ಸನ್ಯಾಸ ನಿನ್ನ ಕರ್ತವ್ಯ ಅಲ್ಲ, ಕಾವಿಶಾಟಿ ಕಳಚು!

0
9778

ನಿತ್ಯ ಅಂಕಣ-೧೦೪ : ತಾರಾನಾಥ್‌ ಮೇಸ್ತ, ಶಿರೂರು.
ಭಗವಾನ್ ನಿತ್ಯಾನಂದರ ಅತಿ ಸಾಮೀಪ್ಯದ ಸಾಂಗತ್ಯ ಪಡೆದ ಭಕ್ತರು ಅನನ್ಯರು ಭಾಗ್ಯವಂತರು ಎಂದು ಹೇಳಬಹುದು. ಹಾಗೆಯೇ ಗುರುದೇವರ ಜತೆ ಶ್ರದ್ಧಾ ಭಕ್ತಿಯ ಒಡನಾಟ ಇಟ್ಟುಕೊಂಡು, ಅವರಿಂದ ಆಶೀರ್ವಾದ ಪಡೆದು ಪ್ರಸಿದ್ಧ ವ್ಯಕ್ತಿಗಳಾಗಿ ಸಾರ್ಥಕತೆಯ ಜೀವನ ಸಾಗಿಸಿದವರ ಉದಾಹರಣೆಗಳು ಎಣಿಕೆಗೆ ಸಿಗದಷ್ಟು ಇವೆ. ಅದರಂತೆ ಅವಧೂತ ನಿತ್ಯಾನಂದರ ಕೃಪೆಗೆ ಪಾತ್ರರಾದ ಪರಮಭಕ್ತರಲ್ಲಿ ಪುಣ್ಯಪ್ರಾಪ್ತಿ ಪಡೆದ ಮಹಾನ್ ವ್ಯಕ್ತಿಗಳ ಗಡಣದಲ್ಲಿ ಬರುವರು ಉಡುಪಿ ನಗರ ಹೊರವಲಯಯದ ಬೆಳ್ಳೆಯ ನಿರಾಡಾಂಬರ ವ್ಯಕ್ತಿತ್ವದದ ಶ್ರೀ ಎಸ್.ಕೆ.ಸುವರ್ಣರು ಓರ್ವರು. ಇವರು ಸ್ವಾತಂತ್ರ್ಯ ಹೋರಾಟಗಾರರು, ಪಂಡಿತ ವೈದ್ಯರು ಕೂಡ ಹೌದು. ಇವರ ಜೀವನ ಪಯಣದ ಯಶೋಗಾಥೆ ಬರೆಯಲು ಹೋದರೆ ಸಹಸ್ರಪುಟಗಳ ಹೊತ್ತಗೆ ಆಗಬಹುದು.
ಬೆಳ್ಳೆ ಎಸ್.ಕೆ. ಸುವರ್ಣ ಅವರ ಜೀವನ, ಅವರ ಸಾಮಾಜಿಕ ಚಿಂತನೆ, ಅವರು ಫಲಾಪೇಕ್ಷೆ ಇಲ್ಲದೆ ಮಾಡಿರುವ ಅನುಪಮವಾದ ಸತ್ಕಾರ್ಯ, ಧಾರ್ಮಿಕ- ಶೈಕ್ಷಣಿಕವಾಗಿ ಮಾಡಿರುವ ಸೇವೆಗಳು ನಾಗರಿಕ ಸಮಾಜಕ್ಕೆ ಆದರ್ಶದ ಜೀವನ ಪಾಠಗಳಾಗಿ ಉಳಿದುಕೊಂಡಿವೆ. ಅವರ ಬಾಲ್ಯದ ಕಾಲಘಟ್ಟದಲ್ಲಿ ಬೆಳ್ಳೆ ಯಾವೊಂದು ಮೂಲ ಸೌಕರ್ಯಗಳಿಲ್ಲದ ಕುಗ್ರಾಮವಾಗಿತ್ತು. ಆ ಕಾಲದಲ್ಲಿ ಬೆಳ್ಳೆ ನಿಟ್ಟೂಲ್ ಕೋಟಿ ಪೂಜಾರಿಯ ಪುತ್ರ ಶೀನ ಎಂಬ 11 ವರ್ಷದ ಬಾಲಕ ಹಡಗು ಹತ್ತಿ ಮುಂಬಯಿ ಸೇರುತ್ತಾನೆ. ಹಗಲಲ್ಲಿ ಹೋಟೆಲಲ್ಲಿ ದುಡಿದು ರಾತ್ರಿ ಶಾಲೆಯಲ್ಲಿ ಮೆಟ್ರೀಕ್ ತನಕ ಕಲಿಯುತ್ತಾನೆ. ಆವಾಗಲೇ ಭಗವಾನ್ ನಿತ್ಯಾನಂದರ ದರ್ಶನ ಪಡೆದು ಅವರ ಸಾಂಗತ್ಯ ಪಡೆಯುತ್ತಾರೆ. ಗಾಂಧೀಜಿಯವರ ನೇತೃತ್ವದ ರಾಷ್ಟ್ರ ಸ್ವಾತಂತ್ರ್ಯ ಚಳುವಳಿ, ‘ಬ್ರಿಟಿಷರೆ ಭಾರತ ಬಿಟ್ಟು ತೊಲಗಿರಿ’ ಚಳುವಳಿಗಳಲ್ಲಿ ಭಾಗವಹಿಸಿ ದೇಶಭಕ್ತಿಯನ್ನು ಮೆರೆಯುತ್ತಾರೆ. ಬ್ರಿಟಿಷರ ನಿಗಾದ ಕಣ್ಣು ಇವರ ಮೇಲೆ ಬಿಳುತ್ತದೆ. ಮುಂದೆ ಭೂಗತನಾಗಬೇಕಾದ ಪರಿಸ್ಥಿತಿ ಅವರಿಗೆ ಬರುತ್ತದೆ. ಹಾಗಾಗಿ ಅವರು ಗೌಪ್ಯವಾಗಿ ಪಶ್ಚಿಮಬಂಗಾಲದ ರಾಜಧಾನಿ ಕೊಲ್ಕತ್ತಾವನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಶ್ರೀಗಂಗಾ ಪ್ರಸಾದ ಮುಖರ್ಜಿ ಮಹಾತಪಸ್ವಿಯವರ ಸಂಪರ್ಕ ಪಡೆದು, ಅವರಿಂದ ಸನ್ಯಾಸಧೀಕ್ಷೆ ಪಡೆಯುತ್ತಾರೆ. ಸನ್ಯಾಸಿಯಾಗಿ ಧ್ಯಾನ, ಅನುಷ್ಠಾನಗಳನ್ನು ಮಾಡುತ್ತ, ಸತತ ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗುತ್ತಾರೆ. ಯೋಗ ತಂತ್ರ ವಿದ್ಯೆಗಳನ್ನು ಗುರುಮೂಲಕ ಸುವರ್ಣರು ಸಿದ್ಧಿಸಿಕೊಂಡರು. ಸುವರ್ಣರು ಜನಿಸಿದ್ದು 1917 ರ ಸೆಪ್ಟೆಂಬರ್ 2 ರಂದು. ತಂದೆ ನಿಟ್ಟಿಲ್(ನಿಟ್ಟೂಲ್) ಕೋಟಿ ಪೂಜಾರಿ. ಶ್ರಮಜೀವಿ, ಕೃಷಿಕರು. ತಾಯಿ ರಂಗಕ್ಕೆ (ರುಕ್ಕು) ಪೂಜಾರ್ತಿ ನಾಟಿವೈದ್ಯೆ. ಪಿತ್ತ ಕಾಮಾಲೆ, ಮೊದಲಾದ ವ್ಯಾಧಿಗಳಿಗೆ ಗಿಡಮೂಲಿಕೆ ಔಷಧಿ ನೀಡುತ್ತಿದ್ದವರು. ಇವರು ಆ ಕಾಲದ ಪ್ರಸೂತಿ ತಜ್ಞೆಯು ಹೌದು. ಊರಿಗೆಲ್ಲ ಬೇಕಾದವರು.
ಗುರುಗಳಾದ ಶ್ರೀಗಂಗಾ ಪ್ರಸಾದರು ಸಮಾಧಿ ಹೊಂದಿದರು. ಮುಂದಿನ ಬದುಕೇನು ಎಂಬ ಚಿಂತೆ ಸುವರ್ಣರಿಗೆ ಬಲವಾಗಿ ಕಾಡುತ್ತದೆ. ಕೊಲ್ಕಾತ್ತದಿಂದ ಮರಳಿ ಪುನಃ ಮುಂಬಯಿಗೆ ಬರುತ್ತಾರೆ. ಗಣೇಶಪುರಿಗೆ ತೆರಳಿ ಅವಧೂತ ಭಗವಾನ್ ನಿತ್ಯಾನಂದ ಸ್ವಾಮಿಗಳ ದರ್ಶನ ಪಡೆಯುತ್ತಾರೆ. ಅದೇ ಸಮಯದಲ್ಲಿ ಊರಲ್ಲಿ ಕೃಷಿಭೂಮಿಯ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ಅಣ್ಣನ ಅಕಾಲಿಕ ನಿಧನ ವಾರ್ತೆಯು ಕೇಳಿಬರುತ್ತದೆ. ಗುರುದೇವರು ಭಕ್ತನಾದ ಶೀನ ಸುವರ್ಣರಿಗೆ ಆದೇಶ ನೀಡುತ್ತಾರೆ, ’ಸನ್ಯಾಸ ನಿನ್ನ ಕರ್ತವ್ಯ ಅಲ್ಲ, ಕಾವಿಶಾಟಿ ಕಳಚು, ಜಟೆ ಬಿಚ್ಚು, ಊರಲ್ಲಿ ತಂದೆ ತಾಯಿ ಇದ್ದಾರೆ. ಅಲ್ಲಿಗೆ ಹೋಗು, ಸೇವೆ ಮಾಡು, ಸಂಸಾರಿಯಾಗು… ನಡೆ’ ಎಂದು. ಅದೇ ಸರಿಯಾದ ಮಾರ್ಗವೆಂದು ಗುರುದೇವರ ಆಜ್ಞೆಯನ್ನು ಸುವರ್ಣರು ಸ್ವೀಕರಿಸುತ್ತಾರೆ. ಸನ್ಯಾಸ ತೊರೆದು ಊರಾದ ಬೆಳ್ಳೆ ನಿಟ್ಟೂಲಿಗೆ ಹಿಂತಿರುಗಿ ಬರುತ್ತಾರೆ. 1941ರ ಸುಮಾರಿಗೆ ಮದುವೆಯಾಗಿ ಗ್ರಹಸ್ಥ ಆಶ್ರಮ ಪ್ರವೇಶ ಮಾಡುತ್ತಾರೆ.
ಶೀನ ಸುವರ್ಣರ ಈ ಎಲ್ಲ ಘಟನಾವಳಿಗಳ ನಡುವೆ ತಾಯಿಯಿಂದ ಬಳುವಳಿಯಾಗಿ ಬಂದ ವನಸ್ಪತಿ ಔಷಧೋಪಚಾರ ವಿದ್ಯೆಯನ್ನು ಇವರು ಸಿದ್ಧಿಸಿಕೊಂಡರು. ಮೂಡುಬೆಳ್ಳೆಯಲ್ಲಿ ಅವರ ವನಸ್ಪತಿ ಔಷಧ ಅಂಗಡಿ’ ಆರಂಭವಾಗುತ್ತದೆ. ವ್ಯವಹಾರದ ನಡುವೆಯೂ ಕರ್ಮಭೂಮಿ ಮುಂಬಯಿ ಮತ್ತು ಜನ್ಮಭೂಮಿ ನಡುವೆ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಮುಂದೆ ಭಾರತೀಯ ವೈದ್ಯ ಪದ್ಧತಿಯನ್ನು ಕಲಿತು ’ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್’ ಆದರು. ತಂದೆಯ ಅಗಲಿಕೆಯ ಬಳಿಕ ಮುಂಬಯಿಯ ರಾಜಕೀಯ ಚಟುವಟಿಕೆ ಮತ್ತೆ ಮರಳಿ ಬರುವಂತೆ ಆಹ್ವಾನ ಬಂದುದರಿಂದ ಪುನಃ ಮುಂಬಯಿ ಸೇರುತ್ತಾರೆ. ಅಂದಿನ ಪ್ರಮುಖ ರಾಜಕೀಯ ಮುಖಂಡ ಎ. ಕೆ. ಕೃಷ್ಣ ಮೆನನ್ ಅವರಿಗೆ ಬಹಳಷ್ಟು ವರ್ಷಗಳ ಕಾಲ ಆಪ್ತ ಸಹಾಯಕರಾಗಿ ಸೇವೆ ನೀಡಿದ ಹಿರಿಮೆ ಪಂಡಿತ್ ಶೀನ ಸುವರ್ಣರದ್ದು ಆಗಿತ್ತು. ರಾಜಕಾರಣದಲ್ಲಿ ಅವರು ಬಯಸಿದ್ದರೆ ಸ್ವತಂತ್ರ ಭಾರತದ ಸರಕಾರದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸುವ ಅವಕಾಶಗಳು ಬಹಳಷ್ಟು ಅವರಿಗಿದ್ದಿತ್ತು. ಆದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಡಿದು ಅವಕಾಶಗಳತ್ತ ಕೈಚಾಚುವುದು ಸಣ್ಣತನವು ಸರಿ ಅಲ್ಲ ಎಂದು ಅವರಿಗನಿಸಿತು.
ಸುವರ್ಣರು ಕಟ್ಟಾ ಕಾಂಗ್ರೆಸಿಗರಾಗಿ ಕೊನೆತನಕ ಉಳಿದು ಮಾರ್ಗದರ್ಶಕರಾದರು. ಶೀನ ಸುವರ್ಣರು ವಾಸವಿದ್ದ ಮುಂಬೈ ಭಾಂಡುಪ್‌ನ ’ಶಾಂತಿಚಾಲ್’ ಮನೆಯಲ್ಲಿ ಅನುದಿನವು ಸಂದರ್ಶಕರು ಕಂಡುಬರುತ್ತಿದ್ದರು. ಚಿಕಿತ್ಸೆ ಸಲಹೆಗಳು ಲಭ್ಯವಾಗುತ್ತಿದ್ದವು. ಹಲವು ವ್ಯಕ್ತಿತ್ವಗಳು ವಿಕಸನ ಹೊಂದಿದವು. ಮನೋದೈಹಿಕ ಚಿಕಿತ್ಸೆ ಹೊಂದಲು, ಮಾರ್ಗದರ್ಶನ ಪಡೆಯಲು ಹಲವಾರು ಮಂದಿ ಶಿಷ್ಯರು ಉದ್ಯಮಿಗಳಾಗಿ ಬೆಳೆದು ನಿಂತವರು ಅನೇಕರು. ಯಾವುದೇ ಸಾಧನೆಗೂ ಆರ್ಥಿಕ ಪ್ರಗತಿ ಅತ್ಯಗತ್ಯ ಎಂಬುದು ಅವರ ವಾಸ್ತವಿಕ ನಿಲುವಾಗಿತ್ತು. ಭಾಂಡುಪ್‌ನಲ್ಲಿ ’ಶ್ರೀ ನಿತ್ಯಾನಂದ ಆಶ್ರಮ’ ಸ್ಥಾಪನೆಯ ಮಹತ್ಕಾರ್ಯುವು ಶೀನ ಸುವರ್ಣರಿಂದ ನಡೆಯುತ್ತದೆ.
ಅದೇ ಆಶ್ರಮ ಇಂದು ಭಕ್ತರ ಶ್ರದ್ಧಾ ಕೇಂದ್ರವಾಗಿ ಬೆಳೆದು ನಿಂತಿದೆ. ಮುಂದೆ ಹುಟ್ಟೂರು ಕಟ್ಟಿಂಗೇರಿ ಗ್ರಾಮದ ಮೂಡುಬೆಳ್ಳೆ ಕಪ್ಪಂದಕರಿಯದಲ್ಲಿ ಗುಡ್ಡಗಾಡು ಭೂಮಿಯನ್ನು ಖರೀದಿಸಿ ಅಲ್ಲಿಯೇ ಮನೆ ಮಾಡುತ್ತಾರೆ. ಆ ಬಂಜರು ಜಮೀನನ್ನು ಫಲವತ್ತತೆಯ ಕೃಷಿಭೂಮಿಯಾಗಿಸುತ್ತಾರೆ. ಅಲ್ಲೇ 1960 ರಲ್ಲಿ ಶ್ರೀ ನಿತ್ಯಾನಂದ ಆಶ್ರಮವನ್ನು ಸ್ಥಾಪಿಸಿ, ಆ ಭಾಗದ ಹಳ್ಳಿಗಾಡಿನ ಜನತೆಗೆ ಗುರುದೇವರ ದರ್ಶನ ಭಾಗ್ಯ ಒದಗಿಸಿ, “ಓಂ ನಮೋ ಭಗವತೇ ನಿತ್ಯಾನಂದಾಯ” ನಾಮಸ್ಮರಣೆ ಮೊಳಗುವಂತೆ ಮಾಡುತ್ತಾರೆ.
ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಎಸ್.ಕೆ. ಸುವರ್ಣರು ಭಾರತ ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ. ನೇಪಾಲ, ಹೃಷಿಕೇಶ, ಬದ್ರೀನಾಥ್, ಕೇದಾರನಾಥ್, ಅಮರನಾಥ, ಹರಿದ್ವಾರ ಪವಿತ್ರ ಪಾವನ ಕ್ಷೇತ್ರಗಳಿಗೆ ಭೇಟಿನೀಡಿ ಅಲ್ಲಿಯ ಸಾನಿಧ್ಯ ದಿವ್ಯಶಕ್ತಿಗಳ ದರ್ಶನ ಪಡೆದಿದ್ದಾರೆ. ಹುಟ್ಟು ಹೋರಾಟಗಾರ, ಧಾರ್ಮಿಕ ಮುಖಂಡ, ಅವಧೂತ ನಿತ್ಯಾನಂದ ಬಾಬಾರ ಪರಮಭಕ್ತ ಶ್ರೀ ಎಸ್.ಕೆ.ಸುವರ್ಣರು 1993 ರ ಡಿಸೆಂಬರ್ 20 ರಂದು ದೇವರಪಾದ ಸೇರಿದರು. ಸಮಾಜಮುಖಿಯಾಗಿ ಬಾಳಿ, ಧರ್ಮಕಾರ್ಯಗಳ ನಡೆಸಿ, ಗುರುದೇವ ನಿತ್ಯಾನಂದರ ಒಲುಮೆಗೆ ಪಾತ್ರರಾದ ದಿ.ಎಸ್.ಕೆ. ಸುವರ್ಣರು ನಾಗರಿಕ ಸಮಾಜದಲ್ಲಿ ಶಾಶ್ವತ ಸ್ಮರಣಿಯ ಆದರ್ಶ ವ್ಯಕ್ತಿಯಾಗಿ ಉಳಿದಿದ್ದಾರೆ.

LEAVE A REPLY

Please enter your comment!
Please enter your name here