ಸಮಾವೇಶ

0
261

ವರದಿ: ಸುನೀಲ್ ಕುಮಾರ್
ಉತ್ತಮ ಬದುಕಿಗಾಗಿ, ಸಾಮಾಜಿಕ ಭದ್ರತೆಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಮನೆಕೆಲಸ ಮಾಡುವ ಕಾರ್ಮಿಕರಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ತಾ. 31-07-2016ರಂದು ನಗರದ ಎನ್ಜಿಓ ಹಾಲ್ ನಲ್ಲಿ ಮಂಗಳೂರು ನಗರ ಮಟ್ಟದ ಸಮಾವೇಶವು ಜರುಗಿತು.
 
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ರವರು ಸಮಾಜದ ಅವಿಭಾಜ್ಯ ಅಂಗವಾಗಿರುವ ಮನೆಕೆಲಸಗಾರರು ಅಸಂಘಟಿತ ಕ್ಷೇತ್ರದ ಕಾರ್ಮಿಕರಾಗಿದ್ದು ಸಾಮಾಜಿಕ ಭದ್ರತೆ ಇಲ್ಲದೆ ಸೂಕ್ತ ರಕ್ಷಣೆಯೂ ಇಲ್ಲದೆ ದುಡಿಯುವ ಶ್ರಮಜೀವಿಗಳಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದವರಾಗಿದ್ದಾರೆ. ಮಾತ್ರವಲ್ಲದೆ ಇನ್ನೊಬ್ಬರ ಸುಖಕ್ಕಾಗಿ ತನ್ನ ಸುಖವನ್ನು ತ್ಯಾಗಮಾಡುವ ತ್ಯಾಗ ಜೀವಿಗಳಾಗಿದ್ದಾರೆ. ಇಂದಿನ ಸಮಾಜದಲ್ಲಿ ತೀರಾ ನಿಕೃಷ್ಟವಾಗಿ ಕಾಣುವ ಮನೆಕೆಲಸಗಾರರಿಗೆ ರಾಜ್ಯ ಸರಕಾರವು ವಿಶೇಷ ನಿಯಮಾವಳಿಗಳನ್ನು ನೀಡುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕಾಗಿದೆ. ತೀರಾ ಬಡವರಾಗಿರುವ ಮನೆಕೆಲಸಗಾರರಿಗೆ ಗುರುತುಚೀಟಿ, ಮಕ್ಕಳ ವಿದ್ಯಾರ್ಥಿ ವೇತನ, ಆರೋಗ್ಯ ಸೌಲಭ್ಯ, ಭವಿಷ್ಯನಿಧಿ ಯೋಜನೆ, ಬಿಪಿಎಲ್ ರೇಶನ್ ಕಾರ್ಡ್, ಉಚಿತ ಮನೆ ನಿವೇಶನ ನೀಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಹೇಳಿದರು.
 
 
ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಮನೆಕೆಲಸಗಾರರ ಸಂಕಷ್ಟವನ್ನು ವಿವರಿಸುತ್ತಾ ಮನೆಕೆಲಸಗಾರರ ಮಧ್ಯೆ ಬಲಿಷ್ಟ ಸಂಘಟನೆ ಮೂಡಿಬರಬೇಕೆಂದು ಆಶಯ ವ್ಯಕ್ತಪಡಿಸಿದರು. ಪ್ರಗತಿಪರ ಚಿಂತಕರ ವೇದಿಕೆಯ ಮುಖಂಡರಾದ ಕೃಷ್ಣಪ್ಪ ಕೊಂಚಾಡಿ, ನಿವೇಶನ ರಹಿತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ, ಡಿವೈಎಫ್ಐ ನಾಯಕರಾದ ನವೀನ್ ಕೊಂಚಾಡಿಯವರು ಸಮಾವೇಶಕ್ಕೆ ಶುಭಕೋರಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮಂಗಳೂರು ನಗರ ಅಧ್ಯಕ್ಷರಾದ ಜಯಂತಿ ಬಿ. ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಮನೆಕೆಲಸಗಾರರ ಸಂಘದ ಮುಖಂಡರಾದ ಭಾರತಿ ಬೋಳಾರ್, ಆಶಾ ಕೊಂಚಾಡಿ, ಶಾಂತ ಪಕ್ಕಲಡ್ಕ, ಮೇರಿ ಶಾಂತಿ ವೆಲೆನ್ಸಿಯಾ, ಭವಾನಿ ಬೊಲ್ಯ ಮುಂತಾದವರು ಉಪಸ್ಥಿತರಿದ್ದರು.
 
 
ಸಮಾವೇಶವು ನೂತನ ಮಂಗಳೂರು ನಗರ ಸಮಿತಿಯನ್ನು ಆಯ್ಕೆಗೊಳಿಸಿತು. ಅಧ್ಯಕ್ಷರಾಗಿ ಜಯಂತಿ ಬಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಭಾರತಿ ಬೋಳಾರ್, ಖಜಾಂಚಿಯಾಗಿ ಆಶಾ ಕೊಂಚಾಡಿಯವರು ಆಯ್ಕೆಗೊಂಡರು. ಸುಮಾರು 34 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಳಿಸಲಾಯಿತು.

LEAVE A REPLY

Please enter your comment!
Please enter your name here