ಸಪ್ತಸ್ವರಗಳ ಸುಶ್ರಾವ್ಯ ಗಾಂಧರ್ವ ಗಾನಾಮೃತವು ಕೇಳಿ ಬರುತ್ತದೆ…

0
817

ನಿತ್ಯ ಅಂಕಣ: ೪೫

ಶ್ರವಣ ಮಾಧ್ಯಮ ಬಳಕೆಯಲ್ಲಿದ್ದ ಕಾಲ ಅದು. ಅಂದು ನಾಡ ಹೆಂಚು ಹೊದಿಸಿದ ಮನೆ, ರೇಡಿಯೋ ಉಳ್ಳವರ ಮನೆಯನ್ನು ಸ್ಥಿತಿವಂತರು ಎಂದು ಗುರುತಿಸಲಾಗುತಿತ್ತು. ಅಂದು ಮನೆಯಲ್ಲಿ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತಲೇ, ರೇಡಿಯೋದಲ್ಲಿ ಬರುವ ಕಾರ್ಯಕ್ರಮಗಳನ್ನು ಹತ್ತಾರು ಕಿವಿಗಳು ಆಲಿಸುತ್ತಿದ್ದವು. ಅಕ್ಕ ಪಕ್ಕದ ಮನೆಯವರು ಬಾನುಲಿ ಕೇಂದ್ರದಿಂದ ಬಿತ್ತರಗೊಳ್ಳುವ ಕಾರ್ಯಕ್ರಮ ಆಲಿಸಲು ರೇಡಿಯೋ ಇದ್ದವನ ಮನೆಯಲ್ಲಿ ಜಮಾವಣೆ ಆಗುತ್ತಿದ್ದರು. ನಿತ್ಯಾನಂದ ಸ್ವಾಮಿಗಳ ಭಕ್ತನೊಬ್ಬನಿದ್ದ. ಆತನ ಹೆಸರು ವೀರನ್. ವೀರನ್ ಬಳಿಯಲ್ಲಿಯೂ ಒಂದು ರೇಡಿಯೋ ಇದ್ದಿತು. ಲೋಕದಲ್ಲಿ ನಡೆಯುವ ವಿದ್ಯಾಮಾನಗಳನ್ನು ಬಾನುಲಿ ವಾರ್ತೆಯಲ್ಲಿ ಕೇಳಿ ತಿಳಿಯುತ್ತಿದ್ದ. ಕೇಳಿದ ಸುದ್ದಿಯನ್ನು ಹತ್ತಾರು ಜನರಿಗೂ ಹೇಳುತ್ತಿದ್ದ. ಒಂದರ್ಥದಲ್ಲಿ ವೀರನ್ ಸುದ್ದಿ ವಿತರಕನಂತೆ ಕೆಲಸ ಮಾಡುತ್ತಿದ್ದ. ಕೆಲವೊಮ್ಮೆವೀರನ್, ಅತ್ತ ಇತ್ತ ತಿರುಗಾಡುವಾಗಲೂ ರೇಡಿಯೋವನ್ನು ಹೊತ್ತುಕೊಂಡೆ ತಿರುಗಾಡುತ್ತಿದ್ದ. ಕೇವಲ ವಾರ್ತೆಗಳಷ್ಟೇ ಅಲ್ಲ, ಸಂಗೀತ ಕಾರ್ಯಕ್ರಮಗಳನ್ನು ಆಲಿಸುತ್ತಿದ್ದ. ಆಕಾಶವಾಣಿ ಕೇಂದ್ರದಿಂದ ಸಂಗೀತ ಪ್ರಸಾರಗೊಳ್ಳುವ ಸಮಯದ ನಿರೀಕ್ಷೆಯಲ್ಲಿ ವೀರನ್ ಇರುತ್ತಿದ್ದ.

ಒಂದು ದಿನ ವೀರನ್, ತನ್ನ ರೇಡಿಯೋವನ್ನು ಹೊತ್ತುಕೊಂಡು ನಿತ್ಯಾನಂದ ಸ್ವಾಮೀಜಿ ಅವರ ಬಳಿಗೆ ಹೋಗುತ್ತಾನೆ. ತನ್ನ ಪ್ರೀತಿಯ ಸ್ವಾಮೀಜಿಯಲ್ಲಿ, ಈಗ ಶ್ರೇಷ್ಠ ಸಂಗೀತ ವಿದ್ವಾಂಸರ ಸಂಗೀತ ಕಛೇರಿ ಕಾರ್ಯಕ್ರಮ ಪ್ರಸಾರವಾಗುತ್ತದೆ. ‘ನಾವಿಬ್ಬರು ಆಲಿಸೋಣ ಸ್ವಾಮೀಜಿ’, ಎಂದು ವೀರನ್ ಹೇಳುತ್ತಾನೆ. ಆಗ ನಿತ್ಯಾನಂದರು ವೀರನಿಗಿರುವ ಸಂಗೀತ ಆಸಕ್ತಿ ಗಮನಿಸಿ, ನಿನಗೆ ಸುಶ್ರಾವ್ಯವಾದ ಸಂಗೀತ ಕೇಳಬೇಕೇ..? ತನ್ಮಯನಾಗಿ ಕೇಳು, ಅದಕ್ಕೆ ರೇಡಿಯೋ ಬೇಡ. ನನ್ನ ಉದರನಾಭಿಗೆ ಕಿವಿಗೊಡು ಎಂದರು. ಸ್ವಾಮೀಜಿ ಅವರ ಮಾತಿಗೆ ಅಚ್ಚರಿಪಟ್ಟ ವೀರನ್ ರೇಡಿಯೋ ಅಲ್ಲೇ ಬಿಟ್ಟು, ಸ್ವಾಮೀಜಿ ಅವರ ನಾಭಿಗೆ ಕಿವಿ ಇಡುತ್ತಾನೆ. ಆವಾಗ ಅವನಿಗೆ ಸಪ್ತಸ್ವರಗಳ ಸುಶ್ರಾವ್ಯ ಗಾಂಧರ್ವ ಗಾನಾಮೃತವು ಕೇಳಿ ಬರುತ್ತದೆ. ಶ್ರುತಿಪೆಟ್ಟಿಗೆ, ಮೃದಂಗ ಮೊದಲಾದ ಸಂಗೀತ ಪರಿಕರಗಳ ತಾಳಮೇಳಗಳನ್ನು ಕೇಳಿದ. ನಾಭಿಯಿಂದ ಕೇಳಿ ಬರುವ ಶುಶ್ರಾವ್ಯ ಸಂಗೀತವು ವೀರನ್ ಅವನನ್ನು ಅಲ್ಲಿಯೇ ನಿದ್ದೆಗೆ ಜಾರಿಸಿತು. ನಿತ್ಯಾನಂದರು ತಲೆಗೆ ಬಡಿದು ಎಚ್ಚರಿಸಿದಾಗಲೇ ವೀರನ್ ವಾಸ್ತವ ಲೋಕಕ್ಕೆ ಬಂದಿದ್ದು. ಭಜನಾ ಮಂಡಳಿಗಳೇ ನಿತ್ಯಾನಂದರ ಉದರದೊಳಗೆ ಕೂತು ಹಾಡಿದಂತೆ ಅವನಿಗೆ ಭಾಸವಾಯಿತು. ನಗುತ್ತಿರುವ ಗುರುದೇವರನ್ನು ಕಂಡು ಅಬ್ಬಾ..! ಗುರುದೇವ ಏನಿದು ವಿಸ್ಮಯ ವಿಚಿತ್ರ..! ಎಂದೆನ್ನುತ್ತಾನೆ.

ವೀರನ್ ತಾನು ಅನುಭವಿಸಿರುವ ಚಮತ್ಕಾರವನ್ನು ಸ್ವತಃ ಮಲಯಾಳ ಲೇಖಕ ಪಿ.ವಿ.ರವೀಂದ್ರನ್ ಅವರಲ್ಲಿ ಹೇಳಿಕೊಂಡಿದ್ದಾನೆ. ಅವರು ಗುರುದೇವರ ಈ ಲೀಲೆಯನ್ನು ಅವರು ನಿತ್ಯಾನಂದರ ಕುರಿತಾಗಿ ಬರೆದ ಚರಿತ್ರೆಯ ಕೃತಿಯಲ್ಲೂ ದಾಖಲಿಸಿದ್ದಾರೆ. ಕುಂಡಲಿನೀ ಯೋಗದಲ್ಲಿ ಅನಾಹತ ಚಕ್ರದಲ್ಲಿ ಸಂಗೀತ ಸಾಮ್ರಾಜ್ಯವೇ ಅಡಗಿದೆ, ಎಂದು ಯೋಗಶಾಸ್ತ್ರವು ಹೇಳುತ್ತಿದೆ. ಸಿದ್ಧಪುರುಷರಿಗೆ ಮಾತ್ರ ಲಭ್ಯವಾಗುವ ಈ ಸಿದ್ಧಿಯು ಸದ್ಗುರು ನಿತ್ಯಾನಂದರಲ್ಲಿಯೂ ಇತ್ತು. ವೀಣಾಧಾರಿಣಿಯಾದ ವಿದ್ಯೆಯ ಅಧಿದೇವತೆ ಸರಸ್ವತಿ ಮಾತೆಯು, ಈ ಚಕ್ರದಲ್ಲಿ ವಿರಾಜಮಾನಳಾಗಿ ನೆಲೆಯಾಗಿರುತ್ತಾಳೆ. ಸದ್ಗುರುವು ಸಕಲ ದೇವ-ದೇವಿಯರ ಆಗರವಾಗಿದೆ. ಎಲ್ಲವೂ ಅದರೊಳಗೆ ಶೋಭಿಸುತ್ತದೆ ಎಂಬುವುದು ಪ್ರಾಜ್ಞರ ಅಭಿಮತ.

-ತಾರಾನಾಥ್‌ ಮೇಸ್ತ,ಶಿರೂರು.

Advertisement

LEAVE A REPLY

Please enter your comment!
Please enter your name here