ವಾರ್ತೆ

ಶೈಕ್ಷಣಿಕ ವ್ಯವಸ್ಥೆಯ ಪುನಃಶ್ಚೇತನ ಅತ್ಯಗತ್ಯ

ಉಜಿರೆ ಪ್ರತಿನಿಧಿ ವರದಿ
ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳೊಂದಿಗಿನ ನಂಟನ್ನು ಮತ್ತಷ್ಟು ಸದೃಢಗೊಳಿಸಿ ಚಿರಂತನವಾಗಿಸುವ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಪುನಃಶ್ಚೇತನಗೊಳ್ಳಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ಅಭಿಪ್ರಾಯಪಟ್ಟರು.
 
 
ಎಸ್.ಡಿ.ಎಂ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ರಾಷ್ಟೀಯ ಸೇವಾ ಯೋಜನಾ ಕೋಶ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಎಸ್.ಡಿ.ಎಂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ಐದು ದಿನಗಳ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
 
 
ಯುವಕರು ಶಿಕ್ಷಣದ ವಿವಿಧ ಅವಕಾಶಗಳನ್ನು ಬಳಸಿಕೊಂಡು ಪ್ರಗತಿಯ ಹಾದಿಯಲ್ಲಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಲ್ಲಿಯೇ ವಿಭಿನ್ನವಾಗಿ ಗುರುತಸಿಕೊಳ್ಳುವ ನಿಟ್ಟನಲ್ಲಿ ಕೌಶಲ್ಯಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಯುವಕರ ಈ ಬಗೆಯ ಸಾಮಥ್ರ್ಯ ಪೂರಕವಾಗಲಿದೆ. ಆದರೆ, ಅವರು ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳಿಂದ ವಿಮುಖವಾಗುತ್ತಿರುವುದು ಕಳವಳಕಾರಿ. ಈ ಮೌಲ್ಯಗಳೊಂದಿಗೆ ನಂಟು ಏರ್ಪಡಿಸುವ ಉದ್ದೇಶದೊಂದಿಗೆ ಇಡೀ ಶೈಕ್ಷಣಿಕ ವ್ಯವಸ್ಥೆ ಮರುವ್ಯಾಖ್ಯಾನಕ್ಕೆ ಒಳಪಡಬೇಕಿದೆ ಎಂದರು.
 
 
ಕೇವಲ ತಾಂತ್ರಿಕ ಪ್ರಗತಿಯ ಮಾನದಂಡದಿಂದ ಮಾತ್ರ ಅಭಿವೃದ್ಧಿಯನ್ನು ಅಳೆಯುವುದಕ್ಕಾಗುವುದಿಲ್ಲ. ಅದರೊಂದಿಗೆ ಸಮಾಜ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳನ್ನು ಅಭಿವೃದ್ಧಿಯ ಪ್ರಕ್ರಿಯೆ ಒಳಗೊಳ್ಳಬೇಕು. ಅಂಥದ್ದೊಂದು ಚಿಂತನಕ್ರಮವನ್ನು ಶೈಕ್ಷಣಿಕ ವ್ಯವಸ್ಥೆ ರೂಢಿಸುವ ರೀತಿಯಲ್ಲಿ ಪುನಃಶ್ಚೇತನಗೊಳ್ಳಬೇಕು. ಹಾಗಾದಾಗ ಮಾತ್ರ ಯುವಕರು ಮಹತ್ವದ ಸಂಪನ್ಮೂಲಗಳಾಗಿ ರೂಪುಗೊಳ್ಳುತ್ತಾರೆ ಎಂದು ಪ್ರೊ.ಟಿ.ಡಿ.ಕೆಂಪರಾಜು ಹೇಳಿದರು.
 
 
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಮಾತನಾಡಿ ಸ್ವಯಂಶಿಸ್ತಿನೊಂದಿಗಿನ ವ್ಯಕ್ತಿತ್ವದ ಸಾಧನೆ ಮೌಲಿಕ ಎಂದೆನ್ನಿಸಿಕೊಳ್ಳುತ್ತದೆ ಎಂದರು. ನಿರ್ದಿಷ್ಟ ತತ್ವವನ್ನು ನೆಚ್ಚಿಕೊಂಡು ಅಂತರಂಗದ ಬದಲಾವಣೆ ಕಂಡುಕೊಳ್ಳುವ ವ್ಯಕ್ತಿಗಳು ಮಹತ್ವದ್ದನ್ನು ಸಾಧಿಸುತ್ತಾರೆ ಎಂದು ಹೇಳಿದರು.
 
 
ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ವಿನೀತಾ ರೈ, ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್ ಮೋಹನ ನಾರಾಯಣ ಉಪಸ್ಥಿತರಿದ್ದರು.
 
 
 
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು. ಸ್ವಯಂಸೇವಕರು ಐದು ದಿನಗಳ ಯೋಜನೋತ್ಸವದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ ಶಕುಂತಲಾ ಸ್ವಾಗತಿಸಿ, ಭಾನುಪ್ರಕಾಶ್ ವಂದಿಸಿದರು. ಪ್ರೊ. ಡಾ ಬಿ.ಪಿ.ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here