ಸಂವಹನದ ಹಲವು ರೂಪಗಳು:

0
1101

ಶಿಕ್ಷಣ ಚಿಂತನೆ: ಅರವಿಂದ ಚೊಕ್ಕಾಡಿ
ಮುಂದುವರಿದ ಭಾಗ…
ಸಂವಹನದಲ್ಲಿ ಸಾಕಷ್ಟು ವೈವಿಧ್ಯತೆಗಳಿವೆ. ಸದ್ಯಕ್ಕೆ ಪ್ರಧಾನವಾಗಿ ಬಳಕೆಯಲ್ಲಿರುವ ಕ್ರಮಗಳನ್ನು ಆಧರಿಸಿ ವಿಶಾಲ ವ್ಯಾಪ್ತಿಯ ಮೂರು ವಿಧಗಳಾಗಿ ಅವುಗಳನ್ನು ವಿಂಗಡಿಸಬಹುದು. ಮೊದಲನೆಯದು ಪ್ರತ್ಯಕ್ಷ ಮಾತುಗಾರಿಕೆ, ಎರಡನೆಯದು ಅಪ್ರತ್ಯಕ್ಷ ಮಾತುಗಾರಿಕೆ, ಮೂರನೆಯದು ಲಿಖಿತ ಸಂವಹನ.
 
 
A) ಪ್ರತ್ಯಕ್ಷ ಮಾತುಗಾರಿಕೆ:
ಮಾತನಾಡುವವರು ಪರಸ್ಪರ ಎದುರಿಗಿದ್ದು, ಸಂದೇಶಗಳ ವಿನಿಮಯ ಮಾಡಿಕೊಳ್ಳುವುದೇ ಪ್ರತ್ಯಕ್ಷ ಮಾತುಗಾರಿಕೆಯಾಗಿದೆ. ಈ ಸಂವಹನದಲ್ಲಿ ಗಮನಿಸಬೇಕಾದ ಮಾತುಗಾರಿಕೆ ಎಂದರೆ ಇಲ್ಲಿ ಔಪಚಾರಿಕವಾದ ಸಂದೇಶಗಳು ಮಾತ್ರ ಸಂವಹನದಲ್ಲಿ ಕೆಲಸ ಮಾಡುತ್ತಿರುವುದಲ್ಲ; ಸಂದೇಶಗಳ ಜೊತೆಗೆ ವರ್ತನೆಗಳೂ ಸಂವಹನ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿರುತ್ತದೆ. ನಾವು ಮಾತನಾಡುವಾಗ ನಾಲಿಗೆ ಮಾತ್ರ ಮಾತನಾಡುವುದಿಲ್ಲ. ಭಾವಾಭಿವ್ಯಕ್ತಿಯ ರೂಪದಲ್ಲಿ ಮುಖವು ಮಾತನಾಡುತ್ತಿರುತ್ತದೆ. ಕಣ್ಣುಗಳು ಮಾತನಾಡುತ್ತದೆ. ನಡಿಗೆ ಮಾತನಾಡುತ್ತದೆ. ಆಂಗಿಕ ಭಾಷೆ ಮಾತನಾಡುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂವಹನ ನಡೆಸಬೇಕಾಗುತ್ತದೆ. ಈ ರೀತಿಯ ಸಂವಹನದಲ್ಲಿ ಆಡುವ ಮಾತಿನಲ್ಲಿ ದೋಷವಿದ್ದರೆ ಸಂವಹನಕ್ಕೆ ಯಾವ ತಡೆಯೂ ಉಂಟಾಗುವುದಿಲ್ಲ. ಮಾತನಾಡುವ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇದ್ದರೆ ವ್ಯಕ್ತಿಯ ಪ್ರಾಮಾಣಿಕತೆಯನ್ನು ಹಾವ-ಭಾವಗಳು ಅಭಿವ್ಯಕ್ತಿಪಡಿಸುತ್ತದೆ. ಆಗ ಮಾತಿನ ದೋಷಗಳು ನಗಣ್ಯವಾಗುತ್ತದೆ. ಆದರೆ ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆ ಇಲ್ಲದೆ ಇದ್ದರೆ ಎಷ್ಟು ಚೆನ್ನಾಗಿ ಮಾತನಾಡಿದರೂ ಹಾವ-ಭಾವಗಳು ವ್ಯಕ್ತಿತ್ವದ ದೌರ್ಬಲ್ಯವನ್ನು ಸೂಚಿಸಿಬಿಡುತ್ತದೆ. ಆಗ ಸಂವಹನ ತಡೆ ಉಂಟಾಗುತ್ತದೆ.
 
 
 
B) ಅಪ್ರತ್ಯಕ್ಷ ಮಾತುಗಾರಿಕೆ:
ಅಪ್ರತ್ಯಕ್ಷ ಮಾತುಕತೆಯ ವಾಹಕವೆಂದರೆ ದೂರವಾಣಿ. ಇಲ್ಲಿ ಸಂದೇಶಗಳು ಮತ್ತು ಸಂದೇಶಗಳನ್ನು ವ್ಯಕ್ತಪಡಿಸುವ ಧ‍್ವನಿ ಮಾತ್ರ ಸಂವಹನ ಸಾಧನವಾಗಿ ಕೆಲಸ ಮಾಡುತ್ತದೆ. ಹಾವ ಭಾವಕ್ಕೆ ಅಥವಾ ಚಲನೆಗೆ ಇಲ್ಲಿ ಮಹತ್ವ ಇರುವುದಿಲ್ಲ. ಧ್ವನಿ ಮಾತ್ರ ಸಂವಹನದ ಸಾಧನವಾಗಿ ಬಳಕೆಯಾಗುವ ಸಂವಹನದಲ್ಲಿ ಆಡುವ ಮಾತು ತುಂಬಾ ಸಮರ್ಪಕವಾಗಿ ಇರಬೇಕಾಗುತ್ತದೆ. ಧ್ವನಿಯ ವಿನ್ಯಾಸದಲ್ಲಿಯೇ ಧ್ವನಿಯ ಆಶಯವನ್ನು ಗುರುತಿಸಬೇಕಾಗುತ್ತದೆ. ಯಾಕೆಂದರೆ ಮಾತಿನ ದೋಷವನ್ನು ನಿವಾರಿಸಿಕೊಳ್ಳಲು ಇಲ್ಲಿ ಹಾವ ಭಾವ ಮತ್ತು ಆಂಗಿಕ ಚಾಲನೆ ಲಭ್ಯವಾಗುವುದಿಲ್ಲ. ಆಸ್ಸರಿಂದ ಧ್ವನಿಯ ಮೂಲಕವೇ ಸಶಕ್ತ ಭಾವಾಭಿವ್ಯಕ್ತಿಯನ್ನು ಮಾಡಲು ಸಾಧ್ಯವಾಗಬೇಕು.
 
 
 
C) ಲಿಖಿತ ಸಂವಹನ:
ಸಂಪರ್ಕ ನೀಡುವವನು ಸಂಪರ್ಕ ಪಡೆಯುವವನಿಗೆ ಲಿಖಿತ ರೀತಿಯಲ್ಲಿ ಸಂದೇಶವನ್ನು ನೀಡುವುದು ಈ ಪ್ರಕ್ರಿಯೆಯ ವಿಧಾನವಾಗಿದೆ. ಇದರಲ್ಲಿ ಅನೇಕ ವಿಧಗಳಿವೆ. ವೈಯಕ್ತಿಕ ಪತ್ರಗಳು, ಕಚೇರಿ ಪತ್ರಗಳು, ಮೊಬೈಲ್ ಸಂದೇಶಗಳು, ಅಂತರ್ಜಾಲ ಸಂದೇಶಗಳು, ಸಾಹಿತ್ಯ-ಹೀಗೆ ಇದರಲ್ಲಿ ಅನೇಕ ವಿಧಗಳಿವೆ. ಇದರಲ್ಲಿ ಇನ್ನೊಂದು ರೀತಿಯ ವ್ಯತ್ಯಾಸವೂ ಇದೆ. ಸಾಹಿತ್ಯವು ಪತ್ರಿಕೆ, ಪುಸ್ತಕ, ವೆಬ್ ತಾಣಗಳು-ಹೀಗೆ ಯಾವ ರೂಪದಲ್ಲಿ ಬಂದರೂ ಅದಕ್ಕೆ ಸಾರ್ಜಜನಿಕ ಆಯಾಮವಿದೆ. ಆಗ ಬರೆದವನು ಮತ್ತು ಓದುವವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಸಂವಹನವು ಪರಿಣಾಮವನ್ನು ಉಂಟುಮಾಡುತ್ತದೆ.
 
 
 
ಆದರೆ ಉಳಿದ ಲಿಖಿತ ಸಂವಹನಗಳು ಹೀಗಲ್ಲ. ಅವುಗಳನ್ನು ವೈಯಕ್ತಿಕ ಲಿಖಿತ ಸಂದೇಶಗಳು ಮತ್ತು ಔಪಚಾರಿಕ ಲಿಖಿತ ಸಂದೇಶಗಳು ಎಂದು ವಿಂಗಡಿಸಬಹುದಾಗಿದೆ. ವೈಯಕ್ತಿಕ ಲಿಖಿತ ಸಂದೇಶಗಳಲ್ಲಿ ಸಂದೇಶ ನೀಡುವವರು ಮತ್ತು ಪಡೆಯುವವರು ಪರಸ್ಪರ ಪರಿಚಿತರಾಗಿರುವುದರಿಂದ ಅವರವರ ಸ್ವಭಾವಕ್ಕನುಗುಣವಾಗಿ ವಿವರಣೆಯನ್ನು ನೀಡಲು ಸಾಕಷ್ಟು ಅವಕಾಶವಿರುತ್ತದೆ. ಔಪಚಾರಿಕ ಲಿಖಿತ ಸಂದೇಶಗಳಲ್ಲಿ ವಿವರಣೆಯು ಸಂಕ್ಷಿಪ್ತವಾಗಿರಬೇಕು. ಈ ರೀತಿಯ ಲಿಖಿತ ಸಂವಹನವನ್ನು ಯಾವ ರೀತಿ ನಡೆಸಬೇಕೆಂಬುದನ್ನು ಭಾಷಾ ಪಠ್ಯಗಳು ತಿಳಿಸಿಕೊಡುತ್ತದೆ.
 
 
 
ಲಿಖಿತ ಸಂವಹನವನ್ನು ನಡೆಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಸಂಗತಿಗಳು ಹೋಗಿದೆ:
* ಲಿಖಿತ ಸಂವಹನದಲ್ಲಿ ಭಾಷೆಯ ಬಳಕೆ ಸರಳವಾಗಿರಬೇಕು. ಆದರೆ ಸಶಕ್ತವಾಗಿರಬೇಕು.
* ಗೊಂದಲಮಯವಾದ ಸಂದೇಶ ಇರಬಾರದು.
* ಓದುವ ಆಸಕ್ತಿಯನ್ನೇ ಕುಗ್ಗಿಸುವಷ್ಟು ಪತ್ರಗಳು ದೀರ್ಘವಾಗಿರಬಾರದು.
* ಲಿಖಿತ ಸಂವಹನವು ಸಂಕ್ಷಿಪ್ತವಾಗಿರಬೇಕೆಂದ ಮಾತ್ರಕ್ಕೆ ವಿವರಣೆಯೇ ಇಲ್ಲದಂತೆ ಸಂಕೇತ ಭಾಷೆಯಲ್ಲಿ ಬರೆಯುವಂತಾಗಬಾರದು. ಅಗತ್ಯ ವಿವರಗಳನ್ನು ಅದು ಒಳಗೊಂಡಿರಬೇಕು.
* ಭಾಷೆಯ ಲಯವು ಹಿತಾನುಭವವನ್ನು ಉಂಟುಮಾಡುವಂತಿಸಬೇಕು.
 
ಮುಂದುವರಿಯುವುದು…
ಅರವಿಂದ ಚೊಕ್ಕಾಡಿ
[email protected]

LEAVE A REPLY

Please enter your comment!
Please enter your name here