಲ್ಲದಿದ್ದಲ್ಲಿ ಬಿಎಎಂಎಸ್ ಪದವಿ ಪಡೆದ ವೈದ್ಯರನ್ನು ಪರಿಗಣಿಸಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
 
 
ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆ ಜಿ ಸ್ಥಾಪನೆಯಿಂದ ಸಮೀಪದ ಅಂಗನವಾಡಿಗಳಲ್ಲಿ ಮಕ್ಕಳ ಕೊರತೆಯಾಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ಮಕ್ಕಳ ಪೌಷ್ಠಿಕ ಆಹಾರ ಒದಗಿಸುವ ಉದ್ದೇಶಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ ಸ್ಥಾಪಿಸುವಾಗ ಬಿಇಓ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜಂಟಿಯಾಗಿ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಹಿಂದೆಂದೂ ನೀಡದಷ್ಟು ಅನುದಾನವನ್ನು ಪ್ರಸಕ್ತ ರಾಜ್ಯ ಸರಕಾರ ನೀಡಿದೆ. ಈ ಅನುದಾನವನ್ನು ನಿಗದಿತ ಅವಧಿಯಲ್ಲಿ ವೆಚ್ಚ ಮಾಡಬೇಕು. ಬೀಚ್ ಗಳ ಅಭಿವೃದ್ಧಿಗೆ ನೀಡಲಾದ ಅನುದಾನವನ್ನು ತ್ವರಿತಗತಿಯಲ್ಲಿ ವೆಚ್ಚ ಮಾಡಿ ಬೀಚ್ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವಂತೆ ಉಸ್ತುವಾರಿ ಸಚಿವರು ತಿಳಿಸಿದರು.
 
 
ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿತರಿಸಲು ಸುಮಾರು 1 ಲಕ್ಷ ಬಟ್ಟೆ ಬ್ಯಾಗ್ ಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಗೋಪಾಲಕೃಷ್ಣ ಸಭೆಗೆ ಮಾಹಿತಿ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರಿದಿಂದ ಕೋಣಾಜೆಯಲ್ಲಿ 146 ಸೈಟ್ ಗಳ ಲೇಔಟ್ ನಿರ್ಮಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ ಎಂದು ಮೂಡಾ ಆಯುಕ್ತ ಮುಹಮ್ಮದ್ ನಝೀರ್ ಸಭೆಗೆ ತಿಳಿಸಿದರು.
 
 
ಸರಕಾರದ ಹೊಸ ಅಧಿಸೂಚನೆ ಪ್ರಕಾರ ಖಾಸಗಿ ಬಸ್ ಗಳಿಗೆ ಹೊಸ ಪರ್ಮಿಟ್ ನೀಡಲು ಅವಕಾಶವಿಲ್ಲ ಎಂದು ಆರ್ ಟಿ ಓ ತಿಳಿಸಿದರು. ಮಂಗಳೂರು ನಗರದಲ್ಲಿ ಕೆಎಸ್ಆರ್ ಟಿ ಸಿ ನರ್ಮ್ ಸಿಟಿ ಬಸ್ ಸಂಚಾರ ಆರಂಭಿಸಲು ಆರ್ ಟಿ ಎ ಅನುಮತಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಕೆಎಸ್ಆರ್ ಟಿ ಸಿ ಅಧಿಕಾರಿಗಳು ತಿಳಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಪಂಪ್ವೆಲ್ ಬಸ್ ನಿಲ್ದಾಣ- ಅಸಮಾಧಾನ: ಮಂಗಳೂರು ಖಾಸಗಿ ಬಸ್ ನಿಲ್ದಾಣವನ್ನು ಪಂಪ್ ವೆಲ್ ನಲ್ಲಿ ನಿರ್ಮಿಸುವ ಪ್ರಕ್ರಿಯೆಗಳಿಗೆ ಸಾಕಷ್ಟು ಸಭೆ ನಡೆಸಲಾಗಿದ್ದರೂ, ವಿಳಂಭವಾಗುತ್ತಿರುವುದಕ್ಕೆ ಸಚಿವ ರಮನಾಥ ರೈ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತರು, ಈ ಸಂಬಂಧ ಜಾಗತಿಕ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಅರ್ಹ ಟೆಂಡರ್ದಾರರು ಮುಂದೆ ಬಾರದಿದ್ದರೆ, ಪರ್ಯಾಯ ವ್ಯವಸ್ಥೆಯನ್ನೂ ಕೂಡಲೇ ಕೈಗೆತ್ತಿಕೊಳ್ಳುವಂತೆ ಸಚಿವರು ಆಯುಕ್ತರಿಗೆ ಸೂಚಿಸಿದರು.
 
 
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಡಿಸಿಪಿ ಶಾಂತರಾಜು, ಎಎಸ್ಪಿ ವೇದಮೂರ್ತಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here