ಸನ್ಮಾನದ ಮನ್ನಣೆಯಿಂದ ಸಾಧನೆಯ ಹುಮ್ಮಸ್ಸು ದ್ವಿಗುಣ

0
462

 
ಉಜಿರೆ ಪ್ರತಿನಿಧಿ ವರದಿ
ಸನ್ಮಾನದ ಮನ್ನಣೆಯು ಸಾಧಕರ ಸಾಧನೆ ಮತ್ತು ಸಾಮಾಜಿಕ ಕೊಡುಗೆಗಳನ್ನು ನೀಡುವ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ ಎಂದು ಪದ್ಮವಿಭೂಷಣ, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.
 
ಉಜಿರೆಯ ಎಸ್.ಡಿ.ಎಮ್ ಕಾಲೇಜಿನ ಸಮ್ಯಕ್ ದರ್ಶನ ಸಭಾ ಭವನದಲ್ಲಿ ಭಾನುವಾರ ಬೆಂಗಳೂರಿನ `ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್’, ಎಸ್.ಡಿ.ಎಮ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ವಾರ್ಷಿಕ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ `ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
 
ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಮತ್ತು ಪ್ರಶಸ್ತಿಯ ಮನ್ನಣೆಗಳು ಲಭಿಸುತ್ತವೆ. ಅವುಗಳು ಸಾಧಕರ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವಾಗ ಅವರ ಜಾತಿ ಧರ್ಮದ ಹಿನ್ನೆಲೆಗಳು ಗಣನೆಗೆ ಬರುವುದಿಲ್ಲ. ಸಲ್ಲಿಸಿದ ಸೇವೆ ಮತ್ತು ಕೊಡುಗೆಯೇ ಪ್ರಶಸ್ತಿ, ಸನ್ಮಾನದ ಪರಿಗಣನೆಯ ಸಂದರ್ಭಗಳಲ್ಲಿ ಮುಖ್ಯವೆನ್ನಿಸುತ್ತವೆ ಎಂದರು.
 
ಸಾಧನೆಯ ನಂತರ ಸಾಧಕರಿಗೆ ಅಹಂಕಾರ ಬಂದರೆ ಅವರ ಸೇವೆ ನಿರಾರ್ಥಕ. ಸೇವೆಯು ಜೀವನ ಮಂತ್ರವಾಗಿರಬೇಕು ಎಂದು ಕಿವಿಮಾತು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವರ್ಷದ `ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ’ ನೀಡಿ ಗೌರವಿಸಿದರು.
 
ಇದೇ ಸಂದರ್ಭದಲ್ಲಿ ಡಾ. ಯಲ್ಲಪ್ಪ ಕೆ.ಕೆ.ಪುರ ರಚಿಸಿರುವ `101 ಸೃಷ್ಟಿ ವೈಚಿತ್ರ್ಯಗಳು’ ಎಂಬ ಮಕ್ಕಳ ಸಚಿತ್ರ ಕೃತಿಯನ್ನು ಬಿಡುಗಡೆಗೊಳಿಸಿದರು. ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ರಾಜ್ಯಾಧ್ಯಕ್ಷರಾದ ಅಗಸನೂರು ತಿಮ್ಮಪ್ಪ, ಯುವ ನೇತಾರ ಎನ್.ವೇಣುಗೋಪಾಲ್, ಅಂತರಾಷ್ಟ್ರೀಯ ಯೋಗ ತಜ್ಞರಾದ ಡಾ. ನಿರಂಜನಮೂರ್ತಿ, ವೀರಗಾಸೆ ಕಲಾವಿದ ಎಂ.ಆರ್.ಬಸಪ್ಪ, ಪ್ರಾಂಶುಪಾಲ ಡಾ. ಕೆ.ಎಸ್. ಮೋಹನ ನಾರಾಯಣ ಉಪಸ್ಥಿತರಿದ್ದರು. ಡಾ. ದಯಾನಂದ್ ಪ್ರಾರ್ಥಿಸಿದರು. ಡಾ. ಯಲ್ಲಪ್ಪ ಕೆ.ಕೆ.ಪುರ ಸ್ವಾಗತಿದರು. ಪತ್ರಕರ್ತ ಅಚ್ಚು ಮುಂಡಾಜೆ ವಂದಿಸಿದರು.

LEAVE A REPLY

Please enter your comment!
Please enter your name here