ಶತಕೋಟಿ ಭಾರತೀಯರು ನಿತ್ಯ ವಿಷ ಸೇವಿಸುತ್ತಿದ್ದಾರೆ

0
179

ನಮ್ಮ ಪ್ರತಿನಿಧಿ ವರದಿ
ಹುಟ್ಟಿದಾಕ್ಷಣ ‘ಅಂಬಾ’ ಎನ್ನುವ ಗೋಮಾತೆ ಮಾತೃತ್ವದ ಚರಮಸೀಮೆಯಾಗಿ ಕಂಡು ಬರುತ್ತಾಳೆ. ಆಕೆಯ ಹರಿಯುವವಾತ್ಸಲ್ಯಧಾರೆಗೆ ಕ್ಷೀರವೆಂದು ಹೆಸರು ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಆಶೀರ್ವಚನವಿತ್ತರು.
 
 
mata_-goyatra1
ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ನಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಗೋವನ್ನು ಎಂದು ಕಟ್ಟಿ ಸಾಕಲು ತೊಡಗಿದೆವೋ ಅಂದು ಭೂಮಿ ಬರಡಾಗತೊಡಗಿತು. ಎಂದು ಗೋವುಗಳ ನಾಶ ಆರಂಭವಾಯಿತೋ ಅಂದು ಬರಗಾಲ ಆರಂಭವಾಯಿತು. ಎಂದು ಭೂಮಾತೆ, ಗೋಮಾತೆ ಹಾಗೂ ಮಾತೆಯರ ತ್ರಿಕೋನ ಬಂಧ ನಾಶವಾಯಿತೋ ಅಂದು ಭಾರತ ಬಡವಾಯಿತು ಎಂದರು.
 
 
ಗೋವಿನ ಬದುಕು ವಿಷವಾದಂದೇ ರಾಸಾಯನಿಕ ಗೊಬ್ಬರ, ಪ್ಯಾಕೆಟ್ ಹಾಲು ಮುಂತಾದವುಗಳ ಮೂಲಕವಾಗಿ ಮಾನವನ ಬದುಕೂ ವಿಷಮಯವಾಗತೊಡಗಿದೆ. ಅತಿಯಾದ ವಿವಿಧೌಷಧಗಳ ಭರದಿಂದ ಕೊಬ್ಬಿದ ಜರ್ಸಿ ಆಕಳ ಹಾಲು ಸೇವಿಸುವುದರಿಂದ ಒಬೆಸಿಟಿ, ಕ್ಯಾನ್ಸರ್ ನಂತಹ ರೋಗಗಳು ಜನರನ್ನು ಬಾಧಿಸುತ್ತಿವೆ. ಶತಕೋಟಿ ಭಾರತೀಯರು ಅರಿಯದೇ ಇದೇ ವಿಷವನ್ನು ಅನುದಿನ ಸೇವಿಸುತ್ತಿದ್ದಾರೆ. ಹಾಗಾಗಿ ಪ್ರಧಾನಮಂತ್ರಿಯವರು ಎ2 ಎಂದು ಕರೆಸಿಕೊಳ್ಳುವ ದೇಸೀತಳಿಗಳ ಹಾಲನ್ನು ಬಿಡುಗಡೆ ಮಾಡಿದ್ದು ಸಂತೋಷದಾಯಕವಾದರೂ, ಎ1 ಎಂದು ಕರೆಯಲ್ಪಡುವ, ಆದರೆ ನಿಜಾರ್ಥದಲ್ಲಿ ವಿಷಸದೃಶವಾದ ಮಿಶ್ರತಳಿಗಳ ಹಾಲನ್ನು ನಿಷೇಧ ಮಾಡಬೇಕು ಎಂದರು.
 
ಮಿಶ್ರತಳಿಯ ಗೋಮೂತ್ರ, ಗೋಮಯ ರೋಗಮಯ
ಅಧಿಕೃತ ಕಸಾಯಿಖಾನೆಗಳನ್ನು ಘೋಷಿಸಿದ್ದು ಸರ್ಕಾರಗಳು. ಮಿಶ್ರತಳಿಗಳನ್ನು ಹುಟ್ಟುಹಾಕಿದ್ದು ಸರ್ಕಾರಗಳು. ದೇಸಿ ತಳಿಗಳ ಅಳಿವಿಗೆ ಕಾರಣೀಕರ್ತರು ಸರ್ಕಾರಗಳು. ಗೋಮೂತ್ರ, ಗೋಮಯವೂ ರೋಗಮಯವಾಗಿರುವ ಮಿಶ್ರತಳಿಗಳು ನಿರುಪಯೋಗಿಗಳು. ಒಂದು ಲೀಟರ್ ಹಾಲಿಗೆ ಕೇವಲ ಐದು ರೂಪಾಯಿ ಲಾಭವಿರುವ ಮಿಶ್ರತಳಿಗಳಿಗಿಂತ ಗೋಮೂತ್ರಕ್ಕೇ ಇದಕ್ಕಿಂತ ಅಧಿಕ ಬೆಲೆಯಿರುವ ದೇಸೀತಳಿಯ ಗೋವುಗಳೇ ಶ್ರೇಷ್ಟ ಎಂದರು.
 
 
ನಾವು ಗೋಪ್ರೇಮಿಗಳಾಗಿ, ಕುಟುಂಬವೇ ಗೋಪರಿವಾರವಾಗಲಿ
ಸರ್ಕಾರದಿಂದ ಪ್ರತೀಕ್ಷೆಯಿಲ್ಲದೇ, ರಾಜಕೀಯದ ನಿರೀಕ್ಷೆಯಿಲ್ಲದೇ, ಕೇವಲ ಗವ್ಯೋತ್ಪನ್ನಗಳ ಬಳಕೆಯ ಮೂಲಕ ದೇಸೀ ಗೋವುಗಳನ್ನು ರಕ್ಷಿಸಬಹುದಾಗಿದೆ. ಅದಕ್ಕಾಗಿ ನಾವೂ ಗೋಪ್ರೇಮಿಗಳಾಗಿ, ಕುಟುಂಬವೇ ಗೋಪರಿವಾರವಾಗಬೇಕಾದ ಅವಶ್ಯಕತೆಯಿದೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಗೋಸಂದೇಶ ನೀಡಿದರು.
 
 
ಶ್ರೀ ಅಭಿನವ ಗವಿಸಿದ್ಧೇಶ್ವರಮಹಾಸ್ವಾಮಿಗಳು ಮಾತನಾಡಿ, ಕನ್ನಡನಾಡಿನಲ್ಲಿ ಗೋಸಂಪತ್ತು ಎಂದು ನೆನೆಸಿದಾಕ್ಷಣ ನೆನಪಾಗುವ ಹೆಸರು ರಾಘವೇಶ್ವರ ಶ್ರೀಗಳು. ನಿಸರ್ಗ ಮನುಷ್ಯನ ರಕ್ಷಣೆಗೆ ನಿಂತಿದೆ. ಆದರೆ ಮನುಷ್ಯ ತನ್ನ ರಕ್ಷಣೆಗಾಗಿ ನಿಸರ್ಗವನ್ನೇ ಬಲಿ ನೀಡುತ್ತಿದ್ದಾನೆ. ಇಂಥಾ ನಿಸರ್ಗದ ತಳಿಗಳ ರಕ್ಷಣೆಗಾಗಿ ಹೊರಟಿರುವ ರಾಘವೇಶ್ವರ ಶ್ರೀಗಳ ಮನಸ್ಸು ಹಾಲಿನಷ್ಟೇ ಮಧುರ. ಅದಕ್ಕಾಗಿಯೇ ಗೋವಿಗಾಗಿ ಮತ್ತು ನಮಗಾಗಿ ಮಂಗಲಗೋಯಾತ್ರೆಯನ್ನು ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
 
 
ಶ್ರೀಶರಣಬಸವ ಮಹಾಸ್ವಾಮಿಗಳು ಮಾತನಾಡಿ, ಜಗತ್ತು ಹುಟ್ಟಿದಾಗಲೇ ಗೋವು ಹುಟ್ಟಿದೆ. ಆಕಳಿಗೆ ನಮಸ್ಕಾರ ಮಾಡಿದರೇ ರೋಗಗಳು ಮಾಯವಾಗುತ್ತದೆ. “ಆಕಳಾ” ನಮಗೆಲ್ಲರಿಗೂ “ಕಳಾ” ಆಗುತ್ತದೆ. ಇಂತಹ ಆಕಳನ್ನು ಮಾನಿಸುವ ಕಾರ್ಯ ಮಾಡಿರುವ ರಾಘವೇಶ್ವರ ಶ್ರೀಗಳು ದೇಶಕ್ಕೇ ಕಲಶವಿಟ್ಟಂತ ಕಾರ್ಯವೆಸಗಿದ್ದಾರೆ ಎಂದರು.
 
 
ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿ, ಹಿಂದೆ ಗೋಮಯದಿಂದ ಶುದ್ಧವಾದ ನೆಲವನ್ನು ತುಳಿಯುತ್ತಿದ್ದ ಮಾನವ ಆರೋಗ್ಯವಂತನಾಗುತ್ತಿದ್ದ. ಇಂದು ಹಸುಗಳೇ ಕಣ್ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಪರಂಪರೆಗಳನ್ನು ಗಮನಿಸಿಕೊಳ್ಳದೇ ಅನಾರೋಗ್ಯಕ್ಕೆ ಅನಾಯಾಸದ ತುತ್ತಾಗುತ್ತಿದ್ದೇವೆ. ದೇಸಿ ತಳಿಗಳ ಹಾಲು ಮಾನವನ ಮಾನಸಿಕ ಆರೋಗ್ಯವನ್ನೂ ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ. ಹಾಗಾಗಿ ದೇಸಿ ಆಕಳನ್ನು ಉಳಿಸಿ,ಬೆಳೆಸಿ ಪೊರೆದಲ್ಲಿ ಮಾತ್ರ ಆರೋಗ್ಯವಂತ ಜೀವನವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದರು.
 
 
ಬಳ್ಳಾರಿಯಲ್ಲಿ ಗೋಜಾಗೃತಿಯನ್ನು ಮೂಡಿಸಿ, ಇಂದು ಕೊಪ್ಪಳ ತಲುಪಿದ ಗೋಯಾತ್ರೆಯನ್ನು ನಗರದ ಸ್ವಾಗತ ಗೋಪುರದ ಬಳಿ ಹಲವಾರು ಗೋಪ್ರೇಮಿಗಳು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಂತರ ಗವಿಸಿದ್ಧೇಶ್ವರ ಮಠದ ಎದುರು ಸುಮಂಗಲಿಯರ ಗೋಪೂಜೆ ಹಾಗೂ ಸಿದ್ಧೇಶ್ವರಶ್ರೀಗಳ ಶುಭಾಶೀರ್ವಾದದೊಂದಿಗೆ ಆರಂಭಗೊಂಡ ಶೋಭಾಯಾತ್ರೆ, ನಗರದ ಮುಖ್ಯಬೀದಿಗಳಲ್ಲಿ ಸಂಚರಿಸಿ ಗೋಸಂದೇಶವನ್ನು ಪಸರಿಸಿತು.
 
ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀ ಚೈತನ್ಯಾನಂದ ಸ್ವಾಮಿಗಳು, ಶ್ರೀ ಲಕ್ಷ್ಮೇಂದ್ರ ಸ್ವಾಮಿಗಳು, ನಗರಸಭೆಯ ಆಯುಕ್ತರಾದ ಮಹೇಂದ್ರ ಚೋಟ್ಯ, ಹಾಗೂ ಚಂದ್ರಶೇಖರ್ ಕವಲೂರು, ವಿ.ಎಮ್. ಭೂಸನೂರುಮಠ, ಶಿವಕುಮಾರ್, ದೇವರಾಜ್, ವಿಶ್ವನಾಥ್, ಸುರೇಶ್, ತೋಟಪ್ಪ ಕಾಮನೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here