ವರದಿ: ಲೇಖಾ
ಶ್ರೀನಗರ:ಜುಲೈ-25:ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಸಹಕರಿಸುವಂತೆ ಎಮನವಿ ಮಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಳಿಕ ಕಾಶ್ಮೀರಿಗರ ಜತೆ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಉದ್ವಿಗ್ನಗೊಂಡಿ ರುವ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಲ್ಲಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿ 30 ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದರು.
ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು 3ನೇ ರಾಷ್ಟ್ರದ ಸಹಾಯ ಅಗತ್ಯವಿಲ್ಲ ಎಂದು ಗುಡುಗಿದ ಅವರು, ಪಾಕಿಸ್ತಾನ ಸ್ವತ: ಭಯೋತ್ಪಾದನೆಯಿಂದ ನಲುಗುತ್ತಿದೆ. ಆದಾಗ್ಯೂ ಕಾಶ್ಮೀರದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುತ್ತಿದೆ. ಪಾಕಿಸ್ತಾನ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ವಾಗ್ದಾಳಿ ನಡೆಸಿದರು.
ಹಿಂಸಾಚಾರದಲ್ಲಿ ಗಾಯಗೊಂಡವರನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸಿದ್ಧ. ಕಾಶ್ಮೀರಿ ಯುವಕರಿಗೆ ಉದ್ಯೋಗ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆ ರೂಪಿಸುತ್ತಿದೆ ಎಂದರು.
ಇದೇ ವೇಳೆ ಕಾಶ್ಮೀರಿ ಯುವಕರು ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಬಾರದು ಎಂದ ರಾಜನಾಥ್, ಉದ್ರಿಕ್ತರ ಗುಂಪು ಚದುರಿಸಲು ಪ್ಯಾಲೆಟ್ ಗನ್ ಬಳಕೆ ಮಾಡದಂತೆ ಸೇನೆಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.