ಸಮಾಧಿಯ ಸಂಕಲ್ಪ ಪಡೆದರು ಅವರು!

0
1198

ನಿತ್ಯ ಅಂಕಣ-೮೮ : ತಾರಾನಾಥ್‌ ಮೇಸ್ತ, ಶಿರೂರು.
ಬಾಲಯೋಗಿ ದಯಾನಂದರು, ಟಿಬೆಟ್ ಇಲ್ಲಿಯ ನಾರಾಯಣ ಆಶ್ರಮದಲ್ಲಿದ್ದವರು. ಅವರು ಅಲ್ಲಿಯ ಪರಮಪೂಜ್ಯ ಧೀಕ್ಷಾಧಿಕಾರಿ ಅವರಿಂದ ಅನುಮತಿ ಪಡೆದು, ನರ್ಮದಾ ಪ್ರದಕ್ಷಿಣೆ ಪಡೆಯಲು ತೆರಳುತ್ತಾರೆ. ಅಲ್ಲಿ ಅವರು ಮರದಡಿಯಲ್ಲಿ ವಿಶ್ರಮಿಸುತ್ತಿರುವಾಗ ಕಣ್ಣ ಮುಂದೆ ಎತ್ತರ ದೇಹಕಾಯದ ಲಂಗೋಟಿಧಾರಿಯ ದರ್ಶನ ಪಡೆಯುತ್ತಾರೆ. ಅವರಿಂದ ‘ಗಣೇಶಪುರಿಗೆ ಬಾ’ ಎನ್ನುವ ಆದೇಶವನ್ನು ಪಡೆಯುತ್ತಾರೆ. ಕ್ಷಣ ಮಾತ್ರದಲ್ಲಿ ಕಂಡಿರುವ ದೃಶ್ಯವು ಅದೃಶ್ಯವಾಗುತ್ತದೆ. ಮುಂದೆ ದಯಾನಂದರು ಗಣೇಶಪುರಿ ಎಲ್ಲಿದೆ..? ಅದರ ಹುಡುಕಾಟ ನಡೆಸುತ್ತ, ಸಿಕ್ಕವರಲ್ಲಿ ವಿಚಾರಿಸುತ್ತ ಗಣೇಶಪುರಿ ಕ್ಷೇತ್ರವನ್ನು ತಲುಪುತ್ತಾರೆ. ತಾನು ಕಂಡಿರುವ ಲಂಗೋಟಿ ಬಾಬಾ ಗಣೇಶಪುರಿಯಲ್ಲಿ ಇದ್ದಾರೆಂದು ತಿಳಿದುಕೊಳ್ಳುತ್ತಾರೆ. ಹಾಗೆಯೇ ಕುಂಡದಲ್ಲಿ ಸ್ನಾನ ಮುಗಿಸಿ ನಿತ್ಯಾನಂದರ ದರ್ಶನ ಪಡೆದು ಚರಣಗಳಿಗೆ ವಂದಿಸುತ್ತಾರೆ. ನಂತರ ಗುರುದೇವರ ಅಪ್ಪಣೆಯಂತೆ ಗಣೇಶಪುರಿಯಲ್ಲಿ ಮೊಕ್ಕಾಂ ಇದ್ದು, ಆಧ್ಯಾತ್ಮ ಸಾಧನೆಯಲ್ಲಿ ದಿನಗಳ ಕಳೆಯುತ್ತಾರೆ.
ದಯಾನಂದರು ಒಮ್ಮೆ ಗುರುದೇವರ ಮುಂದೆ ಹಾಜರಾದರು. ಅವರ ಕಂಡು ನಿತ್ಯಾನಂದರಿಗೆ ಆನಂದವಾಗುತ್ತದೆ. ಆತನು ಬಂದಿರುವ ಉದ್ದೇಶವು ತಿಳಿಯುತ್ತದೆ. ಭಕ್ತನ ಹಣೆಗೆ ಸಿಂಧೂರ ತಿಲಕವನ್ನು ಇಡುತ್ತಾರೆ. ಮಸ್ತಕದ ಮೇಲೆ ತಮ್ಮ ಎರಡು ವರದ ಕರಗಳನ್ನು ಇಡುತ್ತಾರೆ. ‘ಸಾಲಿಗ್ರಾಮ’ ಶುಭನಾಮ ಇಟ್ಟು ಗೌರವಿಸುತ್ತಾರೆ. ‘ವಿಷ್ಣು ಶಕ್ತಿ ಮತ್ತು ಶಿವಶಕ್ತಿ ನಿನ್ನಲ್ಲಿ ವಾಸವಾಗಿರುತ್ತವೆ’. ಎಂಬ ಅನುಗ್ರಹ ಉವಾಚ ನಿತ್ಯಾನಂದರಿಂದ ಉಚ್ಚರಣೆ ಆಗುತ್ತದೆ. ದಯಾನಂದರು ಗುರುದೇವರ ಪವಿತ್ರ ಚರಣಗಳಿಗೆ ಶಿರವಿಟ್ಟು ನಮಸ್ಕರಿಸುತ್ತಾರೆ. ನಂತರ ಗುರುದೇವರು, ಈ ಶುಭದಿನದಿಂದ ಅಷ್ಟಾಂಗಯೋಗದ ಪಾಲನೆ ಮಾಡುತ್ತ, ನಿತ್ಯಕರ್ಮ ಅನುಷ್ಠಾನಗಳ ಮಾಡುತ್ತ, ಸಾಧನೆ ಸಿದ್ಧಿ ಪ್ರಾಪ್ತಿಗಾಗಿ ಹಾಜಿಮಲಂಗ್ ಇಲ್ಲಿಗೆ ತಪಸ್ಸು ಆಚರಣೆ ಮಾಡಲು, ತೆರಳುವಂತೆ ದಯಾನಂದರಿಗೆ ಆಜ್ಞೆ ನೀಡುತ್ತಾರೆ. ಅದರಂತೆ ಮುಂದೆ ದಯಾನಂದರು, ನಿತ್ಯಾನಂದರ ದಾಸ್ಯತ್ವ ಸ್ವೀಕರಿಸುತ್ತಾರೆ. ಗುರುದೇವರ ಆಜ್ಞೆಯ ಹೊರತು ಎಲ್ಲಾ ವಿಚಾರಗಳನ್ನು ತ್ಯಾಗಮಾಡಿ ಹಲವು ಸಿದ್ಧಿ ಪಡೆದು ಸಾಲಿಗ್ರಾಮ ಸ್ವಾಮಿಗಳು ಪ್ರಸಿದ್ಧಿ ಪಡೆಯುತ್ತಾರೆ.
ಹೀಗೆ ಒಮ್ಮೆ ನಿತ್ಯಾನಂದರ ಬಳಿಗೆ ಮಾತು ಬಾರದ ಮಗಳನ್ನು ಕರೆದುಕೊಂಡು ದಂಪತಿಗಳು ಬರುತ್ತಾರೆ. ಮಗಳಿಗೆ ಮಾತು ಕರುಣಿಸಬೇಕೆಂದು ಪ್ರಾರ್ಥಿಸುತ್ತಾರೆ. ಆಗ ನಿತ್ಯಾನಂದರು ನೀವು ಹಾಜಿಮಲಂಗ ಗುಡ್ಡಕ್ಕೆ ಹೋಗಿರಿ, ಅಲ್ಲಿ ಸಾಲಿಗ್ರಾಮ ಸ್ವಾಮಿಗಳು ಎಂಬವುರು ಇದ್ದಾರೆ. ಅವರಲ್ಲಿ ಪ್ರಾರ್ಥಿಸಿ ಅವರು ನಿಮ್ಮ ಮಗಳ ಸ್ವರ ವಿಕಲತೆಯನ್ನು ಗುಣಪಡಿಸುತ್ತಾರೆಂದು ಹೇಳಿ ರವಾನಿಸುತ್ತಾರೆ. ನಿತ್ಯಾನಂದರ ಅಭಯ ನುಡಿಯಂತೆ ದಂಪತಿಗಳು ಮಗಳನ್ನು ಕರೆದುಕೊಂಡು ಹಾಜಮಲಂಗ ತಲುಪುತ್ತಾರೆ. ಅಲ್ಲಿ ಸಾಲಿಗ್ರಾಮ ಸ್ವಾಮಿಗಳು ಮರದಡಿಯಲ್ಲಿ ವಿಶ್ರಮಸುತ್ತಿರುವುದು ಅವರಿಗೆ ಕಂಡು ಬರುತ್ತದೆ. ಅವರ ಹತ್ತಿರ ಹೋಗಿ ಮೂವರು ಚರಣಗಳಿಗೆ ನಮಸ್ಕರಿಸುತ್ತಾರೆ. ತಮ್ಮಲ್ಲಿಗೆ ಹೋಗಲೆಂದು ನಿತ್ಯಾನಂದ ಸ್ವಾಮಿಗಳು ಕಳಿಸಿಕೊಟ್ಟಿದ್ದಾರೆ, ಎಂದು ಹೇಳುತ್ತಾರೆ. ನಮ್ಮ ಈ ಮಗಳಿಗೆ ಮಾತು ಬರುತ್ತಿಲ್ಲ..! ಎಂದು ಸಮಸ್ಯೆ ಹೇಳಿಕೊಳ್ಳುತ್ತಾರೆ.
ಹುಡುಗಿಯ ಮೇಲೆ ದಿವ್ಯದೃಷ್ಟಿ ಹಾಯಿಸಿದ ಸಾಲಿಗ್ರಾಮ ಸ್ವಾಮಿಗಳು, ‘ಯಾರು ಹೇಳಿದರು ಇವಳಿಗೆ ಮಾತನಾಡಲು ಆಗುದಿಲ್ಲ ಎಂದು..? ಹೀಗೆ ಹೇಳಿದ ಸ್ವಾಮಿಗಳು, ತಮ್ಮ ಕಮಂಡಲದಲ್ಲಿದ್ದ ತೀರ್ಥವನ್ನು ಒಂದು ಲೋಟೆಗೆ ಸುರಿದು ಬಾಲಕಿಗೆ ಕುಡಿಯಲು ಹೇಳಿದರು. ನಂತರ ಹಂ….! ಹೇಳು “ಶ್ರೀರಾಮ ಜಯರಾಮ ಜಯಜಯ ರಾಮ” ಅಂದರು. ಕುಡಿದ ತೀರ್ಥ ಉದರ ಸೇರಿದ ಬಳಿಕ ಸ್ವಾಮಿಗಳು ಹೇಳಿದಂತೆ, ರಾಮನಾಮ ತಾರಕ ಮಂತ್ರವನ್ನು ಹುಡುಗಿ ಪಠಿಸಿದಳು. ಹಾಗೆಯೇ ಹಲವು ಭಾರಿ ತಾರಕ ಮಂತ್ರ ಪಠಿಸಿದಳು. ಮಗಳ ಬದಲಾವಣೆ ಕಂಡು ಹೆತ್ತವರು ಆನಂದ ಅನುಭವಿಸಿದರು. ಮುಂದೆ ಮೂಕ ಬಾಲಕಿ ಎಲ್ಲರಂತೆ ಮಾತನಾಡಲು ಆರಂಭಿಸಿದಳು. ಈ ಮೊದಲು ಮಗಳ ಚಿಂತೆಯಲ್ಲಿ ಬಹಳವಾಗಿ ನೊಂದಿದ್ದ ಹೆತ್ತವರ ಮನಸ್ಸು, ಭಗವಾನ್ ನಿತ್ಯಾನಂದ ಸ್ವಾಮಿ ಹಾಗೂ ಸಾಲಿಗ್ರಾಮ ಸ್ವಾಮಿಗಳ ಕೃಪೆಯಿಂದ ಅರಳಿತು.
ಮುಂದೆ ಒಂದು ದಿನ ಸಿದ್ಧಿ ಪುರುಷ ಮಹಾಯೋಗಿ ಸಾಲಿಗ್ರಾಮ ಸ್ವಾಮಿಗಳು, ನಿತ್ಯಾನಂದರ ಬಳಿಗೆ ಬಂದು, ನಾನು ಸಮಾಧಿ ಪಡೆಯಲು ಸಂಕಲ್ಪ ಮಾಡಿದ್ದೇನೆಂದು ಹೇಳಿಕೊಳ್ಳುತ್ತಾರೆ. ಆಗ ನಿತ್ಯಾನಂದರು ಶಿಷ್ಯನ ಮಾತುಕೇಳಿ ವಿಚಲಿತರಾಗುತ್ತಾರೆ. ಅತ್ಯಂತ ಪ್ರೀತಿಗೆ ಪಾತ್ರನಾದ ನನ್ನ ಈ ಕಂದ, ನನಗಿಂತ ಮೊದಲೇ ದೇಹತ್ಯಾಗ ಮಾಡುವುದೇ..!! ನಾನು ಅದಕ್ಕೆ ಹೇಗೆ ಒಪ್ಪಿಗೆ ಸೂಚಿಸಲಿ..? ಭಕ್ತ ಜನರಿಗೆ ಭವಸಾಗರದಿಂದ ಪಾರು ಮಾಡುವ ಸಾಲಿಗ್ರಾಮನೇ, ನಿನ್ನಿಂದ ಅನೇಕ ಸತ್ಕಾರ್ಯಗಳು ನಡೆಯಲು ಇದೆ. ಆದುದರಿಂದ ನೀನು ದೇಹತ್ಯಾಗ ಮಾಡಬೇಡ, ಹೀಗೆಂದು ಹೇಳಿ ನಿತ್ಯಾನಂದರು ತಮ್ಮ ಕೈಯಿಂದಲೇ ಸೀಯಾಳವನ್ನು ಕುಡಿಯಲು ನೀಡುತ್ತಾರೆ. ಆದರೆ ಸಾಲಿಗ್ರಾಮ ಸ್ವಾಮಿಗಳು, ಗುರುದೇವರು ನೀಡಿದ ಸೀಯಾಳ ಸ್ವೀಕರಿಸುವುದಿಲ್ಲ. ಬದಲಾಗಿ ಸಿಟ್ಟುಗೊಳ್ಳುತ್ತಾರೆ. ಗಣೇಶಪುರಿಯಲ್ಲಿ ನನ್ನ ಚರಣಗಳ ಹತ್ತಿರ ಇದ್ದು, ತನ್ನ ಹಠವನ್ನು ಬಿಡುವುದಿಲ್ಲ ಹಠಯೋಗಿ..! ಎಂದು ಹೇಳಿ ಕೊನೆಗೆ ನಿತ್ಯಾನಂದರು ದೇಹತ್ಯಾಗ ಮಾಡಲು, ಸಾಲಿಗ್ರಾಮ ಸ್ವಾಮಿಗಳಿಗೆ ಒಪ್ಪಿಗೆ ನೀಡುತ್ತಾರೆ. ಅದರಂತೆ ಮಹಾಯೋಗಿ ಸಾಲಿಗ್ರಾಮ ಸ್ವಾಮಿಗಳು ಏಪ್ರೀಲ್ 27, 1961 ರಂದು, ಗುರುದೇವ ನಿತ್ಯಾನಂದರು ಸಮಾಧಿ ಪಡೆಯುವ ಮೊದಲು ಗಣೇಶಪುರಿಯಲ್ಲಿ ಸಮಾಧಿ ಪಡೆಯುತ್ತಾರೆ. ಆಗ ಅವರಿಗೆ ಕೇವಲ 33 ವರ್ಷ ಪ್ರಾಯವಾಗಿತ್ತು.

LEAVE A REPLY

Please enter your comment!
Please enter your name here