ಉಜಿರೆ ಪ್ರತಿನಿಧಿ ವರದಿ
‘ಬಯೋನೆಸ್ಟ್’ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿರಿಯ ವಿಜ್ಞಾನಿ ಡಾ.ಜಿ.ವೆಂಕಟೇಶ್ವರನ್ ಸಲಹೆ ಕಸಿ ವಿಧಾನದಿಂದ ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಸೂಕ್ಷ್ಮಾಣು ಜೀವಿಗಳಿಂದ ಆಹಾರಗಳ ಮೌಲ್ಯವರ್ಧನೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಮೈಸೂರು ಸಿಎಫ್ ಟಿ ಆರ್ ಐನ ಮುಖ್ಯ ವಿಜ್ಞಾನಿ ಹಾಗೂ ಫುಡ್ ಮೈಕ್ರೊಬಯೋಲಜಿ ಮತ್ತು ಫರ್ಮಂಟೇಶನ್ ವಿಭಾಗದ ಮುಖ್ಯಸ್ಥ ಡಾ.ಜಿ.ವೆಂಕಟೇಶ್ವರನ್ ಸಲಹೆ ನೀಡಿದರು.
ಅವರು ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗವು ಪದವಿ ಮತ್ತು ಸ್ನಾತಕೋತ್ತರ ಜೀವ ವಿಜ್ಞಾನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಗಳ ಕಾರ್ಯಕ್ರಮ ‘ಬಯೋನೆಸ್ಟ್’ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹಿರಿಯರು ಯಾವ ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದರೋ ಅವುಗಳನ್ನೆ ಇಂದು ನೂತನ ಹೆಸರುಗಳೊಂದಿಗೆ ಆಕರ್ಷಕ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಜೈವಿಕ ತಂತ್ರಜ್ಞಾನದ ಮೂಲಕ ನೈಸರ್ಗಿಕ ಸಂಪನ್ಮೂಲವನ್ನು ಉಪಯೋಗಿಸಿಕೊಂಡು ಉಪಯುಕ್ತ ವಸ್ತುಗಳನ್ನು ಪಡೆಯುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಬೇಕೆಂದರು.
ಇಂದು ಅನೇಕ ದಿನಬಳಕೆ ವಸ್ತುಗಳಲ್ಲಿ ಜೈವಿಕ ವಿಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದ್ದು,ಕಂಪೆನಿಗಳು ತಮ್ಮ ಉತ್ಪನ್ನಗಳ ಜಾಹಿರಾತುಗಳಲ್ಲಿ ಈ ಅಂಶವನ್ನು ಆಕರ್ಷಕ ರೀತಿಯಲ್ಲಿ ಬಿಂಬಿಸುತ್ತಿವೆ ಎಂದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮಾತನಾಡಿ, ಮುಂದಿನ ದಶಕಗಳು ಜೀವ ವಿಜ್ಞಾನದ ದಶಕವಾಗಿದ್ದು, ಆಹಾರ ಕೊರತೆ ಸೇರಿದಂತೆ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಇದು ಪರಿಹಾರ ನೀಡುವ ಸಾಮಥ್ರ್ಯ ಹೊಂದಿದೆ ಎಂದರು.
ಸ್ನಾತಕೋತ್ತರ ಪದವಿಯ ನಂತರವೇ ಸಂಶೋಧನೆಗ ತೊಡಗಬೇಕೆಂಬ ತಪ್ಪು ಕಲ್ಪನೆಯಿಂದ ಹೊರಬಂದು ಈಗಿನಿಂದಲೆ ಸಂಶೋಧನೆಯ ಕಡೆಗೆ ಗಮನ ಹರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಮೋಹನನಾರಾಯಣ, ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ.ಎಂ.ವೈ.ಮಂಜುಳ ಉಪಸ್ಥಿತರಿದ್ದರು.
ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕ ರಮಿತ್ ರಾಮು ಸ್ವಾಗತಿಸಿ, ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಾರ್ಥನಾ.ಜೆ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು.