ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರದಲ್ಲಿ ಸಭೆ

0
198

 
ವರದಿ-ಚಿತ್ರ: ಸುನೀಲ್ ಬೇಕಲ್
ಶಾಲಾ ಮಕ್ಕಳ ವಾಹನ ಚಾಲಕರ ಸಂಕಷ್ಟಗಳ ಬಗ್ಗೆ ಈಗಾಗಲೇ ನೀಡಲಾದ ಮನವಿಯಲ್ಲಿ ಹಲವಾರು ವಿಷಯಗಳ ಬಗ್ಗೆ ಸಾರಿಗೆ ಇಲಾಖೆಯು ಕೂಡ ಸಹಮತ ಹೊಂದಿದ್ದು, ಅವುಗಳ ಈಡೇರಿಕೆಗಾಗಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಆದಷ್ಟು ಶೀಘ್ರದಲ್ಲಿ ಸಭೆಯನ್ನು ಕೂಡ ಕರೆಯಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಿ.ಎಸ್. ಹೆಗ್ಡೆಯವರು ಅಭಿಮತ ವ್ಯಕ್ತಪಡಿಸಿದರು.
 
 
ಇಂದು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಜರುಗಿದ ಮಂಗಳೂರು ನಗರ ಮಟ್ಟದ ಶಾಲಾ ಮಕ್ಕಳ ವಾಹನ ಚಾಲಕರ ಸಮಾವೇಶವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
 
 
ಅಪಘಾತಗಳನ್ನು ತಡೆಗಟ್ಟುವಲ್ಲಿ ಚಾಲಕರು ಮಾಡಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸುತ್ತಾ, ಶಾಲಾ ಮಕ್ಕಳ ವಾಹನ ಚಾಲಕರು ಕೂಡ ತಮ್ಮ ಪ್ರಶ್ನೆಗಳನ್ನು ಮುಂದಿಟ್ಟು ಸಂಘಟಿತರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಚಾಲಕರ ಸಂಘದವರು ಇಟ್ಟಿರುವ ಬೇಡಿಕೆಗಳನ್ನು ಕಾನೂನು ಚೌಕಟ್ಟಿನೊಳಗೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
 
 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಕುಂದಾಪುರದಲ್ಲಿ ಜರುಗಿದ ಅಪಘಾತವು ನಿಜಕ್ಕೂ ದುಃಖದಾಯಕ ಸಂಗತಿಯಾಗಿದ್ದು, ಪ್ರತಿಯೊಂದೂ ಅಪಘಾತಕ್ಕೆ ಅದರದೇ ಆದ ಆಯಾಮಗಳಿವೆಯೇ ಹೊರತು ಕೇವಲ ಚಾಲಕರನ್ನು ಗುರಿಯನ್ನಾಗಿಸುವುದು ಸರಿಯಲ್ಲ. ವಿನಾಃಕಾರಣ ಕೇಸು ದಾಖಲು, ವಿಪರೀತ ದಂಡ ವಸೂಲಿಯಿಂದಾಗಿ ಶಾಲಾ ಮಕ್ಕಳ ವಾಹನ ಚಾಲಕರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ. ಘಟನೆ ನಡೆದಾಗ ಮಾತ್ರವೇ ಮಕ್ಕಳ ಸುರಕ್ಷತೆಯ ಬಗ್ಗೆ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ ಪೊಲೀಸ್ ಇಲಾಖೆಯು, ಮಕ್ಕಳ ಸುರಕ್ಷತೆಯ ಬಗ್ಗೆ ದಿನನಿತ್ಯ ಕಾಳಜಿ ವಹಿಸುವ ಶಾಲಾ ಮಕ್ಕಳ ವಾಹನ ಚಾಲಕರನ್ನೇ ತಪ್ಪಿತಸ್ಥರನ್ನಾಗಿಸುವುದು ತೀರಾ ಖಂಡನೀಯ. ವಾಹನ ಚಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಮಕ್ಕಳ ಸುರಕ್ಷತೆಗಾಗಿ ಇನ್ನಷ್ಟು ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಹೇಳಿದರು.
 
 
ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ರವರು ಚಾಲಕರ ಸಂಘಟಿತ ಪ್ರಯತ್ನದ ಭಾಗವಾಗಿ ನಡೆಸಿರುವ ಸಮಾವೇಶಕ್ಕೆ ಶುಭಕೋರಿ ಮಾತನಾಡಿದರು. ಸಂಘಟನೆಯ ಹಿರಿಯ ಮುಖಂಡರು ಗೌರವ ಸಲಹೆಗಾರರಾದ ಉಮೇಶ್ ಶೆಟ್ಟಿ ಮಾತನಾಡುತ್ತಾ, ಮಕ್ಕಳ ಸುರಕ್ಷತೆಯ ಬಗ್ಗೆ ನಿಜವಾದ ಕಾಳಜಿ ವಹಿಸಬೇಕಾದ ಶಾಲಾ ಆಡಳಿತ ಮಂಡಳಿಗೆ ಕನಿಷ್ಠ ಜವಾಬ್ದಾರಿಯೂ ಇಲ್ಲವಾಗಿದೆ. ಪ್ರತಿಯೊಂದು ಶಾಲೆಗಳಲ್ಲಿ ಬೇಕಾದಷ್ಟು ಮೈದಾನವಿದ್ದರೂ ಶಾಲಾ ವಾಹನಗಳಿಗೆ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ನೀಡುತ್ತಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
 
ಸಂಘದ ಇನ್ನೋರ್ವ ಮುಖಂಡರಾದ, ಗೌರವ ಸಲಹೆಗಾರರಾದ ಕುಮಾರ್ ಮಾಲೆಮಾರ್ರವರು ಮಾತನಾಡುತ್ತಾ ಪ್ರವಾಸಿ ವಾಹನ ಪರವಾನಿಗೆ ಹೊಂದಿರುವ ಶಾಲಾ ವಾಹನಗಳಿಗೆ ಹಳದಿ ಬಣ್ಣ ಕಡ್ಡಾಯಗೊಳಿಸಿದರೆ ಶಾಲಾ ಅವಧಿ ಮುಗಿದ ಬಳಿಕ ಅವರಿಗೆ ದುಡಿಯಲು ಸಾಧ್ಯವೇ..? ಟೂರಿಸ್ಟ್ ಗಾಡಿಯ ಹೆಸರಿನಲ್ಲಿ ಸಾವಿರಾರು ರೂಪಾಯಿ ಪಾವತಿಸುತ್ತಿರುವ ತೆರಿಗೆ, ಇನ್ಶೂರೆನ್ಸ್ಗಳಿಗೆ ವಿನಾಯಿತಿ ನೀಡಲು ಸಾಧ್ಯವೇ..? ಎಂದು ಪ್ರಶ್ನಿಸಿದರು.
 
ವೇದಿಕೆಯಲ್ಲಿ ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಮುಖಂಡರಾದ ಗಂಗಾಧರ ರೈ, ಚಿತ್ತರಂಜನ್, ಸತೀಶ್ ಪೂಜಾರಿ, ಪ್ರವೀಣ್ ಲೇಡಿಹಿಲ್, ಜಯರಾಮ್, ಮುನ್ನ ಪದವಿನಂಗಡಿ, ಲೋಕೇಶ್ ಸುರತ್ಕಲ್, ಮೋಹನ್ ಅತ್ತಾವರ, ಮುಹಮ್ಮದ್ ಅನ್ಸಾರ್, ಪ್ರಶಾಂತ್ ಆಳ್ವ, ಜೊಸ್ಸಿ ಡಿ’ಕುನ್ಹಾ, ಜಗದೀಶ್ ಉಳ್ಳಾಲ, ಗಂಗಾಧರ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here