ಸಮುದ್ರದ ಮೇಲೆ ನಡೆದುಬಂದರು…!!!

0
2070

ನಿತ್ಯ ಅಂಕಣ-೮೩ : ತಾರಾನಾಥ್‌ ಮೇಸ್ತ, ಶಿರೂರು.
ನಿತ್ಯಾನಂದ ಸ್ವಾಮಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಸಮಯ ಸಂಚರಿಸಿದವರು. ಅವರು ಮಂಗಳೂರಿನಲ್ಲಿ ಮೊಕ್ಕಾಂ ಇದ್ದಾಗ ಒಂದು ಘಟನೆಯೊಂದು ನಡೆಯುತ್ತದೆ. ಆವಾಗ ಅವರು ಯುವ ಸ್ವಾಮಿಗಳಾಗಿದ್ದರು. ಅದೇ ಸಮಯದಲ್ಲಿ ಭಾರತ ದೇಶದ ಸೇನೆಗೆ ಸೈನಿಕರನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯನ್ನು ಬ್ರಿಟಿಷ್ ಸರಕಾರವು ಮಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ಆ ಕಾಲಘಟ್ಟದಲ್ಲಿ ಮಾಧ್ಯಮದ ಮೂಲಕ ಸೇನಾ ಭರ್ತಿಗೆ ಆಹ್ವಾನ ನೀಡಿದರೂ ಯುವಕರು ಸೇನೆಗೆ ಸೇರಲು ಧೈರ್ಯ ಮಾಡುದಿಲ್ಲವಾಗಿದ್ದರು. ಹಾಗೆಯೇ ಪೋಷಕರು ಮಕ್ಕಳನ್ನು ಸೇನೆಗೆ ಕಳಿಸಲು ಒಪ್ಪುದಿಲ್ಲವಾಗಿದ್ದರು. ಸಾರ್ವಜನಿಕ ಸ್ಥಳ, ಯಾವುದಾದರು ಮನೆಯಲ್ಲಿ ದೃಢಕಾಯದ ಯುವಕರು ಕಂಡುಬಂದರೆ, ಬ್ರಿಟಿಷರು ಅಂತವರನ್ನು ಸೇನೆಗೆ ಸೇರಿಸುವ ಪ್ರಯತ್ನವನ್ನು ಮಾಡಿಸುತ್ತಿದ್ದರು.
ನಿತ್ಯಾನಂದ ಸ್ವಾಮಿಗಳು ರಸ್ತೆಯಲ್ಲಿ ವಿಹರಿಸುತ್ತಿದ್ದರು. ಅದೇ ಸಂದರ್ಭ ಅವರ, ಅಜಾನುಭಾಹು ದೇಹಾಕೃತಿಯು ಬ್ರಿಟಿಷ್ ಅಧಿಕಾರಿಗಳ ಗಮನ ಸೆಳೆಯುತ್ತದೆ. ಬ್ರಿಟಿಷ್ ಅಧಿಕಾರಿಗಳಿಗೆ ಈ ಅಜಾನುಬಾಹು ಸೇನಾಪಡೆಗೆ ಸೂಕ್ತವಾದ ವ್ಯಕ್ತಿ ಎಂದು ನಿರ್ಧರಿಸುತ್ತಾರೆ. ನಿತ್ಯಾನಂದರನ್ನು ಕರೆತಂದು ಸೇನಾ ಆಯ್ಕೆ ಶಿಬಿರದಲ್ಲಿ ನಿಲ್ಲಿಸುತ್ತಾರೆ. ಯಾರಿಗೂ ನಿತ್ಯಾನಂದರು ಯೋಗಿಗಳು, ಮಹಾಮಹಿಮರು ಎಂಬುವುದು, ತಿಳಿಯದೆ ಈ ಪ್ರಮಾದವು ನಡೆಯುತ್ತದೆ. ಸೇನೆಗೆ ಸೈನಿಕ ಆಯ್ಕೆಗೆ, ಹಲವು ಹಂತಗಳಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಯುತ್ತದೆ. ನಿತ್ಯಾನಂದರ ಸೇನಾ ಭರ್ತಿಗೆ ಆರೋಗ್ಯ ತಪಾಸಣಾ ಪ್ರಮಾಣ ಪತ್ರದ ಅಗತ್ಯ ಮುಖ್ಯವಾಗಿತ್ತು.
ವ್ಯಕ್ತಿಯ ದೈಹಿಕ ಆರೋಗ್ಯವು ಸರಿ ಇದೆ, ಎಂದು ಮೆಲ್ನೊನೋಟಕ್ಕೆ ಕಂಡು ಬಂದರೂ, ವೈದ್ಯರು ಉಪಕರಣಗಳ ಮೂಲಕ ತಪಾಸಣೆ ನಡೆಸಿ ವರದಿ ನೀಡಬೇಕು. ಅದರಂತೆ ವೈದ್ಯರು ನಿತ್ಯಾನಂದರ ಹೃದಯ ಬಡಿತದ ಪರೀಕ್ಷೆಯನ್ನು ಮೊದಲು ನಡೆಸುತ್ತಾರೆ. ಆವಾಗ ನಿತ್ಯಾನಂದರ ಹೃದಯವು ಬಡಿತದ ಪ್ರಕ್ರಿಯೆ ನಡೆಸದೆ ನಿಶ್ಯಬ್ದ ಆಗಿರುತ್ತದೆ. ಶ್ವಾಸೋಚ್ಚಾಸದ ತಪಾಸಣೆ ನಡೆಸಿದಾಗ, ದೇಹದಲ್ಲಿ ಉಸಿರಿರುವುದು ತಿಳಿದು ಬರುವುದಿಲ್ಲ. ನಾಡಿಮಿಡಿತದ ತಪಾಸಣೆ ನಡೆಸಿದಾಗ ನಾಡಿ ಮಿಡಿಯುವುದು ಗೋಚರಕ್ಕೆ ಬರುವುದಿಲ್ಲ. ವೈದ್ಯರು ವಿಚಿತ್ರವಾದ ಮಾನವದೇಹ ಕಂಡು ಅಚ್ಚರಿ ಪಡುತ್ತಾರೆ. ಸೇನೆ ಸೆರ್ಪಡೆಗೆ ಅನರ್ಹ ವ್ಯಕ್ತಿ ಎಂದು ವೈದ್ಯರು ಅಧಿಕಾರಿಗಳಿಗೆ ವರದಿ ನೀಡುತ್ತಾರೆ. ನಂತರ ನಿತ್ಯಾನಂದರು ಮಹಾಮಹಿಮರು ಎನ್ನುವುದು ವೈದ್ಯರಿಗೆ ಹಾಗೂ ತಪಾಸಣಾ ಸಿಬ್ಬಂದಿಗಳಿಗೆ ತಿಳಿದುಬರುತ್ತದೆ. ನಿತ್ಯಾನಂದರು ತಾವೇ ನರ ನಾಡಿಗಳ ಪ್ರಕ್ರಿಯೆಗಳು ನಡೆಯದಂತೆ, ತಪಾಸಣೆ ಸಮಯದಲ್ಲಿ ಕ್ಷಣ ಹೊತ್ತು ನಿಲುಗಡೆಗೊಳಿಸಿದ್ದರು. ಹೀಗೆ ಗರುದೇವರು ಆರೋಗ್ಯ ತಪಾಸಣಾ ವರದಿ ಸತ್ಯಾಂಶ ರೂಪವನ್ನು ಪಡೆಯದಂತೆ ತಡೆಯೊಡ್ಡಿದ್ದರು.
ಗುರುದೇವರ ಈ ವಿಸ್ಮಯ ಲೀಲೆಯು ಕುರಿತು ಚರ್ಚಿಸಿದಾಗ, ಆಧ್ಯಾತ್ಮ ಚಿಂತಕರು, ಹಿರಿಯ ಸಾಹಿತಿಗಳಾದ ಹರಿಕೃಷ್ಣ ರಾವ್ ಸಗ್ರಿ ಅವರು ಹೀಗೆ ಹೇಳುತ್ತಾರೆ. ಯೋಗಿಗಳ ಶ್ವಾಸೋಚ್ವಾಸದಲ್ಲಿ ಪ್ರಾಣಾಯಾಮದ ಪೂರಕ, ಕುಂಭಕ, ರೇಚಗಳ ಸಮನ್ವಯ ಇರುತ್ತದೆ. ಅದರಿಂದ ಅತ್ಯಲ್ಪ ಪ್ರಮಾಣದ ವಾಯುವಿನಲ್ಲಿ ಅವರ ಶರೀರ ಸುಸ್ಥಿತಿಯಲ್ಲಿ ಹಲವು ವರ್ಷಗಳ ಕಾಲ ಇರಬಲ್ಲದು. ಮಣ್ಣಿನ ಅಡಿಯಲ್ಲಿ ಕಪ್ಪೆಗಳಂತೆ, ಜೀವಂತ ಸಮಾಧಿಯಲ್ಲಿ ಹಲವು ಕಾಲ ಯೋಗಿಗಳು ಇರುತ್ತಾರೆ. ಇತ್ತೀಚೆಗೆ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ವಿದೇಶಿ ವಿಜ್ಞಾನಿಗಳು ಧ್ಯಾನದ ಅಧ್ಯಯನದಲ್ಲಿ ಎಲ್ಲಾ ರೀತಿಯಿಂದ ಪರೀಕ್ಷೆಗೆ ಒಳಪಡಿಸಿದಾಗ, ನಾಡಿ ಬಡಿತ ಸಿಗದೇ ದೇಹ ಹೆಣವಾಗಿದೆ ಅಂತ ವರದಿ ಮಾಡಿದ್ದರು. ಹೀಗೆ ಯೋಗಿಗಳು ಇಂದ್ರಿಯ ಮನಸ್ಸುಗಳನ್ನು ಗೆದ್ದಿರುತ್ತಾರೆ. ಜಿತೇಂದ್ರಿಯರು ಅವರು ನಿತ್ಯ ಆತ್ಮಭಾವದಲ್ಲಿ ವ್ಯವಹರಿಸುವರು. ಎಂದು ಹರಿಕೃಷ್ಣರಾವ್ ಅವರು ನನ್ನಲ್ಲಿ ಅಧ್ಯಯನ ಅನುಭವ ಸಾರವನ್ನು ಹಂಚಿಕೊಂಡರು.
ಒಮ್ಮೆ ನಿತ್ಯಾನಂದರು ತನ್ನ ಬಳಿಯ ಭಕ್ತನನ್ನು ಸಮುದ್ರದ ಬಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಮರಳಿನಲ್ಲಿ ದೊಡ್ಡ ಹೊಂಡ ತೋಡಿಸಿದರು. ಮತ್ತು ಅದರೊಳಗೆ ಹೋಗಿ ನಾನು ಮುಂಬೈ ಭಕ್ತರನ್ನು ಭೇಟಿಯಾಗಿ ಮೂರು ಗಂಟೆ ಬಿಟ್ಟು ಬರುತ್ತೇನೆ. ಹೊಂಡ ಮುಚ್ಚು, ಮತ್ತೆ ಮೂರು ಗಂಟೆಗೆ ಪುನಃ ಮರಳನ್ನು ತೆಗೆ ಎಂದರಂತೆ. ಅದರಂತೆ ಮಾಡಲಾಯಿತು. ನಿತ್ಯಾನಂದರು ನೂರಾರು ಕಿಲೋಮೀಟರ್ ದೂರದ ಮುಂಬೈಯಲ್ಲಿ ಕಾಣಿಸಿಕೊಂಡು ಭಕ್ತಾನುಗ್ರಹ ಮಾಡಿ ಪುನಃ ತೋಡಿದ ಹೊಂಡದಿಂದ ಬರದೇ ಸಮುದ್ರದ ಮೇಲಿನಿಂದ ಬಂದದ್ದನ್ನು ನೋಡಿ ಭಕ್ತರು ವಿಸ್ಮಯ ಪಟ್ಟಿದ್ದರು..!! ಅಂದರೆ ಅತಿ ಸೂಕ್ಷ್ಮ ಅಣುವಿನ ಎಡೆಯಲ್ಲಿ ಸಂಚರಿಸುವ ಯೋಗ ಅವರ ಬಳಿ ಇತ್ತು. ದೇಹ ಭಾವ ಕಳೆದುಕೊಂಡು ಆತ್ಮಭಾವ ಇರುವ ಅವಧೂತರಿಗೆ ಮಾತ್ರ ಸಾಧ್ಯ. ದೇಹ ಭಾವದ ನಮಗೆ ಇದೆಲ್ಲವು ವಿಸ್ಮಯ. ಹೀಗೆಂದು ಈ ಮೇಲೆ ವಿವರಿಸಿದ ಗುರುದೇವರ ಲೀಲೆಗೆ ಸಾಮಿಪ್ಯ ಇರುವ ಮತ್ತೊಂದು ಗುರುದೇವರು ತೋರಿದ ಲೀಲೆಯನ್ನು ಹರಿಕೃಷ್ಣ ರಾವ್ ಸಗ್ರಿ ಅವರು ನೆನಪಿಸಿದರು.

LEAVE A REPLY

Please enter your comment!
Please enter your name here