ಸಂತರ ಬಾಯಲ್ಲಿ ಗೋವು ನಲಿಯಬೇಕು: ರಾಘವೇಶ್ವರಶ್ರೀ

0
523

ಬೆಂಗಳೂರು ಪ್ರತಿನಿಧಿ ವರದಿ
ಮೊದಲು ಸಂತರ ಬಾಯಲ್ಲಿ ಗೋವು ನಲಿಯಬೇಕು, ಸಂತರ ನಾಲಿಗೆಯಲ್ಲಿ ಗೋವು ನಲಿದಾಡಿದರೆ, ಗೋವು ನಾಡಿನಲ್ಲಿ ನಲಿದಾಡುವಂತಾಗುತ್ತದೆ ಎಂದು ‘ಒಡಲು’ ಸಭಾಂಗಣದ ‘ಮಡಿಲು’ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಗೋಚಾತುರ್ಮಾಸ್ಯ ಸಂದೇಶದಲ್ಲಿ ಹೇಳಿದರು.
 
mata chtur231
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾ ಮಠದಲ್ಲಿ ಇಂಗ್ಲೇಂಡ್, ಶ್ರೀಗಿರಿನಗರ ಹಾಗೂ ವರ್ತೂರು ವಲಯಗಳ ಸರ್ವಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಬದುಕಿನ ಪ್ರಶ್ನೆಗೆ ಉತ್ತರ ಹುಡುಕಿದವನು ಸಂತನಾಗುತ್ತಾನೆ, ಅಂತಹ ಸಂತರ ಶಕ್ತಿಗೆ ಎದುರಿಲ್ಲ, ಹಾಗಾಗಿ ಸಂತರು ಸಂಘಟಿತರಾಗಿ ಗೋರಕ್ಷಣೆಗೆ ಮುಂದಾಗಬೇಕು ಎಂದು ಆಶಿಸಿದರು.
 
mata chtur232
NDRIನ ದಕ್ಷಿಣ ಭಾರತ ಪ್ರಮುಖರಾದ ಡಾ. ಕೆ ಪಿ ರಮೇಶ್ ಅವರಿಗೆ ‘ಗೋಸೇವಾ ಪುರಸ್ಕಾರ’ವನ್ನು ಅನುಗ್ರಹಿಸಿದ ಶ್ರೀಗಳು ಗೋವಿನಲ್ಲಿ ಎಲ್ಲವೂ ಇದೆ, ವಿಜ್ಞಾನ ಗೋವಿನ ಮಹತ್ವವನ್ನು ಅರಿತು ಅದನ್ನು ಸಾರಬೇಕು. ಈ ದಿಶೆಯಲ್ಲಿ ಡಾ. ಕೆ ಪಿ ರಮೇಶ್ ಮೊದಲಿಂದಲು ಉಧ್ಯುಕ್ತರಾಗಿರುವುದು ಶ್ಲಾಘನೀಯ ಎಂದರು.
 
 
 
ಸಂತ ಸಂದೇಶ ನೀಡಿದ ಚಿತ್ರದುರ್ಗದ ವೇದ ವಿದ್ಯಾಪೀಠದ ಶ್ರೀಶ್ರೀ ಲೋಕೇಶ್ವರ ಶಿವಾಚಾರ್ಯರು, ಗೋಸಂರಕ್ಷಣಾ ಕಾರ್ಯವು ಋಷಿ ರಕ್ಷಣೆಗೆ ಸಮಾನವಾಗಿದ್ದು, ಸಂತರೆಲ್ಲರೂ ಒಂದಾಗಿ ಗೋರಕ್ಷಣೆ, ರಾಷ್ಟ್ರ ರಕ್ಷಣೆ, ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು. ಭಕ್ತರು ದೀಪಕ್ಕೆ ಎಣ್ಣೆಯಂತೆ ಸಂತರಿಗೆ ಸಹಕಾರ ನೀಡಬೇಕು ಎಂದರು.
 
 
ಗೋಸೇವಕ ಪುರಸ್ಕಾರ ಸ್ವೀಕರಿಸಿ ಮಾತನಾಡಿದ NDRI ನ ದಕ್ಷಿಣ ಭಾರತ ಪ್ರಮುಖರಾದ ಡಾ. ಕೆ ಪಿ ರಮೇಶ್ ಅವರು, ‘ಭಾರತೀಯ ಗೋತಳಿಯ ವಿಶೇಷತೆಗಳು ಹಾಗೂ ಅವುಗಳ ಅಭಿವೃದ್ಧಿ’ ಕುರಿತು ಮಾತನಾಡಿ, ಇಂದಿನ ವಿಷಮ ಸ್ಥಿತಿಯಲ್ಲೂ ಭಾರತದಲ್ಲಿರುವ ಗೋವುಗಳಲ್ಲಿ ೮೦% ಗೋವುಗಳು ದೇಶೀಯ ತಳಿಗಳಾಗಿದ್ದು ಹೆಮ್ಮೆಯ ವಿಚಾರವಾಗಿದೆ. ದೇಶೀಯ ತಳಿಗಳ ಸಂರಕ್ಷಣೆಗೆ ಎಲ್ಲರೂ ಕಾರ್ಯಪರರಾಗಬೇಕಾಗಿದ್ದು, ಶ್ರೀರಾಘವೇಶ್ವರ ಭಾರತೀಸ್ವಾಮಿಗಳ ವಿಶೇಷ ಆಸ್ತೆಯಿಂದ 2012ರಲ್ಲಿ ‘ಮಲೆನಾಡು ಗಿಡ್ಡ’ ತಳಿಯಾಗಿ ಗುರುತಿಸಲ್ಪಟ್ಟಿದೆ ಎಂದು ಸ್ಮರಿಸಿದರು. ಎ೧-ಎ೨ ಹಾಲಿನ ಕುರಿತು ವಿವರಿಸಿದ ಅವರು, ಮಿಶ್ರತಳಿಗೆ ಹೋಲಿಸಿದಾಗ ದೇಶಿಯ ಹಸುಗಳು ಕಡಿಮೆ ಹಾಲು ಕೊಡುತ್ತದೆ ಎಂದು ಎನಿಸಿದರೂ, ಅದು ಗುಣದಿಂದಾಗಿ ಅಮೃತಸಮವಾಗಿರುತ್ತದೆ. ಹಾಗಾಗಿ ಸತ್ವಭರಿತ ಹಾಲು ಬೇಕೋ ಅಥವಾ ಬಿಳಿದ್ರವ ಬೇಕೋ ಜನರು ನಿರ್ಧರಿಸಬೇಕು ಎಂದರು.
 
 
ವತ್ಸಬಂಧು:
ಇದೇ ಸಂದರ್ಭದಲ್ಲಿ ಕುಮಾರ ರಾಮಚಂದ್ರ ‘ವತ್ಸಬಂಧು’ವಾಗಿ ಗೋವಿನ ಕರುವನ್ನು ದತ್ತು ತೆಗೆದುಕೊಂಡರು. ‘ವತ್ಸಬಂಧು’ಯೋಜನೆಯಲ್ಲಿ ಮಕ್ಕಳು ಗೋವಿನ ಕರುವನ್ನು ದತ್ತು ತೆಗೆದುಕೊಳ್ಳಬಹುದಾಗಿದ್ದು, ಮಕ್ಕಳಲ್ಲಿ ಗೋವಿನ ಕುರಿತಾದ ಅರಿವು ಮತ್ತು ಪ್ರೀತಿಯನ್ನು ಮೂಡಿಸುವ ಉದ್ದೇಶ ಇದರದ್ದಾಗಿದೆ.
 
 
ಇಂಗ್ಲೇಂಡ್ ವಲಯ ಶುಭಾರಂಭ:
ಶ್ರೀಮಠದ ಸಮಾಜಮುಖೀ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಇಂಗ್ಲೇಂಡಿನಲ್ಲಿ ಶ್ರೀಮಠದ ವಲಯವನ್ನು ಸಂಘಟಿಸಲಾಗಿದ್ದು, ಆಂಗ್ಲರ ನಾಡಲ್ಲಿ ಭಾರತದ ಕಂಪು, ಶ್ರೀಮಠದ ಸುಗಂಧ ಪಸರಿಸಲಿ ಎಂದು ಶ್ರೀಗಳು ಆಶೀರ್ವದಿಸಿದರು. ಕಳೆದ ವರ್ಷ ಸಿಂಗಾಪುರ ಮತ್ತು ದುಬೈ ವಲಯ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
 
 
ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ಧ್ವನಿಮುದ್ರಿಕೆ ಹಾಗೂ ಕೃಷ್ಣಾನಂದ ಶರ್ಮರು ರಚಿಸಿದ ಚರಿತಾರ್ಥರು ಎಂಬ ಹೊತ್ತಿಗೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಸಭಾಕಾರ್ಯಕ್ರಮದ ನಂತರ ಕುಮಾರಿ ತುಳಸಿ ಅವರ ಯಕ್ಷರೂಪಕ ಕಾರ್ಯಕ್ರಮ ಸಂಪನ್ನವಾಯಿತು.
 
ನಾಡಿನ ವಿವಿಧ ಭಾಗಗಳ ಭಕ್ತರು, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

LEAVE A REPLY

Please enter your comment!
Please enter your name here