'ಸಂವಹನದಕೊರತೆ ಸೋಲಿಗೆ ಕಾರಣ'

0
471

ವರದಿ:  ರಮ್ಯಶ್ರೀ ದೊಂಡೋಲೆ
ಮಾತಿನ ಭಾಷೆಗಿಂತ ಬರವಣಿಗೆಯ ಭಾಷೆ ಭಿನ್ನ. ಹೇಳಬೇಕಾದನ್ನು ಹೇಳಬೇಕಾದ ವಿಧಾನದಲ್ಲಿ ಹೇಳದೆ ನಾವಿಂದು ಸೋಲುತ್ತಿದ್ದೇವೆ ಎಂದು ಉದಯವಾಣಿ ದಿನಪತ್ರಿಕೆಯ ಅಂಕಣಕಾರ ಅಡ್ಡೂರು ಕೃಷ್ಣರಾವ್ ಅಭಿಪ್ರಾಯಪಟ್ಟರು.
 
 
 
ಎಸ್ ಡಿ ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮೀಡಿಯಾ ಮೆಸೆಂಜರ್ ಕ್ಲಬ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ `ಸಂಪದ ಹಬ್ಬ’ ಕಾರ್ಯಕ್ರಮದಲ್ಲಿ ಬರವಣಿಗೆ ಕಲೆಯ ಕುರಿತು ಅವರು ಮಾತನಾಡಿದರು.
 
ನಾವು ಎಲ್ಲಿಯವರೆಗೆ ಹೇಳಬೇಕಾಗಿರುವುದನ್ನು ಪರಿಣಾಮಕಾರಿಯಾದ ಮಾತು ಅಥವಾ ಬರಹದ ಮೂಲಕ ವ್ಯಕ್ತಪಡಿಸುವುದನ್ನು ಕಲಿಯುವುದಿಲ್ಲವೋ ಅಲ್ಲಿಯವರೆಗೆ ಜೀವನವನ್ನು ಕಲಿಯುವುದಿಲ್ಲ. ಇವತ್ತಿನ ಬಹುತೇಕ ಪ್ರೇಮ ಪ್ರಕರಣಗಳ ಸೋಲಿನ ಕಾರಣಗಳನ್ನು ನೋಡಿದಾಗ ಪರಿಣಾಮಕಾರಿ ಸಂವಹನದ ಕೊರತೆ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.
 
ಬರಹಗಾರ ವಿಭಿನ್ನ ವಿಷಯಗಳ ಬೆನ್ನುಹತ್ತಿ ತನ್ನ ಕಾಯಕ ಮಾಡಬೇಕು. ವಿಷಯವನ್ನು ಗ್ರಹಿಸುವುದರಲ್ಲಿ ಚುರುಕುತನವಿದ್ದರೆ ಬರಹಗಾರನಿಗೆ ಬರಹಕ್ಕೆ ಬೇಕಾದ ವಸ್ತುವಿನ ಕೊರತೆ ಎದುರಾಗದು. ಯಾವುದೇ ವಿಷಯದ ಕುರಿತು ಬರೆದರೂ ಅದು ಮುಕ್ತ ಚರ್ಚೆಗೆ ಒಳಪಡಬೇಕು ಎಂದರು.
 
ಗ್ರಹಿಸುವಿಕೆಯೆ ನಿಜವಾದ ಕಲಿಕೆ.ಯಾವುದೇ ವಿಷಯದ ಒಳಹೊಕ್ಕು ಗ್ರಹಿಸುವ ಶಕ್ತಿ ಬೆಳೆಸಿಕೊಂಡಾಗ ಬರವಣಿಗೆಗೆ ಪುಷ್ಠಿ ಬರುತ್ತದೆ. ಓದುಗರಿಗೆ ಗೊತ್ತಿಲ್ಲದ ವಿಷಯವನ್ನು ಬರವಣಿಗೆಯ ಮೂಲಕ ಮನ ಮುಟ್ಟಿಸಿ ಕುತೂಹಲ ಮೂಡಿಸುವುದು ಬರಹಗಾರನ ಶಕ್ತಿ. ಬರಹದಲ್ಲಿ ನಾನು, ನನ್ನದು ಎಂಬ ಅಹಂಕಾರ ಪ್ರಜ್ಞೆ ತಲೆದೋರಿದರೆ ಓದುಗರು ಬರಹಗಾರನನ್ನು ನಿರ್ಲಕ್ಷಿಸುತ್ತಾರೆ ಎಂದು ತಿಳಿಸಿದರು.
 
ಒಂದು ಪರಿಪಕ್ವವಾದ ಲೇಖನ ಸೃಷ್ಟಿಯಾಗಲು ಬರೆಯಲು ಹೊರಟಿರುವ ವಸ್ತು ವಿಷಯಕ್ಕೆ ಸಂಬಂಧಪಟ್ಟ ಕನಿಷ್ಠ ಮೂರು ಪ್ರಮುಖ ಪುಸ್ತಕಗಳನ್ನಾದರೂ ಓದಿರಲೇಬೇಕು. ವಿಷಯವನ್ನು ನೋಡುವುದು ಮತ್ತು ಕೇಳುವುದು ಬಹಳ ಮುಖ್ಯವಾಗುತ್ತದೆ. ಓದಿನ ಹಸಿವಿನೊಂದಿಗೆ ಅಧ್ಯಯನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳುವುದು ಮುಖ್ಯಎಂದು ಮಾರ್ಗದರ್ಶನ ನೀಡಿದರು.
 
 
ಪ್ರತಿಯೊಬ್ಬರಲ್ಲೂ ಮುಗುವಿನ ವರ್ತನೆ, ಪ್ರಭುದ್ಧತೆ ಹಾಗೂ ಪೋಷಕತನ ಇರುತ್ತವೆ. ಈ ಗುಣಗಳನ್ನು ಸರಿಯಾದ ಗತಿಗಳ ಕಡೆಗೆ ಬಳಸಿಕೊಳ್ಳುವುದು ಪ್ರಮುಖವಾಗುತ್ತದೆ.ನಮ್ಮಲ್ಲಿಅಡಗಿರುವ ಮಾತುಗಳನ್ನು ವಿಶ್ಲೇಷಿಸಿ ವಿಷಯಗಳನ್ನು ಪೋಣಿಸುವ ತಂತ್ರಗಾರಿಗೆ ಬರಹಗಾರನಿಗೆ ಸಿದ್ಧಿಸಿರಬೇಕು ಎಂದು ಹೇಳಿದರು.
 
ಭಾಷೆಯನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಒಂದು ಭಾಷೆಯ ಓದುಗರು ಕಡಿಮೆಯಾದರೆ ಆ ಭಾಷೆ ಸಾಯುತ್ತದೆ. ಸಂಸ್ಕೃತಕ್ಕೆ ಬಂದ ಸ್ಥಿತಿ ಕನ್ನಡಕ್ಕೂ ಬರಬಹುದು ಎಂದು ಎಚ್ಚರಿಸುತ್ತ `ಸಂಪದ ವೆಬ್’ ಕುರಿತು ಮಾಹಿತಿ ನೀಡಿದರು.
 
ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here