'ಸಂಘರ್ಷದ ವೇಳೆ ಪ್ರಚೋದಕ ಚಿತ್ರಣ ಅಸಮಂಜಸ'

0
274

ಉಜಿರೆ ಪ್ರತಿನಿಧಿ ವರದಿ
ದೇಶಗಳೆರಡರ ನಡುವಿನ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದಾಗ ಮಾಧ್ಯಮಗಳು ಯುದ್ಧ ಅನಿವಾರ್ಯ ಎನ್ನುವಂತೆ ಪ್ರಚೋದಕ ಚಿತ್ರಣಗಳನ್ನು ಕಟ್ಟಿಕೊಡಬಾರದು ಎಂದು ಹಿರಿಯ ಪತ್ರಕರ್ತ ಎನ್. ಗುರುರಾಜ್ ಅಭಿಪ್ರಾಯಪಟ್ಟರು.
 
 
ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಸ್ತುತ ಮಾಧ್ಯಮಗಳ ಕುರಿತು ಗುರುವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 
 
 
ಸಂಘರ್ಷದ ವಾತಾವರಣವಿದ್ದಾಗ ಸಂಯಮದ ಪರ್ಯಾಯ ಮಾದರಿಗಳನ್ನು ಕಾಣಿಸುವ ಪ್ರಯತ್ನ ಮಾಧ್ಯಮಗಳಿಂದ ನಡೆಯಬೇಕು. ಅದರ ಬದಲು ಸಂಘರ್ಷವನ್ನು ಹೆಚ್ಚಿಸುವ ರೀತಿಯ ರೋಚಕ ವೈಭವೀಕರಣದ ವಿವರಗಳೊಂದಿಗಿನ ಚಿತ್ರಣ ಸರಿಯಲ್ಲ. ಹಿಂದೆಯೂ ಈ ಬಗೆಯ ನಕಾರಾತ್ಮಕತೆಯೊಂದಿಗಿನ ಮನೋಧರ್ಮದ ವ್ಯಕ್ತಿಗಳು ಮಾಧ್ಯಮ ವಲಯದಲ್ಲಿದ್ದರು. ಈಗ ಟೆಲಿವಿಷನ್ ವಾಹಿನಿಗಳ ಮೂಲಕ ಅಂಥವರು ಗಮನ ಸೆಳೆದಿದ್ದಾರೆ ಎಂದು ಹೇಳಿದರು.
 
 
ಪತ್ರಿಕಾರಂಗದಲ್ಲಿ ಹಿಂದೆ ಪತ್ರಕರ್ತರು ವಿವರಗಳನ್ನು ಕಲೆಹಾಕುವಾಗ ನಿಖರತೆಗೆ ಆದ್ಯತೆ ನೀಡುತ್ತಿದ್ದರು. ಆ ನಿಖರ ವಿವರಗಳನ್ನು ಆಧರಿಸಿ ವರದಿ ಬರೆಯುತ್ತಿದ್ದರು. ಅವಸರದಲ್ಲಿ ವಿವರ ಕಲೆಹಾಕಿ ಮಾಹಿತಿ ಪ್ರಕಟಿಸಿ ಆಮೇಲೆ ಪರಿಣಾಮಗಳನ್ನು ಎದುರಿಸಬಹುದು ಎಂಬ ಮನೋಭಾವದ ಪತ್ರಕರ್ತರು ಆಗಲೂ ಇದ್ದರು. ಈಗಲೂ ಅಂಥವರ ಆದ್ಯತೆಗಳೇ ಪ್ರಾಮುಖ್ಯತೆ ಪಡೆಯುತ್ತಿವೆ. ಸತ್ಯಾಸತ್ಯತೆ ಅರಿಯದೇ ಆ ಕ್ಷಣಕ್ಕೇ ಸುದ್ದಿಯನ್ನು ನೀಡುವ ಧಾವಂತದಲ್ಲಿ ಸುದ್ದಿಮಾಧ್ಯಮಗಳು ಸಿಲುಕಿಕೊಂಡಿವೆ ಎಂದು ಹೇಳಿದರು.
 
 
ಹಿರಿಯ ಪತ್ರಕರ್ತರಾದ ಶ್ರೀಕರ್ ಭಟ್, ಸ್ನಾತಕೊತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗಡೆ ಮಾತನಾಡಿದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ದೇವಿಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here