'ಸಂವಹನ ಕೌಶಲ್ಯದಿಂದ ಬದುಕಿನ ಗೆಲುವು'

0
154

ವರದಿ: ರಮ್ಯಶ್ರೀ ದೊಂಡೋಲೆ, ಸುಷ್ಮಾ ಉಪ್ಪಿನ್ ಇಸಳೂರ
ಸಂವಹನ ಕೌಶಲ್ಯದೊಂದಿಗೆ ಗರುತಿಸಿಕೊಂಡವರು ಕೇವಲ ವೃತ್ತಿರಂಗದಲ್ಲಿ ಮಾತ್ರವಲ್ಲದೇ ಸಂಬಂಧಗಳ ಸಮರ್ಥ ನಿರ್ವಹಣೆಯೊಂದಿಗೆ ವ್ಯಕ್ತಿಗತ ಬದುಕಿನಲ್ಲಿಯೂ ಗೆಲುವು ಸಾಧಿಸುತ್ತಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಕ್ಕಳ ಕಲ್ಯಾಣ ವಿಭಾಗದ ಸಹಾಯಕ ನಿರ್ದೇಶಕ ಜೆ.ಲೋಹಿತ್ ಅಭಿಪ್ರಾಯಪಟ್ಟರು.
 
 
ಎಸ್.ಡಿ.ಎಮ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮೀಡಿಯಾ ಮೆಸೆಂಜರ್ ಕ್ಲಬ್ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಹನದ ಕೌಶಲ್ಯದ ಕುರಿತು ಅವರು ಮಾತನಾಡಿದರು.
 
 
ಭಾಷೆಯು ಕೇವಲ ಜ್ಞಾನದ ಸಾಧನವಷ್ಟೇ. ಭಾಷೆಯೇ ಜ್ಞಾನವಲ್ಲ. ಭಾಷೆಯ ಮೂಲಕ ಜ್ಞಾನಾರ್ಜನೆ ಸಾಧ್ಯವಾಗಿಸಿಕೊಳ್ಳಬೇಕು. ಆ ಜ್ಞಾನದ ಆಧಾರದಲ್ಲಿ ಸಂವಹನದ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಆ ಕೌಶಲ್ಯಕ್ಕೆ ವಿವೇಕದ ಬೆಂಬಲವಿರಬೇಕು. ಎಲ್ಲಿ, ಯಾವಾಗ ಹೇಗೆ ಮಾತನಾಡಬೇಕು ಎಂಬ ವಿವೇಚನೆ ಸಂವಹನದ ಕೌಶಲ್ಯವನ್ನು ಅರ್ಥಪೂರ್ಣವಾಗಿಸುತ್ತದೆ ಎಂದರು.
 
 
ವ್ಯಕ್ತಿಯ ನಡೆ-ನುಡಿಗಳಲ್ಲಿ ಬೆರೆತುಹೋದ ಸಹಜತೆ, ಸರಳತೆ ಮಾತಿನಲ್ಲಿ ಧ್ವನಿಸುತ್ತದೆ. ಇಂತಹ ವಿವೇಕ ಹೊರಗಿನಿಂದ ಕಲಿಯುವಂಥದ್ದಲ್ಲ. ವ್ಯಕ್ತಿಗತವಾಗಿ ರೂಢಿಸಿಕೊಳ್ಳಬೇಕು. ಏಕಾಗ್ರತೆಯ ಗ್ರಹಿಕೆಯಿಂದ ತಿಳುವಳಿಕೆ ದಕ್ಕುತ್ತದೆ. ಸ್ಪಷ್ಟ ಗ್ರಹಿಕೆ ಸಂವಹನವನ್ನು ಪರಿಣಾಮಕಾರಿಯಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
 
 
ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಛಾಯಾ ಸ್ವಾಗತಿಸಿದರು. ಕಾವ್ಯಾ ವಂದಿಸಿದರು.

LEAVE A REPLY

Please enter your comment!
Please enter your name here