ಸಂವಹನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆ?

0
280

ಶಿಕ್ಷಣ ಚಿಂತನೆ: ಆರವಿಂದ ಚೊಕ್ಕಾಡಿ
ನಾವೆಲ್ಲರೂ ಸಂವಹನವನ್ನು ನಡೆಸುತ್ತೇವೆ ಎನ್ನುವುದು ನಿಜ. ಆದರೆ ನಾವು ನಡೆಸುವ ಸಂವಹನವು ಪರಿಣಾಮಕಾರಿಯಾಗಿ ಇರುತ್ತದೆಯೇ? ಇದಕ್ಕೆ ಉತ್ತರಿಸುವುದು ಕಷ್ಟ. ಆದರೆ ನಮ್ಮ ಸಂವಹನವು ಪರಿಣಾಮಕಾರಿಯಾಗಿ ಇರುವಂತೆ ಮಾಡಬೇಕು. ಆ ಸಾಮರ್ಥ್ಯವನ್ನು ಯಾವ ರೀತಿ ಗಳಿಸಿಕೊಳ್ಳಬೇಕೆಂದು ನೊಡೋಣ.
1) ಮಾತನಾಡುವುದು
2) ಭಾಷೆಯ ಸಮರ್ಥ ಬಳಕೆಯನ್ನು ಅಭ್ಯಾಸ ಮಾಡಬೇಕು
3) ಮಾನವ ವರ್ತನೆಗಳ ಅರಿವು
4) ಬರಹದಲ್ಲಿ ಭಾಷೆ
5) ಭಾವಾಭಿವ್ಯಕ್ತಿಯ ಕೌಶಲ
 
1) ಮಾತನಾಡುವುದು:
ಅನೇಕ ಸಂದರ್ಭಗಳಲ್ಲಿ ಮಕ್ಕಳು ಮಾತನಾಡುವುದನ್ನು ಹಿರಿಯರು ಮತ್ತು ಶಿಕ್ಷಕರು ತಡೆಯುತ್ತಾರೆ. ಮಾತನಾಡಲು ಅವಕಾಶವನ್ನು ಕೊಡದೆ ಇದ್ದರೆ ಮಕ್ಕಳು ಸಾಮಾಜೀಕರಣಗೊಳ್ಳುವುದಿಲ್ಲ. ಅಭಿವ್ಯಕ್ತಿಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗಬೇಕು. ಮಕ್ಕಳೂ ಕೂಡ ಆಯ್ದ ಕೆಲವೇ ವ್ಯಕ್ತಿಗಳೊಂದಿಗೆ ಮಾತನಾಡುವ ಪದ್ಧತಿಯನ್ನು ಕೈ ಬಿಡಬೇಕು. ಬೇರೆ ಬೇರೆ ಸನ್ನಿವೇಶದಲ್ಲಿ ಬೇರೆಬೇರೆ ವ್ಯಕ್ತಿಗಳೊಂದಿಗೆ ಮಾತನಾಡಬೇಕು. ಪ್ರಾರಂಭಿಕ ಹಂತದಲ್ಲಿ ಎಷ್ಟು ಬೇಕೊ ಅಷ್ಟೇ ಮಾತನಾಡಿದರೂ ಕೂಡ ನಿಧಾನವಾಗಿ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಅದರಿಂದ ಎರಡು ರೀತಿಯ ಉಪಯೋಗ ಆಗುತ್ತದೆ. ಮೊದಲನೆಯದಾಗಿ ಪರಿಣಾಮಕಾರಿಯಾಗಿ ಸಂವಹನವನ್ನು ನಡೆಸುವ ಸಾಮರ್ಥ್ಯ ಬರುತ್ತದೆ. ಎರಡನೆಯದಾಗಿ ಬೇರೆ ಬೇರೆ ನೆಲೆಗಳಿಂದ ಅನುಭವಗಳು ಸಿಗುತ್ತದೆ. ಅನುಭವ ಸಂಪ್ನತೆಯೂ ಕೂಡ ಸಂವಹನದ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಗಾಗಿ ಬೇರೆ ಬೇರೆಯವರನ್ನು ಸಂಪರ್ಕಿಸಯವ ವಿಧಾನದ ಅಭ್ಯಾಸವನ್ನು ಮಾಡಬೇಕು. ‘ಗ್ರಾಮೀಣ ಪ್ರಮಾಣ ಪತ್ರಕ್ಕಾಗಿ ಕ್ಷೇತ್ರ ಶಿಕ್ಷಣ ಅಧಿಕಾರಿಯವರಿಗೆ ಅರ್ಜಿ’- ‘ಊರಿನನಲ್ಲಿ ರಿಪೇರಿ ಮಾಡುವಂತೆ ಪುರಸಭೆಯ ಅಧ್ಯಕ್ಷರಿಗೆ ಮನವಿ’- ಹೀಗೆ ಕೆಲವು ವಿಷಯಗಳನ್ನು ತೆಗೆದುಕೊಂಡು ಪ್ರಾಜೆಕ್ಟ್ ವರ್ಕ್ ಮಾಡಬೇಕು. ಪರಿಣಾಮಕಾರಿ ಸಂವಹನ ಸಾಮರ್ಥ್ಯದ ವೃದ್ಧಿಗೆ ಇದರಿಂದ ಸಹಾಯವಾಗುತ್ತದೆ.
 
 
 
2) ಭಾಷೆಯ ಸಮರ್ಥ ಬಳಕೆಯನ್ನು ಅಭ್ಯಾಸ ಮಾಡಬೇಕು:
ಭಾಷೆಯಷ್ಟೇ ಗೊತ್ತಿದ್ದರೆ ಸಾಲದು. ಭಾಷೆಯನ್ನು ಹೇಗೆ ಬಳಸಬೇಕು ಎಂದೂ ಗೊತ್ತಿರಬೇಕು. ಉದಾಹರಣೆಗೆ ‘ಒಳ್ಳೆಯವನಲ್ಲ’ ಮತ್ತು ‘ದುಷ್ಟ’ ಎಂಬ ಎರಡು ಶಬ್ದಗಳೂ ನಿಮಗೆ ಗೊತ್ತಿದೆ. ಯಾರಾದರೂ ತಪ್ಪನ್ನು ಮಾಡಿದಾಗ ಅವರನ್ನು ತಿದ್ದಬೇಕೆಂದು ನಿಮಗನಿಸುತ್ತದೆ. ಆಗ ‘ನೀನು ದುಷ್ಟ’ ಎನ್ನಲು ಹೊಗಬಾರದು. ಅದರಿಂದ ಅವನಿಗೂ ಸಿಟ್ಟು ಬಂದು ತಿರುಗಿ ಬಯ್ಯಲು ಪ್ರಾರಂಭಿಸಬಹುದು. ಆಗ ಉದ್ದೇಶಿತ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ‘ನೀನು ಒಳ್ಳೆಯವನಲ್ಲ’ ಎನ್ನಬೇಕು. ‘ಒಳ್ಳೆಯವನಲ್ಲ’ ಎಂಬ ಲಘುವಾದ ಶಬ್ದ ಅವನ ಮೇಲೆ ಪರಿಣಾಮವನ್ನು ಉಂಟು ಮಾಡದೆ ಇದ್ದರೆ ಆಗ ಮಾತ್ರ ‘ನೀನು ದುಷ್ಟ’ ಎನ್ನಬೇಕು. ‘ಒಳ್ಳೆಯವನಲ್ಲ’ ಎಂದಾಗ ಪರಿಣಾಮ ಆಗದೆ ಇರುವವನಿಗೆ ‘ದುಷ್ಟ’ ಎಂದರೆ ಪರಿಣಾಮ ಆಗುತ್ತದೆ.
 
 
3) ಮಾನವ ವರ್ತನೆಗಳ ಅರಿವು:
ಪರಿಣಾಮಕಾರಿಯಾದ ಸಂವಹನವು ನಡೆಯಲು ಮಾನ ವರ್ತನೆಗಳ ಅರಿವು ತುಂಬಾ ಅಗತ್ಯವಾಗಿದೆ. ಯಾವ ವ್ಯಕ್ತೊಯೂ ತಾನು ತಪ್ಪು ಮಾಡಿದ್ದೇನೆಂದು ಇನ್ನೊನ್ನರಿಂದ ಹೇಳಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಆದ್ದರಿಂದ ‘ನೀನು ತಪ್ಪು ಮಾಡಿರುವೆ’ ಎಂಬರ್ಥದಲ್ಲಿ ಯಾರಿಗೂ ಹೇಳಲು ಹೋಗಬಾರದು. ಬದಲು ‘ತಪ್ಪು ಆಗಿದೆ’ ಎಂಬರ್ಥದಲ್ಲಿ ಹೇಳಬೇಕು. ಯಾರಿಂದ ತಪ್ಪಾಗಿದೆ ಎನ್ನುವುದು ಮುಖ್ಯವಲ್ಲ. ತಪ್ಪು ಆಗಿದೆ ಮತ್ತು ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂಬುದಷ್ಟೇ ದೋಷಿಯನ್ನಾಗಿಸುವುದಾಗಿರಬಾರದು. ಕಾರಣಗಳನ್ನು ದೋಷಿಯನ್ನಾಗಿ ಕಂಡು ಕಾರಣವನ್ನು ಸರಿಪಡಿಸಲು ವ್ಯಕ್ತಿಗೆ ಪ್ರೇರಣೆ ನೀಡುವಂತಾದ್ದಾಗಬೇಕು.
 
 
 
4)ಬರೆಹದಲ್ಲಿ ಭಾಷೆ:
ಬರವಣಿಗೆಯು ಒಂದು ಅದಭುತವಾದ ಕಲೆ. ಚೆನ್ನಾಗಿ ಬರೆಯುವುದು ಹೇಗೆ ಎನ್ನುವುದು ಗೊತ್ತಾಗಬೇಕಾದರೆ ಮೊತ್ತ ಮೊದಲು ಸ್ವತಂತ್ರವಾಗಿ ಬರೆಯಬೇಕು. ಸ್ವತಂತ್ರವಾದ ಬರವಣಿಗೆ ನೋಟ್ಸ್ ಬರೆಯುವಲ್ಲಿಂದ ಪ್ರಾರಂಭವಾಗಬೇಕು. ಪಠ್ಯಪುಸ್ತಕವನ್ನು ಓದಿ. ನಂತರ ಮುಚ್ಚಿಡಿ. ಆ ಮೇಲೆ ಓದಿದ್ದರಲ್ಲಿ ಏನೇನೆಲ್ಲ ನೆನಪುಳಿದಿದೆಯೋ ಅದನ್ನು ನೋಟ್ಸ್ ಆಗಿ ಬರೆಯಿರಿ. ಆನಂತರ ಸೃಜಲಶೀಲವಾಗಿ ಕಥೆ, ಕವಿತೆ, ವರದಿ ಎಂದೆಲ್ಲ ಬರೆಯಿರಿ. ಯಾವುದಾದರೊಂದು ವಿಷಯವನ್ನು ತೆಗೆದುಕೊಂಡು ಪ್ರಬಂಧ ಬರೆಯಿರಿ. ನಂತರ ಅದೇ ವಿಷಯದಲ್ಲಿ ಬೇರೆಯವರು ಸ್ವಲ್ಪ ಚೆನ್ನಾಗಿ ಬರೆಯುವವರು ಹೇಗೆ ಬರೆದಿದ್ದಾರೆಂದು ಪತ್ರಿಕೆಯಲ್ಲಿಯೋ, ಪುಸ್ತಕದಲ್ಲಿಯೋ ಓದಿ ತಿಳಿಯಿರಿ. ತುಲನೆ ಮಾಡಿ. ನಿಮ್ಮ ಬರೆವಣಿಗೆಯ ದೋಷವು ನಿಮಗೆ ನಿಮಗೇ ಗೊತ್ತಾಗುತ್ತದೆ. ನಂತರ ತಿದ್ದಿ ಬರೆಯಿರಿ. ಹೀಗೆ ಮತ್ತೆ ಮತ್ತೆ ಬರೆಯುತ್ತಾ ಹೋದಾಗ ಬರೆವಣಿಗೆಯಲ್ಲಿ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವ ವಿಧಾನವು ನಿಮಗೆ ಗೊತ್ತಾಗುತ್ತದೆ.
 
 
5)ಭಾವಾಭಿವ್ಯಕ್ತಿಯ ಕೌಶಲ:
ಸಂವನಹದಲ್ಲಿ ಭಾವಾಭಿವ್ಯಕ್ತಿಗೆ ವಿಶೇಷವಾದ ಮಹತ್ವವಿದೆ. ವಿಚಾರವನ್ನು ವಿಚಾರಕ್ಕೆ ತುಂಬುವ ಭಾವನೆಗಳು ಬಹಳ ಸಹಾಯವನ್ನು ಮಾಡುತ್ತದೆ. ನೀವು ಕೆಲವರ ಉಪನ್ಯಾಸವನ್ನು ಕೇಳಿ. ವಿಚಾರ ತುಂಬಾ ಚೆನ್ನಾಗಿರುತ್ತದೆ. ಆದರೆ ನಿರ್ಭಾವುಕರಾಗಿ ಅವರು ಮಾತನಾಡಿರುತ್ತಾರೆ. ಕೇಳುವುದು ಹೊರೆ ಎಂದು ಅನಿಸುತ್ತದೆ. ಇನ್ನು ಕೆಲವರ ಮಾತುಗಳನ್ನು ಕೇಳಿಸಿದರೆ ಅವರ ಮಾತುಗಳು ಕೃತಕವೆಂದು ಅನಿಸುತ್ತದೆ. ಆದರೆ ಯಾರು ತನ್ನ ವಿಚಾರಕ್ಕೆ ಭಾವನೆಗಳನ್ನು ತುಂಬಿ ಹೇಳುತ್ತಾನೋ ಅವನ ಮಾತುಗಳು ಆಕರ್ಷಕವಾಗಿ ಸೆರೆ ಹಿಡಿಯುತ್ತದೆ. ಪರಿಣಾಮಕಾರಿಯಾಗಿ ತಲುಪುತ್ತದೆ. ಆದ್ದರಿಂದ ಮಾತುಗಳು ಸಹಜವಾಗಿರಬೇಕು. ಹೇಳುವ ವಿಚಾರಗಳನ್ನು ನಾವು ಅನುಭವಿಸಿಕೊಂಡು ಹೇಳುವ ಕ್ರಮವನ್ನು ಬೆಳೆಯಿಸಿಕೊಳ್ಳಬೇಕು.
ಮೇಲಿನ ವಿಚಾರಗಳನ್ನು ಅರ್ಥ ಮಾಡಿಕೊಂಡು ರೂಢಿಸಿಕೊಂಡಾಗ ನೀವು ಹೇಳುವುದನ್ನು ಕೇಳಲು ಇಷ್ಟಪಡುತ್ತಾರೆ. ಅದು ನೀವು ಪರಿಣಾಮಕಾರಿ ಸಂವಹನವನ್ನು ಮಾಡಬಲ್ಲಿರಿ ಎಂಬುದನ್ನು ಸೂಚಿಸುತ್ತದೆ.
 
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here